ಕಾಸ್ಟಿಂಗ್‌ ಕೌಚ್‌ ಕುರಿತು ಪ್ರತ್ಯುತ್ತರ ನೀಡಿದ ಶ್ರುತಿ ಹರಿಹರನ್

ಕೆಲವು ದಿನಗಳ ಹಿಂದೆ ವಿಚಾರ ಸಂಕಿರಣವೊಂದರಲ್ಲಿ ಚಿತ್ರರಂಗದಲ್ಲಿನ ಕಾಸ್ಟಿಂಗ್‌ ಕೌಚ್‌ ಕುರಿತು ಶ್ರುತಿ ಹರಿಹರನ್‌ ಮಾತನಾಡಿದ್ದರು. ಆ ನಂತರ ಅವರ ವಿರುದ್ಧ ಚಿತ್ರರಂಗದ ವಲಯದಲ್ಲಿ ಸಾಕಷ್ಟು ಟೀಕೆ-ಟಿಪ್ಪಣಿಗಳು ಬಂದಿದ್ದವು. ಶ್ರುತಿ ಹರಿಹರನ್‌ ಇವೆಲ್ಲಾ ಪ್ರಚಾರಕ್ಕೆ ಮಾಡುತ್ತಿದ್ದಾರೆ, ಐದು ವರ್ಷಗಳ ಹಿಂದಿನ ಘಟನೆಯನ್ನು ಈಗ ಹೇಳುವ ಔಚಿತ್ಯವೇನಿತ್ತು … ಎಂಬಂತಹ ಮಾತುಗಳು ಕೇಳಿ ಬಂದಿತ್ತು.

ಆದರೆ, ಆ ನಂತರ ಶ್ರುತಿ ಹರಿಹರನ್‌ ಆ ಪ್ರಕರಣವನ್ನು ಬೆಳೆಸುವುದಾಲಿ, ಟೀಕೆ-ಟಿಪ್ಪಣಿಗಳಿಗೆ ಉತ್ತರ ನೀಡುವುದಕ್ಕಾಗಲೀ ಹೋಗಲಿಲ್ಲ. ಅದಾಗಿ ಹಲವು ದಿನಗಳ ನಂತರ ಶ್ರುತಿ ಈ ಬಗ್ಗೆ ಮೌನ ಮುರಿದಿದ್ದಾರೆ. ತಮ್ಮ ಹೊಸ ಚಿತ್ರ “ನಾತಿಚರಾಮಿ’ಯ ಮುಹೂರ್ತ ಪತ್ರಿಕಾಗೋಷ್ಠಿಯ ನಂತರ ತಾವು ಅಂದು ಮಾತನಾಡಿದ್ದೇನೆಂದು ಹೇಳಿದ್ದಾರೆ. “ನಾನು ಅಂದು ಮಾತನಾಡಿದ್ದು ಪಬ್ಲಿಸಿಟಿಗೆ ಅಂತಾರೆ. ಅಂತಹ ಅವಶ್ಯಕತೆ ನನಗೆ ಖಂಡಿತಾ ಇಲ್ಲ. ನನ್ನ ಕೆಲಸವೇ ನನಗೆ ಪ್ರಚಾರ ಕೊಡುತ್ತದೆ.

ಹಾಗಾಗಿ ಆ ವಿಷಯವನ್ನಿಟ್ಟುಕೊಂಡು ಪ್ರಚಾರ ಪಡೆಯುವ ಅವಶ್ಯಕತೆ ಇಲ್ಲ. ಕಾಸ್ಟಿಂಗ್‌ ಕೌಚ್‌ ಬಗ್ಗೆ ನಾನು ಮಾತನಾಡಿದ್ದು ಇದೇ ಮೊದಲೇನಲ್ಲ. ಕೆಲವು ವರ್ಷಗಳ ಹಿಂದೆಯೇ ಮಾತನಾಡಿದ್ದೆ. ಆಗಲೂ ಕೆಲವು ಚಾನಲ್‌ಗ‌ಳಲ್ಲಿ ಈ ವಿಷಯ ಬಂದಿತ್ತು. ನನಗೆ ಇದರಿಂದ ನ್ಯಾಯ ಬೇಡ. ಇಂಥದ್ದೆಲ್ಲಾ ಆಗಬಾರದು ಎಂಬುದು ನನ್ನ ಉದ್ದೇಶ. ಯಾವತ್ತೂ ಒಂದು ಕೈಯ್ಯಿಂದ ಚಪ್ಪಾಳೆ ಆಗುವುದಿಲ್ಲ. ಮಹಿಳೆಯರು ಸಹ ಅವಕಾಶಕ್ಕಾಗಿ ಘನತೆ ಕಡಿಮೆ ಮಾಡಿಕೊಳ್ಳಬಾರದು.

ಸಾಮಾನ್ಯವಾಗಿ ಚಿತ್ರರಂಗದಲ್ಲಿ, ಒಬ್ಬಳಿಲ್ಲ ಅಂದರೆ ಇನ್ನೊಬ್ಬಳು ಸಿಕ್ಕೇ ಸಿಗುತ್ತಾಳೆ ಎಂಬ ಭಾವನೆ ಇದೆ. ಹಾಗಾಗಿ ಕೆಲವರು ಅವಕಾಶಕ್ಕಾಗಿ ರಾಜಿ ಮಾಡಿಕೊಳ್ಳುವ ಸಾಧ್ಯತೆ ಇದೆ. ಅದಾಗಬಾರದು ಎನ್ನುವುದೇ ನನ್ನ ಉದ್ದೇಶ. ಪ್ರತಿಭೆಯಿಂದ ಅವಕಾಶ ಸಿಗಬೇಕೇ ಹೊರತು, ಈ ತರಹ ಡೀಲ್‌ನಿಂದ ಆಗಬಾರದು’ ಎನ್ನುತ್ತಾರೆ ಶ್ರುತಿ ಹರಿಹರನ್‌. ಅಂದು ತಾವು ಮಾತನಾಡಿದ್ದು ರೋಚಕವಾಗಿ ತೋರಿಸಲಾಯಿತೇ ಹೊರತು, ಗಂಭೀರವಾಗಿ ಪರಿಗಣಿಸಲಾಗಲಿಲ್ಲ ಎಂಬುದು ಶ್ರುತಿ ಅಭಿಪ್ರಾಯ.

“ಅಂದು ಎಷ್ಟೋ ವಿಷಯಗಳ ಬಗ್ಗೆ ಮಾತನಾಡಿದ್ದೆ. ಆದರೆ, ಇದೊಂದೇ ವಿಷಯವನ್ನಿಟ್ಟುಕೊಂಡು ಸುದ್ದಿ ಮಾಡಲಾಯಿತು. ಇದು ನನಗೆ ಹೊಸದು. ಆ ನಂತರ ಸತತವಾಗಿ ನನಗೆ ಫೋನ್‌ ಕಾಲ್‌ಗ‌ಳು ಬಂದವು. ನಾನು ಹೇಳಿದ್ದು, ಐದು ವರ್ಷಗಳ ಹಿಂದೆ ನನಗೆ ಇಂಥದ್ದೊಂದು ಅನುಭವವಾಗಿದೆ ಎಂದು. ಈಗ ಅವೆಲ್ಲಾ ಬಹಳ ಕಡಿಮೆಯಾಗಿದೆ. ತುಂಬಾ ನಟಿಯರಿಗೆ ಇವೆಲ್ಲಾ ಅನುಭವವಾಗಿಲ್ಲ. ಇನ್ನು ನಾನು ಐದು ವರ್ಷದ ನಂತರ ಏಕೆ ಮಾತನಾಡಿದೆ ಎಂದರೆ,

ಇನ್ನಾದರೂ ನಾವು ಈ ಬಗ್ಗೆ ಪ್ರಶ್ನೆ ಎತ್ತಬೇಕು ಎಂಬುದು ಒಂದು ಕಾರಣವಾದರೆ, ಒಂದು ಪಾತ್ರ ಗಿಟ್ಟಿಸುವುದಕ್ಕೆ ಅವೆಲ್ಲಾ ಒಪ್ಪುವ ಅಗತ್ಯ ಇಲ್ಲ ಎಂದು ನಾಲ್ಕು ಜನರಿಗೆ ಅರ್ಥವಾಗಬೇಕು. ಆ ನಿಟ್ಟಿನಲ್ಲಿ ಹೇಳಿದ್ದೆ. ಆದರೆ, ಅದು ಇಷ್ಟೊಂದು ಚರ್ಚೆಯಾಗಬಹುದು ಎಂದು ನಾನು ನಿರೀಕ್ಷಿಸಿರಲಿಲ್ಲ’ ಎನ್ನುತ್ತಾರೆ ಶ್ರುತಿ ಹರಿಹರನ್‌. ಇನ್ನು ಅವರ ಮಾತಿಗೆ ಎಷ್ಟು ಜನರಿಂದ ಸಪೋರ್ಟ್‌ ಸಿಕ್ಕಿತು ಎಂದರೆ, “ತುಂಬಾ ನಟಿಯರಿಂದ ಬೆಂಬಲ ಸಿಕ್ಕಿತು.

ಬೆಂಬಲ ಸಿಗಲಿ ಅಂತ ನಾನು ಮಾತನಾಡಿಲ್ಲ ಅಥವಾ ಬಯಸುತ್ತಲೂ ಇಲ್ಲ. ಇವೆಲ್ಲಾ ಬದಲಾಗಲೀ ಎಂಬುದು ನನ್ನ ಬಯಕೆ. ಇದು ಬರೀ ಒಂದು ಭಾಷೆ ಅಥವಾ ಚಿತ್ರರಂಗಕ್ಕೆ ಸೀಮಿತವಲ್ಲ. ಎಲ್ಲಾ ಭಾಷೆಗಳಲ್ಲೂ ಇದೆ. ಬರೀ ಕಾಸ್ಟಿಂಗ್‌ ಕೌಚ್‌ ಅಷ್ಟೇ ಅಲ್ಲ, ಮಹಿಳೆಯರನ್ನು ಚಿತ್ರಗಳಲ್ಲಿ ತೋರಿಸುವ ರೀತಿ, ಅವರಿಗೆ ಸಿಗುವ ಅವಕಾಶಗಳೆಲ್ಲವೂ ಬದಲಾಗಲೀ ಎಂಬುದು ನನ್ನ ಬಯಕೆ. ಅದೇ ಕಾರಣಕ್ಕೆ ನಾನು ಮಾತಾಡಿದೆ’ ಎನ್ನುತ್ತಾರೆ ಶ್ರುತಿ ಹರಿಹರನ್‌.

ಕೃಪೆ : ಉದಯವಾಣಿ

 

 

 

Leave a Reply