ಕೈಗಾರಿಕೆಯಲ್ಲಿ ಕರ್ನಾಟಕ ಹಲವು ಪ್ರಥಮಗಳ ನಾಡು- ಸಚಿವ ಆರ್. ವಿ. ದೇಶಪಾಂಡೆ

ಬೆಂಗಳೂರು,ನ,23:ದೇಶದಲ್ಲಿ ಕೈಗಾರಿಕೆಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಹಲವು ಪ್ರಥಮಗಳ ನಾಡು ಆಗಿದ್ದು 1952 ರ ಮೇಕ್ ಇನ್ ಕರ್ನಾಟಕ ಯೋಜನೆಯನ್ನು ಜಾರಿಗೆ ತರಲಾಗಿತ್ತು ಹಾಗೂ ಕೈಗಾರಿಕೆಗಳಿಗೆ ಸಂಬಂಧಿಸಿದಂತೆ ಹಲವು ಪ್ರಥಮ ನೀತಿ ನಿರೂಪಣೆಗಳನ್ನು ಜಾರಿಗೆ ತಂದ ಹೆಗ್ಗಳಿಗೆ ನಮ್ಮ ರಾಜ್ಯದ್ದಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಆರ್. ವಿ. ದೇಶಪಾಂಡೆ ಹೇಳಿದ್ದಾರೆ.
ಬೆಂಗಳೂರು ಅಂತರರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಹಮ್ಮಿಕೊಂಡಿರುವ ಎರಡು ದಿನಗಳ ಸರಬರಾಜುದಾರರ ಅಭಿವೃದ್ಧಿ ಮತ್ತು ಹೂಡಿಕೆದಾರರ ಶೃಂಗಸಭೆ ಉದ್ಫಾಟಿಸಿ ಮಾತನಾಡಿ, ಕರ್ನಾಟಕ ಕೈಗಾರಿಕೋದ್ಯಮಿಗಳ ಸ್ನೇಹಮಯಿ ರಾಜ್ಯ. ದೇಶದಲ್ಲಿಯೇ ಅತ್ಯಂತ ಹೆಚ್ಚು ಅಂತರರಾಷ್ಟ್ರೀಯ ಮಟ್ಟದ ಖ್ಯಾತಿಯ ಹಲವು ಕೈಗಾರಿಕೆಗಳನ್ನು ಹೊಂದಿರುವ ಏಕೈಕ ರಾಜ್ಯ ನಮ್ಮದು. ಕರ್ನಾಟಕದಲ್ಲಿ ಆವಿಷ್ಕರಿಸಿ, ಬಂಡವಾಳ ಹೂಡಿ ಅತಿ ಹೆಚ್ಚು ಜನರಿಗೆ ಉದ್ಯೋಗ ಸೃಷ್ಟಿಸಲು ಸರ್ಕಾರ ಕೈಗಾರಿಕೋದ್ಯಮಿಗಳಿಗೆ ಬೇಕಾದ ಅನುಕೂಲತೆಗಳನ್ನು ಒದಗಿಸಲು ಸರ್ಕಾರ ಸಿದ್ಧವಿದೆ ಎಚಿದರು.
ಬಲಿಷ್ಠ ಭವಿಷ್ಯದ ಭಾರತಕ್ಕೆ ಕರ್ನಾಟಕ ಬೆನ್ನೆಲುಬು ಆಗಲಿದೆ. ಪ್ರಸ್ತುತ ಜನಸಂಖ್ಯೆಗೆ ಅನುಗುಣವಾಗಿ ಉದ್ಯೋಗ ಸೃಷ್ಠಿಸುವುದು ಸರ್ಕಾರದ ಜವಾಬ್ಧಾರಿಯಾಗಿದ್ದು ಅತಿ ಹೆಚ್ಚು ಉದ್ಯೋಗಗಳನ್ನು ನೀಡುವ ಶಕ್ತಿ ಸಣ್ಣ, ಅತಿಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳಿಗೆ ಸಾಧ್ಯವಿದ್ದು ರಾಜ್ಯಾದ್ಯಂತ ಅವುಗಳನ್ನು ವಿಸ್ತರಿಸಲು ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಲು ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ಹೇಳಿದರು.
ರಾಜ್ಯದಲ್ಲಿ 2019 ರ ಮಾರ್ಚ್ ಒಳಗೆ 15 ಲಕ್ಷ ಉದ್ಯೋಗವನ್ನು ಸೃಷ್ಟಿಸಲಾಗುವುದು, ಯುವಕರಲ್ಲಿ ಕೌಶಲ್ಯ ಅಭಿವೃದ್ಧಿಯನ್ನು ವೃದ್ಧಿಸುವುದಕ್ಕಾಗಿ ಕೌಶಲ್ಯ ಅಭಿವೃದ್ಧಿ ಮಂಡಳಿಯನ್ನು ರಚಿಸಲಾಗಿದ್ದು, 5 ಲಕ್ಷ ಯುವಕರಿಗೆ ತರಬೇತಿ ನೀಡಲಾಗುವುದು. ಯುವಕರು ಕೇವಲ ಉದ್ಯೋಗಿಗಳಾಗದೇ ಉದ್ಯೋಗಗಳನ್ನು ನೀಡುವ ಕೈಗಾರಿಕೋದ್ಯಮಿಗಳಾಗಬೇಕು ಎಂದು ಯುವಕರಿಗೆ ಕರೆ ನೀಡಿದರು.
ಪ್ರತಿ ಕೈಗಾರಿಕೆಗೆ ಹಾಗೂ ಕೈಗಾರಿಕೆಗಳ ಪ್ರತಿ ಹಂತಕ್ಕೂ ಕರ್ನಾಟಕ ಸರ್ಕಾರ ನೀತಿಗಳನ್ನು ನಿರೂಪಿಸಿದ್ದು ದೇಶದಲ್ಲಿ ನಮ್ಮ ರಾಜ್ಯ ಹೊಂದಿರುವಷ್ಟು ಕೈಗಾರಿಕಾ ನೀತಿಗಳನ್ನು ಯಾವ ರಾಜ್ಯವು ಸಹ ಹೊಂದಿಲ್ಲ. ಮೈಸೂರು ಮಹಾರಾಜರ ಕಾಲದಲ್ಲಿ ಆರಂಭವಾದ ಕೈಗಾರಿಕಾ ಕ್ರಾಂತಿ ಇಂದು ದೇಶದಲ್ಲಿಯೇ ರಾಜ್ಯವನ್ನು ಪ್ರಥಮಸ್ಥಾನದಲ್ಲಿ ತಂದು ನಿಲ್ಲಿಸಿದೆ.
ನವಕರ್ನಾಟಕ ನಿರ್ಮಾಣಕ್ಕೆ ಕೈಗಾರಿಕೋದ್ಯಮಿಗಳು ರಾಜ್ಯದಲ್ಲಿ ಹಲವು ಕೈಗಾರಿಕೆಗಳನ್ನು ಪ್ರಾರಂಭಿಸುವುದರ ಮುಖಾಂತರ ರಾಜ್ಯದ ಹಾಗೂ ದೇಶದ ಆರ್ಥಿಕ ವ್ಯವಸ್ಥೆಗೆ ತಮ್ಮದೇ ಆದಂತ ಕೊಡುಗೆಯನ್ನು ನೀಡಲು ಕೈಗಾರಿಕೋದ್ಯಮಿಗಳಿಗೆ ಸಚಿವರು ಕರೆ ನೀಡಿದರು.
ಸಣ್ಣ ಕೈಗಾರಿಕೆ ಮತ್ತು ಸಕ್ಕರೆ ಸಚಿವ ಡಾ. ಎಂ.ಸಿ. ಮೋಹನ ಕುಮಾರಿ ಅವರು ಮಾತನಾಡಿ ಕಳೆದ ದಶಕದಿಂದ ರಾಜ್ಯದಲ್ಲಿ ಕೈಗಾರಿಕಾ ಕ್ರಾಂತಿ ನಡೆಯುತ್ತಿದ್ದು ಹೊಸ ತಲೆಮಾರಿನ ಯುವಕರು ತಮ್ಮದೇ ಆದ ಕೊಡುಗೆಯನ್ನು ನೀಡುತ್ತಿದ್ದು ಇನ್ನು ಕೆಲವೇ ವರ್ಷಗಳಲ್ಲಿ ರಾಜ್ಯ ಮತ್ತಷ್ಟು ಪ್ರಥಮಗಳಿಗೆ ನಾಂದಿ ಹಾಡಲಿದೆ ಎಂದರು.
ರಾಜ್ಯದ ಕೈಗಾರಿಕೆಗಳ ಸ್ಥಾಪನೆಯಲ್ಲಿ ಸರ್. ಎಂ. ವಿಶ್ವೇಶ್ವರಯ್ಯ ಅವರ ಕೊಡುಗೆಯನ್ನು ಸ್ಮರಿಸುವುದಕ್ಕಾಗಿ ಕೈಗಾರಿಕೋದ್ಯಮಿಗಳಿಗೆ ನೀಡುವ ಪ್ರಶಸ್ತಿಗೆ ಅವರ ಹೆಸರನ್ನು ಇಡಲಾಗಿದೆ. ಸಣ್ಣ, ಅತಿಸಣ್ಣ, ಮಧ್ಯಮ ಹಾಗೂ ಬೃಹತ್ ಕೈಗಾರಿಕೆಗಳು ತಮ್ಮಲ್ಲಿರುವ ಆವಿಷ್ಕಾರಗಳನ್ನು ಹಾಗೂ ಸಂಪನ್ಮೂಲಗಳನ್ನು ಒಬ್ಬರಿಗೊಬ್ಬರು ವಿನಿಮಯ ಮಾಡಿಕೊಳ್ಳುವುದಕ್ಕೆ ಇಂತಹ ಕಾರ್ಯಕ್ರಮದ ಸಹಕಾರಿಯಾಗಲಿದೆ ಎಂದು ಹೇಳಿದರು.
ಜವಳಿ ಸಚಿವ ರುದ್ರಪ್ಪ ಲಮಾಣಿ ಮಾತನಾಡಿ, ರಾಜ್ಯ ಸರ್ಕಾರ 2017-18 ರ ಸಾಲಿನಲ್ಲಿ ಜಾರಿಗೆ ತಂದ ಜವಳಿ ನೀತಿ ಉದ್ದಿಮೆದಾರರಿಗೆ ಸಾಕಷ್ಟು ಅವಕಾಶಗಳನ್ನು ಕಲ್ಪಿಸಿದೆ. ಸ್ಥಳೀಯ ಸಂಪನ್ಮೂಲಗಳಿಗೆ ಅನುಗುಣವಾಗಿ ಕೈಗಾರಿಕೆಗಳನ್ನು ಸ್ಥಾಪಿಸಿದಲ್ಲಿ ರಾಜ್ಯಕ್ಕೂ, ಕೈಗಾರಿಕೆಗಳಿಗೂ ಹಾಗೂ ರಾಜ್ಯದ ಜನರಿಗೂ ಸಹಾಯಕವಾಗಲಿದೆ ಎಂದರು.

Leave a Reply