ಬೆಳಗಾವಿ ಅಧಿವೇಶನಕ್ಕೆ ಮೊದಲು ಜಾರ್ಜ್‌ ರಾಜೀನಾಮೆ ಕೊಡಲಿ: ಯಡಿಯೂರಪ್ಪ

ಮಂಗಳೂರು: ಕಲಾಪ ನಡೆಯದು: ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಆರೋಪಿ ಎಂದು ಸಿಬಿಐ ದಾಖಲಿಸಿರುವ ಸಚಿವ ಕೆ.ಜೆ. ಜಾರ್ಜ್‌ ಬೆಳಗಾವಿ ಅಧಿವೇಶನಕ್ಕೆ ಮೊದಲು ರಾಜೀನಾಮೆ ಕೊಡಬೇಕು. ಇಲ್ಲದಿದ್ದರೆ ಅಧಿವೇಶನದಲ್ಲಿ ಬೇರೆ ಯಾವುದೇ ಚರ್ಚೆ ನಡೆಯದು. ಕಾಂಗ್ರೆಸ್‌ ಉಸ್ತುವಾರಿ ವೇಣುಗೋಪಾಲ್‌ ಮೇಲಿನ ಅತ್ಯಾಚಾರ ಪ್ರಕರಣವೂ ಬಹಿರಂಗಗೊಂಡಿದ್ದು, ಯಾವ ಮುಖ ಹಿಡಿದು ರಾಜ್ಯದಲ್ಲಿ ಅವರನ್ನು ತಿರುಗಾಡಿಸುತ್ತೀರಿ. ಮುಂದಿನ ಸಂಸತ್‌ ಅಧಿವೇಶನಕ್ಕೆ ಮೊದಲು ಅವರು ರಾಜೀನಾಮೆ ಕೊಡಬೇಕು. ಇಲ್ಲದಿದ್ದರೆ ಪಾರ್ಲಿಮೆಂಟ್‌ನಲ್ಲಿ ಇದೇ ಚರ್ಚೆ ನಡೆಯಲಿದೆ ಎಂದು ಯಡಿಯೂರಪ್ಪ ಎಚ್ಚರಿಸಿದರು.ನಗರದ ನೆಹರು ಮೈದಾನದಲ್ಲಿ ಶನಿವಾರ ಬಿಜೆಪಿ ಮಂಗಳೂರು ದಕ್ಷಿಣ ಮತ್ತು ಉತ್ತರ ವಿಧಾನಸಭೆ ಕ್ಷೇತ್ರದ ಆಶ್ರಯದಲ್ಲಿ ಆಯೋಜಿಸಿದ್ದ ನವಕರ್ನಾಟಕದ ನವನಿರ್ಮಾಣಕ್ಕಾಗಿ ಪರಿವರ್ತನಾ ಯಾತ್ರೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪೂಜಾರಿ ಆಪ್ತ ಹರಿಕೃಷ್ಣ ಬಂಟ್ವಾಳ ಬಿಜೆಪಿ ಸೇರ್ಪಡೆ

ಕಾಂಗ್ರೆಸ್‌ ಮಾಜಿ ಮುಖಂಡ, ಜನಾರ್ದನ ಪೂಜಾರಿ ಆಪ್ತರಾದ ಹರಿಕೃಷ್ಣ ಬಂಟ್ವಾಳ್‌, ಅಶೋಕ್‌ ಧಾರಿವಾಲ್‌ ನೇತೃತ್ವದ ರಾಜಸ್ತಾನ ಸಮಾಜದ ಸದಸ್ಯರು, ಅಶೋಕ್‌ ಸುಬ್ಬಯ್ಯ ಸೇರಿದಂತೆ ಹಲವರು ಪರಿವರ್ತನಾ ಯಾತ್ರೆಯಲ್ಲಿ ಬಿಜೆಪಿ ಸೇರಿದರು. ಅವರನ್ನು ಬಿ.ಎಸ್‌.ಯಡಿಯೂರಪ್ಪ ಶಾಲು ಹಾಕಿ ಪಕ್ಷಕ್ಕೆ ಬರಮಾಡಿಕೊಂಡರು. ಕಳೆದ 35 ವರ್ಷಗಳಿಂದ ಬಿಜೆಪಿ ಜತೆ ಅಂದರೆ ಬಿ.ಜನಾರ್ದನ ಪೂಜಾರಿ ಜತೆಗಿದ್ದೆ. ಈಗ ಬಜೆಪಿ ಜತೆ ಸೇರಿದ್ದೇನೆ. ಅಂದು ಗುಜರಾತಿನ ಗಾಂಧಿ ಬ್ರಿಟಿಷರನ್ನು ಓಡಿಸಿದರೆ, ಇಂದು ಕೂಡಾ ಗುಜರಾತಿನ ಮೋದಿ ಕಾಂಗ್ರೆಸನ್ನು ಓಡಿಸುತ್ತಾರೆ. ಹಿಂದು ಧರ್ಮದ ಉದ್ಧಾರಕ್ಕಾಗಿ ಶ್ರಮಿಸಿದ ದೇಶದ ಏಕೈಕ ಪ್ರಧಾನಿ ಮೋದಿ. ಅವರಿಗೆ ದೇಶ ಮುಖ್ಯವೇ ಹೊರತು, ಹಣ ಅಧಿಕಾರದ ಅಸೆ ಇಲ್ಲ. ಯಡಿಯೂರಪ್ಪ ಸಿಎಂ ಆಗುವುದು ನಿಚ್ಚಳ ಎಂದು ಹರಿಕೃಷ್ಣ ಬಂಟ್ವಾಳ್‌ ಹೇಳಿದರು.

Leave a Reply