ಕರ್ನಾಟಕದ ಜನತೆಗೆ ಉಚಿತ ವೈಫೈ ಭಾಗ್ಯ !!!

ಬೆಂಗಳೂರು, ಜನವರಿ 16 : ಕರ್ನಾಟಕದ ಒಟ್ಟಾರೆ ಜನಸಂಖ್ಯೆಯ ಶೇಕಡಾ 61.43ರಷ್ಟಿರುವ ಗ್ರಾಮೀಣ ಜನತೆಯನ್ನು, ಅದರಲ್ಲೂ ಯುವಜನತೆಯನ್ನು ಸೆಳೆಯುವ ಉದ್ದೇಶದಿಂದ ಸಿದ್ದರಾಮಯ್ಯ ಸರಕಾರ ಭರ್ಜರಿ ಕೊಡುಗೆಯನ್ನು ನೀಡಿದೆ.

ಇಂಟರ್ನೆಟ್ ಸಂಪರ್ಕ ಗ್ರಾಮೀಣ ವಿಭಾಗದ ಮೂಲೆಮೂಲೆಯನ್ನೂ ತಲುಪಬೇಕು ಮತ್ತು ಹೆಚ್ಚಿನ ಉದ್ಯೋಗ ಸೃಷ್ಟಿಯಾಗಬೇಕು ಎಂಬ ಆಶಾಭಾವನೆಯೊಂದಿಗೆ ಗ್ರಾಮೀಣ ವಿಭಾಗದ ಯುವಕ, ಯುವತಿಯರಿಗೆ ಉಚಿತ ವೈಫೈ ನೀಡುವುದಾಗಿ ಸಿದ್ದರಾಮಯ್ಯ ಸರಕಾರ ಮಂಗಳವಾರ ಘೋಷಿಸಿದೆ.

ಜೊತೆಗೆ, ಗ್ರಾಮೀಣ ವಿಭಾಗದಲ್ಲಿಯೂ ಮೊಬೈಲ್ ಬಳಕೆ ಸಾಕಷ್ಟು ಹೆಚ್ಚುತ್ತಿರುವುದರಿಂದ, ಮೊಬೈಲ್ ಬಳಕೆಯನ್ನು ಉತ್ತೇಜಿಸುವ ಉದ್ದೇಶದಿಂದ ಪ್ರತಿ ತಿಂಗಳು 1 ಜಿಬಿ ಡೇಟಾವನ್ನು ಮಾಹಿತಿ ತಂತ್ರಜ್ಞಾನ ಇಲಾಖೆ ಉಚಿತವಾಗಿ ನೀಡುತ್ತಿದೆ.

ಸರಕಾರದ ಉದ್ದೇಶವೇನೋ ಸರಿ. ಆದರೆ, ಗ್ರಾಮೀಣ ಯುವಜನತೆಯನ್ನು ಸರಕಾರ ಹೇಗೆ ಗುರುತಿಸುತ್ತದೆ ಎಂಬುದೇ ಬೃಹದಾಕಾರವಾಗಿರುವ ಪ್ರಶ್ನೆ. ಲಕ್ಷಾಂತರ ಗ್ರಾಮೀಣ ಯುವಕರು ಇಂದು ಪಟ್ಟಣ ಸೇರಿಕೊಂಡಿದ್ದು ಒಂದೆಡೆಯಾದರೆ, ಹಲವಾರು ಗ್ರಾಮಗಳೇ ಇಂದು ಗ್ರಾಮಗಳಾಗಿ ಉಳಿದಿಲ್ಲ.

ಸರಕಾರದ ಈ ಉಚಿತ ಸವಲತ್ತು ಸದುದ್ದೇಶಕ್ಕೆ ಬಳಕೆಯಾಗಲಿ. ವಿದ್ಯಾಭ್ಯಾಸಕ್ಕೆ, ಹಲವಾರು ಸೇವೆಯ ಲಾಭ ಪಡೆಯಲು ಈ ಉಚಿತ ಕೊಡುಗೆಗಳು ಅನುಕೂಲ ಒದಗಿಸಿದರೆ ಓಕೆ, ಆದರೆ, ಅದೆಲ್ಲ ಬಿಟ್ಟು ಬಿಟ್ಟಿ ಸಿಕ್ಕಿತೆಂದು ವಾಟ್ಸಾಪ್, ಫೇಸ್ ಬುಕ್ ಗಳಲ್ಲಿ ಸಮಯ ಕಳೆದರೆ ನಾಟ್ ಓಕೆ ಎಂದು ಟ್ವಿಟ್ಟಿಗರೊಬ್ಬರು ಎಚ್ಚರಿಸಿದ್ದಾರೆ.

ಇದರಿಂದ ಲಾಭ ನಷ್ಟಗಳು, ಎದುರಾಗಬಹುದಾದ ಸವಾಲುಗಳು ಕೂಡ ಸಾಕಷ್ಟಿವೆ. ಗ್ರಾಮೀಣ ಯುವಜನತೆಗೆ ಹೊರಜಗತ್ತಿನ ಅರಿವಾಗುವುದರೊಂದಿಗೆ, ಡಿಜಿಟಲ್ ಜಗತ್ತಿನ ಅನಾವರಣವೂ ಆಗಲಿದೆ. ಆದರೆ, ಹಳ್ಳಿಗಳಲ್ಲಿ ಸ್ಮಾರ್ಟ್ ಫೋನ್ ಗಳ ಬಳಕೆ ಅಷ್ಟಾಗಿ ಇಲ್ಲದ್ದರಿಂದ ಸರಕಾರದ ಉದ್ದೇಶ ಸಫಲವಾಗುವುದಾ?

ಎಷ್ಟು ಗ್ರಾಮೀಣ ಯುವಜನರು ಸ್ಮಾರ್ಟ್ ಫೋನ್ ಬಳಸುತ್ತಿದ್ದಾರೆ? ಯಾವ್ಯಾವ ಕಾರಣಕ್ಕೆ ಬಳಸುತ್ತಿದ್ದಾರೆ? ಆನ್ ಲೈನ್ ವ್ಯವಹಾರಗಳಿಗೆ ಬಳಸುತ್ತಿದ್ದಾರಾ ಅಥವಾ ಬರೀ ಸೋಷಿಯಲ್ ಮೀಡಿಯಾದಲ್ಲಿ ವಿಹರಿಸಲು ಬಳಸುತ್ತಿದ್ದಾರಾ? ಭದ್ರತೆ ಎಷ್ಟರಮಟ್ಟಿಗಿದೆ? ಎಂಬಿತ್ಯಾದಿ ಮಾಹಿತಿ ಇದ್ದರೆ ಉದ್ದೇಶ ಸಾರ್ಥಕ.

ಆದರೆ, ಇದನ್ನೇ ಚುನಾವಣೆಯ ದಾಳವಾಗಿ ಸಿದ್ದರಾಮಯ್ಯ ಸರಕಾರ ಉಪಯೋಗಿಸಿದರೆ ಸರಕಾರಕ್ಕೆ ತಿರುಗುಬಾಣವಾಗುವುದರಲ್ಲಿ ಸಂದೇಹವಿಲ್ಲ ಎಂದು ಕೆಲ ಹಿತೈಷಿಗಳು ಎಚ್ಚರಿಕೆ ನೀಡಿದ್ದಾರೆ. ಸಿದ್ದರಾಮಯ್ಯನವರು ಬಡವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ಇತ್ಯಾದಿಗಳನ್ನು ಈಗಾಗಲೆ ಉಚಿತವಾಗಿ ನೀಡಿದ್ದಾರೆ.

Leave a Reply