ಲಖನೌ : ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಒಂದಲ್ಲಾ ಒಂದು ಬದಲಾವಣೆ ತರುತ್ತಲೇ ಇದೆ. ಈ ಬಾರಿ ಯೋಗಿ ನೇತೃತ್ವದ ಸರ್ಕಾರ ತನ್ನ ಕಚೇರಿಗೆ ಕೇಸರಿ ಪೈಂಟ್ ಮಾಡಿಸಿದ್ದಾರೆ.
ಯೋಗಿ ಆದಿತ್ಯನಾಥ್ ಅವರ ನಡೆ ಪ್ರತಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ. ಯೋಗಿ ಆದಿತ್ಯನಾಥ್ ಉತ್ತರ ಪ್ರದೇಶ ರಾಜಕೀಯವನ್ನು ಕೇಸರೀಕರಣಗೊಳಿಸುತ್ತಿದ್ದಾರೆ ಎಂದು ಆರೋಪಿಸಿವೆ.
ಉತ್ತರ ಪ್ರದೇಶದ ರಾಜಧಾನಿ ಲಖನೌದಲ್ಲಿರುವ ಲಾಲ್ ಬಹದ್ದೂರ್ ಶಾಸ್ತ್ರಿ ಭವನದಲ್ಲಿನ ಸಿಎಂ ಕಚೇರಿ ಹಾಗೂ ಸರ್ಕಾರದ ಹಿರಿಯ ಅಧಿಕಾರಿಗಲ ಕಚೇರಿಗೆ ಹಿಂದೆ ಬಿಳಿ ಹಾಗೂ ನೀಲಿ ಬಣ್ಣ ಬಳಿಯಲಾಗಿತ್ತು. ಅದನ್ನು ತೆಗೆದು ಕೇಸರಿ ಬಣ್ಣವನ್ನು ಬಳಿಯಲಾಗಿದೆ ಎಂದು ಮೂಲಗಳು ತಿಳಿಸಿವೆ.
ಉತ್ತರ ಪ್ರದೇಶದ ಅಧಿಕಾರಿಗಳ ಕಚೇರಿಗೆ ನೀಲಿ ಹಾಗೂ ಬಿಳಿಯ ಬಣ್ಣ ಬಳಿಯುವುದು ಹಿಂದಿನಿಂದ ನಡೆದು ಬಂದ ಪದ್ದತಿಯಾಗಿದೆ. ಆದರೆ ಕಟ್ಟಡವನ್ನು ದುರಸ್ತಿಗೊಳಿಸಿ ಈ ಬಾರಿ ಕಚೇರಿಯ ಗೋಡೆಗಳು ಹಾಗೂ ಟೆರಸ್ಗೆ ಕೇಸರಿ ಬಣ್ಣ ಬಳಿಯಲಾಗುತ್ತಿದೆ.
ಯೋಗಿ ಸಿಎಂ ಆದ ಬಳಿಕ ಉತ್ತರ ಪ್ರದೇಶದ ತುಂಬ ಕೇಸರಿ ಬಣ್ಣ ಕಾಣತೊಡಗಿದೆ. ಸಿಎಂ ಕುಳಿತುಕೊಳ್ಳುವ ಕುರ್ಚಿ, ಪರದೆಯ ಬಣ್ಣ ಸಹ ಕೇಸರಿಯಿಂದ ಕೂಡಿರುವುದಾಗಿ ಮೂಲಗಳು ತಿಳಿಸಿವೆ.
ಇತ್ತೀಚಿಗಷ್ಟೇ ಆದಿತ್ಯನಾಥ್ 50 ಕೇಸರಿ ಬಣ್ಣದ ಬಸ್ಸುಗಳನ್ನು ಉದ್ಘಾಟಿಸಿದ್ದರು. ಉದ್ಘಾಟನೆ ವೇಳೆ ವೇದಿಕೆಯನ್ನೂ ಕೇಸರಿ ಬಣ್ಣದಿಂದ ಅಲಂಕರಿಸಲಾಗಿತ್ತು. ಅಲ್ಲದೆ ಶಾಲೆಗಳಲ್ಲಿ ಸರ್ಕಾರದ ವತಿಯಿಂದ ಕೊಡಲಾಗುವ ಬ್ಯಾಗ್ಗಳೂ ಸಹ ಕೇಸರಿ ಬಣ್ಣದಿಂದ ಕೂಡಿದ್ದವು.
ಬದಲಾವಣೆ ಬಗ್ಗೆ ಮಾತನಾಡುವ ಬಿಜೆಪಿ ಬರಿ ಕಲರ್ ಬದಲಾವಣೆ ಮಾಡುತಿರುವುದು ವಿಷಾದನೀಯ.