ಯಶಸ್ವಿಯಾಗಿ ಹೃದಯ ಕಸಿ ಮಾಡಿ ಎರಡು ಜೀವಗಳನ್ನು ಉಳಿಸಿದ ವೈದ್ಯರು

ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಒಂದೇ ದಿನದಲ್ಲಿ ಸಿಗ್ನಲ್ ಮುಕ್ತ ರಹದಾರಿ ನಿರ್ಮಾಣದ ಮೂಲಕ ಎರಡು ಹೃದಯಗಳನ್ನು ಪ್ರತ್ಯೇಕ ಆಸ್ಪತ್ರೆಗಳ ಮೂಲಕ ನಾರಾಯಣ ಹೃದಯಾಲಯಕ್ಕೆ ಸಾಗಿಸುವ ಮೂಲಕ ಇಬ್ಬರಿಗೆ ಜೀವದಾನ ನೀಡಿರುವ ಘಟನೆ ಮಂಗಳವಾರ ನಡೆದಿದೆ. ಜೀವಂತ ಹೃದಯ ರವಾನೆಗೆ ನಾರಾಯಣ ಹೃದಯಾಲಯದ ಎರಡು ಅತ್ಯಾಧುನಿಕ ವ್ಯವಸ್ಥೆಯ ವಿಶೇಷ ಆ್ಯಂಬುಲೆನ್ಸ್ ಗಳು ಮತ್ತು ತಜ್ಞ ವೈದ್ಯ ಸಿಬ್ಬಂದಿ ಬಳಕೆ ಮಾಡಲಾಗಿತ್ತು. ಅದಕ್ಕೂ ಮುನ್ನ ಸಂಚಾಕ ಪೊಲೀಸರು ನೈಸ್ ರಸ್ತೆಯಲ್ಲಿ ನಿರ್ವಿಘ್ನ ಸಂಚಾರ ಮಾರ್ಗಕ್ಕೆ ಅವಕಾಶ ಕಲ್ಪಿಸಿದ್ದರು.

ಕೆಂಗೇರಿಯ ಬಿಜಿಎಸ್ ಗ್ಲೋಬಲ್ ಆಸ್ಪತ್ರೆ ಮತ್ತು ಹೆಬ್ಬಾಳದ ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ಬದುಕಿನ ಕೊನೆಯ ಕ್ಷಣ ಎಣಿಸುತ್ತಿದ್ದ ದಾನಿಗಳ ಜೀವಂತ ಹೃದಯಗಳನ್ನು ನೈಸ್ ರಸ್ತೆಯಲ್ಲಿ ಗ್ರೀನ್ ಕಾರಿಡಾರ್ ಮೂಲಕ ನಿನ್ನೆ ಬೆಳಿಗ್ಗೆ ನಾರಾಯಣ ಹೃದಯಾಲಯಕ್ಕೆ ರವಾನಿಸಲಾಯಿತು. ಹೆಬ್ಬಾಳದ ಕೊಲಂಬಿಯಾ ಆಸ್ಪತ್ರೆಯಿಂದ ಒಯ್ಯಲಾದ ಹೃದಯ 29 ನಿಮಿಷಗಳಲ್ಲಿ ನಾರಾಯಣ ಹೃದಯಾಲಯವನ್ನು ತಲುಪಿದ್ದರೆ, ಬಿಜಿಎಸ್ ನಿಂದ ತೆಗೆದುಕೊಂಡು ಹೋಗಿದ್ದ ಹೃದಯ 26 ನಿಮಿಷಗಳಲ್ಲಿ ಆಸ್ಪತ್ರೆಗೆ ತಲುಪಿತ್ತು.

ಕೊಲಂಬಿಯಾ ಏಷಿಯಾದಲ್ಲಿ ಈ ಹಿಂದೆ ಕೆಲಸ ಮಾಡಿದ್ದ ಮಾಜಿ ನರ್ಸ್ ಮಾ.10 ರಂದು ದ್ವಿಚಕ್ರ ವಾಹನದಲ್ಲಿ ದೇವಸ್ಥಾನಕ್ಕೆ ಹೊರಟಿದ್ದರು. ಚಿಕ್ಕಬಾಣಾವರ-ಹೆಸರುಘಟ್ಟ ಮುಖ್ಯ ರಸ್ತೆಯಲ್ಲಿದ್ದ ಹಂಪ್ ನಲ್ಲಿ ಅಪಘಾತಕ್ಕೀಡಾಗಿ ತೀವ್ರವಾಗಿ ಗಾಯಗೊಂಡಿದ್ದರು. ಘಟನೆಯಿಂದಾಗಿ ಆಕೆ ಬದುಕುವುದಿಲ್ಲ ಎಂಬ ವಿಷಯ ತಿಳಿದ ಆಕೆಯ ಪತಿ ಅಂಗಾಂಗ ದಾನಕ್ಕೆ ಮುಂದಾಗಿದ್ದರು. ಇದರಿಂದ ರಶ್ಮಿ ಎಂಬುವವರಿಗೆ ಮರು ಜೀವ ದೊರಕಿದೆ.

ಮಾಗಡಿಯ 10 ವರ್ಷದ ಬಾಲಕ ಮಾ.9 ರಂದು ತನ್ನ ಚಿಕ್ಕಪ್ಪನೊಂದಿಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವೇಳೆ ನೆಲಮಂಗಲ ಸಮೀಪ ಅಪಘಾತಕ್ಕೀಡಾಗಿದ್ದ. ಇದರಿಂದ ಮಿದುಳು ನಿಷ್ಕ್ರಿಯಗೊಂಡಿದ್ದರಿಂದ ಸಾವಿನ ಅಂಚಿನಲ್ಲಿದ್ದ ಬಾಲಕನ ಹೃದಯವನ್ನು ಸಂಬಂಧಿಕರ ಆಕಾಂಕ್ಷೆಯಂತೆ ದಾನ ಮಾಡಲಾಗಿತ್ತು. ಇದು ಸಿರಿ ಎಂಬ ಬಾಲಕಿಗೆ ಜೀವದಾನ ನೀಡಿದೆ.

ಬೊಮ್ಮಸಂದ್ರದಲ್ಲಿರುವ ನಾರಾಯಣ ಹೃದಯಾಲಯದಲ್ಲಿ ಹೃದ್ರೋಗದಿಂದ ಬಳಲುತ್ತಿದ್ದ ಬಾಲಕಿ ಎಚ್.ಜೆ.ಸಿರಿ (10) ಮತ್ತು ರಶ್ಮಿ ಪ್ರಸಾದ್ (40) ಎಂಬ ರೋಗಿಗಳಿಗೆ ನಿನ್ನೆ ಯಶಸ್ವಿಯಾಗಿ ಹೃದಯಗಳನ್ನು ಕಸಿ ಮಾಡುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ.

Leave a Reply