11 ವರ್ಷದ ಬಾಲಕ ರಾಜ್ಯದ ಮೊದಲ ಕಿರಿಯ ವಿದ್ಯಾರ್ಥಿಯಾಗಿ ಸಾಧನೆ

ಹೈದರಾಬಾದ್ ನಲ್ಲಿ 11 ವರ್ಷದ ಬಾಲಕನೊಬ್ಬ ರಾಜ್ಯದ ಮೊದಲ ಕಿರಿಯ ವಿದ್ಯಾರ್ಥಿಯಾಗಿ ಸಾಧನೆ ಮೆರೆದಿದ್ದಾನೆ. ಬಿಎ ಪತ್ರಿಕೋದ್ಯಮದ ಮೊದಲನೇ ವರ್ಷದ ಪರೀಕ್ಷೆ ಬರೆದು ಉತ್ತಮ ಅಂಕ ಗಳಿಸಿ ತೇರ್ಗಡೆಯಾಗಿದ್ದಾನೆ.

ಅಗಸ್ತ್ಯ ಖ್ಯಾತ ಅಂತಾರಾಷ್ಟ್ರೀಯ ಟೆನ್ನಿಸ್ ಆಟಗಾರ್ತಿ ನೈನಾ ಜೈಸ್ವಾಲ್‍ರ ಸಹೋದರ. ನೈನಾ ಜೈಸ್ವಾಲ್ 13ನೇ ವಯಸ್ಸಿಗೆ ಪತ್ರಿಕೋದ್ಯಮ ಪದವಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ದೇಶದ ಅತೀ ಕಿರಿಯ ಪತ್ರಿಕೋದ್ಯಮ ಪದವಿಧರೆ ಎನಿಸಿಕೊಂಡಿದ್ದು, ಇದೀಗ ಅಗಸ್ತ್ಯ ಆ ದಾಖಲೆಯನ್ನ ಮುರಿದಿದ್ದಾನೆ. ಮಂಗಳವಾರದಂದು ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ತಮ್ಮ ಮಾಡಿದ ಸಾಧನೆಗೆ ಅಕ್ಕ ಸಿಹಿ ತಿನ್ನಿಸಿ ಸಂತಸ ವ್ಯಕ್ತಪಡಿಸಿದ್ದಾರೆ.

ಯೂಸುಫ್‍ಗುಡದ ಸೆಂಟ್ ಮೇರಿಸ್ ಕಾಲೇಜಿನ ವಿದ್ಯಾರ್ಥಿಯಾದ ಅಗಸ್ತ್ಯ, ಎಸ್‍ಜಿಪಿಎ ಶೇಕಡ 6.11 ಅಂಕವನ್ನ ಗಳಿಸಿ ಹೊಸ ದಾಖಲೆಯನ್ನ ಸೃಷ್ಟಿಸಿದ್ದಾನೆ. ಇದಲ್ಲದೇ ಈತ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಶೇಕಡ 63 ಅಂಕಗಳನ್ನ ಪಡೆದಿದ್ದು, 9 ವರ್ಷಗಳಿರುವಾಗಲೇ ಹತ್ತನೇ ತರಗತಿಯಲ್ಲಿ ಜಿಪಿಎ ಶೇಕಡ 7.5 ಅಂಕಗಳನ್ನ ಪಡೆದು ರಾಜ್ಯದ ಮೊದಲ ಕಿರಿಯ ವಿದ್ಯಾರ್ಥಿಯಾಗಿದ್ದಾನೆ.

ಅಗಸ್ತ್ಯ ಪ್ರತಿನಿತ್ಯ 3-5 ಗಂಟೆಗಳ ವರೆಗೆ ಟೆನ್ನಿಸ್ ಆಟವಾಡುತ್ತಿದ್ದು, ಪರೀಕ್ಷೆಗೆ ರಜಾ ದಿನಗಳಲ್ಲಿ ಮಾತ್ರ ತಯಾರಾಗುತ್ತಿದ್ದುದು ಎಲ್ಲರಲ್ಲೂ ಆಶ್ಚರ್ಯ ಮೂಡಿಸಿದೆ. ಪೋಷಕರು ಮಗ ಮಾಡಿದ ಈ ಸಾಧನೆ ಬಗ್ಗೆ ಹೆಮ್ಮೆ ಪಟ್ಟಿದ್ದಾರೆ. ನಾವು ನಮ್ಮ ಮಕ್ಕಳನ್ನು ಸ್ಮಾರ್ಟ್‍ಫೋನ್‍ನಿಂದ ದೂರವಿರಿಸಿದ್ದು, ಇದರಿಂದ ಅವರ ಏಕಾಗ್ರತೆ ಹೆಚ್ಚಾಗಿ ಈ ಸಾಧನೆ ಮಾಡಲು ಅನುಕೂಲವಾಯಿತೆಂದು ಹೇಳಿದರು. ಪ್ರತಿನಿತ್ಯ ಮಕ್ಕಳಿಗೆ ನಾವು ಹೇಳಿಕೊಟ್ಟ ಮೂಲ ಪಾಠಗಳು ಅವರಿಗೆ ಭದ್ರಬುನಾದಿ ಆಗಿದೆ ಎಂದು ತಿಳಿಸಿದರು.

Leave a Reply