ಚಮಕ್ ಚೆಲುವೆಯ ಮನದಾಳದ ಮಾತುಗಳು..

ಗೆಲುವಿನ ‘ಚಮಕ್’ ರಶ್ಮಿಕಾ ಮಂದಣ್ಣ ಅವರ ಮಾತು, ನಗು, ಹಾವಭಾವಗಳಲ್ಲಿ ಎದ್ದು ಕಾಣುತ್ತಿತ್ತು. ಹೊಸ ರೀತಿಯ ಪಾತ್ರವನ್ನು ಜನರೂ ಮೆಚ್ಚಿಕೊಂಡಿರುವ ಜತೆಗೆ ಇನ್ನಷ್ಟು ಅವಕಾಶಗಳು ಕೈಸೇರುತ್ತಿರುವ ಖುಷಿಯೂ ಅವರ ಉತ್ಸಾಹವನ್ನು ಹೆಚ್ಚಿಸಿದಂತಿತ್ತು. ಮಹಿಳಾ ಪ್ರಧಾನ ‘ಚಮಕ್’ ಗೆಲುವಿನ ನೆಪದಲ್ಲಿ ಆರಂಭವಾದ ಮಾತುಕತೆ, ಬದುಕು, ಬಣ್ಣ, ಪ್ರಯೋಗಶೀಲತೆ ಹೀಗೆ ಹಲವು ನೆಲೆಗಳಿಗೆ ಜಿಗಿಯಿತು. ಮಧ್ಯೆ ಮಧ್ಯೆ ಅವರ ಹೂನಗುವಿನ ವಿತರಣೆಯೂ ನಡೆದೇ ಇತ್ತು. ಕೊಂಚ ತಮಾಷೆ, ಕಾಲೆಳೆಯುವಂಥ ಪ್ರಶ್ನೆಗಳಿಗೆ ಅವರು ಅದೇ ಧಾಟಿಯಲ್ಲಿಯೇ ಉತ್ತರಿಸಿದರು. ಸಾಮಾನ್ಯವಾಗಿ ತಮಗೆ ಎದುರಾಗುವ ಪ್ರಶ್ನೆಗಳಿಗೆ ನಗುವಿನ ಉತ್ತರವನ್ನೇ ನೀಡುವ ಈ ಬೆಡಗಿ ಅಂಥದ್ದೇನು ಮಾತಾಡಿದ್ದಾರೆ?

* ಕಳೆದ ವರ್ಷದುದ್ದಕ್ಕೂ ನೀವು ಬೇರೆ ಬೇರೆ ಕಾರಣಗಳಿಗೆ ಸುದ್ದಿಯಲ್ಲಿದ್ದೀರಿ. ಹಾಗಾಗಿ ನಿಮ್ಮನ್ನು ವರ್ಷದ ನಾಯಕಿ ಎಂದು ಕರೆಯಬಹುದಾ?

ಬೇಡಪ್ಪಾ ಬೇಡ. ನನ್ನನ್ನು ನಾನು ಯಾವತ್ತೂ ವರ್ಷದ ನಾಯಕಿ ಅಂತೆಲ್ಲ ಪರಿಗಣಿಸಿಕೊಂಡಿಲ್ಲ.
ಮೊದಲಿನಿಂದಲೂ ನಾನು ಮನೇಲಿ ಖಾಲಿ ಕೂತಿರುವವಳೇ ಅಲ್ಲ. ಈಗಂತೂ ಒಂದು ದಿನ ರಜಾ ಸಿಕ್ಕಿದೆ ಅಂದ್ರೆ ‘ನಾನೇನು ಮಾಡ್ತಿಲ್ಲ. ಮುಂದೇ ಏನು ಮಾಡುವುದು?’ ಎಂದೆಲ್ಲ ಭಯ ಆಗಲಿಕ್ಕೆ ಶುರುವಾಗುತ್ತದೆ. ನಾನು ಬೆಳೆದಿದ್ದೇ ಹಾಗೆ.

* ಈಗ ಯಾವ ಸಿನಿಮಾದಲ್ಲಿ ನಟಿಸುತ್ತಿದ್ದೀರಿ?
ಈಗಾಗಲೇ ಒಂದು ಸಿನಿಮಾಗೆ ಸಹಿ ಹಾಕಿದ್ದೀನಿ. ಅದು ಜನವರಿ ಮಧ್ಯದಲ್ಲಿ ಘೋಷಣೆಯಾಗಬಹುದು. ಈಗಲೇ ಏನೂ ಹೇಳುವುದು ಕಷ್ಟ. ಆದರೆ ದೊಡ್ಡ ಬ್ಯಾನರ್ನಲ್ಲಿ ದೊಡ್ಡ ನಟನ ಸಿನಿಮಾದಲ್ಲಿ ನಟಿಸುತ್ತಿದ್ದೇನೆ ಎಂದು ಮಾತ್ರ ಹೇಳಬಲ್ಲೆ.

* ಮತ್ತಷ್ಟು ತೆಲುಗು ಸಿನಿಮಾದಲ್ಲಿ ನಟಿಸುತ್ತಿದ್ದೀರಂತೆ?
‘ಚಲೋ’ ಎಂಬ ಸಿನಿಮಾ ಮಾಡಿದ್ದೇನೆ. ವಿಜಯ ದೇವರಕೊಂಡ ಅವರ ಜತೆ ಇನ್ನೊಂದು ಸಿನಿಮಾ ಮಾಡ್ತಿದ್ದೇನೆ. ಮೂರನೇ ಸಿನಿಮಾದ ಕುರಿತು ಚರ್ಚೆ ಆಗುತ್ತಿದೆ. ರಾಮ್್ ಜತೆ ಅಂತ ಇದೆ. ಆದರೆ ಅದು ಅಂತಿಮ ಆಗಿಲ್ಲ. ಏನಾಗುತ್ತದೆಯೋ ದೇವರಿಗೇ ಗೊತ್ತು.

* 2018ರಲ್ಲಿ ನಿಮ್ಮ ಬದುಕಿನಲ್ಲಿ ಯಾವುದಾದರೂ ಮಹತ್ವದ ಘಟನೆ ನಡೆಯುವ ಸಾಧ್ಯತೆ ಇದೆಯಾ?
ನೀವು ನನ್ನ ಮದುವೆಯ ಬಗ್ಗೆ ಕೇಳ್ತಿದ್ದೀರಿ ಅಂತ ಗೊತ್ತು. ಇಲ್ಲ, ಈ ವರ್ಷ ಮದುವೆ ಆಗಲ್ಲ.

* ರಕ್ಷಿತ್ ಶೆಟ್ಟಿ ಅವರನಿರ್ಮಾಣ ಸಂಸ್ಥೆಯ ಸಿನಿಮಾಗಳಲ್ಲಿ ನಟಿಸುವ ಆಲೋಚನೆ ಇಲ್ಲವೇ?
ಅವರು ಐದು ವರ್ಷಕ್ಕೆ ಒಂದಾದರೂ ಸಿನಿಮಾ ನನಗೆ ಕೊಟ್ಟಿಲ್ಲಾ ಅಂದ್ರೆ ನಾನು ನೋಡಿಕೊಳ್ತೇನೆ. (ಹ್ಹ ಹ್ಹಾ) ಸುಮ್ನೆ ತಮಾಷೆಗೆ ಹೇಳಿದೆ ಅಷ್ಟೆ. ಒಳ್ಳೆಯ ಕಥೆ ಸಿಕ್ಕಿದರೆ ಖಂಡಿತ ರಕ್ಷಿತ್ ಶೆಟ್ಟಿ ಅವರ ಬ್ಯಾನರ್ ಸಿನಿಮಾಗಳಲ್ಲಿಯೂ ನಟಿಸುತ್ತೇನೆ. ಮುಂದೆ ಸಾಧ್ಯವಾಗಬಹುದು.

* ನಟನೆ ಬಿಟ್ಟು ಬೇರೆ ಯಾವುದಾದರೂ ವಿಭಾಗದಲ್ಲಿ ತೊಡಗಿಕೊಳ್ಳುವ ಆಸಕ್ತಿ ಇದೆಯೇ?
ಸಿನಿಮಾರಂಗಕ್ಕೆ ಬಂದ ಮೇಲೆ ಬರೀ ನಟನೆಯ ಮೇಲಷ್ಟೇ ಮನಸ್ಸು ನೆಟ್ಟುಕೊಂಡಿರಲು ಸಾಧ್ಯವಿಲ್ಲ. ನನಗೂ ಕಥೆ ಬರೆಯಬೇಕು ಎಂಬ ಆಸೆ ಇದೆ. ರಕ್ಷಿತ್ ಕೂಡ ಬರೆಯುವುದರಿಂದ ಅವರಿಂದಲೂ ಮಾರ್ಗದರ್ಶನ ಸಿಗುತ್ತದೆ. ಮುಂದೊಂದು ದಿನ ನಿರ್ದೇಶನ ಮಾಡ್ತೀನಿ, ಇಲ್ಲಾ ಕಥೆ ಬರೀತಿನಿ… ಏನೋ ಒಂದು ಮಾಡ್ತೀನಿ…

* ಈಗಾಗಲೇ ಒಂದು ಕಥೆ ಬರೆಯುತ್ತಿದ್ದೀರಂತೆ..
ಒಂದು ಐಡಿಯಾ ಇತ್ತು. ರಕ್ಷಿತ್ ಅವರಿಗೆ ಹೇಳಿದೆ. ಅವರಿಗೆ ಇಷ್ಟವಾಯ್ತು. ಅದನ್ನು ಬೆಳೆಸಿಕೊಂಡು ಹೋಗು ಎಂದು ಹೇಳಿದರು. ನನಗೇ ಚಿತ್ರೀಕರಣದ ಮಧ್ಯೆ ಅದನ್ನು ಬೆಳೆಸಲು ಸಮಯ ಆಗಿಲ್ಲ.

* ನಂಬರ್ ಒನ್ ನಟಿಯಾಗಿ ಕನ್ನಡ ಚಿತ್ರರಂಗದಲ್ಲಿ ಮೆರೆಯಲು ಸಿದ್ಧತೆ ನಡೆಸಿರುವ ಹಾಗಿದೆ?
ನಾನು ತುಂಬ ಚಿಕ್ಕವಳು. ಈಗಷ್ಟೇ ಕಣ್ಬಿಟ್ಟು ಕುಯ್ ಕುಯ್ ಅನ್ನುತ್ತಿರುವ ಪುಟ್ಟ ನಾಯಿಮರಿ. ಚಿತ್ರರಂಗ ತುಂಬ ದೊಡ್ಡದು. ಇಲ್ಲಿ ಮೆರೆಯುವುದು ನನ್ನ ಉದ್ದೇಶ ಅಲ್ಲವೇ ಅಲ್ಲ. ದೊಡ್ಡ ದೊಡ್ಡ ಪ್ರತಿಭಾವಂತರೆಲ್ಲ ಇಲ್ಲಿ ಹೆಸರು ಮಾಡಿ ಹೋಗಿದ್ದಾರೆ. ಅವರ ಮಟ್ಟವನ್ನು ಮುಟ್ಟಬೇಕು ಎಂಬ ಆಸೆಯಂತೂ ನನಗಿದೆ. ಆದರೆ ಸದ್ಯಕ್ಕೆ ನಾನು ತುಂಬ ಚಿಕ್ಕವಳು.

* ಪ್ರಯೋಗಶೀಲ ಪಾತ್ರಗಳಲ್ಲಿ ತೊಡಗಿಕೊಳ್ಳುವ ಆಸಕ್ತಿ ಇಲ್ಲವೇ?
‘ಚಮಕ್’ ಸಿನಿಮಾದ ಪಾತ್ರ ನನ್ನ ಪಾಲಿಗೆ ಪ್ರಯೋಗವೇ. ನಾನು ಇಂಥ ಪಾತ್ರ ಮಾಡಬಲ್ಲೆ ಎಂದು ಯಾರಿಗೂ ಗೊತ್ತಿರಲಿಲ್ಲ. ಎಲ್ಲಕ್ಕಿಂತ ಚಿತ್ರಕಥೆಯೇ ಮುಖ್ಯ. ಮುಂದಿನ ಸಿನಿಮಾಗಳಲ್ಲಿ ತುಂಬ ಭಿನ್ನವಾದ ಪಾತ್ರಗಳಲ್ಲಿಯೇ ನಟಿಸುತ್ತೇನೆ.

* ‘ಚಮಕ್’ ಸಿನಿಮಾದಲ್ಲಿ ಮದ್ಯಪಾನದ ದೃಶ್ಯಗಳೆಲ್ಲ ಇವೆಯಲ್ಲ, ಅದನ್ನು ಮಾಡುವಾಗ ಜನರಿಗೆ ತಪ್ಪು ಸಂದೇಶ ಹೋಗುತ್ತದೆ ಎಂಬ ಅಂಜಿಕೆ ಕಾಡಲಿಲ್ಲವೇ?
ನಾನು ವೈನ್ ಕುಡಿತೀನಿ. ನಾನು ಕೂರ್ಗ್ನವಳು. ಅಲ್ಲಿ ಇವೆಲ್ಲ ಸಾಮಾನ್ಯ ಸಂಗತಿ. ನಮ್ಮ ಮನೆಯಲ್ಲಂತೂ ಯಾವ ತಕರಾರೂ ಇರಲಿಲ್ಲ. ಇನ್ನು ಜನರ ಬಗ್ಗೆ ಹೇಳುವುದಾದರೆ ಇವೆಲ್ಲವೂ ಪ್ರತಿಯೊಬ್ಬನ ವೈಯಕ್ತಿಕ ಆಯ್ಕೆಗಳಷ್ಟೆ. ಯಾರೋ ಕುಡಿಯಬೇಕು ಎಂದುಕೊಂಡರೆ ಕುಡಿಯುತ್ತಾರೆ. ನಾವು ಕುಡಿಯಬೇಡಿ ಎಂದು ಹೇಳಿದರೂ ಕುಡಿಯುತ್ತಾರೆ. ಅಷ್ಟಕ್ಕೂ ಇದು ಸಿನಿಮಾ ಅಷ್ಟೇ. ನಾನೇನೂ ಅವರಿಗೆ ಕುಡಿಯಿರಿ ಎಂದು ಹೇಳುತ್ತಿಲ್ಲ. ಆ ಪಾತ್ರಕ್ಕೆ, ಕಥೆಗೆ ತಕ್ಕಂತೆ ಅಭಿನಯಿಸುವುದು ನನ್ನ ಕೆಲಸ. ಅದನ್ನು ನಾನು ಮಾಡಿದ್ದೇನೆ. ಅದನ್ನು ಪ್ರೇಕ್ಷಕ ಅವರಿಗೆ ಬೇಕಾದ ಹಾಗೆ ತೆಗೆದುಕೊಳ್ಳಬಹುದು. ಈ ದೃಶ್ಯಗಳನ್ನು ನೋಡಿಯೇ ಒಂದಿಷ್ಟು ಜನ ತಾನಿನ್ನು ಕುಡಿಯುವುದಿಲ್ಲ ಎಂದೂ ನಿರ್ಧಾರ ಮಾಡಬಹುದು.

* ‘ಚಮಕ್’ ಸಿನಿಮಾ ಪಾತ್ರದ ಬಗ್ಗೆ ಜನರ ಪ್ರತಿಕ್ರಿಯೆ ಹೇಗಿತ್ತು?
ತುಂಬ ವಿಚಿತ್ರವಾಗಿತ್ತು. ಈ ಸಿನಿಮಾದಲ್ಲಿ ನನ್ನ ಪಾತ್ರಕ್ಕೆ ಮದುವೆಯಾಗಿ, ಗರ್ಭಿಣಿಯಾಗಿ, ಹೆರಿಗೆಯೂ ಆಗಿಬಿಡುತ್ತದಲ್ಲ, ತುಂಬ ಜನ ಇದು ನಿಮ್ಮ ಬದುಕಿನ ರಿಹರ್ಸಲ್ ಇದ್ದ ಹಾಗಿದೆ ಎಂದು ಹೇಳ್ತಿದ್ದರು. ನಾನು ಆಶ್ಚರ್ಯದಿಂದ ಬಾಯಿಬಿಡುತ್ತಿದ್ದೆ.

ನನಗೆ ಆ ಪಾತ್ರ ನಿರ್ವಹಿಸುವುದು ಸುಲಭವಾಗಿದ್ದು ನನ್ನ ಅಮ್ಮನಿಂದ. ನನಗೆ ಹದಿನಾರು ಹದಿನೇಳು ವರ್ಷವಾಗಿದ್ದಾಗ ಅವರು ಗರ್ಭಿಣಿಯಾಗಿದ್ದರು. ಆಗೆಲ್ಲ ನಾನೇ ಅವರನ್ನು ನೋಡಿಕೊಳ್ಳುತ್ತಿದ್ದೆ. ಆದ್ದರಿಂದ ನನಗೆ ಆ ಸ್ಥಿತಿಯ ಹತ್ತಿರದಿಂದ ಗೊತ್ತು. ಆದ್ದರಿಂದ ಸುಲಭವಾಗಿಯೇ ನಟಿಸಿದೆ. ಜನರೂ ಕಿರಿಕ್ ಪಾರ್ಟಿಗಿಂತ ಈ ಚಿತ್ರದಲ್ಲಿ ನಟನೆಯಲ್ಲಿ ತುಂಬ ಪ್ರಗತಿ ಕಾಣುತ್ತಿದೆ ಎಂದು ಹೇಳಿದರು. ಈ ರೀತಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತೀರಿ ಎಂದು ಊಹಿಸಿರಲಿಲ್ಲ ಎಂಬ ಪ್ರತಿಕ್ರಿಯೆಯೂ ಬಂತು.

* ಕನ್ನಡದಲ್ಲಿ ಮಹಿಳಾಪ್ರಧಾನ ಸಿನಿಮಾಗಳ ಸಂಖ್ಯೆ ಕಡಿಮೆ. ನಿಮಗೆ ಅಂಥ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಇಚ್ಛೆ ಇದೆಯೇ?
ಜನರು ನನ್ನನ್ನು ಗುರ್ತಿಸಬೇಕಾಗಿತ್ತು. ಅದಕ್ಕಾಗಿ ಕಾಯುತ್ತಿದ್ದೆ. ಜನರಿಗೆ ಪರಿಚಿತರಾದ ಮೇಲೆ ಮಹಿಳಾಪ್ರಧಾನ ಸಿನಿಮಾಗಳನ್ನು ಮಾಡಿದರೆ ಅವರು ಒಪ್ಪಿಕೊಳ್ಳಬಹುದು. ಇಲ್ಲದಿದ್ದರೆ ಒಪ್ಪಿಕೊಳ್ಳುವುದು ಕಷ್ಟ. ಇನ್ನು ಮುಂದೆ ಒಳ್ಳೆಯ ಕಥೆ ಬಂದರೆ ಖಂಡಿತ ಮಾಡುತ್ತೇನೆ.

* ನಿಮ್ಮ ದೃಷ್ಟಿಯಲ್ಲಿ ಒಳ್ಳೆಯ ಕಥೆ ಎಂದರೆ ಏನು?
ಅಂದರೆ ಧ್ವನಿಯಿಲ್ಲದವರಿಗೆ ಧ್ವನಿಯಾಗುವಂಥ ಕಥೆ. ಮನುಷ್ಯನ ಬದುಕನ್ನು ಯಾವುದೇ ಕೃತ್ರಿಮತೆ ಇಲ್ಲದೆ ‘ರಾ’ ಆಗಿಯೇ ತೋರಿಸುವಂಥ ಕಥೆ.

* ಅಂಥ ಕಥೆಗಳು ನಿಮಗೆ ಬಂದಿವೆಯಾ?
ಇಲ್ಲ. ನನಗೆ ಗೊತ್ತಿರುವ ಹಾಗೆ ಅಂಥ ಕಥೆಗಳನ್ನು ಬರೆಯುವುದೇ ಇಲ್ಲ. ಗೊತ್ತಿಲ್ಲ ಮುಂದೆ ಯಾರಾದರೂ ಬರೆಯಬಹುದು.

* ನೀವೇ ಅಂಥದ್ದೊಂದು ಕಥೆಯನ್ನು ಬರೆದು ಸಿನಿಮಾ ಮಾಡಬಹುದಲ್ಲವೇ?
ಖಂಡಿತ. ಚಿತ್ರರಂಗದಲ್ಲಿ ಉಳಿದುಕೊಳ್ಳಬೇಕು ಎಂದರೆ ನಾವೇ ಏನಾದರೂ ಮಾಡಬೇಕು. ಇಲ್ಲಿ ಬೇರೆ ಯಾರೋ ಬಂದು ನಮಗೆ ಏನೋ ಮಾಡಿಕೊಡುತ್ತಾರೆ ಎನ್ನುವುದು ಸುಳ್ಳು ಎನ್ನುವುದು ನನಗೆ ಗೊತ್ತಾಗಿದೆ. ನಾವು ಉಳಿದುಕೊಳ್ಳಬೇಕು ಎಂದರೆ ನಾವೇ ಏನಾದರೂ ಮಾಡಬೇಕು. ನನಗಿನ್ನೂ ಇಪ್ಪತ್ತೊಂದು ವರ್ಷ. ಅಂಥ ಪ್ರಯತ್ನಗಳನ್ನು ಮಾಡಲಿಕ್ಕೆ ಇನ್ನೂ ತುಂಬ ಸಮಯಾವಕಾಶ ಇದೆ.

* ಒಂದು ಚಿತ್ರದ ಸಿನಿಮಾವನ್ನು ಒಪ್ಪಿಕೊಳ್ಳುವಾಗ ಯಾವ ಮಾನದಂಡಗಳನ್ನು ಅನುಸರಿಸುತ್ತೀರಿ?
ನನಗೆ ಯಾವುದೇ ಕಥೆ ಬಂದರೂ ನನ್ನ ಏಳೆಂಟು ಜನ ಸ್ನೇಹಿತರ ಜತೆ ಚರ್ಚಿಸುತ್ತೇನೆ. ಅವರಲ್ಲಿ ಬಹುತೇಕರಿಗೆ ಇಷ್ಟವಾದರೆ ಒಪ್ಪಿಕೊಳ್ಳುತ್ತೇನೆ. ಇಲ್ಲದಿದ್ದರೆ ಒಪ್ಪಿಕೊಳ್ಳುವುದಿಲ್ಲ.

ಕೃಪೆ : ಪ್ರಜಾವಾಣಿ

Leave a Reply