‘ಕುಮಾರ ಪರ್ವ‘ ಹೆಸರಿನಲ್ಲಿ ಜೆಡಿಎಸ್ ನಡಿಗೆ ಜನರೆಡೆಗೆ ಸಮಾವೇಶದೊಂದಿಗೆ ಮಹಾಚುನಾವಣಾ ಸಮರಕ್ಕೆ ಚಾಲನೆ ನೀಡಲು ಪಕ್ಷ ಭರ್ಜರಿ ತಯಾರಿ ನಡೆಸಿದೆ. ಶಾಸಕ ಜಿ.ಟಿ.ದೇವೇಗೌಡ ನೇತೃತ್ವದಲ್ಲಿ ಗುರುವಾರ ಖಾಸಗಿ ಹೋಟೆಲ್ನಲ್ಲಿ ನಡೆದ ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಸಮಾವೇಶದ ಸಿದ್ಧತೆಗಳ ಕುರಿತು ರ್ಚಚಿಸಲಾಗಿದೆ. ಮುಂದಿನ ವಿಧಾನಸಭಾ ಚುನಾವಣೆಯು ಜೆಡಿಎಸ್ ಪಾಲಿಗೆ ನಿರ್ಣಾಯಕವಾಗಿದೆ. ಹತ್ತು ವರ್ಷ ಅಧಿಕಾರ ಗದ್ದುಗೆಯಿಂದ ದೂರ ಇರುವ ಪಕ್ಷಕ್ಕೆ ಈ ಚುನಾವಣೆ ಅಳಿವು-ಉಳಿವಿನ ಪ್ರಶ್ನೆ. ಹೀಗಾಗಿ, ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಎಲ್ಲ ಪಕ್ಷಗಳಿಗಿಂತ ಮೊದಲೇ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಲು ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ನ.3ರಂದು ಬೃಹತ್ ಸಮಾವೇಶ ನಡೆಸುವ ಮೂಲಕ ಪ್ರಚಾರಕ್ಕೆ ಚಾಲನೆ ನೀಡಲು ಮುಂದಾಗಿದೆ. ಇದಕ್ಕೆ ದೇವೇಗೌಡ ಕುಟುಂಬದ ರಾಜಕೀಯ ಬದ್ಧವೈರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪರ್ಧಿಸಲು ನಿಶ್ಚಯಿಸಿರುವ ಚಾಮುಂಡೇಶ್ವರಿ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಆಡಳಿಡಾರೂಢ ಕಾಂಗ್ರೆಸ್ಗೆ ದಳ ಪಡೆ ಸವಾಲು ಎಸೆದಿದೆ. ಅನಾರೋಗ್ಯ ಕಾರಣದಿಂದಾಗಿ ಒಂದು ತಿಂಗಳ ಕಾಲ ವಿಶ್ರಾಂತಿ ಪಡೆದು ಚೇತರಿಸಿಕೊಂಡಿರುವ ಪಕ್ಷದ ರಾಜಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ನ.3ರ ಬೆಳಗ್ಗೆ ನಾಡದೇವತೆ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿ, ದೇವಿಯ ಆಶೀರ್ವಾದ ಪಡೆಯಲಿದ್ದಾರೆ. ಬಳಿಕ ಹಿನಕಲ್ನಲ್ಲಿರುವ ಶ್ರೀ ನನ್ನೇಶ್ವರಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಬೃಹತ್ ಮೆರವಣಿಗೆಗೆ ಚಾಲನೆ ನೀಡುವರು. ನಂತರ ಲಿಂಗದೇವರಕೊಪ್ಪದಲ್ಲಿ ‘ಕುಮಾರ ಪರ್ವ‘ ಬೃಹತ್ ಸಮಾವೇಶ ನಡೆಸಿ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಲಿದ್ದಾರೆ. ಜಿಲ್ಲೆಯ ವಿವಿಧ ಭಾಗಗಳಿಂದ ಸುಮಾರು 25 ಸಾವಿರಕ್ಕಿಂತ ಹೆಚ್ಚು ಕಾರ್ಯಕರ್ತರನ್ನು ಸೇರಿಸುವ ಲೆಕ್ಕಾಚಾರ ಹಾಕಲಾಗಿದೆ. ಇದರೊಂದಿಗೆ ವಿಧಾನಸಭಾ ಚುನಾವಣೆಗೆ ಸಿಎಂ ಕ್ಷೇತ್ರದಿಂದಲೇ ಪ್ರಚಾರಕ್ಕೆ ನಾಂದಿ ಹಾಡಲು ಭಾರಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮುಂದಿನ ಸಲ ಅಧಿಕಾರ ಹಿಡಿಯಬೇಕೆಂಬ ಹಠ ತೊಟ್ಟಿರುವ ಜೆಡಿಎಸ್ನ ಸಿಎಂ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ, ಈ ಸಮಾವೇಶದ ಬಳಿಕ ನಾಡಿನಾದ್ಯಂತ ಸಂಚರಿಸಿ ಪ್ರಚಾರ ಕೈಗೊಳ್ಳಲಿದ್ದಾರೆ. ಹೀಗಾಗಿ, ಈ ಕಾರ್ಯಕ್ರಮ ಪಕ್ಷಕ್ಕೆ ಬಹಳ ಮಹತ್ವದಾಗಿದೆ. ಮುಂದಿನ ವಿಧಾನಸಭಾ ಚುನಾವಣೆಗೆ ಮತ್ತೆ ಚಾಮುಂಡೇಶ್ವರಿ ಕ್ಷೇತ್ರದಿಂದಲೇ ಸ್ಪರ್ಧಿಸುವುದಾಗಿ ಸಿದ್ದರಾಮಯ್ಯ ಘೊಷಣೆ ಮಾಡಿದ ಬಳಿಕ ಜಿಲ್ಲೆಯ ಇಡೀ ರಾಜಕೀಯ ಲೆಕ್ಕಾಚಾರವೇ ಬದಲಾಗಿದೆ. ಒಂದು ಕಾಲದ ಆಪ್ತಮಿತ್ರ, ಇದೀಗ ರಾಜಕೀಯ ಬದ್ಧ ವೈರಿಯಾಗಿರುವ ಜಿ.ಟಿ.ದೇವೇಗೌಡ ಸಿಎಂಗೆ ಪ್ರತಿಸ್ಪರ್ಧಿಯಾಗುವುದು ಬಹುತೇಕ ಖಚಿತವಾಗಿದೆ. ಇಲ್ಲಿ ಸೋಲಿಸುವ ಮೂಲಕ ಸಿದ್ದರಾಮಯ್ಯ ಅವರ ರಾಜಕೀಯ ಜೀವನವನ್ನು ಅಂತ್ಯಗೊಳಿಸಲು ಜಿಟಿಡಿ ನಿರ್ಧರಿಸಿದ್ದು, ಇದಕ್ಕೆ ಎಚ್.ಡಿ. ಕುಮಾರಸ್ವಾಮಿ ಸಾಥ್ ನೀಡುವ ಮೂಲಕ ಇಲ್ಲಿಂದಲೇ ಪ್ರಚಾರ ನಡೆಸಿ ಸಿದ್ದರಾಮಯ್ಯ ಅವರಲ್ಲಿ ನಡುಕ ಉಂಟು ಮಾಡಲು ಲೆಕ್ಕಾಚಾರ ಹಾಕಲಾಗಿದೆ.
Super and ultimate.
Sidhu wash out that is power off HDK
HDK will be next CM of Karnataka JDS will be the peoples choice