ಮಸಾಜ್ ವಿವಾದದಲ್ಲಿ ಹೈ ಕೋರ್ಟ್ ..

ಹೆಂಗಸರು ಗಂಡಸರಿಗೆ ಮಸಾಜ್‌ ಮಾಡುವ ಮೂಲಕ ಅನೈತಿಕ ಚಟುವಟಿಕೆ ನಡೆಸಲಾಗುತ್ತಿದೆ ಎಂಬ ಕಾರಣ ನೀಡಿ ಆಯುರ್ವೇದ, ಪಂಚಕರ್ಮ ಚಿಕಿತ್ಸಾ ಕೇಂದ್ರಗಳಿಗೆ (ಥೆರಪಿ ಸೆಂಟರ್‌) ನೀಡಲಾಗಿದ್ದ ಪರವಾನಗಿ ರದ್ದುಪಡಿಸಿದ್ದ ಮಂಗಳೂರು ಮಹಾನಗರ ಪಾಲಿಕೆಯ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ ಬುಧವಾರ ಇತ್ಯರ್ಥಪಡಿಸಿತು.

ಆರು ಮಸಾಜ್‌ ಸೆಂಟರ್‌ ಮಾಲೀಕರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನ್ಯಾ. ವಿನೀತ್‌ ಕೊಠಾರಿ ಅವರಿದ್ದ ನ್ಯಾಯಪೀಠ ”ಅರ್ಜಿದಾರರಿಗೆ ಹೊಸದಾಗಿ ನೋಟಿಸ್‌ ಜಾರಿಗೊಳಿಸಿ, ಅವರ ಅಹವಾಲುಗಳನ್ನು ಆಲಿಸಬೇಕು. ಆ ನಂತರ ಅಗತ್ಯವಿದ್ದಲ್ಲಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು”ಎಂದು ಪಾಲಿಕೆಗೆ ಆದೇಶಿಸಿತು.

ವಿಚಾರಣೆ ವೇಳೆ ಪೀಠ ”ಮಸಾಜ್‌ ಪಾರ್ಲರ್‌ಗಳಲ್ಲಿ ಹೆಂಗಸರು ಗಂಡಸರಿಗೆ ಮಸಾಜ್‌ ಮಾಡಬಾರದು ಎಂದು ಯಾವ ಕಾನೂನಿನಲ್ಲಿ ಹೇಳಲಾಗಿದೆ. ಅನೈತಿಕ ಚಟುವಟಿಕೆ ನಡೆಯುತ್ತಿದೆ ಎಂಬುದಕ್ಕೆ ಯಾವುದೇ ಸಾಕ್ಷ್ಯಗಳು ಲಭ್ಯವಿಲ್ಲದಿದ್ದರೂ ಮಸಾಜ್‌ ಕೇಂದ್ರಗಳ ಪರವಾನಗಿ ಹೇಗೆ ರದ್ದುಪಡಿಸಿದ್ದೀರಿ? ಒಂದೊಮ್ಮೆ ಕಾನೂನು ಬಾಹಿರ ಚಟುವಟಿಕೆ ಕಾನೂನು ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಬಹುದಲ್ಲವೇ”ಎಂದು ಪ್ರಶ್ನಿಸಿತು.

ಅರ್ಜಿದಾರರ ಪರ ವಕೀಲ ರಾಜಾರಾಂ ಸೂರ್ಯಂಬೈಲ್‌ ”ಅನೈತಿಕ ಚಟುವಟಿಕೆ ನಡೆಯುತ್ತಿದೆ ಎಂಬ ಕಾರಣ ನೀಡಿ ಅರ್ಜಿದಾರರಿಗೆ ಮಸಾಜ್‌ ಸೆಂಟರ್‌ ನಡೆಸಲು ನೀಡಿದ್ದ ಪರವಾನಗಿಯನ್ನು ರದ್ದುಪಡಿಸಲಾಗಿದೆ. ನುರಿತ ಆಯುರ್ವೇದ ಚಿಕಿತ್ಸಕರು ಅಲ್ಲಿ ಚಿಕಿತ್ಸೆ ನೀಡುತ್ತಾರೆ. ಸ್ತ್ರೀಯರಿಂದಲೂ ಚಿಕಿತ್ಸೆ ನೀಡಲಾಗುತ್ತಿದೆ ಎಂಬ ಕಾರಣಕ್ಕೆ ಅಲ್ಲಿ ಅನೈತಿಕ ಚಟುವಟಿಕೆ ನಡೆಸಲಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ”ಎಂದರು.

Leave a Reply