ಭೀಮ ಕೋರೆಗಾಂವ್ ಹಿಂಸಾಚಾರ: ದಲಿತ ಸಂಘಟನೆಗಳಿಂದ ಬುಧವಾರ ರಾಜ್ಯ ಬಂದ್

ಮುಂಬೈ, ಜನವರಿ 2: ಭೀಮ ಕೊರೆಗಾಂವ್ ಕದನದ 200ನೇ ವರ್ಷಾಚರಣೆ ವೇಳೆ ಪುಣೆಯಲ್ಲಿ ಆರಂಭವಾದ ಹಿಂಸಾಚಾರ ತಾರಕಕ್ಕೇರಿದೆ. ಮರಾಠರು ಮತ್ತು ದಲಿತರ ನಡುವಿನ ಬೀದಿ ಜಗಳ ವಿಕೋಪಕ್ಕೆ ಹೋಗಿದ್ದು ಬುಧವಾರ ಮಹಾರಾಷ್ಟ್ರ ರಾಜ್ಯ ಬಂದ್ ಗೆ ದಲಿತ ಸಂಘಟನೆಗಳು ಕರೆ ನೀಡಿವೆ.

ಪುಣೆಯಲ್ಲಿ ಸೋಮವಾರ ಭೀಮ ಕೊರೆಗಾಂವ್ ಕದನದ 200ನೇ ವರ್ಷಾಚರಣೆ ಸಂದರ್ಭ ಏಕಾಏಕಿ ನಡೆದ ಘರ್ಷಣೆಯಲ್ಲಿ ದಲಿತನೋರ್ವ ಮೃತ ಪಟ್ಟು ಹಲವಾರು ವಾಹನಗಳಿಗೆ ಬೆಂಕಿ ಹಚ್ಚಲಾಗಿತ್ತು.

ಇದೀಗ ಮಹಾರಾಷ್ಟ್ರದಾದ್ಯಂತ ಘರ್ಷಣೆ ನಡೆಯುತ್ತಿದ್ದು ರಾಜ್ಯ ಬಂದ್ ಗೆ ಸಂವಿಧಾನ ಶಿಲ್ಬಿ ಡಾ.ಬಿ.ಆರ್ ಅಂಬೇಡ್ಕರ್ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ ಕರೆ ನೀಡಿದ್ದಾರೆ.

ಯುದ್ಧದದಲ್ಲಿ ಮರಾಠರನ್ನು ಸೋಲಿಸಿದ ದಿನವನ್ನು ‘ವಿಜಯ ದಿವಸ’ ಹೆಸರಿನಲ್ಲಿ ದಲಿತರು ಆಚರಿಸಲು ಹೊರಟಿದ್ದರು. ಇದಕ್ಕೆ ಹಿಂಸಾಚಾರದ ಮೂಲಕ ಮರಾಠರು ತಡೆಯೊಡ್ಡಿದ್ದು ಆಕ್ರೋಶಕ್ಕೆ ಕಾರಣವಾಗಿತ್ತು.

ಈ ಹಿಂಸಾಚಾರದ ನ್ಯಾಯಾಂಗ ತನಿಖೆಗೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಆದೇಶ ನೀಡಿದ್ದಾರೆ. ಜತೆಗೆ ಮೃತಪಟ್ಟ ಯುವಕನ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.ಇನ್ನು ಯುವಕನ ಸಾವು ಖಂಡಿಸಿ ಹಲವರು ಬೆಳಗ್ಗೆಯೇ ರಸ್ತೆಗಿಳಿದಿದ್ದು ಚೆಂಬುರ್, ವಿಖ್ರೋಲಿ, ಮನಖರ್ಡ್ ಮತ್ತು ಗೋವಂಡಿ ಪ್ರದೇಶದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಈ ನಗರಗಳಲ್ಲಿ ಅಘೋಷಿತ ಬಂದ್ ಜಾರಿಯಲ್ಲಿದ್ದು ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಗೋವಂಡಿ ಮತ್ತು ಚೆಂಬೂರ್ ನಿಲ್ದಾಣಗಳಲ್ಲಿ ಪ್ರತಿಭಟನಾಕಾರರು ರೈಲಿಗೆ ತಡೆಯೊಡ್ಡಿದ್ದಾರೆ.

ಏನಿದು ಕೊರೆಗಾಂವ್ ಹೋರಾಟ?

ಈಸ್ಟ್ ಇಂಡಿಯಾ ಕಂಪೆನಿ ಪೇಶ್ವೇ ಸೇನೆಯ ವಿರುದ್ಧ ಸೆಣೆಸಿದ್ದೇ ಕೊರೆಗಾಂವ್ ಕದನ. ಈ ಕದನದಲ್ಲಿ ಅಸ್ಪೃಶ್ಯರು ಎನಿಸಿಕೊಂಡಿದ್ದ ಮೆಹರ್ ಸಮುದಾಯದ ದಲಿತರು ಬ್ರಿಟೀಷರಿಗೆ ಬೆಂಬಲ ಸೂಚಿಸಿ ಅವರ ಪರವಾಗಿ ಹೋರಾಟ ನಡೆಸಿದ್ದರು. ಪರಿಣಾಮ ಪೇಶ್ವೆಗಳ ವಿರುದ್ಧ ಈಸ್ಟ್ ಇಂಡಿಯಾ ಕಂಪನಿ ಗೆಲುವು ಸಾಧಿಸಿತ್ತು.

ಇದೇ ಭೀಮ ಕೊರೆಗಾಂವ್ ವಿಜಯ ದಿವಸ.

ಬ್ರಿಟೀಷರ ಗೆಲುವನ್ನು ಸಂಭ್ರಮಿಸುತ್ತಿರುವುದಕ್ಕೆ ಪುಣೆಯ ಕೆಲವು ಬಲಪಂಥೀಯ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದರಿಂದ ಈ ಘರ್ಷಣೆ ಸಂಭವಿಸಿದೆ.

Leave a Reply