ಖಿನ್ನತೆ, ಆತ್ಮಹತ್ಯೆ ಮುಂದಾಗಿದ್ದ ಇಲಿಯಾನಾ ಡಿಕ್ರೂಸ್

ಗೋವಾ ಚೆಲುವೆ ಇಲಿಯಾನಾ ಡಿಕ್ರೂಸ್ ಭಾನುವಾರ ನ್ಯೂಡೆಲ್ಲಿ ಯಲ್ಲಿ ನಡೆದ 21ನೇ ‘ವರ್ಲ್ಡ್ ಕಾಂಗ್ರೆಸ್ ಆಫ್ ಮೆಂಟಲ್ ಹೆಲ್ತ್’ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಇಲಿಯಾನಾರವರಿಗೆ ‘ವುಮೆನ್ ಆಫ್ ಸಬ್‌ಸ್ಟೆನ್ಸ್’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದ್ದು, ತಮ್ಮ ಜೀವನದಲ್ಲಿ ಎದುರಾದ ಒತ್ತಡದ ಸಂದರ್ಭಗಳ ಬಗ್ಗೆ ಮಾತನಾಡಿದ್ದಾರೆ.

Related image

‘ನನ್ನ ದೇಹದ ಆಕೃತಿಯ ಬಗ್ಗೆ ತುಂಬಾ ಕಾಮೆಂಟ್‌ಗಳನ್ನು ಮಾಡುತ್ತಿದ್ದರು. ಇದರಿಂದಾಗಿ ಯಾವಾಗಲೂ ಒತ್ತಡಕ್ಕೆ ಒಳಗಾಗುತ್ತಾ ನೋವನುಭವಿಸುತ್ತಿದ್ದೆ. ಆದರೆ ನಾನು ಖಿನ್ನತೆಯಿಂದ ನರಳುತ್ತಿದ್ದೇನೆ ಎಂಬ ಸಂಗತಿಯನ್ನು ಬೇರೆ ಯಾರೋ ಹೇಳುವವರೆಗೂ ನನಗೆ ಗೊತ್ತಾಗಲಿಲ್ಲ. ಒಂದಾನೊಂದು ಸಂದರ್ಭದಲ್ಲಿ ಆತ್ಮಹತ್ಯೆ ಮಾಡಿಕೊಳ್ಳಬೇಕೆಂಬ ಆಲೋಚನೆ ಸಹ ಬರುತ್ತಿತ್ತು. ಅಂತಹ ಸಂದರ್ಭದಲ್ಲಿ ನನಗೆ ನಾನೇ ಧೈರ್ಯ ತಂದುಕೊಳ್ಳುತ್ತಾ ನಿಧಾನಕ್ಕೆ ನನ್ನನ್ನು ನಾನು ಬದಲಾಯಿಸಿಕೊಂಡೆ. ಖಿನ್ನತೆಯಿಂದ ಹೊರಬೀಳಬೇಕೆಂದರೆ ಮೊದಲು ಮಾಡಬೇಕಾದ ಕೆಲಸ ನಮಗೆ ನಾವೇ ಧೈರ್ಯ ಹೇಳಿಕೊಳ್ಳುವುದು’ ಎಂದಿದ್ದಾರೆ ಇಲಿಯಾನಾ.

‘ನಮ್ಮ ಮಿದುಳಿನಲ್ಲಿ ನಡೆಯುವ ರಾಸಾಯನಿಕ ಕ್ರಿಯೆಗಳಿಗೆ ಅನುಗುಣವಾಗಿ ಚಿಕಿತ್ಸೆ ತೆಗೆದುಕೊಳ್ಳಬೇಕಾಗುತ್ತದೆ. ಅದಷ್ಟಕ್ಕೆ ಅದೇ ಕಡಿಮೆಯಾಗುತ್ತದೆ ಬಿಡು ಎಂದುಕೊಳ್ಳುತ್ತಾ ನಿರ್ಲಕ್ಷ್ಯ ಮಾಡಿದರೆ ಬಳಿಕ ತುಂಬಾ ನೋವನುಭವಿಸಬೇಕಾಗುತ್ತದೆ. ನಮಗೆ ಏನಾದರು ಪೆಟ್ಟು ಬಿದ್ದರೆ, ನೋವಾಗುತ್ತಿದ್ದರೆ ವೈದ್ಯರ ಬಳಿಗೆ ಹೋಗುತ್ತೇವೆ ಅಲ್ಲವೇ. ಅದೇ ರೀತಿ ಖಿನ್ನತೆ ಅನ್ನಿಸಿದಾಗ ಕೂಡಲೆ ವೈದ್ಯರನ್ನು ಸಂಪರ್ಕಿಸಬೇಕು’ ಎಂದು ಸೂಚಿಸಿದ್ದಾರೆ.

ನಟಿ ನಟಿಯರನ್ನು ನೋಡಿದ ಕೂಡಲೆ ಎಷ್ಟು ಚೆನ್ನಾಗಿ, ಆರೋಗ್ಯವಾಗಿ ಇದ್ದಾರೆ ಎಂದುಕೊಳ್ಳುತ್ತೇವೆ. ನಾವು ಇಷ್ಟೆಲ್ಲಾ ಸುಂದರವಾಗಿ ಕಾಣಿಸಲು ಎರಡು ಗಂಟೆಗಳ ಸಮಯ ಬೇಕಾಗುತ್ತದೆ. ಆದರೆ ನಮ್ಮ ಮನಸ್ಸು ಆನಂದವಾಗಿ ಪ್ರಶಾಂತವಾಗಿ ಇದ್ದರೆ ಯಾವುದೇ ರೀತಿಯ ಮೇಕಪ್ ಅಗತ್ಯವಿಲ್ಲ’ ಎಂದಿದ್ದಾರೆ ಇಲಿಯಾನಾ.

ಕೃಪೆ : ವಿಜಯ ಕರ್ನಾಟಕ

Leave a Reply