ಹೆಚ್ ಡಿ ಕೆ ಸ್ಪರ್ಧೆ ಯಾವ ಕ್ಷೇತ್ರದಿಂದ ??

ಬೆಂಗಳೂರು : ರಾಜ್ಯದೆಲ್ಲೆಡೆ ಈಗ ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನ ರಾಜಕೀಯದ್ದೇ ಸುದ್ದಿ..ಹೌದು ಇಷ್ಟು ದಿನಗಳ ಕಾಲ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಟಿಕೆಟ್ ಯಾರಿಗೆ ಎಂಬ ಗೊಂದಲದ ಸುದ್ದಿಯೇ ಎಲ್ಲೆಡೆ ಪ್ರಚಾರದಲ್ಲಿತ್ತು. ಮೊದಲಿಗೆ ಜೆಡಿಎಸ್ ನಾಯಕಿ, ಮಾಜಿ ಶಾಸಕಿ ಅನಿತಾಕುಮಾರಸ್ವಾಮಿ ಸ್ಪರ್ಧೆ ಮಾಡುತ್ತಾರೆ, ಅವರಿಗೆ ಪಕ್ಷದ ಟಿಕೆಟ್ ಪಕ್ಕ ಎನ್ನಲಾದ ಸುದ್ದಿ ಬಹಳ ಜೋರಾಗಿಯೇ ಹಬ್ಬಿತ್ತು. ಆದರೆ ಕಾಲಕ್ರಮೇಣ ನಾವು ಕುಟುಂಬ ರಾಜಕಾರಣ ಮಾಡಲ್ಲ ಎಂದು ಸ್ವತ: ಹೆಚ್.ಡಿ.ಕುಮಾರಸ್ವಾಮಿಯವರೇ ಸ್ಪಷ್ಟಪಡಿಸಿದರು.

ನಂತರದ ದಿನಗಳಲ್ಲಿ ಚನ್ನಪಟ್ಟಣ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಹೆಚ್.ಸಿ.ಜಯಮುತ್ತು ಹೆಸರು ಪ್ರಬಲವಾಗಿಯೇ ಕೇಳಿಬಂತು. ಆದರೆ ಅದು ಕೂಡ ಠುಸ್ ಆಯಿತು. ಇವರಿಬ್ಬರ ನಡುವೆ ಜೆಡಿಎಸ್ ಮುಖಂಡ ನಿಜಲಿಂಗೇಗೌಡರ ಹೆಸರು ಬಂದು ಅದು ಸದ್ದಿಲ್ಲದೇ ಮಾಯವಾಯಿತು. ಈ ಎಲ್ಲದರ ಮಧ್ಯೆ ಈಗ ಮತ್ತೊಂದು ಹೊಸ ಸುದ್ದಿ ಅಂದ್ರೆ ಅದು ಸ್ವತ: ಹೆಚ್.ಡಿ.ಕುಮಾರಸ್ವಾಮಿಯವರೇ ಚನ್ನಪಟ್ಟಣ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಂಬುದು. ಇಂದು ಚನ್ನಪಟ್ಟಣ ಕ್ಷೇತ್ರದ ಜೆಡಿಎಸ್ ಮುಖಂಡರಾದ ಮಾಜಿ ಶಾಸಕ ಎಂ.ಸಿ.ಅಶ್ವಥ್, ಎಸ್.ಲಿಂಗೇಶ್ ಕುಮಾರ್, ರಾಂಪುರ ರಾಜಣ್ಣ, ಹಾಪ್ಕಾಮ್ಸ್ ದೇವರಾಜ್ ಸೇರಿದಂತೆ ಹಲವು ಜನ ಮುಖಂಡರು ಬೆಂಗಳೂರಿನ ಜೆ.ಪಿ.ನಗರದಲ್ಲಿನ ಮನೆಯಲ್ಲಿ ಹೆಚ್.ಡಿ.ಕುಮಾರಸ್ವಾಮಿಯವರನ್ನ ಭೇಟಿ ಮಾಡಿದ್ದಾರೆ. ಈ ವೇಳೆ ಚನ್ನಪಟ್ಟಣದ ಅಭ್ಯರ್ಥಿ ಯಾರು ಎಂಬ ಪ್ರಶ್ನೆಯನ್ನ ಮುಖಂಡರು ಹೆಚ್.ಡಿ.ಕೆ ಗೆ ಕೇಳಿದ್ದಾರೆ. ಈ ವೇಳೆ ಸ್ವತ: ನಾನೇ ಸ್ಪರ್ಧಿಸುತ್ತೇನೆಂದು ಹೆಚ್.ಡಿ.ಕುಮಾರಸ್ವಾಮಿಯವರೇ ತಿಳಿಸಿರುವುದಾಗಿ ಜೆಡಿಎಸ್ ಮುಖಂಡರಾದ ಎಂ.ಸಿ.ಅಶ್ವಥ್ ಹಾಗೂ ಎಸ್.ಲಿಂಗೇಶ್ ಕುಮಾರ್ ತಿಳಿಸಿದ್ದಾರೆ.

ಇನ್ನು ಇದೇ ವಿಚಾರವಾಗಿ ಚನ್ನಪಟ್ಟಣದಲ್ಲಿ ಬುಧವಾರ ಸುದ್ದಿಗೋಷ್ಟಿ ನಡೆಸಿ ಅಧಿಕೃತವಾಗಿ ಪ್ರಕಟಿಸಲಾಗುವುದೆಂದು ಮಾಜಿ ಶಾಸಕ ಎಂ.ಸಿ.ಅಶ್ವಥ್ ತಿಳಿಸಿದ್ದಾರೆ. ಇನ್ನು ಎರಡು ವಿಧಾನಸಭಾ ಕ್ಷೇತ್ರಗಳಾದ ರಾಮನಗರ ಹಾಗೂ ಚನ್ನಪಟ್ಟಣದಲ್ಲಿ ಜೆಡಿಎಸ್ ಪಕ್ಷದಿಂದ ಹೆಚ್.ಡಿ.ಕೆ ಒಬ್ಬರೆ ಸ್ಪರ್ಧೆ ಮಾಡ್ತಾರೆಂದು ಜೆಡಿಎಸ್ ಮುಖಂಡರು ತಿಳಿಸಿದ್ದಾರೆ. ಒಟ್ಟಾರೆ ಚನ್ನಪಟ್ಟಣ ಕ್ಷೇತ್ರದ ಜೆಡಿಎಸ್ ಟಿಕೆಟ್ ವಿಚಾರವಾಗಿ ಇಷ್ಟು ದಿನಗಳ ಕಾಲ ಇದ್ದ ಗೊಂದಲಕ್ಕೆ ಈಗ ಮತ್ತಷ್ಟು ಗೊಂದಲ ಸೃಷ್ಟಿಯಾಗಿರುವುದಂತು ನಿಜ. ಇನ್ನು ಹೆಚ್.ಡಿ.ಕುಮಾರಸ್ವಾಮಿ ಚನ್ನಪಟ್ಟಣದಿಂದ ಸ್ಪರ್ಧಿಸೋದು ಸತ್ಯವಾಗಿದ್ದರೆ ಈ ವಿಚಾರವನ್ನ ಸ್ವತ: ಹೆಚ್.ಡಿ.ಕುಮಾರಸ್ವಾಮಿಯವರೇ ಸ್ಪಷ್ಟಪಡಿಸಬೇಕಿದೆ. ಯಾಕೆಂದ್ರೆ ಈ ಹಿಂದೆಯೂ ಕೂಡ ಅನಿತಾಕುಮಾರಸ್ವಾಮಿಗೆ ಚನ್ನಪಟ್ಟಣ ಕ್ಷೇತ್ರದ ಜೆಡಿಎಸ್ ಟಿಕೆಟ್ ಪಕ್ಕಾ ಎನ್ನಲಾಗ್ತಿತ್ತು ಆದರೆ ಕಾಲಕ್ರಮೇಣ ಇದು ಸುಳ್ಳು ಎಂದು ಹೆಚ್.ಡಿ.ಕುಮಾರಸ್ವಾಮಿಯವರೇ ತಿಳಿಸಿದ್ದರು.

ಒಟ್ಟಾರೆ ಚನ್ನಪಟ್ಟಣದ ಜೆಡಿಎಸ್ ಅಭ್ಯರ್ಥಿ ಯಾರು ಎಂಬ ಪ್ರಶ್ನೆಗೆ ಜೆಡಿಎಸ್ ಹೈಕಮಾಂಡ್ ಆಗಿರುವ ಹೆಚ್.ಡಿ.ದೇವೇಗೌಡರು ಹಾಗೂ ಹೆಚ್.ಡಿ.ಕುಮಾರಸ್ವಾಮಿಯವರೇ ಅಧಿಕೃತವಾಗಿ ಮಾಧ್ಯಮದ ಮುಂದೆ ತಿಳಿಸಿದರೆ ಮಾತ್ರ ನಂಬಬಹುದಾಗಿದೆ. ಅಲ್ಲಿಯವರೆಗೂ ತಾಳ್ಮೆಯಿಂದ ಎಲ್ಲರು ಕಾಯಬೇಕಿದೆ. ಇನ್ನು ಈಗಾಗಲೇ ಚನ್ನಪಟ್ಟಣದಲ್ಲಿ ಜೆಡಿಎಸ್ ಕಾರ್ಯಕರ್ತರು ಇದೇ ವಿಚಾರವಾಗಿ ಪಟಾಕಿಸಿಡಿಸಿ, ಸಿಹಿಹಂಚಿ ಸಂಭ್ರಮಿಸಿದ್ದಾರೆ.

Leave a Reply