ವಿಮ್ಸ್‌ನ 50 ಹೆಚ್ಚುವರಿ ಎಂಬಿಬಿಎಸ್ ಸೀಟುಗಳಿಗೆ ಕತ್ತರಿ !!

ಹಲವು ಕೊರತೆಗಳನ್ನು ಮುಂದಿಟ್ಟುಕೊಂಡು ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ (ವಿಮ್ಸ್)ಗೆ ಹೆಚ್ಚುವರಿಯಾಗಿ ನೀಡಿರುವ 50 ಸೀಟುಗಳನ್ನು ಕಡಿತಗೊಳಿಸಲು ಮುಂದಾಗಿರುವ ಭಾರತೀಯ ವೈದ್ಯಕೀಯ ಪರಿಷತ್ (ಎಂಸಿಐ), ಕೊರತೆ ಸರಿದೂಗಿಸುವಂತೆ ಎಚ್ಚರಿಸಿದೆ. 2013ರಲ್ಲಿ ವಿಮ್ಸ್‌ಗೆ 50 ಹೆಚ್ಚುವರಿ (100 ರಿಂದ 150ಕ್ಕೆ ಏರಿಕೆ) ಎಂಬಿಬಿಎಸ್ ಸೀಟುಗಳು ಮಂಜೂರಾಗಿವೆ. ನಾಲ್ಕೈದು ವರ್ಷಗಳಲ್ಲೇ ಈ ಹೆಚ್ಚುವರಿ ಸೀಟುಗಳನ್ನು ಉಳಿಸಿಕೊಳ್ಳುವಲ್ಲಿ ವಿಮ್ಸ್ ಆಡಳಿತ ಕೈಚೆಲ್ಲಿದೆ. ಎಂಸಿಐ ಮುಖ್ಯಸ್ಥೆ ಜಯಶ್ರೀ ಮೆಹ್ತಾ ಅವರ ಅಧ್ಯಕ್ಷತೆಯಲ್ಲಿ ಹೊಸದಿಲ್ಲಿಯಲ್ಲಿ ನಡೆದ ಪರಿಷತ್ತಿನ ಮಾಸಿಕ (ಮಾರ್ಚ್) ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಸರಕಾರಿ ಕಾಲೇಜಿನಲ್ಲಿ ಎಂಬಿಬಿಎಸ್ ಸೀಟು ಉಚಿತ ಪಡೆಯಬೇಕೆಂಬ ಹಲವು ವಿದ್ಯಾರ್ಥಿಗಳ ಕನಸು ಕಮರುವಂತಾಗಿದೆ.

ಕಳೆದೆರಡು ದಿನಗಳ ಹಿಂದೆ ಎಂಸಿಐ ತಂಡ, ವಿಮ್ಸ್‌ಗೆ ಭೇಟಿ ನೀಡಿ ಇಲ್ಲಿನ ಕೊರತೆಗಳ ಬಗ್ಗೆ ಕೂಲಂಕಷ ಪರಿಶೀಲಿಸಿದೆ. ಹೊಸದಿಲ್ಲಿಯಲ್ಲಿ ಮತ್ತೊಮ್ಮೆ ಚರ್ಚಿಸಲಿರುವ ಈ ತಂಡ ತನ್ನ ನಿರ್ಧಾರವನ್ನು ಶೀಘ್ರ ತಿಳಿಸಲಿದೆ. ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಎಂಬಿಬಿಎಸ್‌ನ ಹೆಚ್ಚುವರಿ 50 ಸೀಟುಗಳಿಗೆ ಕೊಕ್ಕೆ ಬೀಳುವ ಲಕ್ಷಣ ದಟ್ಟವಾಗಿದೆ.

ವಿಮ್ಸ್‌ನಲ್ಲಿ ಶೇ.20ರಷ್ಟು ವೈದ್ಯರ ಕೊರತೆಯಿದೆ. ಓಪಿಡಿಯಲ್ಲಿ ಮಧ್ಯಾಹ್ನ 2ರವರೆಗೆ 1200 ರೋಗಿಗಳನ್ನು ತಪಾಸಣೆ ಮಾಡಬೇಕೆಂದಿದ್ದರೂ 1015 ರೋಗಿಗಳ ತಪಾಸಣೆ ನಡೆಸಲಾಗುತ್ತಿದೆ. ರೇಡಿಯೊ ಡಯಾಗ್ನಸಿಸ್ ಡಿಪಾರ್ಟ್‌ಮೆಂಟ್‌ನಲ್ಲಿ 6 ಮೊಬೈಲ್ ಎಕ್ಸ್‌ರೇ ಯಂತ್ರಗಳ ಬದಲು 3 ಯಂತ್ರಗಳು ಕಾರ್ಯನಿರ್ವಹಿಸುತ್ತಿವೆ. 6 ಸ್ಟಾಸ್ಟಿಕ್ ಎಕ್ಸ್ ರೇ ಯಂತ್ರಗಳ ಬದಲು ನಾಲ್ಕು ಯಂತ್ರಗಳನ್ನು ಅಳವಡಿಸಲಾಗಿದೆ. ಇನ್ನೂ ಕೆಲವು ಕೊರತೆಗಳನ್ನು ಎಂಸಿಐ ತಂಡ ಪತ್ತೆ ಹಚ್ಚಿದೆ.

8 ವರ್ಷಗಳಿಂದ ವೈದ್ಯರ ನೇಮಕವಿಲ್ಲ:ವಿಮ್ಸ್‌ಗೆ ನಿತ್ಯ ಸಾವಿರಕ್ಕೂ ಹೆಚ್ಚು ರೋಗಿಗಳು ದಾಖಲಾಗುತ್ತಾರೆ. ಬಳ್ಳಾರಿ, ರಾಯಚೂರು, ಕೊಪ್ಪಳ, ಆಂಧ್ರಪ್ರದೇಶದ ಅನಂತಪುರ, ಕರ್ನೂಲ್ ಜಿಲ್ಲೆಗಳ ಜನರಿಗೂ ವಿಮ್ಸ್ ನೆಚ್ಚಿನ ಚಿಕಿತ್ಸಾ ತಾಣವಾಗಿದೆ. ಆದರೆ, 2010ರಿಂದ ಇಲ್ಲಿಯವರೆಗೆ ವೈದ್ಯರ ನೇಮಕಾತಿ ನಡೆದಿಲ್ಲ. ನೇಮಕಾತಿಗೆ ಸಂಬಂಧಿಸಿ ಈ ಹಿಂದೆ ಎರಡ್ಮೂರು ಸಲ ನೋಟಿಫಿಕೇಷನ್ ಮಾಡಲಾಗಿತ್ತು. ಆದರೆ, ನೇಮಕಾತಿಯಲ್ಲಿ ಕೆಲವು ದೋಷಗಳನ್ನು ಪತ್ತೆಹಚ್ಚಿದ ನೊಂದ ಅಭ್ಯರ್ಥಿಗಳು ನ್ಯಾಯಾಲಯದ ಮೊರೆ ಹೋಗಿದ್ದರಿಂದ ನೇಮಕಾತಿ ಪ್ರಕ್ರಿಯೆಗೆ ಗ್ರಹಣ ಹಿಡಿದಿದೆ. 8 ವರ್ಷಗಳಿಂದ ವೈದ್ಯರ ನೇಮಕವಾಗದೆ ಪರೆದಾಡುವಂತಾಗಿದೆ. ವಿಮ್ಸ್‌ನಲ್ಲಿ ವೈದ್ಯರ ಕೊರತೆಯನ್ನು ಎಂಸಿಐ ಗಂಭೀರವಾಗಿ ಪರಿಗಣಿಸಿದೆ.

Image result for about to be doctor

Leave a Reply