ಬೃಹತ್ ಸೋಲಾರ್ ಪಾರ್ಕ್ ಗೆ ಹಾಲಿವುಡ್ ನಟ ಮೆಚ್ಚುಗೆ

ತುಮಕೂರು ಜಿಲ್ಲೆಯ ಪಾವಗಡದಲ್ಲಿ ನಿರ್ಮಾಣವಾಗುತ್ತಿರುವ ಬೃಹತ್ ಸೋಲಾರ್ ಪಾರ್ಕ್‍ಗೆ ವಿಶ್ವ ಮಟ್ಟದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಈ ಕುರಿತು ಹಾಲಿವುಡ್‍ನ ಖ್ಯಾತ ನಟ ಲಿಯೊನಾರ್ಡೊ ಡಿ ಕಾಪ್ರಿಯೊ ಸಹ ಟ್ವಿಟ್ಟರ್‍ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಸೋಲಾರ್ ಪಾರ್ಕ್ ಕುರಿತು ಅಮೆರಿಕದ ಲಾಸ್ ಏಂಜಲೀಸ್ ಟೈಮ್ಸ್ ವರದಿ ಪ್ರಕಟಿಸಿದೆ. `ವಿಶ್ವದ ಅತಿ ದೊಡ್ಡ ಸೋಲಾರ್ ಪಾರ್ಕ್ ಭಾರತದಲ್ಲಿ ನಿರ್ಮಾಣವಾಗುತ್ತಿದೆ’ ಎಂಬ ಶೀರ್ಷಿಕೆಯಡಿ ಸೋಮವಾರ ಸೋಲಾರ್ ಪಾರ್ಕ್ ಬಗ್ಗೆ ವಿಸ್ತೃತ ವರದಿ ಪ್ರಕಟಿಸಲಾಗಿದೆ. ಸೋಲಾರ್ ಪಾರ್ಕ್ ಪೂರ್ಣಗೊಂಡ ಬಳಿಕ 2,000 ಮೆಗಾವಾಟ್ ವಿದ್ಯುತ್ ಉತ್ಪಾದನೆಯಾಗಲಿದ್ದು, 7 ಲಕ್ಷ ಮನೆಗಳಿಗೆ ವಿದ್ಯುತ್ ಪೂರೈಕೆಯಾಗಲಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಹಾಲಿವುಡ್ ನಟ ರೀಟ್ವೀಟ್: ವಿಶ್ವದ ಅತೀ ದೊಡ್ಡ ಸೋಲಾರ್ ಪಾರ್ಕ್ ಭಾರತದಲ್ಲಿ ನಿರ್ಮಾಣವಾಗುತ್ತಿರುವ ಬಗ್ಗೆ ನಟ ಲಿಯೊನಾರ್ಡೊ ಡಿ ಕಾಪ್ರಿಯೊ ಸಹ ಟ್ವಿಟರ್‍ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಲಾಸ್ ಏಂಜಲೀಸ್ ಟೈಮ್ಸ್‍ನ ವರದಿಯನ್ನು ಅವರು ರಿಟ್ವೀಟ್ ಮಾಡುವ ಮೂಲಕ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ `ರಾಹುಲ್ ಗಾಂಧಿ ಫ್ಯಾನ್ಸ್ ಫ್ರಮ್ ಬೆಳಗಾವಿ’ ಫೇಸ್‍ಬುಕ್ ಪುಟದಲ್ಲಿ `ಪಾವಗಡದ ಬೃಹತ್ ಸೌರಪಾರ್ಕ್ ಗೆ ಹಾಲಿವುಡ್ ನಟ ಲಿಯೊನಾರ್ಡೊ ಡಿ ಕಾಪ್ರಿಯೊ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ’ ಎಂದು ಅಪ್ಲೋಡ್ ಮಾಡಿದ್ದಾರೆ.

`2025ರ ವೇಳೆಗೆ ಅವಶ್ಯ ಇರುವ ಶೇ. 50ರಷ್ಟು ವಿದ್ಯುತ್ ಅನ್ನು ನವೀಕರಿಸಬಹುದಾದ ಇಂಧನಗಳ ಮೂಲಕವೇ ಉತ್ಪಾದಿಸುವುದು ನಮ್ಮ ಗುರಿ. ಈ ಕನಸಿಗೆ ನಾವು ಶಂಕುಸ್ಥಾಪನೆ ಮಾಡಿದ್ದೇವೆ. ಮುಂದಿನ 5-7 ವರ್ಷಗಳಲ್ಲಿ ಇದನ್ನು ಸಾಧಿಸುವ ಆಶಾಭಾವನೆ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ. ಜತೆಗೆ, ಲಾಸ್ ಏಂಜಲೀಸ್ ಟೈಮ್ಸ್ ವರದಿಯನ್ನೂ ಉಲ್ಲೇಖಿಸಿದ್ದಾರೆ.

ಕೃಪೆ : ಪಬ್ಲಿಕ್ ಟಿವಿ

Leave a Reply