ಗೆಳತಿಯ ಮನೆ ಮುಂದೆ ಆತ್ಮಹತ್ಯೆ ಮಾಡಿಕೊಂಡ ಹಾಕಿ ಆಟಗಾರ?

ನವದೆಹಲಿ, ಡಿಸೆಂಬರ್ 06: ರಾಷ್ಟ್ರೀಯ ಮಟ್ಟದ ಹಾಕಿ ಆಟಗಾರರೊಬ್ಬರು ತಮ್ಮ ಗೆಳತಿಯ ಮನೆ ಮುಂದೆ ನಿಲ್ಲಿಸಿದ್ದ ಕಾರಿನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ದೆಹಲಿ ತಂಡದ ಪರ ಆಡುತ್ತಿದ್ದ ರಿಜ್ವಾನ್ ಖಾನ್ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ದಕ್ಷಿಣ ದೆಹಲಿಯ ಸರೋಜಿನಿ ನಗರ ಪ್ರದೇಶದಲ್ಲಿ ಮಂಗಳವಾರ ಅನುಮಾನಾಸ್ಪದವಾಗಿ 22 ವರ್ಷದ ಹಾಕಿ ಆಟಗಾರನ ಮೃತದೇಹ ಪತ್ತೆಯಾಗಿತ್ತು. ಮೃತರನ್ನು ರಿಜ್ವಾನ್ ಖಾನ್ ಎಂದು ಗುರುತಿಸಲಾಗಿದೆ. ಜಮೀಯಾ ಮಿಲಿಯಾ ಇಸ್ಲಾಮಿಯಾ ಕಾಲೇಜಿನಲ್ಲಿ ಕಲಾ ವಿಭಾಗದಲ್ಲಿ ಪದವಿ ವಿದ್ಯಾರ್ಥಿಯಾಗಿದ್ದರು. ರಿಜ್ವಾನ್‌ ಖಾನ್‌ ಅವರು ಅಂಡರ್‌-16 ಹಾಕಿ ಟೂರ್ನಮೆಂಟ್‌ನಲ್ಲಿ ದೆಹಲಿ ತಂಡವನ್ನು ಪ್ರತಿನಿಧಿಸಿದ್ದರು. ರಿಜ್ವಾನ್‌ನ ಗೆಳತಿ ಕೂಡಾ ಹಾಕಿ ಆಟಗಾರ್ತಿಯಾಗಿದ್ದು, ಆಕೆಯ ಮನೆ ಮುಂದೆ ಸ್ವಿಪ್ಟ್‌ ಕಾರನ್ನು ನಿಲ್ಲಿಸಿ ರಿಜ್ವಾನ್‌ ಆತ್ಮಹತ್ಯೆ ಮಾಡಿಕೊಂಡಿರುವ ಅನುಮಾನ ವ್ಯಕ್ತವಾಗಿದೆ.

ಕಾರಿನಲ್ಲಿ ನಾಡಾ ಪಿಸ್ತೂಲ್‌ ದೊರೆತಿದೆ. ಪಿಸ್ತೂಲ್‌ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೋ ಅಥವಾ ಯಾರಾದ್ರೂ ಕೊಲೆ ಮಾಡಿದ್ದಾರಾ ಎಂಬ ಅನುಮಾನ ವ್ಯಕ್ತವಾಗಿದೆ. ಇನ್ನು ರಿಜ್ವಾನ್‌ ತಂದೆ ನನ್ನ ಮಗನನ್ನು ಕೊಲೆ ಮಾಡಿದ್ದಾರೆ ಎಂದು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಹೊಸ ಬೈಕ್ ಖರೀದಿಗಾಗಿ 2 ಲಕ್ಷ ರು ಪಡೆದುಕೊಂಡು ಮನೆಯಿಂದ ಹೊರಕ್ಕೆ ಹೋದವನು ಮತ್ತೆ ಹಿಂತಿರುಗಲಿಲ್ಲ ಎಂದು ರಿಜ್ವಾನ್ ಅವರ ತಂದೆ ದೂರಿದ್ದಾರೆ. ಪೊಲೀಸರ ಪ್ರಕಾರ, ಗೆಳತಿ ಹಾಗೂ ಮತ್ತೊಬ್ಬ ಕಸಿನ್ ಜತೆ ಮಾತಕತೆ ನಡೆಸಿದ ರಿಜ್ವಾನ್ ತಾನು ತಂದಿದ್ದ ಹಣವಿದ್ದ ಬ್ಯಾಗ್ ಹಾಗೂ ಮೊಬೈಲ್ ಫೋನ್ ಅವರ ಮನೆಯಲ್ಲೇ ಬಿಟ್ಟಿದ್ದಾನೆ. ರಾತ್ರಿ 10.30ರ ಸುಮಾರಿಗೆ ಕಾರಿನಲ್ಲಿ ಕುಳಿತು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸರೋಜಿನಿ ನಗರ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು, ರಿಜ್ವಾನ್‌ ಗೆಳತಿಯನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ.

Leave a Reply