ವಿದೇಶ ಪ್ರವಾಸ, ಮನ್ ಕೀ ಬಾತ್ ಮೋದಿ ಸಾಧನೆ: ಸಿಎಂ

ಬೆಂಗಳೂರು: ವಿಮಾನ ಪ್ರಯಾಣ, ವಿದೇಶ ಪ್ರವಾಸ, ಮನ್ ಕೀ ಬಾತ್ ಇದು ಪ್ರಧಾನಿ ಮೋದಿಯವರ ಮೂರೂವರೆ ವರ್ಷದ ಸಾಧನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಮಹದೇವಪುರದಲ್ಲಿ ಆಯೋಜಿಸಿದ್ದ ಮನೆ ಮನೆಗೆ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಮಾತನಾಡಿದ ಸಿಎಂ, ಮೋದಿಯವರದ್ದು ಕೇವಲ ಮನ್ ಕೀ ಬಾತ್. ಆದರೆ ನಮ್ಮದು ಕಾಮ್ ಕೀ ಬಾತ್. ನಾವು ಮಾತನಾಡುವುದಿಲ್ಲ. ನಮ್ಮ ಸರಕಾರದ ಸಾಧನೆಗಳು ಮಾತನಾಡುತ್ತವೆ ಎಂದರು.

ಪ್ರಧಾನಿ ಮೋದಿಯವರು ಅಚ್ಛೇ ದಿನ್ ಆಯೇಗಾ ಎಂದರು. ಅಚ್ಛೇ ದಿನ್ ಕಬ್ ಆಯೇಗಾ ಮೋದಿ ಅವರೇ, ಮಾಲೂಮ್ ನಹೀ ಎಂದು ವ್ಯಂಗ್ಯವಾಡಿದರು.

ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಬಿಜೆಪಿಯ ಮೂಲ‌ಮಂತ್ರ. ಆದರೆ ಕಳೆದ ಮೂರೂವರೆ ವರ್ಷದಲ್ಲಿ ಶ್ರೀಮಂತರು, ಬಂಡವಾಳಶಾಹಿಗಳು, ಕಾರ್ಪೊರೇಟ್ ಕಂಪನಿಗಳ ವಿಕಾಸ ಆಯಿತೇ ಹೊರತು ಬಡವರು, ಮಧ್ಯಮ ವರ್ಗದವರದ್ದಲ್ಲ. ನೋಟು ಅಮಾನ್ಯೀಕರಣದಿಂದ ಜನರಿಗೆ ಆದ ಅನುಕೂಲವೇನು, ಇದರಿಂದ ಕಪ್ಪು ಹಣದ ನಿರ್ಮೂಲನೆ ಆಗುತ್ತದೆ. ಉಗ್ರರ ಅಟ್ಟಹಾಸ ಮಟ್ಟ ಹಾಕುತ್ತೇವೆ. ನಕಲಿ ನೋಟುಗಳನ್ನು ಪತ್ತೆ ಮಾಡುತ್ತೇವೆ. ಇನ್ನೂ ಏನೇನೋ ಆಗಿ ಹೋಗುತ್ತದೆ ಎಂದಿದ್ದರು ಮೋದಿಯವರು. ಆದರೆ ಆಗಿದ್ದೇನು ಎಂದು ಪ್ರಶ್ನಿಸಿದರು.

ಬ್ಯಾಂಕ್‌ಗಳ ಮುಂದೆ ಸಾಲುಗಟ್ಟಿ ನಿಂತು 120ಕ್ಕೂ ಹೆಚ್ಚು ಮಂದಿ ಬಡವರು, ಸಣ್ಣ ವ್ಯಾಪಾರಿಗಳು, ರೈತರು, ಮಧ್ಯಮ ವರ್ಗದವರು ಸತ್ತರೇ ಹೊರತು ಶ್ರೀಮಂತರಲ್ಲ. ಅಧಿಕಾರಕ್ಕೆ ಬಂದ ನೂರು ದಿನದೊಳಗೆ ವಿದೇಶದಲ್ಲಿರುವ ಕಪ್ಪು ಹಣವನ್ನು ತಂದು ಎಲ್ಲರ ಬ್ಯಾಂಕ್ ಖಾತೆಗೆ ತಲಾ 15 ಲಕ್ಷ ಹಾಕುವುದಾಗಿ ಹೇಳಿದ್ದು ನೆನಪಿಲ್ಲವೇ ಮೋದಿಯವರೇ ಎಂದು ಮುಖ್ಯಮಂತ್ರಿ ಕುಟುಕಿದರು.

ಜನ್ ಧನ್ ಯೋಜನೆ ಠುಸ್ ಆಗಿದೆ. ಮೋದಿ ಅವರದ್ದು ಯು ಟರ್ನ್ ಸರಕಾರ. ಜಿಎಸ್ ಟಿ, ಎಫ್ ಡಿ ಐ, ಆಧಾರ್ ಯೋಜನೆಯನ್ನು ಮುಖ್ಯಮಂತ್ರಿ ಆಗಿದ್ದಾಗ ಮೋದಿಯವರು ವಿರೋಧ ಮಾಡಿದ್ದರು. ಆದರೆ ಈಗ ಆ ಯೋಜನೆಗಳನ್ನೇ ಅಪ್ಪಿಕೊಂಡಿದ್ದಾರೆ. ಮೋದಿಯವರು ಪ್ರಧಾನಿಯಾದ ಬಳಿಕ ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್ ದರ ಹೆಚ್ಚಾಗಿದೆ. ಇದು ಜನ ಸಾಮಾನ್ಯರ ಪರವಾದ ಕ್ರಮವೇ ಎಂದು ಪ್ರಶ್ನಿಸಿದರು.

ಸ್ವಚ್ಛ ಭಾರತ ಯೋಜನೆಯಲ್ಲಿ ಪೊರಕೆ ಹಿಡಿದು ಫೋಟೊಗೆ ಪೋಸು ಕೊಟ್ಟಿದ್ದು ಬಿಟ್ಟರೆ ಆಗಿದ್ದೇನೂ ಇಲ್ಲ. ನಮ್ಮ ಸರಕಾರ ಕಳೆದ ನಾಲ್ಕು ವರ್ಷದಿಂದ ಅಧಿಕಾರ ನಡೆಸುತ್ತಿದೆ. ಚುನಾವಣೆ ಪ್ರಣಾಳಿಕೆಯಲ್ಲಿ ಜನರಿಗೆ ನೀಡಿದ್ದ ಭರವಸೆಗಳಲ್ಲಿ 155 ಆಶ್ವಾಸನೆಗಳನ್ನು ಈಡೇರಿಸಿದ್ದೇವೆ. ಜನರಿಗೆ ಕೊಟ್ಟ ಭರವಸೆಗಳನ್ನು ನೂರಕ್ಕೆ ನೂರರಷ್ಟು ಈಡೇರಿಸುವ ಕೆಲಸವನ್ನು ಯಾವ ಸರಕಾರವೂ ಮಾಡಿಲ್ಲ.

ಕಳೆದ ನಾಲ್ಕು ವರ್ಷದಲ್ಲಿ ನಮ್ಮ ಸರಕಾರ ನುಡಿದಂತೆ ನಡೆದಿದೆ. ಸರಕಾರದ ಸಾಧನೆಗಳನ್ನು ಒಳಗೊಂಡ ಕಿರುಹೊತ್ತಗೆಯನ್ನು ಪಕ್ಷದ ಕಾರ್ಯಕರ್ತರು ಮನೆ ಮನೆಗೆ ತಲುಪಿಸಬೇಕು. ಜನತೆಗೆ ಕೊಟ್ಟ ಮಾತಿನ ಪ್ರಕಾರ ನಮ್ಮ ಸರಕಾರ ನಡೆದುಕೊಂಡಿದೆ. ಹೀಗಾಗಿ ನಮ್ಮ ಸರಕಾರಕ್ಕೆ ಮತ್ತೆ ಆಶೀರ್ವಾದ ಮಾಡಿ ಎಂದು ನಮ್ಮ ಕಾರ್ಯಕರ್ತರು ಜನರಲ್ಲಿ ಮನವಿ ಮಾಡಬೇಕು ಎಂದು ಸಿಎಂ ಹೇಳಿದರು. ಬೂತ್ ಮಟ್ಟದಲ್ಲಿ ಕಾರ್ಯಕರ್ತರನ್ನು ಇದೇ ಮೊದಲ ಬಾರಿಗೆ ನೇಮಕ ಮಾಡಲಾಗಿದೆ. ಪಕ್ಷದ ಸಂಘಟನೆಯ ದೃಷ್ಟಿಯಿಂದ ಇದು ಉಪಯುಕ್ತ ಕೆಲಸ.

ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಅವರ ಬಗ್ಗೆ ನಮ್ಮ ಕಾರ್ಯಕರ್ತರು ಎಚ್ಚರ ವಹಿಸಬೇಕು.ಕಾಂಗ್ರೆಸ್ ಕಾರ್ಯಕರ್ತರು ಸುಳ್ಳು ಹೇಳುವ ಅಗತ್ಯವಿಲ್ಲ. ನಮ್ಮ ಸರಕಾರ ಏನು ಮಾಡಿದೆ, ಸಾಧನೆಗಳೇನು ಎಂಬ ಸತ್ಯವನ್ನು ಜನತೆಯ ಮುಂದಿಟ್ಟರೆ ಸಾಕು ಎಂದರು.

ಅಕ್ಟೋಬರ್ ವೇಳೆಗೆ ಇನ್ನೂ 15 ಲಕ್ಷ ಜನರನ್ನು ಅನ್ನಭಾಗ್ಯ ಯೋಜನೆ ವ್ಯಾಪ್ತಿಗೆ ತರಲಾಗುವುದು. ಈ ಮೂಲಕ ನಾಲ್ಕು ಕೋಟಿ ಜನರು ಯೋಜನೆಯ ಫಲಾನುಭವಿಗಳಾಗಲಿದ್ದಾರೆ. ಇದಲ್ಲದೆ, ಕ್ಷೀರಭಾಗ್ಯ, ಕೃಷಿಭಾಗ್ಯ, ಪಶುಭಾಗ್ಯ, ಶೂ ಭಾಗ್ಯ ಸೇರಿದಂತೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಇದರಲ್ಲಿ ಆ ಜಾತಿ ಈ ಜಾತಿ ಎಂಬುದಿಲ್ಲ ಎಂದು ಮುಖ್ಯಮಂತ್ರಿ ಹೇಳಿದರು.

Leave a Reply