ದೆಹಲಿ ನ್ಯಾಯಾಲಯ ಆದೇಶ : ವಿಜಯ್ ಮಲ್ಯ ‘ಘೋಷಿತ ಅಪರಾಧಿ’

ನವದೆಹಲಿ, ಜನವರಿ 4: ಫೆರಾ (FERA) ಉಲ್ಲಂಘನೆ ಪ್ರಕರಣದಲ್ಲಿ ಸಮನ್ಸ್ ಪಡೆದೂ ವಿಚಾರಣೆಗೆ ಹಾಜರಾಗದ ವಿಜಯ್ ಮಲ್ಯ ‘ಘೋಷಿತ ಅಪರಾಧಿ’ ಎಂದು ದೆಹಲಿ ನ್ಯಾಯಾಲಯ ತೀರ್ಪು ನೀಡಿದೆ. ಪದೇ ಪದೇ ಸಮನ್ಸ್ ನೀಡಿಯೂ ಕೋರ್ಟ್ ಮುಂದೆ ವಿಜಯ್ ಮಲ್ಯ ಹಾಜರಾಗದ ಹಿನ್ನಲೆಯಲ್ಲಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ದೀಪಕ್ ಶೆಹ್ರಾವತ್ ಈ ಆದೇಶ ನೀಡಿದ್ದಾರೆ.

“ಮೂವತ್ತು ದಿನಗಳ ಒಳಗೆ ವಿಜಯ್ ಮಲ್ಯ ಈ ನ್ಯಾಯಾಲಯಕ್ಕೆ ಹಾಜರಾಗಲು ವಿಫಲವಾಗಿದ್ದಾರೆ. ಮತ್ತು ತಮ್ಮ ಪರವಾಗಿ ಯಾವುದೇ ಪ್ರತಿನಿಧಿಗಳನ್ನು ಕಳುಹಿಸಿಕೊಟ್ಟಿಲ್ಲ. ಹೀಗಾಗಿ ಅವರನ್ನು ಘೋಷಿತ ಅಪರಾಧಿ ಎಂದು ಘೋಷಿಸಲಾಗಿದೆ,” ಎಂಬುದಾಗಿ ನ್ಯಾಯಾಧೀಶರು ಆದೇಶದಲ್ಲಿ ತಿಳಿಸಿದ್ದರೆ.

ಕಳೆದ ವರ್ಷ ಏಪ್ರಿಲ್ 12ರಂದು ನ್ಯಾಯಾಲಯ ವಿಜಯ್ ಮಲ್ಯ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಿತ್ತು. ಮತ್ತು ನವೆಂಬರ್ 4, 2016 ರಂದು ಮಲ್ಯ ವಿರುದ್ಧ ಜಾಮೀನು ರಹಿತ ವಾರಂಟ್ ವಿತರಿಸುವಾಗ, ಅವರು ಭಾರತಕ್ಕೆ ಮರಳುವ ಯಾವುದೇ ಯೋಚನೆಯಲ್ಲಿಲ್ಲ ಮತ್ತು ನೆಲದ ಕಾನೂನಿನ ಬಗ್ಗೆ ಅವರು ಗೌರವ ಹೊಂದಿಲ್ಲ ಎಂದು ನ್ಯಾಯಾಲಯ ತಿಳಿಸಿತ್ತು.

ನಾನೇನು ಭಾರತದಿಂದ ಓಡಿ ಬಂದಿಲ್ಲ : ವಿಜಯ್ ಮಲ್ಯ ಲಂಡನ್ ನಲ್ಲಿರುವ ಮಲ್ಯ ಸೆಪ್ಟೆಂಬರ್ 9 ರಂದು ನ್ಯಾಯಾಲಯಕ್ಕೆ ಪ್ರತಿಕ್ರಿಯೆ ನೀಡಿ, “ಉತ್ತಮ ಉದ್ದೇಶ”ಗಳಿಂದ ದೇಶಕ್ಕೆ ಬರಬೇಕು ಎಂದುಕೊಂಡಿದ್ದರೂ ಪಾಸ್ಪೋರ್ಟ್ ಹಿಂತೆಗೆದುಕೊಂಡಿದ್ದರಿಂದ ಪ್ರಯಾಣಿಸಲು “ಅಸಮರ್ಥನಾಗಿದ್ದೇನೆ” ಎಂದಿದ್ದರು.

90ರ ದಶಕದ ಪ್ರಕರಣ ಜಾರಿ ನಿರ್ದೇಶನಾಲಯದ ಮನವಿ ಮೇರೆಗೆ ಜುಲೈ 9ರಂದು ವೈಯಕ್ತಿಕ ಹಾಜರಿಗೆ ಮಲ್ಯಗೆ ಇದ್ದ ವಿನಾಯಿತಿಯನ್ನು ನ್ಯಾಯಾಲಯ ರದ್ದುಗೊಳಿಸಿತ್ತು. 1996, 97, 98ರಲ್ಲಿ ಯುರೋಪಿಯನ್ ದೇಶಗಳಲ್ಲಿ ಫಾರ್ಮುಲ್ ವನ್ ರೇಸ್ ಸಂದರ್ಭ ಕಿಂಗ್ ಫಿಷರ್ ಲೋಗೋ ಪ್ರಕಟ ಮಾಡಲು ಬ್ರಿಟನ್ ಕಂಪನಿಯೊಂದಕ್ಕೆ 2,00,000 ಅಮೆರಿಕನ್ ಡಾಲರ್ ಪಾವತಿ ಮಾಡಿದ ಪ್ರಕರಣ ಇದಾಗಿದೆ. ಇದರಲ್ಲಿ ವಿದೇಶ ವಿನಿಮಯ ನಿಯಂತ್ರಣ ಕಾಯ್ದೆ (FERA )ಯ ಉಲ್ಲಂಘನೆಯಾಗಿದೆ ಎಂಬ ಪ್ರಕರಣ ನ್ಯಾಯಾಲಯದಲ್ಲಿ ದಾಖಲಾಗಿದೆ. ಇದರ ವಿಚಾರಣೆ ನಡೆಯುತ್ತಿದ್ದು, ವಿಜಯ್ ಮಲ್ಯ ಮಾತ್ರ ಕೋರ್ಟ್ ಕಡೆ ತಲೆ ಹಾಕಿಲ್ಲ. ಹೀಗಾಗಿ ಘೋಷಿತ ಅಪರಾಧಿ ಎಂದು ನ್ಯಾಯಾಲಯ ತೀರ್ಪು ನೀಡಿದೆ.

Leave a Reply