ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರು ನೋಟು ನಿಷೇಧ ಮತ್ತು ಜಿಎಸ್ಟಿ ಎಂಬ ಅವಳಿ ಅಸ್ತ್ರಗಳ ಮೂಲಕ ದೇಶದ ಆರ್ಥಿಕತೆಯನ್ನೇ ನಾಶ ಮಾಡಿದ್ದಾರೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಸೋಮವಾರ ನೋಟು ಅಮಾನ್ಯೀಕರಣ ಒಂದು ಬಹುದೊಡ್ಡ ದುರಂತ ಎಂದು ಮೋದಿ ಅವರು ಇನ್ನೂ ಒಪ್ಪಿಕೊಂಡಿಲ್ಲ. ಯಾಕೆಂದರೆ ಅವರು ದೇಶದ ಜನರ ನೋವನ್ನು ಅರ್ಥ ಮಾಡಿಕೊಳ್ಳಲು ಸೋತಿದ್ದಾರೆ ಎಂದು ರಾಹುಲ್ ಹೇಳಿದರು. ಅವರು ಸೋಮವಾರ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಜತೆ ದಿಲ್ಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ನೋಟು ಅಮಾನ್ಯ ಮತ್ತು ಜಿಎಸ್ಟಿ ಬಗ್ಗೆ ಚರ್ಚಿಸಲು ಕರೆದ ಸಭೆಯ ಬಳಿ ಪತ್ರಿಕಾಗೋಷ್ಠಿ ನಡೆಯಿತು. ಜಿಎಸ್ಟಿ ಸಂಬಂಧದ ಸಭೆಯಲ್ಲಿ ಮನಮೋಹನ್ ಸಿಂಗ್ ಮತ್ತು ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಭಾಗವಹಿಸಿದ್ದರು.
ನವಂಬರ್ 8ನ್ನು ಕಾಳಧನ ವಿರೋಧಿ ದಿನವಾಗಿ ಆಚರಿಸುವ ಬಿಜೆಪಿ ನಿರ್ಧಾರವನ್ನು ಪ್ರಶ್ನಿಸಿರುವ ರಾಹುಲ್ ಗಾಂಧಿ, ” ನವಂಬರ್ 8 ಭಾರತದ ಪಾಲಿಗೆ ವಿಷಾದದ ದಿನ. ಆದರೆ, ಬಿಜೆಪಿ ಅದನ್ನು ಕಪ್ಪು ಹಣ ವಿರೋಧಿ ದಿನವಾಗಿ ಸಂಭ್ರಮಿಸುತ್ತದೆಯಂತೆ. ಅದರಲ್ಲಿ ಸಂಭ್ರಮಿಸಲು ಏನಿದೆ ಎಂದೇ ನನಗೆ ಅರ್ಥವಾಗುತ್ತಿಲ್ಲ,” ಎಂದರು.
”ದೇಶ ನೋಟ್ ಬ್ಯಾನ್ ಎಂಬ ‘ನೌಕಾಸ್ತ್ರ’ದ ಹೊಡೆತದಿಂದ ಹೇಗೋ ಪಾರಾಯಿತು. ಆದರೆ, ಜಿಎಸ್ಟಿಯ ಹೊಡೆತವನ್ನು ತಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ದೇಶದ ಆರ್ಥಿಕತೆ ತತ್ತರಿಸುತ್ತಿದೆ,” ಎಂದು ರಾಹುಲ್ ಹೇಳಿದರು.
ಒಳ್ಳೆಯ ಯೋಜನೆ ಹಾಳಾಯ್ತು!
ಜಿಎಸ್ಟಿ ಒಂದು ಒಳ್ಳೆಯ ಯೋಜನೆ. ಆದರೆ, ಅದನ್ನು ಸರಿಯಾಗಿ ಜಾರಿಗೊಳಿಸದೆ ಮೋದಿ ಸರಕಾರ ಆರ್ಥಿಕತೆಯನ್ನು ನಾಶ ಮಾಡಿತು ಎಂದು ರಾಹುಲ್ ಆಪಾದಿಸಿದರು.
ಕಪ್ಪು ದಿನವಾಗಿ ಆಚರಿಸಲು ಚಿಂತನೆ
ನವಂಬರ್ 8ನ್ನು ಕಪ್ಪು ದಿನವಾಗಿ ಆಚರಿಸುವ ಬಗ್ಗೆ ವಿರೋಧ ಪಕ್ಷಗಳ ಜತೆ ಚರ್ಚಿಸಲು ಕಾಂಗ್ರೆಸ್ ನಾಯಕರ ಸಭೆಯಲ್ಲಿ ತೀರ್ಮಾನಿಸಲಾಯಿತು. 18 ವಿರೋಧ ಪಕ್ಷಗಳ ಜತೆ ಈ ಬಗ್ಗೆ ಚರ್ಚೆ ನಡೆಸಲು ರಾಹುಲ್ ಬಯಸಿದರು.