ಕರಟ-ಕಾಯಿಗಳು ಹಾಗೂ ಶುಷ್ಕ ಫಲಗಳಿಂದ ಬ್ರಿಟನ್ ರಾಜ ಮನೆತನದ ಪುಟ್ಟ ಪ್ರತಿರೂಪಗಳನ್ನು ರೂಪಿಸಿ ಗಮನಸೆಳೆದಿದ್ದಾರೆ. ಬಾದಾಮಿ, ತೆಂಗಿನಕಾಯಿ ಸೇರಿದಂತೆ ವಿವಿಧ ಕಾಯಿಗಳು ಮತ್ತು ಬೀಜಕೋಶಗಳನ್ನು ಬಳಸಿ ಬ್ರಿಟಿಷ್ ರಾಯಲ್ ಫ್ಯಾಮಿಲಿ ಸದಸ್ಯರ ಪುಟ್ಟ ಪ್ರತಿರೂಪಗಳನ್ನು ಸೃಷ್ಟಿಸಿರುವ ಕಲಾವಿದ ಸ್ಟೀವ್ ಕ್ಯಾಸಿನೋ ಅವರ ನೈಪುಣ್ಯ ಬೆರಗು ಮೂಡಿಸುತ್ತದೆ. ಪ್ರತಿಭಾವಂತ ಕಲಾವಿದರು ಯಾವ ವಸ್ತುವಿನಲ್ಲಿ ಬೇಕಾದರೂ ಅತ್ಯಾಕರ್ಷಕ ಕಲಾಕೃತಿಗಳನ್ನು ಸೃಷ್ಟಿಸಬಲ್ಲರು. ಇದಕ್ಕೊಂದು ಸ್ಪಷ್ಟ ನಿದರ್ಶನ ಅಮೆರಿಕದ ಓಹಿಓ ಪ್ರಾಂತ್ಯದ ಸ್ಟೀವ್ ಕ್ಯಾಸಿನೋ.
ಕಾಯಿ ಕರಟಗಳ ಮೇಲೆ ಬ್ರಿಟನ್ ಮಹಾರಾಜಿ ಎಲಿಜೆಬತ್, ರಾಜಕುಮಾರ ಚಾಲ್ರ್ಸ್, ಯುವರಾಜ್ ಹ್ಯಾರಿ ಮತ್ತು ಆತನ ಪ್ರಿಯತಮೆ ಮತ್ತು ನಟಿ ಮೇಘನ್ ಮಾರ್ಕೆಲ್ ಸೇರಿದಂತೆ ರಾಜಪರಿವಾರದ ಗಣ್ಯಾತಿಗಣ್ಯರ ಪ್ರತಿರೂಪಗಳನ್ನು ಕೆತ್ತಿ ಅವುಗಳಿಗೆ ಬಣ್ಣ ತುಂಬುವುದು ಅತ್ಯಂತ ಸೂಕ್ಷ್ಮ ಮತ್ತು ತಾಳ್ಮೆಯ ಕಾರ್ಯ. ಇದಕ್ಕಾಗಿ ಕ್ಯಾಸಿನೋ ತೆಗೆದುಕೊಂಡ ಸಮಯ 362 ಗಂಟೆಗಳು. ಲಂಡನ್ ಮೂಲದ ಪ್ರಖ್ಯಾತ ಮಿಲ್ಕ್ ಕಂಪನಿ ಫ್ಲೆನಿಶ್ ಪ್ರಚಾರಕ್ಕಾಗಿ ಈ ಪುಟ್ಟ ಕಲಾಕೃತಿಗಳು ರೂಪುಗೊಂಡಿವೆ.