ತೆನೆ ಹೊರಲು ಸಿದ್ಧರಾದ ಸೊಗಡು ಶಿವಣ್ಣ?

ತುಮಕೂರು: ನಿರೀಕ್ಷೆಯಂತೆ ತುಮಕೂರು ನಗರ ಕ್ಷೇತ್ರದ ಬಿಜೆಪಿ ಟಿಕೆಟ್ ಜಿಲ್ಲಾಧ್ಯಕ್ಷ ಜ್ಯೋತಿ ಗಣೇಶ್ ಪಾಲಾಗಿದೆ. ಟಿಕೆಟ್ ಗಾಗಿ ತೀವ್ರ ಹೋರಾಟ ನಡೆಸುತಿದ್ದ ಮಾಜಿ ಸಚಿವ ಸೊಗಡು ಶಿವಣ್ಣಗೆ ನಿರಾಸೆಯಾಗಿದೆ.

ಟಿಕೆಟ್ ಘೋಷಣೆಯಾದ ಬಳಿಕ ಮೌನಕ್ಕೆ ಜಾರಿರುವ ಸೊಗಡು ಶಿವಣ್ಣ ಮಾಧ್ಯಮಗಳಿಂದ ದೂರ ಉಳಿದಿದ್ದಾರೆ. ಅಲ್ಲದೆ ತಮ್ಮ ನಿವಾಸದಲ್ಲಿ ಬೆಂಬಲಿಗರೊಂದಿಗೆ ಸೊಗಡು ಶಿವಣ್ಣ ನಿರಂತರವಾಗಿ ಚರ್ಚೆ ನಡೆಸುತ್ತಿದ್ದಾರೆ.

ಟಿಕೆಟ್ ಕೈ ತಪ್ಪಿದ್ದರಿಂದ ರಾಜ್ಯ ನಾಯಕರ ವಿರುದ್ದ ಅಸಮಾಧಾನಗೊಂಡ ಸೊಗಡು ಶಿವಣ್ಣ ಬಿಜೆಪಿಯಲ್ಲಿನ ಸುಮಾರು 45 ವರ್ಷಗಳಲ್ಲಿ ನ ನಂಟು ಕಳೆದುಕೊಳ್ಳಲು ಚಿಂತಿಸಿದ್ದಾರೆ ಎನ್ನಲಾಗಿದೆ.

ಬಿಜೆಪಿ ತೊರೆದು ಜೆಡಿ ಎಸ್ ಸೇರಿ ತುಮಕೂರು ನಗರದಿಂದ‌ ಸ್ಪರ್ಧಿಸಲು ‌ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಈ ಕುರಿತು ಜೆಡಿಎಸ್ ವರಿಷ್ಟರ ಜೊತೆ ಒಂದು ಸುತ್ತಿನ ಮಾತುಕತೆ ನಡೆದಿದೆ ಎನ್ನಲಾಗಿದೆ.

ಕಳೆದ ನಾಲ್ಕೈದು ದಿನದ ಹಿಂದೆ ತುಮಕೂರು ಗ್ರಾಮಾಂತರ ಜೆಡಿಎಸ್ ಅಭ್ಯರ್ಥಿ ಗೌರಿಶಂಕರ್ ಅವರನ್ನು ಸೊಗಡು ಶಿವಣ್ಣ ಭೇಟಿಯಾಗಿ ಮಾತು ಕತೆ ನಡೆಸಿದ್ರು. ಇವೆಲ್ಲಾ ತಾಳೆ ಹಾಕಿದ್ರೆ ಸೊಗಡು ಕಮಲ ತೊರೆದು ತೆನೆ ಹೊರಲು ತಯಾರಾಗಿರುವುದಕ್ಕೆ ಇನ್ನಷ್ಟು ಪುಷ್ಠಿ ಕೊಡುತ್ತಿದೆ.

ಇಂದು ಮಧ್ಯಾಹ್ನ 3 ಗಂಟೆಗೆ ಬೆಂಬಲಿಗರ ಸಭೆ ನಡೆಸಿ ತಮ್ಮ ಮುಂದಿನ ನಿರ್ಧಾರ ಪ್ರಕಟಿಸಲಿದ್ದಾರೆ ಸೊಗಡು..

Leave a Reply