ಪಿಯುಸಿ ಪರೀಕ್ಷೆಯಲ್ಲಿ ವ್ಯಾಕರಣ ದೋಷದಿಂದಾಗಿ ಒಟ್ಟು 9 ಕೃಪಾಂಕಗಳು

ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವ್ಯಾಕರಣ ದೋಷ ಹಾಗೂ ಅಸಂಬದ್ಧ ಪ್ರಶ್ನೆಗಳಿಂದ ಕೂಡಿದ್ದ ಇಂಗ್ಲಿಷ್‌ನಲ್ಲಿ ಮೂರು ಹಾಗೂ ಭೌತಶಾಸ್ತ್ರದಲ್ಲಿ ಆರು ಕೃಪಾಂಕಗಳನ್ನು ನೀಡಲು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ಧರಿಸಿದ್ದು, ಇಂಗ್ಲಿಷ್‌ನಲ್ಲಿ ಎಲ್ಲ ವಿದ್ಯಾರ್ಥಿಗಳಿಗೆ ಒಂದು ಅಂಕದ ಮೂರು ಕಡ್ಡಾಯ ಪ್ರಶ್ನೆಗಳಿಗೆ ಮೂರು ಹಾಗೂ ಭೌತಶಾಸ್ತ್ರದಲ್ಲಿ ಆರು ಕೃಪಾಂಕ ನೀಡಲು ಸ್ವತಂತ್ರ ವಿಷಯ ತಜ್ಞರ ಸಮಿತಿ ಶಿಫಾರಸು ಮಾಡಿದೆ.

ಈ ಬಾರಿ ಇಂಗ್ಲಿಷ್‌ ಪ್ರಶ್ನೆ ಪತ್ರಿಕೆಯ ಪ್ರಶ್ನೆಗಳಲ್ಲಿ ಸುಮಾರು 30ಕ್ಕೂ ಅಕ ವ್ಯಾಕರಣ ದೋಷಗಳಿದ್ದವು. ಅಲ್ಲದೆ, ತೀರಾ ಅಸಂಬದ್ಧವಾಗಿ ಪ್ರಶ್ನೆಗಳನ್ನು ಕೇಳಲಾಗಿತ್ತು. ಇಂಗ್ಲಿಷ್‌ ಬಾರದವರೊಬ್ಬರಿಗೆ ಪ್ರಶ್ನೆ ಪತ್ರಿಕೆ ಸಿದ್ಧಪಡಿಸುವ ಜವಾಬ್ದಾರಿ ವಹಿಸಿದ್ದರಿಂದ ಈ ರೀತಿಯ ತಪ್ಪುಗಳಾಗಿದ್ದವು. ಅತ್ಯಂತ ಕಳಪೆ ಗುಣಮಟ್ಟದ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿದ್ದಕ್ಕೆ ವಿಷಯ ತಜ್ಞರೇ ಅಸಮಾಧಾನ ಹೊರ ಹಾಕಿದ್ದರು. ಭೌತಶಾಸ್ತ್ರದಲ್ಲಿ ಉತ್ತರಿಸಲಾಗದಂತಹ ಮೂರು ಕಠಿಣ ಪ್ರಶ್ನೆಗಳನ್ನು ಕೇಳಲಾಗಿತ್ತು ಎಂಬ ಆಕ್ಷೇಪಣೆಗಳು ವಿದ್ಯಾರ್ಥಿಗಳ ಕಡೆಯಿಂದ ಬಂದಿದ್ದವು.

”ಮೌಲ್ಯಮಾಪಕರು ಇಲಾಖೆ ಒದಗಿಸಿರುವ ಮಾದರಿ ಉತ್ತರದನ್ವಯ ಎಲ್ಲ ವಿಷಯಗಳ ಮೌಲ್ಯಮಾಪನ ಮಾಡುವಂತೆ ಸೂಚಿಸಲಾಗಿದೆ. ಇಲಾಖೆ ಸೂಚಿಸಿರುವ ವಿಷಯಗಳನ್ನು ಹೊರತುಪಡಿಸಿ ಬೇರೆ ಯಾವುದೇ ವಿಷಯಗಳಿಗೆ ಕೃಪಾಂಕ ನೀಡಬಾರದು,” ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕಿ ಸಿ. ಶಿಖಾ ತಿಳಿಸಿದ್ದಾರೆ.

Leave a Reply