ಸ್ಯಾಂಡಲ್ ವುಡ್ನ ನಂಬರ್ 1 ನಟಿಯಾಗಲು ಸಹಾಯವಾಗಲಿದೆಯಾ ಮುಂದಿನ ವರ್ಷದ ಈ ಏಳು ಸಿನಿಮಾಗಳು ..?

ಈ ವರ್ಷ ಅತೀ ಹೆಚ್ಚು ಚಿತ್ರಗಳಲ್ಲಿ ಕಾಣಿಸಿಕೊಂಡ ಹೆಗ್ಗಳಿಕೆ ಶ್ರುತಿ ಹರಿಹರನ್ ಅವರದ್ದಾಗುತ್ತದೆ. ಈ ವರ್ಷವೇನೋ ಆಯಿತು. ಮುಂದಿನ ವರ್ಷ ಅತೀ ಹೆಚ್ಚು ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿರುವ ನಟಿ ಯಾರಾಗಲಿದ್ದಾರೆ ಗೊತ್ತಾ? ಹರಿಪ್ರಿಯಾ. ಹೌದು, ಮುಂದಿನ ವರ್ಷ ಅತೀ ಹೆಚ್ಚು ಚಿತ್ರಗಳಲ್ಲಿ ಯಾರಾದರೂ ಹೀರೋಯಿನ್ ಕಾಣಿಸಿಕೊಳ್ಳಲಿದ್ದಾರೆ ಎಂದರೆ, ಅದು ಹರಿಪ್ರಿಯಾ ಮಾತ್ರ.

ಮುಂದಿನ ವರ್ಷ ಏನಿಲ್ಲ ಎಂದರೂ, ಹರಿಪ್ರಿಯಾ ಅಭಿನಯದ ಏಳೆಂಟು ಚಿತ್ರಗಳು ಬಿಡುಗಡೆಯಾಗಲಿವೆ. ಅದ್ಹೇಗೆ ಎಂದರೆ, ಉತ್ತರ ಇಲ್ಲಿದೆ. “ನೀರ್ ದೋಸೆ’ಯ ನಂತರ ಅವರು ಮೊದಲು ಒಪ್ಪಿದ ಚಿತ್ರವೆಂದರೆ, “ಭರ್ಜರಿ’. ಅದಾದ ಮೇಲೆ “ಸಂಹಾರ’ ಚಿತ್ರವನ್ನು ಒಪ್ಪಿಕೊಂಡರು ಹರಿಪ್ರಿಯಾ. ಅದರ ಜೊತೆಜೊತೆಗೇ, “ಅಂಜನಿಪುತ್ರ’ದ ಹಾಡೊಂದರಲ್ಲಿ ಕಾಣಿಸಿಕೊಂಡು,

“ಕುರುಕ್ಷೇತ್ರ’ ಚಿತ್ರಕ್ಕೆ ಜಂಪ್ ಆದರು. ಅದರಲ್ಲೂ ಒಂದು ಹಾಡಿನಲ್ಲಿ ನೃತ್ಯ ಮಾಡಿದ ಅವರು, “ಕಥಾ ಸಂಗಮ’ದ ಒಂದು ಕಥೆಗೆ ನಾಯಕಿಯಾದರು. ಇದರ ಜೊತೆಗೆ “ಕನಕ’, “ಸೂಜಿದಾರ’, “ಲೈಫ್ ಜೊತೆಗೆ ಒಂದು ಸೆಲ್ಫಿ’, ತೆಲುಗಿನ “ಜೈ ಸಿಂಹ’ ಹೀಗೆ ಒಂದರಹಿಂದೊಂದು ಚಿತ್ರಗಳಲ್ಲಿ ನಟಿಸುತ್ತಾ ಹೋದರು ಹರಿಪ್ರಿಯಾ. ಈ ಪೈಕಿ 2017ರಲ್ಲಿ ಬಿಡುಗಡೆಯಾಗಿದ್ದೆಂದರೆ, “ಭರ್ಜರಿ’ ಮತ್ತು “ಅಂಜನಿಪುತ್ರ’ ಮಾತ್ರ.

ಮಿಕ್ಕಂತೆ ಮುಂದಿನ ವರ್ಷ “ಸಂಹಾರ’, “ಕನಕ’, “ಸೂಜಿದಾರ’, “ಲೈಫ್ ಜೊತೆಗೆ ಒಂದು ಸೆಲ್ಫಿ’, “ಕುರುಕ್ಷೇತ್ರ’, “ಕಥಾ ಸಂಗಮ’, ತೆಲುಗಿನ “ಜೈ ಸಿಂಹ’ ಸೇರಿದಂತೆ ಹಲವು ಚಿತ್ರಗಳು ಬಿಡುಗಡೆಯಾಗಬೇಕಿದೆ. ಈ ಪೈಕಿ “ಸಂಹಾರ’ ಮತ್ತು “ಕನಕ’ ಚಿತ್ರಗಳು ಬಿಡುಗಡೆಗೆ ಸಜ್ಜಾಗಿದ್ದು, ವರ್ಷದ ಆರಂಭದಲ್ಲೇ ಬಿಡುಗಡೆಯಾಗಲಿದೆ. ವಿಶೇಷವೆಂದರೆ, ಜನವರಿ ತಿಂಗಳಲ್ಲೇ “ಸಂಹಾರ’, “ಕನಕ’ ಮತ್ತು “ಜೈ ಸಿಂಹ’ ಚಿತ್ರಗಳು ಒಂದರ ಹಿಂದೊಂದು ಬಿಡುಗಡೆಯಾಗಲಿವೆ. ಮಿಕ್ಕ ಚಿತ್ರಗಳು ನಂತರದ ದಿನಗಳಲ್ಲಿ ಕ್ರಮೇಣ ಬಿಡುಗಡೆಯಾಗಲಿವೆ. ಅಲ್ಲಿಗೆ ಈ ವರ್ಷ ಹರಿಪ್ರಿಯಾ ಅಭಿನಯದ ಏಳೆಂಟು ಚಿತ್ರಗಳು ಬಿಡುಗಡೆಯಾಗಲಿದ್ದು, ಬಹುಶಃ ಈ ವರ್ಷ ಅತೀ ಹೆಚ್ಚು ಚಿತ್ರಗಳು ಬಿಡುಗಡೆಯಾದ ನಾಯಕಿ ಯಾರು ಎಂದರೆ, ಹರಿಪ್ರಿಯಾ ಎಂದು ಈಗಲೇ ಅಡ್ವಾನ್ಸ್ ಆಗಿ ಹೇಳಿಬಿಡಬಹುದು.

ಕೃಪೆ : ಉದಯವಾಣಿ

Leave a Reply