ಕಾಂಟ್ರವರ್ಸಿ ಯಲ್ಲಿ ವಿಷ್ಣು ಓದಿದ ಶಾಲೆ

ಬೆಂಗಳೂರು ಮಹಾನಗರದ ಮೊಟ್ಟ ಮೊದಲ ಕನ್ನಡ ಮಾದ್ಯಮ ಶಾಲೆ ಮತ್ತು ಅಭಿನಯ ಭಾರ್ಗವ ಡಾ. ವಿಷ್ಣುವರ್ಧನ್‌ ವ್ಯಾಸಂಗತ ಮಾಡಿದ್ದ ಚಾಮರಾಜಪೇಟೆಯ ಮಾಡೆಲ್‌ ಹೈಸ್ಕೂಲ್‌ ಇನ್ನೇನು ಇತಿಹಾಸ ಪುಟ ಸೇರಲಿದೆ. ಕೇವಲ ಒಬ್ಬ ವಿದ್ಯಾರ್ಥಿ ವ್ಯಾಸಂಗ ಮಾಡುತ್ತಿದ್ದರೂ ಅಂಥ ಶಾಲೆಯನ್ನು ಮುಚ್ಚುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರಾದರೂ ಇದೀಗ ವಿಷ್ಣು ಓದಿದ ಶಾಲೆ ಮುಚ್ಚುವ ಅಪಾಯಕ್ಕೆ ಸಿಲುಕಿದೆ.

ಇನ್ನು ಶಾಲೆ ಮುಚ್ಚಲು ಸರಕಾರ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಕೊರತೆ ಎಂದು ಸಬೂಬು ಹೇಳುತ್ತಿದೆ. ಆದರೆ ಶಾಲೆಯಲ್ಲಿ 65 ಮಕ್ಕಳು ಓದುತ್ತಿದ್ದಾರೆ ಎಂಬ ಮಾಹಿತಿ ನೀಡುತ್ತಾರೆ ವಿಷ್ಣು ಸೇನಾ ಸಮಿತಿಯ ವೀರಕಪುತ್ರ ಶ್ರೀನಿವಾಸ್‌.’ಇದು ಬೆಂಗಳೂರಿನ ಬಹಳ ಹಳೇ ಶಾಲೆ ಅಲ್ಲದೆ, ಹಿರಿಯ ನಟರಾದ ವಿಷ್ಣುವರ್ಧನ್‌ , ರಮೇಶ್‌ ಭಟ್‌ ಸೇರಿ ನಗರದ ಖ್ಯಾತ ವಕೀಲರು, ವಿಜ್ಞಾನಿಗಳು, ಶಿಕ್ಷ ಣ ತಜ್ಞರು ಇಲ್ಲಿ ಕಲಿತು ಮುಂದೆ ಸಾಕಷ್ಟು ಉನ್ನತ ಸ್ಥಾನಕ್ಕೆ ಏರಿದ್ದಾರೆ. ಹಾಗಾಗಿ ಈ ಶಾಲೆಗೆ ಶಿಕ್ಷಕರ ಕೊರತೆ ಇದ್ದರೆ ನಮ್ಮ ವಿಷ್ಣು ಸೇನಾ ಸಮಿತಿ ವತಿಯಿಂದ ನಾವೇ ಶಿಕ್ಷಕರನ್ನು ನೀಡುವ ಬಗ್ಗೆ ಯೋಚಿಸುತ್ತಿದ್ದೇವೆ’ ಎಂದು ಅವರು ಹೇಳಿದ್ದಾರೆ’

ವಿಷ್ಣುವರ್ಧನ್‌ ಅವರ ಆಪ್ತ ಮಿತ್ರ, ಹಿರಿಯ ನಟ ಕಮ್‌ ನಿರ್ಮಾಪಕ ದ್ವಾರಕೀಶ್‌ ಮಾತನಾಡಿ, ‘ಈ ಶಾಲೆಗೆ ಒಂದು ದೊಡ್ಡ ಇತಿಹಾಸ ಇದೆ. ವಿಷ್ಣುವರ್ಧನ್‌ ಅಂತಹ ದೊಡ್ಡ ನಟನನ್ನು ಈ ಶಾಲೆ ನೀಡಿದೆ. ಬೇರೆ ಯಾವುದೇ ಕಾರಣ ಇದ್ದರೂ, ವಿಷ್ಣು ವಿದ್ಯಾಭ್ಯಾಸ ಮಾಡಿದ್ದಾರೆ ಎಂಬ ಕಾರಣಕ್ಕಾದ್ರೂ ಅದು ಉಳಿಯಬೇಕು. ಈ ನಿಟ್ಟಿನಲ್ಲಿ ಸರಕಾರ ಅದನ್ನು ಉಳಿಸಿ ಒಂದು ಐತಿಹಾಸಿಕ ಜಾಗವನ್ನಾಗಿ ಮಾಡಿದರೆ ಉತ್ತಮ. ಆ ಶಾಲೆ ಇರಬೇಕು’ ಅಂತಾರೆ ದ್ವಾರಕೀಶ್‌..

ನಟ ಗಣೇಶ್ ‘ಕನ್ನಡ ಚಿತ್ರರಂಗದ ಧೀಮಂತ ನಟ ಡಾ.ವಿಷ್ಣುವರ್ಧನ್‌. ನನ್ನನ್ನೂ ಸೇರಿದಂತೆ ಅನೇಕ ಕಲಾವಿದರು ಅವರ ನಟನೆಯನ್ನು ನೋಡಿಯೇ ಬೆಳೆದವರು. ಅಂತಹ ಮೇರು ಕಲಾವಿದರು ಕಲಿತಿರುವ ಆ ಶಾಲೆಯನ್ನು ಮುಚ್ಚಲು ಹೊರಟಿದ್ದು ನಿಜಕ್ಕೂ ನೋವಿನ ಸಂಗತಿ. ಅಲ್ಲದೇ ಅದು ಬೆಂಗಳೂರಿನ ಮೊದಲ ಕನ್ನಡ ಶಾಲೆಯೂ ಆಗಿರುವುದರಿಂದ ಒಬ್ಬ ಕನ್ನಡಿಗನಾಗಿ ವಿರೋಧಿಸುತ್ತೇನೆ. ಈ ಶಾಲೆಯು ಮಾಡೆಲ್‌ ಆಗಿ ಉಳಿಯುವಂತೆ ಸರಕಾರ ನೋಡಿಕೊಳ್ಳಬೇಕು. ಕನ್ನಡ ಶಾಲೆಗಳನ್ನು ಮುಚ್ಚುವುದಿಲ್ಲ ಎಂದು ಸರಕಾರ ಈಗಾಗಲೇ ಸ್ಪಷ್ಟಪಡಿಸಿದೆ. ಈ ಶಾಲೆಯನ್ನು ಮುಚ್ಚಲು ಹೊರಟಿದ್ದವರ ಮೇಲೆ ಕೂಡಲೇ ಕ್ರಮ ತಗೆದುಕೊಳ್ಳಬೇಕು ಎಂದು ವಿನಂತಿಸುತ್ತೇನೆ’.

ಕೃಪೆ : ವಿಜಯ ಕರ್ನಾಟಕ

Leave a Reply