ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ಕೊಹ್ಲಿ – ಅನುಷ್ಕಾ …

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಇದೇ ತಿಂಗಳು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಮದುವೆ ತಯಾರಿಯಲ್ಲಿರುವ ಕೊಹ್ಲಿ ಹಾಗೂ ಅನುಷ್ಕಾ ಕುಟುಂಬ ಬೇರೆ ಬೇರೆ ವಿಮಾನ ನಿಲ್ದಾಣದಿಂದ ಇಟಲಿಗೆ ಪ್ರಯಾಣ ಬೆಳೆಸಿದೆ. ಮೂಲಗಳ ಪ್ರಕಾರ ಅನುಷ್ಕಾ ಶರ್ಮಾ ಪಂಡಿತರನ್ನೂ ತಮ್ಮ ಜೊತೆ ಕರೆದೊಯ್ದಿದ್ದಾರೆ ಎನ್ನಲಾಗಿದೆ.

ವಿಶ್ರಾಂತಿಗಾಗಿ ಶ್ರೀಲಂಕಾ ವಿರುದ್ಧ ನಡೆಯುವ ಏಕದಿನ ಪಂದ್ಯದಿಂದ ವಿರಾಟ್ ಕೊಹ್ಲಿ ಹೊರಗುಳಿದಿದ್ದಾರೆ ಎನ್ನಲಾಗ್ತಾ ಇತ್ತು. ಆದ್ರೆ ಅನುಷ್ಕಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲು ರಜೆ ಪಡೆದಿದ್ದಾರೆ ಎಂದು ಮೂಲಗಳು ಹೇಳ್ತಿವೆ. ಕುಟುಂಬಸ್ಥರು ಹಾಗೂ ಆಪ್ತ ಸ್ನೇಹಿತರನ್ನು ಮಾತ್ರ ಕೊಹ್ಲಿ ಮದುವೆಗೆ ಆಹ್ವಾನ ನೀಡಿದ್ದಾರೆ ಎನ್ನಲಾಗಿದೆ.

ಆಪ್ತ ಮೂಲಗಳ ಪ್ರಕಾರ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಹಾಗೂ ಯುವರಾಜ್ ಸಿಂಗ್ ಗೆ ಮಾತ್ರ ಕೊಹ್ಲಿ ಇಟಲಿಗೆ ಆಹ್ವಾನ ನೀಡಿದ್ದಾರೆ ಎನ್ನಲಾಗಿದೆ. ಕೊಹ್ಲಿ ಬಾಲ್ಯದ ತರಬೇತುದಾರ ರಾಜ್ಕುಮಾರ್ ಶರ್ಮಾ ಕೂಡ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳುವ ಸಾಧ್ಯತೆಯಿದೆ. ರಾಜ್ಕುಮಾರ್ ಶರ್ಮಾ ಈಗಾಗಲೇ ರಜೆ ಪಡೆದಿದ್ದಾರೆಂದು ಮೂಲಗಳು ಹೇಳಿವೆ.

ಹೊಸ ವರ್ಷವನ್ನು ಕೊಹ್ಲಿ-ಅನುಷ್ಕಾ ದಂಪತಿಯಾಗಿ ಸ್ವಾಗತಿಸುವ ತಯಾರಿಯಲ್ಲಿದ್ದು, ಡಿಸೆಂಬರ್ 20ರಂದು ಮುಂಬೈನಲ್ಲಿ ಅದ್ಧೂರಿ ಪಾರ್ಟಿ ನೀಡುವ ಸಾಧ್ಯತೆಯಿದೆ.

Leave a Reply