ಕೊನೆಗೂ ಹೊರಬಿತ್ತು ಕಟು ಸತ್ಯ ಹೈಕಮಾಂಡ್ ಗೆ ಕಪ್ಪ: ವಿಡಿಯೋದಲ್ಲಿರುವ ಬಿಎಸ್ ವೈ, ಅನಂತ್ ಸಂಭಾಷಣೆ ಅಸಲಿ !

  ಎಫ್ ಎಸ್ ಎಲ್ ವರದಿಯಿಂದ ಸ್ಪಷ್ಟನೆ, ಭ್ರಷ್ಟಾಚಾರ ನಿಗ್ರಹದಳದಿಂದ ದೂರು ದಾಖಲು

ಬೆಂಗಳೂರು: ಹೈಕಮಾಂಡ್ ಗೆ ಕಪ್ಪಕಾಣಿಕೆ ನೀಡಿದ ಸಂಬಂಧ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಹಾಗೂ ಕೇಂದ್ರ ಸಚಿವ ಅನಂತ್ ಕುಮಾರ್ ನಡುವಿನ ಸಂಭಾಷಣೆ ಕುರಿತಂತೆ ಭ್ರಷ್ಟಾಚಾರ ನಿಗ್ರಹದಳ ಅಧಿಕಾರಿಗಳು ದೂರು ದಾಖಲಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಈ ಹಿಂದೆ ಮಾಧ್ಯಮಗಳಲ್ಲಿ ವೈರಲ್ ಆಗಿದ್ದ ಹೈಕಮಾಂಡ್‌ ಗೆ ಕಪ್ಪ ನೀಡಿದ ಆರೋಪ ಸಂಬಂಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವ ಅನಂತಕುಮಾರ್ ನಡೆಸಿರುವ ಸಂಭಾಷಣೆ ಅಸಲಿ ಎಂದು ಎಫ್‌ಎಸ್‌ಎಲ್ (ವಿಧಿ ವಿಜ್ಞಾನ ಪ್ರಯೋಗಾಲಯ)ವರದಿ ಸ್ಪಷ್ಟಪಡಿಸಿದ್ದು, ಈ ಸಂಬಂಧ ಎಸಿಬಿ ಅಧಿಕಾರಿಗಳು ದೂರು ದಾಖಲಿಕೊಂಡು ಎಫ್ ಐಆರ್ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.ಯಡಿಯೂರಪ್ಪ, ಅನಂತಕುಮಾರ್ ಹೈಕಮಾಂಡ್‌ ಗೆ ಕಪ್ಪಕಾಣಿಕೆ ಸಲ್ಲಿಸಿರುವ ಬಗ್ಗೆ ನಡೆಸಿರುವ ಸಂಭಾಷಣೆ ಸಿಡಿಯನ್ನು ಕಾಂಗ್ರೆಸ್ ಮುಖಂಡರು ಬಿಡುಗಡೆ ಮಾಡಿದ್ದರು, ಅಲ್ಲದೆ ಬಳಿಕ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಸಿಡಿಯ ಸಂಭಾಷಣೆ ಧ್ವನಿ ಸಂಬಂಧ ದೂರು ಕೂಡ ದಾಖಲಾಗಿತ್ತು. ಬಿ.ಎಸ್.ಯಡಿಯೂರಪ್ಪ ಮತ್ತು ಕೇಂದ್ರ ಸಚಿವ ಅನಂತಕುಮಾರ್ ಕಾನೂನು ಬಾಹಿರವಾಗಿ ಹಣ ಸಂಗ್ರಹಿಸಿ ತಮ್ಮ ಪಕ್ಷದ ಹೈಕಮಾಂಡ್‌ ಗೆ ಲಂಚ ನೀಡಿದ್ದಾರೆ. ಈ ಕುರಿತು ತನಿಖೆ ನಡೆಸಬೇಕೆಂದು ಕೆಪಿಸಿಸಿ ಕಾನೂನು ಘಟಕ ಎಸಿಬಿಗೆ ದೂರು ನೀಡಿತ್ತು.ಈ ಸಂಬಂಧ ಅಕ್ಟೋಬರ್ 4 ರಂದು ಸೈಬರ್ ಕ್ರೈಂ ಪೊಲೀಸರಿಗೆ ಫಾರೆನ್ಸಿಕ್ ವಿಭಾಗದ(ಎಫ್‌ಎಸ್‌ಎಲ್) ಸಹಾಯಕ ನಿರ್ದೇಶಕಿ ಸಿ.ಶ್ರೀವಿದ್ಯಾ ವರದಿಯೊಂದನ್ನು ಸಲ್ಲಿಸಿದ್ದು, ಇದರಲ್ಲಿ ಯಡಿಯೂರಪ್ಪ-ಅನಂತಕುಮಾರ್ ನಡೆಸಿರುವ ಸಂಭಾಷಣೆ ಅಸಲಿಯಾಗಿದೆ ಎಂದು ವರದಿಯಲ್ಲಿ ತಿಳಿಸಿದ್ದರು ಎಂದು ತಿಳಿದುಬಂದಿದೆ. ಇದೇ ವರದಿಯನ್ನು ಮುಂದಿಟ್ಟುಕೊಂಡು ರಾಜ್ಯ ಭ್ರಷ್ಟಚಾರ ನಿಗ್ರಹ ದಳ(ಎಸಿಬಿ) ಎಫ್‌ಐಆರ್ ದಾಖಲಿಸಲು ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ. ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಕಳೆದ ಫೆಬ್ರವರಿ 12ರಂದು ನಡೆದ ಕಾರ್ಯಕಾರಿಣಿ ಸಭೆಯಲ್ಲಿ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಭಾಷಣ ಮಾಡುತ್ತಿರುವ ವೇಳೆ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹಾಗೂ ಕೇಂದ್ರ ಸಚಿವ ಅನಂತ ಕುಮಾರ್ ನಡುವೆ ಪರಸ್ಪರ ಮಾತನಾಡಿಕೊಂಡಿದ್ದರು. ಈ ವೇಳೆ ಸಿದ್ದರಾಮಯ್ಯ ಅವರ ಕುರಿತ ಡೈರಿ ಸಂಬಂಧ ಮಾತನಾಡಿದ್ದ ಉಭಯ ನಾಯಕರು ಹೈ ಕಮಾಂಡ್ ಗೆ ಕಪ್ಪ ಕಾಣಿಕೆ ನೀಡಿದ್ದರ ಕುರಿತು ಚರ್ಚಿಸಿದ್ದರು ಎಂದು ಹೇಳಲಾಗಿದೆ. ಈ ಸಂಬಂಧ ಸಿಡಿ ಬಿಡುಗಡೆ ಮಾಡಿದ್ದ ಕಾಂಗ್ರೆಸ್ ಮುಖಂಡರು ದೂರು ಕೂಡ ಸಲ್ಲಿಕೆ ಮಾಡಿದ್ದರು.

Leave a Reply