ಎತ್ತಿನಹೊಳೆ ಯೋಜನೆ ಪೂರ್ಣಮಾಡಿಯೇ ತಿರುತ್ತೇವೆ ಎಂದು ಘೋಷಿಸಿದ ಸಿ ಎಂ ಸಿದ್ದರಾಮಯ್ಯ

ಹಾಸನ, ಜನವರಿ 04: ಹಾಸನದ ಅರಸೀಕೆರೆಯಲ್ಲಿ 1004 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಿದರು.

ಉದ್ಘಾಟನಾ ಕಾರ್ಯಕ್ರಮದ ಬಳಿಕ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ ಅವರು ನಮ್ಮ ಸರ್ಕಾರ ನುಡಿದಂತೆ ನಡೆದಿದೆ, ರಾಜ್ಯದ ಎಲ್ಲ ವರ್ಗದ, ಜಾತಿಯ ಜನರನ್ನೂ ಒಂದಲ್ಲಾ ಒಂದು ಯೋಜನೆಯ ಮೂಲಕ ತಲುಪಿದ್ದೇವೆ ಎಂದರು.

ಹಿಂದಿನ ಭಾಷಣಗಳಿಗೆ ಹೋಲಿಸಿದರೆ ಬಿಜೆಪಿಯನ್ನು ಕಡಿಮೆ ಟೀಕಿಸಿದ ಸಿದ್ದರಾಮಯ್ಯ ಅವರು ಸರ್ಕಾರದ ಸಾಧನೆ, ಅಭಿವೃದ್ಧಿ ಕಾರ್ಯಗಳು, ರಾಜ್ಯ ಸಾಧಿಸಿರುವ ಉನ್ನತಿಯ ಬಗ್ಗೆ ಹೆಚ್ಚು ಮಾತನಾಡಿದರು.

ಕಾರ್ಯಕ್ರಮದಲ್ಲಿ ಜೆಡಿಎಸ್ ಶಾಸಕ ಶಿವಲಿಂಗೇಗೌಡ, ಕಾಂಗ್ರೆಸ್ ಶಾಸಕ ಎ ಮಂಜು, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಅರಸಿಕೆರೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಶಿವಪ್ಪ ಹಾಜರಿದ್ದರು.

yetinahole_arisikere_2.jpg

ಎತ್ತಿನಹೊಳೆ ಯೋಜನೆ ಪೂರ್ತಿ ಮಾಡಿಯೇ ತೀರುತ್ತೇವೆ

ಎತ್ತಿನ ಹೊಳೆ ಯೋಜನೆಯ ಬಗ್ಗೆ ಜೆಡಿಎಸ್ ಅಪಪ್ರಚಾರ ಮಾಡುತ್ತಿದೆ, ಅದು ವೈಜ್ಞಾನಿಕವಾಗಿಲ್ಲ ಯೋಜನೆಯಿಂದ ನೀರು ಸಿಗುವುದಿಲ್ಲ ಎಂದು ಕುಮಾರಸ್ವಾಮಿ ತೋಚಿದ್ದು ಹೇಳುತ್ತಿದ್ದಾರೆ. ಕೇಂದ್ರ ನೀರಾವರಿ ಆಯೋಗದಿಂದ ಹಿಡಿದು, ವಿವಿಧ ಜವಾಬ್ದಾರಿಯುತ ಇಲಾಖೆಗಳು ಅಧ್ಯಯನ ನಡೆಸಿ ವರದಿ ಸಲ್ಲಿಸಿದ ಬಳಿಕವೇ ನಾವು ಯೋಜನೆಗೆ ಕೈಹಾಕಿರುವುದು, ಎತ್ತಿನ ಹೊಳೆ ಯೋಜನೆ ಪೂರ್ಣ ಮಾಡಿಯೇ ತೀರುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು.

ಹೇಳ್ರಿ ನಿಮ್ಮ ಪಕ್ಷದವರಿಗೆ

ಸಿದ್ದರಾಮಯ್ಯ ಅವರು ತಮ್ಮ ಸರ್ಕಾರದ ಸಾಧನೆಯ ಬಗ್ಗೆ ಹೇಳಿದಾಗಲೆಲ್ಲಾ ‘ಏನ್ರಿ ಶಿವಲಿಂಗೇಗೌಡ ನಾನು ಹೇಳ್ತಿರೋದು ಸರೀನಾ’ ಎಂದು ವೇದಿಕೆ ಮೇಲಿದ್ದ ಜೆಡಿಎಸ್ ಶಾಸಕ ಶಿವಲಿಂಗೇಗೌಡ ಅವರ ಅನುಮೋದನೆ ಪಡೆದುಕೊಳ್ಳುತ್ತಿದ್ದರು. ನಿಮ್ಮ ಪಕ್ಷದವರಿಗೂ ಸ್ವಲ್ಪ ಹೇಳ್ರಿ ಸರ್ಕಾರದ ಸಾಧನೆಗಳ ಬಗ್ಗೆ ಸುಮ್ಮನೇ ಟೀಕೆ ಮಾಡ್ತಾರೆ ಎಂದು ಶಿವಲಿಂಗೇಗೌಡರ ಕಾಲೆಳೆದರು.

yetinahole_arisikere_3

ಜೆಡಿಎಸ್ ಶಿವಲಿಂಗೇಗೌಡ ಅವರನ್ನು ಹೊಗಳಿದ ಸಿದ್ದರಾಮಯ್ಯ ಅವರು, ಶಿವಲಿಂಗೇಗೌಡ ನನ್ನ ಆತ್ಮೀಯ ಗೆಳೆಯ ಆತ ಒಳ್ಳೆ ಮನುಷ್ಯ, ನನ್ನ ಮಾತು ಕೇಳುತ್ತಾನೆ, ಒಳ್ಳೆ ಕೆಲಸಗಾರ ಎಂದು ಹೊಗಳಿದರು. ಆಗ ವೇದಿಕೆ ಮುಂದಿದ್ದ ಜನರು ಶಿವಲಿಂಗೇಗೌಡರನ್ನು ಕಾಂಗ್ರೆಸ್ ಗೆ ಕರೆಯಿರಿ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಬೇಡ ಬೇಡ ಆತ ಈಗ ಎಲ್ಲಿದ್ದಾನೊ ಅಲ್ಲೇ ಇರಲಿ ನಾನು ಎಲ್ಲಿದ್ದೀನೊ ಅಲ್ಲೇ ಇರ್ತೀನಿ ಎಂದರು.

Leave a Reply