ರಮ್ಯಾ ಮಂಡ್ಯದಲ್ಲಿ ಮನೆ ಖರೀದಿಸಿ ಚುನಾವಣೆಗೆ ಸಿದ್ಧರಾಗುತ್ತಿದ್ದಾರೆ

ಮಂಡ್ಯ, ನವೆಂಬರ್ 10 : ಮಾಜಿ ಸಂಸದೆ, ಎಐಸಿಸಿ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ರಮ್ಯಾ ಮಂಡ್ಯದಲ್ಲಿ ಮನೆ ಖರೀದಿ ಮಾಡಿದ್ದಾರೆ. ನವೆಂಬರ್ 29ರಂದು ರಮ್ಯಾ ಮಂಡ್ಯಕ್ಕೆ ಭೇಟಿ ನೀಡುವ ಸಾಧ್ಯತೆ ಇದ್ದು, ಅಂದು ಗೃಹಪ್ರವೇಶವೂ ನಡೆಯಲಿದೆ ಎಂಬ ಸುದ್ದಿ ಹಬ್ಬಿದೆ.

2014ರ ಲೋಕಸಭೆ ಚುನಾವಣೆ ಸಮಯದಲ್ಲಿ ರಮ್ಯಾ ಅವರು ನೆಹರೂ ನಗರದಲ್ಲಿ ಬಾಡಿಗೆ ಮನೆ ಮಾಡಿದ್ದರು. ಆ ಮನೆಯಲ್ಲಿಯೇ ವಾಸ್ತವ್ಯ ಹೂಡಿ ಚುನಾವಣಾ ಪ್ರಚಾರ ನಡೆಸಿದ್ದರು. ಆದರೆ, ಚುನಾವಣೆಯಲ್ಲಿ 518,852 ಮತಗಳನ್ನು ಪಡೆದು ಸೋಲು ಅನುಭವಿಸಿದ್ದರು.

ಕರ್ನಾಟಕದಲ್ಲಿ ಸದ್ಯ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದೆ. ರಮ್ಯಾ ಅವರು ರಾಜ್ಯ ರಾಜಕಾರಣಕ್ಕೆ ಆಗಮಿಸಲಿದ್ದಾರೆ ಎಂಬ ಸುದ್ದಿಯೂ ಇದೆ. ಆದ್ದರಿಂದ, ಮಂಡ್ಯದಲ್ಲಿ ಕಾಂಗ್ರೆಸ್ ಮುಖಂಡರೊಬ್ಬರಿಗೆ ಸೇರಿದ ಮನೆಯನ್ನು ಖರೀದಿ ಮಾಡಿದ್ದಾರೆ.

ಅಭಿಮಾನಿಯಿಂದ ಮೋಹಕ ತಾರೆ ರಮ್ಯಾರಿಗೊಂದು ಪ್ರೀತಿಯ ಓಲೆ..

ನವೆಂಬರ್ 29ರಂದು ರಮ್ಯಾ ಮಂಡ್ಯಕ್ಕೆ ಆಗಮಿಸಲಿದ್ದಾರೆ. ಅಂದು ಮನೆಯ ಗೃಹ ಪ್ರವೇಶವನ್ನು ಮಾಡಿ. ಜಿಲ್ಲೆಯಲ್ಲಿ ರಾಜಕೀಯ ಚಟುವಟಿಕೆಗೆ ಚಾಲನೆ ನೀಡಲಿದ್ದಾರೆ ಎಂದು ತಿಳಿದುಬಂದಿದೆ.

ಮಾಜಿ ಸಚಿವ ಅಂಬರೀಶ್ ಮಂಡ್ಯ ಜಿಲ್ಲಾ ರಾಜಕಾರಣದಲ್ಲಿ ಸಕ್ರಿಯವಾಗಿಲ್ಲ. ರಮ್ಯಾ ಅವರು ಕ್ಷೇತ್ರದಲ್ಲಿ ಸ್ಪರ್ಧಿಸಿದರೆ ಕ್ಷೇತ್ರವನ್ನು ಉಳಿಸಿಕೊಳ್ಳಬಹುದು ಎಂಬುದು ಕಾಂಗ್ರೆಸ್ ನಾಯಕರ ಲೆಕ್ಕಾಚಾರ. ಆದ್ದರಿಂದ, ರಮ್ಯಾ ಅವರಿಗೆ ಜಿಲ್ಲೆಯ ರಾಜಕಾರಣದ ಬಗ್ಗೆ ಗಮನಹರಿಸುವಂತೆ ನಾಯಕರು ಸೂಚಿಸಿದ್ದಾರೆ. ಆದ್ದರಿಂದ, ಮನೆಯನ್ನು ಖರೀದಿ ಮಾಡಿದ್ದಾರೆ.

ಮಂಡ್ಯ ಕ್ಷೇತ್ರದಿಂದ ರಮ್ಯಾ ಅವರು 2018ರ ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆ ಇದೆ. ಮಂಡ್ಯದಿಂದ ಒಪ್ಪದಿದ್ದರೆ ಹುಣಸೂರು ಕ್ಷೇತ್ರದಿಂದ ಟಿಕೆಟ್ ನೀಡಲು ನಾಯಕರು ಚಿಂತನೆ ನಡೆಸಿದ್ದಾರೆ. ಈ ಬಗ್ಗೆ ಇನ್ನೂ ಚರ್ಚೆ ನಡೆಯುತ್ತಿದೆ.

ಎಐಸಿಸಿ ಕೆಲವು ದಿನಗಳ ಹಿಂದೆ ಕರ್ನಾಟಕ 15 ಜಿಲ್ಲೆಗಳ ಕಾಂಗ್ರೆಸ್ ಜಿಲ್ಲಾಧ್ಯಕ್ಷರನ್ನು ಬದಲಾವಣೆ ಮಾಡಿತ್ತು. ಆದರೆ, ಮಂಡ್ಯ ಜಿಲ್ಲೆಯ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆ ಆಗಿರಲಿಲ್ಲ. ಇದಕ್ಕೆ ರಮ್ಯಾ ಅವರೇ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ತಮಗೆ ಬೇಕಾದವರನ್ನು ಅಧ್ಯಕ್ಷರನ್ನಾಗಿ ಮಾಡುವಂತೆ ರಮ್ಯಾ ಪಟ್ಟು ಹಿಡಿದಿದ್ದರು.

ಜಿಲ್ಲಾ ಅಧ್ಯಕ್ಷರನ್ನು ಬದಲಾವಣೆ ಮಾಡಿದರೆ ಬಣ ರಾಜಕೀಯ ಹೆಚ್ಚಾಗುವ ಹಿನ್ನಲೆಯಲ್ಲಿ ಎಂ.ಎಸ್.ಆತ್ಮಾನಂದ ಅವರಿಗೆ ಚುನಾವಣೆ ಮುಗಿಯುವ ತನಕ ಅಧ್ಯಕ್ಷರಾಗಿ ಮುಂದುವರೆಯಬೇಕು ಎಂದು ಡಾ.ಜಿ.ಪರಮೇಶ್ವರ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

Leave a Reply