ಕೇಂದ್ರ ಸರಕಾರದಿಂದ 20 ಲಕ್ಷ ಉದ್ಯೋಗ ಸೃಷ್ಟಿ

ಹೊಸದಿಲ್ಲಿ: ನಿರುದ್ಯೋಗ ಸಮಸ್ಯೆ ನಿವಾರಿಸಲು ಕ್ರಮ ಕೈಗೊಂಡಿರುವ ಕೇಂದ್ರ ಸರಕಾರ ಈಗ 20 ಲಕ್ಷ ಉದ್ಯೋಗ ಸೃಷ್ಟಿಸಲು ಮುಂದಾಗಿದೆ.

ಕೇಂದ್ರ ಮತ್ತು ರಾಜ್ಯ ಸರಕಾರಗಳ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ ಹಾಗೂ ಇನ್ನಷ್ಟು ಉದ್ಯೋಗ ಸೃಷ್ಟಿ ಮಾಡಲು ತಯಾರಿ ನಡೆಸಲಾಗಿದೆ.

ಕೇಂದ್ರ ಸಚಿವಾಲಯಗಳು ಹಾಗೂ 244 ಸರಕಾರಿ ಸ್ವಾಮ್ಯದ ಸಂಸ್ಥೆಗಳಲ್ಲಿ ಉದ್ಯೋಗ ಭರ್ತಿ ನಡೆಯಲಿದೆ. ಮೊದಲಿಗೆ ಭಾರತೀಯ ರೈಲ್ವೆ ಇಲಾಖೆಯಲ್ಲಿ ಉದ್ಯೋಗಗಳನ್ನು ಸೃಷ್ಟಿ ಮಾಡಲು ಸಿದ್ಧತೆ ನಡೆಸಲಾಗಿದೆ.

ಕಾರ್ಮಿಕ ಸಚಿವಾಲಯ ಈ ಕ್ರಮಕ್ಕೆ ಮುಂದಾಗಿದೆ. ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ ಎಂಬ ಕುರಿತು ಟೀಕೆಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಪೊಲೀಸ್‌ ಇಲಾಖೆಯಲ್ಲಿ 2 ಲಕ್ಷ, ಶಾಲಾ-ಕಾಲೇಜುಗಳಿಗೆ 2 ಲಕ್ಷ, ಅಂಗನವಾಡಿ ಕಾರ್ಯಕರ್ತರು 2 ಲಕ್ಷ, ರೈಲ್ವೆ ಇಲಾಖೆ 2.4 ಲಕ್ಷ, ಆದಾಯ ತೆರಿಗೆ ಇಲಾಖೆಯಲ್ಲಿ 32 ಸಾವಿರ ಹುದ್ದೆಗಳನ್ನು ಭರ್ತಿ ಮಾಡಲಾಗುವುದು.

ಉದ್ಯೋಗ ಸೃಷ್ಟಿಗೆ ಮುಂದಾಗಿರುವ ಕಾರ್ಮಿಕ ಸಚಿವಾಲಯ, ಎಲ್ಲ ಇಲಾಖೆಗಳಿಗೆ ಪತ್ರ ಬರೆದು ಖಾಲಿ ಇರುವ ಹಾಗೂ ಭರ್ತಿ ಮಾಡಬೇಕಾದ ಹುದ್ದೆಗಳ ಪಟ್ಟಿಯನ್ನು ಕಳುಹಿಸಲು ಸೂಚಿಸಿದೆ.

ವಾರ್ಷಿಕ 10 ಲಕ್ಷ ಮಂದಿ ಉದ್ಯೋಗ ಅರಸಿ ಬರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕಳೆದ ಹಲವು ವರ್ಷಗಳಿಂದಲೂ ಉದ್ಯೋಗ ಸೃಷ್ಟಿ ಮಾಡಬೇಕೆಂಬ ಬೇಡಿಕೆ ಕೇಳಿಬರುತ್ತಲೇ ಇತ್ತು.

ಈಗ ಕಾರ್ಮಿಕ ಸಚಿವಾಲಯ ನಿರ್ದಿಷ್ಟ ಕಾಲಮಿತಿಯೊಳಗೆ ಉದ್ಯೋಗ ಭರ್ತಿ ಮಾಡಲು ನಿರ್ಧರಿಸಿದೆ.

Leave a Reply