ಮಹಿಳೆಯರ ಸುರಕ್ಷತೆಗಾಗಿ ಸೂಕ್ಷ್ಮ ಸಿಸಿಟಿವಿ ಅಳವಡಿಕೆ

ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರಿಗೆ ರಕ್ಷಣೆ ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ಧಿ ಸಚಿವಾಲಯ ನಿರ್ಭಯ ನಿಧಿಯಡಿ ಬೆಂಗಳೂರಿಗೆ 667 ಕೋಟಿ ರೂ ಹಣ ಮಂಜೂರು ಮಾಡಿದ್ದು, 10 ಸಾವಿರ ಸೂಕ್ಷ್ಮ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗುತ್ತಿದೆ.

ಸಾರ್ವಜನಿಕ ಸ್ಥಳಗಳು, ಎನ್ ಜಿ ಒ ಸ್ವಯಂಸೇವಕ ಸ್ಥಳಗಳು, ಪೊಲೀಸ್ ಠಾಣೆಗಳಲ್ಲಿ ಮಹಿಳಾ ನೆರವು ವಿಭಾಗ, ಮಹಿಳೆಯರೇ ಹೆಚ್ಚಾಗಿರುವ ಆಸ್ಪತ್ರೆಗಳು, ಮಹಿಳಾ ಪೊಲೀಸ್ ಠಾಣೆ ಮತ್ತಿತರ ಕಡೆಗಳಲ್ಲೂ ಅಳವಡಿಸುವ ಬಗ್ಗೆ ಶಿಫಾರಸ್ಸು ಬಂದಿದೆ. ಮಹಿಳೆಯರಿಗೆ ಸುರಕ್ಷತೆ ಒದಗಿಸುವ ನಿಟ್ಟಿನಲ್ಲಿ ಮತ್ತಿತರ ಕ್ರಮಗಳನ್ನು ಕೈಗೊಂಡಿರುವುದಾಗಿ ನಗರ ಪೊಲೀಸ್ ಆಯುಕ್ತ ಸುನೀಲ್ ಕುಮಾರ್ ತಿಳಿಸಿದ್ದಾರೆ. ಮೂರು ವರ್ಷದ ಅವಧಿಯಲ್ಲಿ ಕೇಂದ್ರ ಸರ್ಕಾರ ಶೇ. 60 ಹಾಗೂ ರಾಜ್ಯಸರ್ಕಾರ ಶೇ.40ರ ವೆಚ್ಚದಲ್ಲಿ ಈ ಯೋಜನೆ ಅನುಮೋದನೆಗೊಂಡಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸುರಕ್ಷಾ ಮಿತ್ರಾ ಸಂಸ್ಥೆ ಪ್ರಕಾರ, ಬೆಂಗಳೂರಿನ 4,522 ವೃತ್ತಗಳಲ್ಲಿ 10 ಸಾವಿರ ಸಿಸಿಟಿವಿ ಕ್ಯಾಮರಾ ಅಳವಡಿಸಲಾಗುತ್ತಿದ್ದು, 2, 714 ಕಿಲೋ ಮೀಟರ್ ಅಂತರವನ್ನು ಸೆರೆ ಹಿಡಿಯಲಿದೆ . ಸೂಕ್ಷ್ಮ ಕ್ಯಾಮರಾಗಳಿಂದ ಸಾರ್ವಜನಿಕರ ಚಲನವಲನವನ್ನು ಸುಲಭವಾಗಿ ಪತ್ತೆ ಹಚ್ಚಬಹುದಾಗಿದೆ. ಮಹಿಳೆಯರಿಗೆ ರಕ್ಷಣೆ ಒದಗಿಸುವ ಸೇಪ್ ಸಿಟಿ ಯೋಜನೆಯಡಿ ಬೆಂಗಳೂರು, ದೆಹಲಿ, ಕಲ್ಕತ್ತಾ , ಮುಂಬೈ, ಚೆನ್ನೈ, ಹೈದ್ರಾಬಾದ್, ಲಖನೌ , ಅಹಮದಾಬಾದ್ ನಗರಗಳು ಆಯ್ಕೆಯಾಗಿವೆ.

ನಿಗದಿತ ಅವಧಿಯಲ್ಲಿ ಬೀದಿಯಲ್ಲಿ ಸಂಚರಿಸಿದ ಸಾರ್ವಜನಿಕರ ಬಗ್ಗೆ ಈ ಕ್ಯಾಮರಾಗಳು ಮಾಹಿತಿ ನೀಡಲಿವೆ. ಒಂದುವೇಳೆ ಅಗತ್ಯಕ್ಕಿಂತ ಹೆಚ್ಚಿನ ಮಂದಿ ಸಂಚರಿಸಿದರೆ ಕೂಡಲೇ ಮಾಹಿತಿ ರವಾನಿಸಲಾಗಿದೆ ಎಂದು ಬಿಬಿಎಂಪಿ ತನ್ನ ಪ್ರಸ್ತಾವದಲ್ಲಿ ತಿಳಿಸಿದೆ.

Related image

Leave a Reply