ಅತ್ಯಾಚಾರ ಪ್ರಕರಣದಲ್ಲಿ ಜೈಲು ಸೇರಿರುವ 77 ವರ್ಷದ ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪು ಮತ್ತು ಇತರ ಇಬ್ಬರು ಆರೋಪಿಗಳು ದೋಷಿಗಳು ಎಂದು ಜೋಧ್ಪುರ ನ್ಯಾಯಾಲಯ ತೀರ್ಪು ಪ್ರಕಟಿಸಿದೆ. ಇಬ್ಬರು ಆರೋಪಿಗಳನ್ನು ನಿರ್ದೋಷಿಗಳು ಎಂದು ಕೋರ್ಟ್ ತನ್ನ ತೀರ್ಪಿನಲ್ಲಿ ತಿಳಿಸಿದೆ.ಜೋಧಪುರ ಸೆಂಟ್ರಲ್ ಜೈಲಿನಲ್ಲಿರುವ ವಿಶೇಷ ನ್ಯಾಯಾಲಯದಲ್ಲಿ ನ್ಯಾಯಾಧೀಶ ಮಧುಸೂದನ್ ಶರ್ಮಾ ಅವರು ಬುಧವಾರ ಬೆಳಗ್ಗೆ 10.30ರ ಸುಮಾರಿಗೆ ತೀರ್ಪು ಪ್ರಕಟಿಸಿದರು.
- ಅಸಾರಾಂ ಬಾಪು ಜೋಧ್ಪುರ ಹೊರವಲಯದ ತನ್ನ ಆಶ್ರಮದಲ್ಲಿ 16 ವರ್ಷದ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ 2013ರಲ್ಲಿ ಬಂಧನಕ್ಕೊಳಗಾದರು.
- ಮಕ್ಕಳ ಕಳ್ಳಸಾಗಣೆ, ಅತ್ಯಾಚಾರ, ಮಕ್ಕಳ ಮೇಲಿನ ಲೈಂಗಿಕ ಅಪರಾಧಗಳನ್ನು ಅಸಾರಾಂ ಎದುರಿಸುತ್ತಿದ್ದಾರೆ.
- ಅಸಾರಾಂ ಬಾಪು ಅವರನ್ನು 2013 ಸೆ. 1ರಂದು ಇಂದೋರ್ನಲ್ಲಿ ಬಂಧಿಸಲಾಯಿತು. ನಂತರ ಅವರನ್ನು ಜೋಧ್ಪುರ ಕಾರಾಗೃಹಕ್ಕೆ ರವಾನಿಸಲಾಯಿತು.
- ಈ ಆರೋಪಗಳಿರುವಾಗಲೇ ಮತ್ತೊಂದು ಅತ್ಯಾಚಾರ ಪ್ರಕರಣದಲ್ಲಿ ಅಸಾರಾಂ ಸಿಲುಕಿಕೊಂಡರು. ಗುಜರಾತ್ನ ಇಬ್ಬರು ಸೋದರಿಯರು ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದಾಗಿ ಅಸಾರಾಂ ಮತ್ತು ಆವರ ಪುತ್ರ ನಾರಾಯಣ ಸಾಯಿ ವಿರುದ್ಧ ಪ್ರತ್ಯೇಕವಾಗಿ ದೂರು ದಾಖಲಿಸಿದ್ದರು.
- ಅಸಾರಾಂ ಬಾಪು ಮೇಲಿನ ಆರೋಪಗಳಿಗೆ ಸಂಬಂಧಿಸಿದಂತೆ ನಾಲ್ಕು ವರ್ಷಗಳಿಂದ ವಿಚಾರಣೆ ನಡೆಯುತ್ತಿದ್ದು, ಇದೇ ಅವಧಿಯಲ್ಲಿ 9 ಸಾಕ್ಷಿಗಳ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಅದರಲ್ಲಿ 3 ಮಂದಿ ಮೃತಪಟ್ಟಿದ್ದಾರೆ.
- ಜಾಮೀನು ಕೋರಿ ಅಸಾರಾಂ ಸಲ್ಲಿಸಿದ್ದ 12 ಅರ್ಜಿಗಳು ತಿರಸ್ಕೃತಗೊಂಡಿವೆ. ವಿಚಾರಣಾಧಿನ ನ್ಯಾಯಾಲಯದಲ್ಲಿ 6, ರಾಜಸ್ಥಾನ ಹೈಕೋರ್ಟ್ನಿಂದ 3, ಸುಪ್ರೀಂ ಕೋರ್ಟ್ನಲ್ಲಿ 3 ಅರ್ಜಿಗಳು ತಿರಸ್ಕೃತಗೊಂಡಿವೆ.
ಕೆಲವು ತಿಂಗಳ ಹಿಂದೆ ಸ್ವಯಂಘೋಷಿತ ದೇವಮಾನವ ಗುರ್ಮೀತ್ ರಾಮ್ ರಹೀಮ್ ಸಿಂಗ್ ಅತ್ಯಾಚಾರ ಪ್ರಕರಣದ ತೀರ್ಪು ಪ್ರಕಟವಾದ ಸಂದರ್ಭದಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು. ರಾಜಸ್ತಾನ, ಗುಜರಾತ್ ಮತ್ತು ಹರಿಯಾಣಗಳಲ್ಲಿ ಅಸಾರಾಂ ಬಾಪು ಅವರ ಅನುಯಾಯಿಗಳು ಅಧಿಕ ಸಂಖ್ಯೆಯಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಮೂರು ರಾಜ್ಯಗಳ ಆಯಕಟ್ಟಿನ ಪ್ರದೇಶಗಳಲ್ಲಿ ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದ್ದು, ಬಿಗಿ ಭದ್ರತಾ ವ್ಯವಸ್ಥೆ ಮಾಡಲಾಗಿದೆ.ಅಸಾರಾಂ ಬಾಪು ಬಿಡುಗಡೆಯಾಗಲಿ ಎಂದು ಅವರ ಅನುಯಾಯಿಗಳು ದೇಶಾದ್ಯಂತ ಇರುವ ಅವರ 400 ಕ್ಕೂ ಹೆಚ್ಚು ಆಶ್ರಮಗಳಲ್ಲಿ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು.