ಕೆ.ಆರ್.ಪೇಟೆ: ಕೆಲವರು ಮಣ್ಣಿನ ಮಗ, ಇನ್ನು ಕೆಲವರು ರೈತರ ಮಗ ಅಂತಾರೆ. ಹಾಗಿದ್ರೆ ನಾನು ಯಾರ ಮಗ? ಎಂದು ನೀವು ಪ್ರಶ್ನಿಸಿದ್ದೀರಿ. ‘ನೀವು ಕಮಿಷನ್ ಮಗ ಸ್ವಾಮಿ’ ಎಂದು ಸಿಎಂ ಸಿದ್ದರಾಮಯ ಅವರಿಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಟಾಂಗ್ ನೀಡಿದರು.
ಮಣ್ಣಿನ ಮಗ ಎಂದು ದೇವೇಗೌಡರು ಕರೆದುಕೊಂಡಿಲ್ಲ, ಬದಲಿಗೆ ಜನರು ಕೊಟ್ಟಿರುವ ಬಿರುದು ಸ್ವಾಮಿ ಅದು. ನಾವು ಜನರ ಮಧ್ಯದಲ್ಲಿದ್ದೇವೆ, ನಮ್ಮನ್ನು ಕೆಣಕಬೇಡಿ. ನಿಮ್ಮ ದುರಹಂಕಾರದ ಮಾತುಗಳಿಗೆ ಕಡಿವಾಣ ಹಾಕಿ. ಇಲ್ಲದಿದ್ದರೆ ಮುಂದೆ ಪಶ್ಚಾತಾಪ ಪಡಬೇಕಾಗುತ್ತದೆ. ನಿಮ್ಮಿಂದಲೇ ಕರ್ನಾಟಕ ಎಂಬಂತೆ ದಿನವಿಡೀ ಜಾಹೀರಾತು ಕೊಡುತ್ತೀರಲ್ಲಾ. ನಿಮಗೆ ನಾಚಿಕೆಯಾಗುವುದಿಲ್ಲವೆ? ನಿಮ್ಮದು ಜನಪರ ಆಡಳಿತವಲ್ಲ. ಜಾಹೀರಾತಿನ ಆಡಳಿತ ಎಂದು ಕುಮಾರಸ್ವಾಮಿ ಛೇಡಿಸಿದರು.
ತಮ್ಮ ಭಾಷಣದುದ್ದಕ್ಕೂ ಸಿದ್ದರಾಮಯ್ಯ ಮತ್ತವರ ಸರಕಾರವನ್ನು ಟೀಕೆ ಮಾಡಿದ ಕುಮಾರಸ್ವಾಮಿ, ಹಸಿರಿನ ನಾಡಾಗಿದ್ದ ಮಂಡ್ಯದ ರೈತರು ಕನಸಿನಲ್ಲೂ ಊಹೆ ಮಾಡಿಕೊಳ್ಳದ ರೀತಿಯಲ್ಲಿ ಇಡೀ ದೇಶದಲ್ಲೇ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆ ಸಂತ್ರಸ್ತ ಕುಟುಂಬಗಳ ಜನರ ಶಾಪ ನಿಮಗೆ ತಟ್ಟುವುದಿಲ್ಲವೆ? ಮಂಡ್ಯಕ್ಕೆ ಯಾವ ಮುಖ ಹೊತ್ತು ಬಂದು ಮತ ಕೇಳುತ್ತೀರಿ? ವರ್ಷದಲ್ಲಿ ಒಂದು ಬೆಳೆಗೆ ನೀರು ಕೊಟ್ಟಿದ್ದರೂ ನಮ್ಮ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರಲಿಲ್ಲ. ಬಡತನದ ಬದುಕು ನಿಮಗೆ ಗೊತ್ತೆ ಸಿದ್ದರಾಮಯ್ಯನವರೆ? ಕೃಷಿ ಬಗ್ಗೆ ತಿಳಿದುಕೊಳ್ಳಲು ಇಸ್ರೇಲ್ಗೆ ಹೋಗಬೇಕಿತ್ತೆ ಎಂದು ಪ್ರಶ್ನಿಸುತ್ತೀರಲ್ಲಾ ಇದು ಸರಿಯೇ,”ಎಂದು ಪ್ರಶ್ನಿಸಿದರು.
“ಮುಖ್ಯಮಂತ್ರಿ ಎಂದರೆ ಮಹಾರಾಜ ಅಲ್ಲ. ನಿಮ್ಮ ಗುಲಾಮ ಎಂಬುದನ್ನು ತೋರಿಸಿಕೊಟ್ಟಿದ್ದೇನೆ. ಮುಖ್ಯಮಂತ್ರಿ ನಿಮ್ಮೆಲ್ಲರ ವಿನಮ್ರ ಸೇವಕ ಅಷ್ಟೆ. ನಾನು ಮುಖ್ಯಮಂತ್ರಿಯಾಗಿದ್ದಾಗ ಯವತ್ತೂ ಕಾಟಾಚಾರದ ಜನತಾ ದರ್ಶನ ಮಾಡಿಲ್ಲ. ಜನರ ಅಹವಾಲನ್ನು ಪ್ರಾಮಾಣಿಕವಾಗಿ ಕೇಳಿ ಪರಿಹರಿಸಿದ್ದೇನೆ. ಈಗ ಸಿದ್ದರಾಮಯ್ಯನವರು ಕಾಟಾಚಾರದ ಜನತಾ ದರ್ಶನ ಮಾಡುತ್ತಿದ್ದಾರೆ. ಇದನ್ನು ನೋಡಿಯಾದರೂ ಜನರು ನನ್ನ ಕೈ ಬಲಪಡಿಸಬೇಕು. ಆಮೂಲಕ ಪ್ರಾದೇಶಿಕ ಪಕ್ಷ ಕ್ಕೆ ಬಲತುಂಬಬೇಕು,”ಎಂದು ಮನವಿ ಮಾಡಿದರು.