ಮರಳಿ ಮನೆಯತ್ತ ವರುಣ್ ಗಾಂಧಿ ?

ನೆಹರೂ ಹಾಗೂ ಗಾಂಧಿ ಕುಟುಂಬದ ಕುಡಿ ವರುಣ್‌ ಗಾಂಧಿ. ಅಂದರೆ, ಇಂದಿರಾ ಗಾಂಧಿ ಪುತ್ರ ಸಂಜಯ್‌ ಗಾಂಧಿ ಅವರ ಮಗ ವರುಣ್‌. ಮೋದಿ ಸರ್ಕಾರದಲ್ಲಿ ಸಚಿವರಾಗಿರುವ ಮನೇಕಾ ಗಾಂಧಿ ವರುಣ್‌ ತಾಯಿ. ಮನೇಕಾ ಹಾಗೂ ವರುಣ್‌ ಗಾಂಧಿ ಇಬ್ಬರೂ ಬಿಜೆಪಿಯಲ್ಲಿದ್ದು, ವರುಣ್‌‌ ಬಿಜೆಪಿಯ ಹಾಲಿ ಸಂಸದ. ಉತ್ತರ ಪ್ರದೇಶದ ಸುಲ್ತಾನ್‌ಪುರ್‌ ಲೋಕಸಭಾ ಕ್ಷೇತ್ರವನ್ನು ವರುಣ್‌‌ ಪ್ರತಿನಿಧಿಸುತ್ತಿದ್ದಾರೆ.

ಆದರೆ, ಇದೀಗ ರಾಷ್ಟ್ರೀಯ ರಾಜಕಾರಣದಲ್ಲಿ ಭಾರಿ ಬದಲಾವಣೆಗಳು ನಡೆಯುವ ನಿರೀಕ್ಷೆಗಳಿವೆ. ರಾಹುಲ್‌ ಗಾಂಧಿ ಕಾಂಗ್ರೆಸ್ ಅಧ್ಯಕ್ಷರಾಗಿ ನೇಮಕಗೊಂಡ ಬಳಿಕ ಬಿಜೆಪಿ ಸಂಸದರಾಗಿರುವ ವರುಣ್‌ ಗಾಂಧಿ ಕಾಂಗ್ರೆಸ್‌ಗೆ ಸೇರ್ಪಡೆಗೊಳ್ಳಲಿದ್ದಾರೆ ಎಂಬ ವದಂತಿ ಹರಿದಾಡುತ್ತಿದೆ.

ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅಥವಾ ಪಕ್ಷದ ಕಚೇರಿ ಮೂಲಕವೇ ವರುಣ್ ಗಾಂಧಿ ಪಕ್ಷ ಸೇರಬಹುದು ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಹಾಜಿ ಮಂಜೂರ್‌ ಅಹಮದ್‌ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ. ಜೊತೆಗೆ ಪ್ರಿಯಾಂಕಾ ಗಾಂಧಿ ಅವರ ಮೂಲಕವಾದರೂ ವರುಣ್ ಗಾಂಧಿ ಕಾಂಗ್ರೆಸ್‌ಗೆ ಸೇರಬಹುದು ಎಂದು ಮಂಜೂರ್‌ ಅಹಮದ್‌ ಹೇಳಿದ್ದಾರೆ.

ಇನ್ನು, ನವೆಂಬರ್‌ 11ರಂದು ಅಸ್ಸೋಂ ರಾಜಧಾನಿ ಗುವಾಹತಿಯಲ್ಲಿ ಮಾತನಾಡಿದ್ದ ವರುಣ್‌ ಗಾಂಧಿ, ‘ತಾವು ಗಾಂಧಿ ಕುಟುಂಬಕ್ಕೆ ಸೇರದೆ ಹೋಗಿದ್ದರೆ 29ನೇ ವಯಸ್ಸಿಗೆ ಲೋಕಸಭಾ ಸದಸ್ಯರೇ ಆಗುತ್ತಿರಲಿಲ್ಲ’ ಎಂದು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

‘ನಾನು ಫಿರೋಜ್‌ ವರುಣ್‌ ಗಾಂಧಿ. ಆದರೆ, ವರುಣ್‌ ದತ್ತ ಅಥವಾ ವರುಣ್‌ ಘೋಷ್‌ ಅಥವಾ ವರುಣ್‌ ಖಾನ್‌ ಯಾವುದೇ ಇರಲಿ. ಇದು ಮುಖ್ಯವಲ್ಲ. ಎಲ್ಲರಿಗೂ ಸಮಾನಾದ ಅವಕಾಶಗಳು ಸಿಗಬೇಕು. ಇಂತಹ ಭಾರತವನ್ನು ನಾನು ನೋಡಲು ಇಚ್ಛಿಸುತ್ತೇನೆ’ ಅಂತಾ ವರುಣ್‌ ಗಾಂಧಿ ಹೇಳಿಕೊಂಡಿದ್ದರು.

Leave a Reply