‘ನನಗೂ ಸಂಘ ಪರಿವಾರದಿಂದ ಹಿಂಸೆ ನೀಡಲಾಗಿದೆ’

ವಿಜಯಪುರ, ಜನವರಿ 17 : ‘ನನಗೂ ಸಂಘ ಪರಿವಾರದಿಂದ ಹಿಂಸೆ ನೀಡಲಾಗಿದೆ. ಈ ಹಿಂದೆ ಸಂಘ ಪರಿವಾರ ಮಾನಸಿಕ, ದೈಹಿಕ, ಆರ್ಥಿಕವಾಗಿ ಸಾಕಷ್ಟು ಹಿಂಸೆ ನೀಡಿದೆ’ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಆರೋಪಿಸಿದರು.

ವಿಜಯಪುರದಲ್ಲಿ ಮಾತನಾಡಿದ ಪ್ರಮೋದ್ ಮುತಾಲಿಕ್ ಅವರು, ಪ್ರವೀಣ್ ತೋಗಾಡಿಯಾ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದರು. ‘ಹಿಂದೂ ಹೋರಾಟಗಾರರನ್ನು ಹತ್ತಿಕ್ಕುವ ಪ್ರಯತ್ನ ಪರಿವಾರದಲ್ಲೇ ನಡೆಯುತ್ತಿದೆ. ಪರಿವಾರದಿಂದಲೇ ಅಧಿಕಾರಕ್ಕೆ ಬಂದವರು ಇಂಥ ಕೃತ್ಯ ಎಸಗುತ್ತಲೇ ಬಂದಿದ್ದಾರೆ’ ಎಂದು ಆರೋಪಿಸಿದರು.

‘ಕೆಲವು ದಿನಗಳ ಹಿಂದೆ ಪ್ರವೀಣ್ ತೊಗಾಡಿಯಾ ಅವರನ್ನು ಕಾರ್ಯಾಧ್ಯಕ್ಷ ಸ್ಥಾನದಿಂದ ತೆಗೆಯುವ ಸಂಚು ನಡೆದಿತ್ತು. ಆಗ ಪ್ರಮುಖರೆಲ್ಲಾ ಅವರಿಗೆ ಬೆಂಬಲವಾಗಿ ನಿಂತಿದ್ದರು. ಆದ್ದರಿಂದ ಅದು ನಡೆಯಲಿಲ್ಲ. ಈಗ ಎನ್‌ಕೌಂಟರ್‌ ಮಾಡುವ ತಂತ್ರ ನಡೆದಿದೆ’ ಎಂದು ಗಂಭೀರ ಆರೋಪ ಮಾಡಿದರು

‘ಕೇಂದ್ರ ಸರ್ಕಾರ ಈ ಘಟನೆ ಬಗ್ಗೆ ಉತ್ತರ ನೀಡಬೇಕು. ಈ ಬಗ್ಗೆ ತಕ್ಷಣ ತನಿಖೆ ನಡೆಯಬೇಕು. ಈ ಪ್ರಕರಣದಲ್ಲಿ ರಾಜಸ್ಥಾನದ ಗೃಹ ಮಂತ್ರಿಯೂ ಇದ್ದಾರೆ. ತನಿಖೆಯಿಂದ ಈ ಸತ್ಯ ಹೊರಬರಬೇಕು’ ಎಂದು ಮುತಾಲಿಕ್ ಒತ್ತಾಯಿಸಿದರು.

ಮುಂದಿನ ಚುನಾವಣೆಯಲ್ಲಿ ಪಕ್ಷದ ವತಿಯಿಂದ ನಾನು ಕಣಕ್ಕಿಳಿಯುತ್ತೇನೆ’ ಎಂದು ಪ್ರಮೋದ್ ಮುತಾಲಿಕ್ ಹೇಳಿದರು.  ‘2018ರ ಚುನಾವಣೆಯಲ್ಲಿ ಶ್ರೀರಾಮ ಸೇನೆಯ ಅಭ್ಯರ್ಥಿಗಳು ರಾಜ್ಯದ 50 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲಿದ್ದಾರೆ. ಶೃಂಗೇರಿ, ಬಿಜಾಪುರ, ತೇರದಾಳ ಈ ಮೂರರಲ್ಲಿ ಒಂದು ಕ್ಷೇತ್ರದಲ್ಲಿ ನಾನು ಸ್ಪರ್ಧೆ ಮಾಡಲಿದ್ದೇನೆ’ ಎಂದರು.
ಸಂಘ ಪರಿವಾರದ ವಿರುದ್ಧ ಗಂಭೀರ ಆರೋಪ ಮಾಡಿದ ಪ್ರಮೋದ್ ಮುತಾಲಿಕ್ ಅವರು, ‘ನನಗೂ ಸಂಘ ಪರಿವಾರದಿಂದ ಹಿಂಸೆ ನೀಡಲಾಗಿದೆ. ನಾನು ಸಾಯಬೇಕು ಇಲ್ಲವೇ ಸಂಘಟನೆ ಬಿಡಬೇಕು ಎಂದು ಹಿಂಸೆ ನೀಡಲಾಗಿತ್ತು’ ಎಂದರು.

.

Leave a Reply