ನಟ ದರ್ಶನ ಗೆ ಉಡುಗೊರೆಯಾಗಿ ಮಾರುತಿ 800

ನಟ ದರ್ಶನ್ ಬಳಿ ನಾನಾ ರೀತಿಯ ಬೈಕ್‌ಗಳು, ಕಾರುಗಳು ಇವೆ. ಇತ್ತೀಚೆಗಷ್ಟೇ ಅವರು ಲ್ಯಾಂಬೋರ್ಗಿನಿ ಕಾರು ಖರೀದಿಸಿದ್ದು ಗೊತ್ತೇ ಇದೆ. ಅವರ ಬಳಿ ಇರುವ ಅತ್ಯಂತ ದುಬಾರಿ ಕಾರುಗಳಲ್ಲಿ ಇದೂ ಒಂದು. ಇದೀಗ ಅವರಿಗೆ ಮಾರುತಿ 800 ಕಾರು ಬಳುವಳಿಯಾಗಿ ಸಿಕ್ಕಿದೆ!

ಆದರೆ ಈ ಕಾರು ಅಂತಿಂತ ಕಾರಲ್ಲ. ಅವರನ್ನು ಚಿತ್ರರಂಗಕ್ಕೆ ನಾಯಕನಟನಾಗಿ ಪರಿಚಯಿಸಿದ ‘ಮೆಜೆಸ್ಟಿಕ್’ ಸಿನಿಮಾಗೂ ಈ ಕಾರಿಗೂ ಲಿಂಕ್ ಇದೆ. ಮೆಜೆಸ್ಟಿಕ್ ಸಿನಿಮಾ ತೆರೆಕಂಡದ್ದು ಫೆಬ್ರವರಿ 8, 2002ರಲ್ಲಿ. ಇದೀಗ ಆ ಸಿನಿಮಾ ತೆರೆಕಂಡು 16 ವರ್ಷಗಳಾಗಿವೆ.

ಕನ್ನಡ ಚಿತ್ರರಂಗದ ಬಾಕ್ಸ್ ಆಫೀಸ್ ಗಳಿಕೆಯಲ್ಲಿ ಧೂಳೆಬ್ಬಿಸಿದ ‘ಮೆಜೆಸ್ಟಿಕ್’ ಕನ್ನಡ ಸಿನೆಮಾ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ವೃತ್ತಿ ಬದುಕಿನ ಒಂದು ಹೊಸ ಅಧ್ಯಾಯ ಬರೆದ ಚಿತ್ರ ಸಹ ಹೌದು. ಗುರುವಾರ (ಫೆ.14) ನೆಲಮಂಗಲ ಬಳಿಯ ಖಾಸಗಿ ರೆಸಾರ್ಟ್ ಒಂದರಲ್ಲಿ ‘ಮೆಜೆಸ್ಟಿಕ್’ ಸಿನಿಮಾದ 16ನೇ ವರ್ಷದ ನೆನಪು ಹಾಗೂ ಅದಕ್ಕೆ ದುಡಿದ ವ್ಯಕ್ತಿಗಳನ್ನು ಗೌರವಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಹಾರ, ಶಾಲು, ಮೈಸೂರು ಟೋಪಿ ಹಾಗೂ ಹಣ್ಣಿನ ಬುಟ್ಟಿ ಗೌರವರ್ಪಣೆಯ ಭಾಗವಾಗಿತ್ತು.

ನಟ ದರ್ಶನ್‌ಗೆ ಬೆಲೆಕಟ್ಟಲಾಗದ ಕಾರು ಗಿಫ್ಟ್

ನಾಯಕ ದರ್ಶನ್ ಅವರು ಅಂದು ನಿರ್ಮಾಪಕ ಎಂ ಜಿ ರಾಮಮೂರ್ತಿ ಅವರು ಬಳಸುತ್ತಾ ಇದ್ದ ಮಾರುತಿ 800 ಕಾರನ್ನು ಅವರಿಂದ ಪಡೆದದ್ದು ವಿಶೇಷವಾಗಿತ್ತು. ಅಂದಿನ ದಿನಗಳನ್ನು ಮೆಲುಕು ಹಾಕುತ್ತಾ ಮಾರುತಿ 800 ಕಾರಿನಲ್ಲಿ ದರ್ಶನ್ ಒಂದು ಸುತ್ತು ಹೋಗಿ ಬಂದರು. ಆ ಮಾರುತಿ 800 ಕಾರಿನ ಸಂಖ್ಯೆ 3483 ದರ್ಶನ್ ಅವರ ನೆನಪಿನಲ್ಲಿ ಇತ್ತು. ಅಂದು ಆಸೆ ಪಟ್ಟ ಕಾರು ಇಂದು ದರ್ಶನ್ ಅವರ ಮನೆಯಲ್ಲಿ ಒಂದು ಅಮೂಲ್ಯ ನೆನಪಾಗಿ ಉಳಿಯಲಿದೆ.

‘ಮೆಜೆಸ್ಟಿಕ್’, ‘ಧರ್ಮ’ ಸಿನಿಮಾಗಳನ್ನು ಎಂ ಜಿ ರಾಮಮೂರ್ತಿ ಅವರು ನಿರ್ಮಾಣ ಮಾಡಿರುವುದು ತಿಳಿದಿದೆ. ಈಗ ಅವರದು ದರ್ಶನ್ ಅವರ ಜೊತೆ ಮೂರನೇ ಚಿತ್ರ ಹಾಗೂ ಅದು ದರ್ಶನ್ ಅವರ 53 ನೇ ಸಿನಿಮಾ ಎಂದು ಸಹ ಘೋಷಣೆ ಮಾಡಲಾಯಿತು.

ಕೃಪೆ : ವಿಜಯ ಕರ್ನಾಟಕ

Leave a Reply