ಮತ್ತೆ ಜಾರಿಗೆ ಬಂದ ‘ನೋ ಕ್ಯಾಶ್’ ATM ಗಳು

ರಾಜಧಾನಿ ಬೆಂಗಳೂರು ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿರುವ ಎಟಿಎಂಗಳು ಬಹುತೇಕ ಖಾಲಿ ಹೊಡೆಯುತ್ತಿದ್ದು , ಗ್ರಾಹಕರು ದುಡ್ಡಿಲ್ಲದೆ ಪರದಾಡುವಂತಾಗಿದೆ. ಬಹುತೇಕ ಎಲ್ಲ ಎಟಿಎಂಗಳಲ್ಲಿ ಹಣವಿಲ್ಲ. ಯಂತ್ರ ನಿಷ್ಕ್ರಿಯಗೊಂಡಿದೆ. ತಾಂತ್ರಿಕ ಕಾರಣಗಳಿಂದ ಹಣ ಹಾಕಲು ಸಾಧ್ಯವಿಲ್ಲ ಎಂಬ ನಾಮಫಲಕಗಳೇ ಕಾಣಸಿಗುತ್ತವೆ ಹೊರತು ಹಣ ಮಾತ್ರ ಸಿಗುತ್ತಿಲ್ಲ. ಆದರೆ ಕಳೆದ 10 ದಿನಗಳಿಂದ ಬೆಂಗಳೂರು ಸೇರಿದಂತೆ ರಾಜ್ಯದ ಯಾವುದೇ ಭಾಗದಲ್ಲೂ ಎಟಿಎಂಗಳಲ್ಲಿ ಹಣ ಸಿಗುತ್ತಿಲ್ಲ. ಸಿಕ್ಕರೂ ಅದು ಅಷ್ಟೋ ಇಷ್ಟೋ ಎನ್ನುವಂತಾಗಿದೆ.

ಇದರ ಪರಿಣಾಮ ದಿನನಿತ್ಯದ ವಹಿವಾಟು ನಡೆಸುವ ಗ್ರಾಹಕರು ಪರಿತಪಿಸಬೇಕಾಗಿದೆ. ಎಲವು ಕಡೆ ಹಾಲು, ತರಕಾರಿ, ಔಷಧಿ ಸೇರಿದಂತೆ ದಿನನಿತ್ಯದ ಅಗತ್ಯ ವಸ್ತುಗಳನ್ನು ಕೊಂಡುಕೊಳ್ಳಲು ಹಣವಿಲ್ಲದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಗ್ರಾಹಕರು ಬ್ಯಾಂಕ್‍ಗೆ ತೆರಳಿ ಕಾರಣಗಳನ್ನು ಕೇಳಿದರೆ ಅಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ. ಕೆಲವು ತಾಂತ್ರಿಕ ಕಾರಣಗಳಿಂದ ಈ ರೀತಿಯಾಗಿದೆ. ಕೆಲವೇ ದಿನಗಳಲ್ಲಿ ಯಥಾಸ್ಥಿತಿಗೆ ಬರಲಿದೆ ಎಂದು ಹೇಳುತ್ತಲೇ ಇದ್ದಾರೆ. ಗ್ರಾಹಕರು ಮಾತ್ರ ಪರದಾಡುವ ಪರಿಸ್ಥಿತಿ ನಿಂತಿಲ್ಲ.

ಕೆಲವು ಎಟಿಎಂಗಳಲ್ಲಿ 500 ರೂ. ಸಿಕ್ಕರೆ ಇನ್ನು ಕೆಲವು ಎಟಿಎಂಗಳಲ್ಲಿ 2000 ನೋಟು ಡ್ರಾ ಮಾಡಿಕೊಳ್ಳುವ ಪರಿಸ್ಥಿತಿ ಇದೆ. ಎಲ್ಲಿ ನೋಡಿದರೂ ಎಟಿಎಂಗಳ ಮುಂದೆ ಜನರು ಸರತಿಯಲ್ಲಿ ನಿಲ್ಲುತ್ತಿದ್ದಾರೆ. ಬೆಂಗಳೂರಿನ ಹೃದಯ ಭಾಗವಾದ ಮೆಜೆಸ್ಟಿಕ್, ಗಾಂಧಿನಗರ, ವಿಧಾನಸೌಧ ಸುತ್ತಮುತ್ತ, ಶಿವಾಜಿನಗರ, ರಾಜಾಜಿನಗರ, ಜಯನಗರ ಸೇರಿದಂತೆ ಬಹುತೇಕ ಕಡೆ ಎಟಿಎಂಗಳು ಗ್ರಾಹಕರಿಲ್ಲದೆ ಬಿಕೋ ಎನ್ನುತ್ತಿವೆ. ಅಷ್ಟೋ ಇಷ್ಟೊ ಎಟಿಎಂಗೆ ಹಣ ಹಾಕಿದರೆ ಕ್ಷಣಾರ್ಧದಲ್ಲೇ ಖಾಲಿಯಾಗುತ್ತಿದೆ. ಯಾವುದೇ ಎಟಿಎಂಗೆ ದಿನಕ್ಕೆ ಖಾಸಗಿ ಏಜೆನ್ಸಿ ಅವರು ಇಂತಿಷ್ಟೇ ಹಣವನ್ನು ತುಂಬಬೇಕೆಂಬ ಹಣವಿದೆ. ಅದನ್ನು ಹೊರತುಪಡಿಸಿ ಹೆಚ್ಚಿನ ಮೊತ್ತದಲ್ಲಿ ಹಣವನ್ನು ತುಂಬುವಂತಿಲ್ಲ.

ಅಂದಹಾಗೆ ಎಟಿಎಂಗಳಲ್ಲಿ ದಿಢೀರನೆ ಹಣ ಖಾಲಿಯಾಗಲು ಕಾರಣವೇನು ಎಂಬ ಅಂಶವನ್ನು ಪತ್ತೆ ಮಾಡಲು ಮುಂದಾದರೆ ನಾನಾ ಕಾರಣಗಳು ಹುಟ್ಟಿಕೊಳ್ಳುತ್ತವೆ. ಚುನಾವಣಾ ಆಯೋಗ ಚಾಪೆ ಕೆಳಗೆ ನುಸುಳಲು ಮುಂದಾದರೆ ಅಭ್ಯರ್ಥಿಗಳು ರಂಗೋಲಿ ಕೆಳಗೆ ನುಸುಳುವ ಮಾರ್ಗವನ್ನು ಕಂಡುಕೊಂಡಿದ್ದಾರೆ. ನೋಟು ಅಮಾನೀಕರಣದ ನಂತರ ಬ್ಯಾಂಕ್‍ಗಳಲ್ಲಿ ಹೆಚ್ಚಿನ ಮೊತ್ತದ ಹಣವನ್ನು ಹಾಕುವಂತೆಯೂ ಇಲ್ಲ. ಡ್ರಾ ಮಾಡಿಕೊಳ್ಳುವಂತೆಯೂ ಇಲ್ಲ. ನಿರ್ದಿಷ್ಟ ಮೊತ್ತದಲ್ಲೇ ವ್ಯವಹಾರ ನಡೆಸಬೇಕು. ಇನ್ನು ಹೆಚ್ಚಿನ ಮೊತ್ತವನ್ನು ಮನೆಯಲ್ಲಿಟ್ಟುಕೊಂಡರೆ ಐಟಿ, ಎಸಿಬಿ, ಲೋಕಾಯುಕ್ತ ದಾಳಿ ನಡೆಸಬಹುದೆಂಬ ಭೀತಿ ಕಾಡುತ್ತಿದೆ.

ಈ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಬೆಂಬಲಿಗರು ತಮ್ಮ ಖಾತೆಗೆ ಹಣವನ್ನು ಹಾಕಿಕೊಂಡು ಎಟಿಎಂಗಳಲ್ಲಿ ಇರುವ ಹಣವನ್ನೆಲ್ಲ ಡ್ರಾ ಮಾಡಿಕೊಂಡು ಮುಂಚಿತವಾಗಿ ಶೇಖರಣೆ ಮಾಡಿಕೊಳ್ಳುವ ಯತ್ನಕ್ಕೆ ಕೈ ಹಾಕಿದ್ದಾರೆ. ಚುನಾವಣಾ ಸಂದರ್ಭದಲ್ಲಿ ಹಣ ಹೊಂದಿಸುವುದು ಕಷ್ಟ ಎಂಬುದು ಎಲ್ಲರಿಗೂ ಗೊತ್ತಿದೆ. ಅಭ್ಯರ್ಥಿಗಳ ಮನೆಯಲ್ಲಿ ಹಣ ಇಡುವಂತಿಲ್ಲ. ಒಂದೆಡೆ ಆಯೋಗದ ಕೆಂಗೆಣ್ಣು ಮತ್ತೊಂದೆಡೆ ತನಿಖಾ ಸಂಸ್ಥೆಗಳ ಭೀತಿ. ಹೀಗಾಗಿ ತಮ್ಮ ಆಪ್ತರು, ನಂಬಿಕಸ್ಥರು ಮತ್ತು ಪುಡಾರಿಗಳ ಮನೆಗಳಲ್ಲಿ ಹಣವನ್ನು ಸಂಗ್ರಹಿಸಿಡುವ ಕಾಯಕದಲ್ಲಿ ನಿರತರಾಗಿದ್ದಾರೆ ಎಂದು ತಿಳಿದುಬಂದಿದೆ.

 

Leave a Reply