ಕುಮಾರಸ್ವಾಮಿ ತರಲಿದ್ದಾರೆ ಇಸ್ರೇಲ್ ಕೃಷಿ.ಇಲ್ಲಿದೆ ಸಂಪೂರ್ಣ ಮಾಹಿತಿ.

ಇಸ್ರೇಲ್ ಕೃಷಿಯ ಬಗ್ಗೆ ಕಿರು ಪರಿಚಯ.

ಇಸ್ರೇಲಿನ ಕೃಷಿ ವಿಧಾನದಲ್ಲಿ ಗಣನೀಯ ಬದಲಾವಣೆಗಳಾಗಿವೆ. ಇಲ್ಲಿನ ಕೃಷಿಯ ಒಂದು ಪ್ರಮುಖ ಅಂಶವೆಂದರೆ, ಆಧುನಿಕ ಕೃಷಿ ವಿಧಾನಗಳಿಗೆ ಹೊಂದಿಕೊಳ್ಳಲು ಸಹಾಯಕವಾಗುತ್ತಿರುವ ಸಹಕಾರಿ ಬೇಸಾಯಕ್ರಮ. ಇಲ್ಲಿ ಅನೇಕ ವಿಧವಾದ ಸಹಕಾರಿ ಬೇಸಾಯ ಪದ್ಧತಿಗಳಿವೆ. ಇವೆಲ್ಲಕ್ಕೂ ಆಧಾರಭೂತವಾಗಿ ಮೊಷಾವ್ ಮತ್ತು ಕಿಬುಟ್ಜ್ ಎಂಬ ಎರಡು ಹಿಡುವಳಿ ವ್ಯವಸ್ಥೆಗಳಿವೆ. ಮೊಷಾವ್ ಎಂಬುದು ಸಣ್ಣ ಹಿಡುವಳಿದಾರರ ಸಹಕಾರಿ ಬೇಸಾಯ ಗ್ರಾಮ. ಇಲ್ಲಿನ ಪ್ರತಿ ಹಿಡುವಳಿಯೂ ಸಮಾನ ಪ್ರಮಾಣದ್ದಾಗಿದ್ದು, ರೈತ ತನ್ನ ಪಾಲಿನ ಭೂಮಿಯ ಮೇಲೆ ಸಾಕಷ್ಟು ಶ್ರಮಪಟ್ಟು ದುಡಿಯುತ್ತಾನೆ. ತನ್ನ ಜಮೀನಿನ ಉತ್ಪಾದನೆಗೆ ರೈತನೇ ಜವಾಬ್ದಾರನಾಗಿದ್ದರೂ ಗ್ರಾಮ ಸಹಕಾರಿ ವ್ಯವಸ್ಥೆ ಈತನಿಗೆ ಆರ್ಥಿಕ ಭದ್ರತೆ ನೀಡುವ ಹೊಣೆ ಹೊರುತ್ತದೆ. ಅದು ಈತನಿಗೆ ಹಣವನ್ನೂ ಉತ್ಪನ್ನಕ್ಕೆ ಮಾರುಕಟ್ಟೆಯನ್ನೂ ಒದಗಿಸುತ್ತದೆ. ಕಿಬುಟ್ಜ್ ಎಂಬುದು ಇನ್ನೊಂದು ಬಗೆಯ ಹಿಡುವಳಿ ವ್ಯವಸ್ಥೆ. ಇದು ಇಸ್ರೇಲಿಗೇ ವಿಶಿಷ್ಟವಾದ ಸಾಮೂಹಿಕ ಹಿಡುವಳಿ ವ್ಯವಸ್ಥೆ. ಈ ವ್ಯವಸ್ಥೆಯಲ್ಲಿ ಸಂಪತ್ತನ್ನು ಸಾಮೂಹಿಕವಾಗಿ ರೂಢಿಸಿ, ಶ್ರಮವನ್ನು ಸಾಮೂಹಿಕವಾಗಿ ವಿನಿಯೋಗಿಸಿ, ಆದಾಯ ವ್ಯಯಗಳನ್ನು ಸಾಮೂಹಿಕವಾಗಿ ನಿರ್ವಹಿಸಿ, ಬೇಸಾಯ ನಡೆಸಲಾಗುತ್ತದೆ. ಪ್ರತಿಯೊಬ್ಬ ರೈತನೂ ತನ್ನ ಶಕ್ತ್ಯನುಸಾರ ಕೆಲಸ ಮಾಡಬೇಕು. ಆತನಿಗೆ ಕೂಲಿಯ ರೂಪದಲ್ಲಿ ಹಣ ಕೊಡಲಾಗುವುದಿಲ್ಲ. ಆದರೆ ಕಿಬುಟ್ಜ್ ಆತನಿಗೆ ಅಗತ್ಯವಿರುವ ಇಲ್ಲ ಜೀವನೋಪಯೋಗಿ ವಸ್ತುಗಳನ್ನೂ ಒದಗಿಸುತ್ತದೆ. ಇವೆರಡು ಕ್ರಮಗಳು ಬಹಳ ಮಟ್ಟಿಗೆ ಇಸ್ರೇಲಿನಲ್ಲಿ ಜಾರಿಯಲ್ಲಿವೆ. ಇಸ್ರೇಲಿನ ಬೇಸಾಯ ಯೋಗ್ಯಭೂಮಿ 1948-49ರಲ್ಲಿ 4 ಲಕ್ಷ ಎಕರೆಯಿದ್ದು, ಅದು 1965-66ರಲ್ಲಿ 10 ಲಕ್ಷ ಎಕರೆಗೆ ಏರಿತು. ಇದರಲ್ಲಿ ಸುಮಾರು 4 ಲಕ್ಷ ಎಕರೆಗಳಿಗೆ ನೀರಾವರಿ ಸೌಲಭ್ಯವಿದೆ.

ಕೃಷಿಯ ಉತ್ಪನ್ನವನ್ನು ವರ್ಷಂಪ್ರತಿ 8%-10% ರಷ್ಟು ಹೆಚ್ಚಿಸುವ ಆಶಯವನ್ನಿಟ್ಟುಕೊಳ್ಳಲಾಗಿದೆ. ಇಸ್ರೇಲಿನ ಅತಿಮುಖ್ಯ ಬೆಳೆಯೆಂದರೆ ಜಂಬೀರ ಹಣ್ಣು. ಇವನ್ನು ಹೆಚ್ಚಾಗಿ (ಒಟ್ಟು ಉತ್ಪನ್ನದ 45%) ನಿರ್ಯಾತ ಮಾಡಲಾಗುತ್ತಿದೆ. 1966-67ರಲ್ಲಿ 10,82,000 ಟನ್‍ಗಳಷ್ಟು ಜಂಬೀರ ಫಲಗಳನ್ನು ಉತ್ಪಾದಿಸಲಾಗಿತ್ತು. ಬ್ರಿಟನ್, ಪಶ್ಚಿಮ ಜರ್ಮನಿ ಮತ್ತು ಫ್ರಾನ್ಸ್ ಮುಖ್ಯ ಗ್ರಾಹಕ ರಾಷ್ಟ್ರಗಳು.

ಅಧಿಕಾರ ಹಿಡಿಯುವ ಮುನ್ನವೇ ಪ್ರವಾಸ ಮಾಡಿ ಬಂದಿದ್ದ ಸಿಎಂ ಕುಮಾರಸ್ವಾಮಿ.

ಕೃಷಿ, ಹೈನೋದ್ಯಮ ಅಧ್ಯಯನಕ್ಕೆಂದು ಇಸ್ರೇಲ್ ಪ್ರವಾಸ ಕೈಗೊಂಡಿದ್ದ ಕುಮಾರಸ್ವಾಮಿ.

ಇಸ್ರೇಲ್ ನಲ್ಲಿ ಹಸು ದಿನಕ್ಕೆ ಮೂರು ಬಾರಿ ಹಾಲುಕೊಡುತ್ತೆ. ಸಾವಿರಾರು ಹಸುಗಳನ್ನ ನೋಡಿಕೊಳ್ಳೋದು ಕೇವಲ ಹತ್ತಾರು ಜನ ಅಷ್ಟೆ. ವರ್ಷಕ್ಕೆ 25 ದಿನ ಮಳೆಯಾಗುವ ಆ ಪ್ರದೇಶದಲ್ಲಿ ಹನಿ ನೀರಾವರಿ ಮತ್ತು ಹೈನೋದ್ಯಮ ವಿಶ್ವಕ್ಕೇ ಮಾದರಿ. ಅಲ್ಲಿಯ ಆ ತಂತ್ರಜ್ಞಾನವನ್ನ ನಮ್ಮಲ್ಲಿಗೆ ತರುವ ಪ್ರಯತ್ನ ನಡೆಸಿದ್ದಾರೆ ಮಾಜಿ ಸಿಎಂ ಕುಮಾರಸ್ವಾಮಿ. ಅಲ್ಲಿ ವರ್ಷಕ್ಕೆ 20 ಸೆಂಟಿಮೀಟರ್ ಮಾತ್ರ ಮಳೆ, ಆದ್ರೂ ಅಲ್ಲಿನ ಕೃಷಿ ವಿಶ್ವಕ್ಕೇ ಮಾದರಿ.
ದಿಗ್ವಿಜಯ ನ್ಯೂಸ್’ನಿಂದ ಇಸ್ರೇಲ್ ಕೃಷಿ ಬಗ್ಗೆ ಪ್ರೇರಿತಗೊಂಡಿದ್ದ ಕುಮಾರಣ್ಣ.

ಇಸ್ರೇಲ್ ಕೃಷಿ ಕುಮಾರಸ್ವಾಮಿ ಕನಸು!

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಒಂದು ಅವಕಾಶ ಕೊಡಿ. ನೀವು ಹೇಳಿದ ರೀತಿ ಕೆಲಸ ಮಾಡಲಿಲ್ಲ ಅಂದರೆ ಮತ್ತೆ ನಿಮಗೆ ಮುಖ ತೋರಿಸಲ್ಲ. ಇಸ್ರೇಲ್ ಪ್ರವಾಸ ವೇಳೆ ಅಲ್ಲಿನ ಕೃಷಿ ಕುರಿತು ನಾನು ತಿಳಿದುಕೊಂಡು ಬಂದಿರುವುದನ್ನು 5 ವರ್ಷದಲ್ಲಿ ಜಾರಿ ಮಾಡಿ ತೋರಿಸುತ್ತೇನೆ ಎಂದು ದಿಗ್ವಿಜಯ್ ನ್ಯೂಸ್ 24×7ಗೆ ನೀಡಿದ ನೇರ ಸಂದರ್ಶನದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರಾಜ್ಯದ ಜನತೆಗೆ ಭರವಸೆ ನೀಡಿದ್ದಾರೆ. ಇಸ್ರೇಲ್ ಪ್ರವಾಸದ ಬಳಿಕ ದಿಗ್ವಿಜಯ್ ನ್ಯೂಸ್ 24×7 ನೊಂದಿಗೆ ಅವರು ಮೊದಲ ಬಾರಿಗೆ ಮಾತನಾಡಿದ್ದು, ಪ್ರವಾಸದ ಅನುಭವವನ್ನು ವಿಸõತವಾಗಿ ಹಂಚಿಕೊಂಡಿದ್ದಾರೆ.

* ದಿಗ್ವಿಜಯ ನ್ಯೂಸ್ನ ‘ಕೃಷಿ ಖುಷಿ‘ ಕಾರ್ಯಕ್ರಮ ನಿಮಗೆ ಹೇಗೆ ಸ್ಪೂರ್ತಿಯಾಯ್ತು?

30 ವರ್ಷಗಳ ಬಳಿಕ ಪ್ರಧಾನಿ ನರೇಂದ್ರ ಮೋದಿ ಇಸ್ರೇಲ್ ಹೋಗಿ ಬಂದರು. ಅದೇ ಸಂದರ್ಭದಲ್ಲಿ ದಿಗ್ವಿಜಯ ನ್ಯೂಸ್ ವಾಹಿನಿಯಲ್ಲಿ ಅಲ್ಲಿನ ಕೃಷಿ ಬಗ್ಗೆ ಸರಣಿ ವಿಶೇಷ ಕಾರ್ಯಕ್ರಮ ಪ್ರಸಾರವಾಯಿತು. ಆ ಕಾರ್ಯಕ್ರಮ ನನಗೆ ಸ್ಪೂರ್ತಿ ನೀಡಿತು. ನಾನು ಅಲ್ಲಿಗೆ ಹೋಗಿ ಅಧ್ಯಯನ ಮಾಡಿ ಬರಬೇಕೆಂದು ನಿರ್ಧಾರ ಮಾಡಿದೆ. ಇಸ್ರೇಲ್ ಜನತೆ ಹಲವು ಆತಂಕಗಳ ನಡುವೆಯೂ ಕೃಷಿಯಲ್ಲಿ ಯಶಸ್ಸು ಗಳಿಸಿದ್ದಾರೆ. ನೀರಿನ ಕೊರತೆ ಇರುವ ದೇಶ ಇಂದು ಪ್ಯಾಲೇಸ್ತೇನ್ ಮತ್ತು ಜೋರ್ಡನ್ಗೆ ನೀರು ಪೂರೈಕೆ ಮಾಡುತ್ತಿದೆ. ಇರುವ ನೀರನ್ನು ಸದ್ಬಳಕೆ ಮಾಡಿಕೊಳ್ಳುವ ಯೋಜನೆ ಇಲ್ಲದೆ ಆಂತರಿಕ ಕಚ್ಚಾಟದಲ್ಲಿ ನಾವು ತೊಡಗಿದ್ದೇವೆ. ಕೃಷಿಕರಿಗೆ ನಾವು ಶಿಕ್ಷಣ ಕೊಡುತ್ತಿಲ್ಲ. ಎಲ್ಲ ಸರ್ಕಾರಗಳು ಎಡವಿರುವುದು ಎದ್ದು ಕಾಣುತ್ತದೆ. ರೈತರ ಆತ್ಮಹತ್ಯೆ ನಿಂತಿಲ್ಲ. ಪ್ರತಿಪಕ್ಷಗಳು ಸಾಲಮನ್ನಾ ಮಾಡಿ ಎಂದು ಹೇಳುತ್ತೇವೆ. ಸಾಲಮನ್ನಾ ಮಾಡಿದರೆ ಅವರ ಬದುಕು ಬಂಗಾರ ಆಗಲ್ಲ. ರೈತ ಕೃಷಿ ಮಾಡುವುದು ಹೇಗೆ ಅನ್ನೋದನ್ನು ತೋರಿಸಿಕೊಡಬೇಕಿದೆ. ಪ್ರತಿ ಕುಟುಂಬಕ್ಕೂ ದುಡಿಯುವ ವಾತಾವರಣ ನಿರ್ಮಾಣ ಮಾಡಬೇಕಿದೆ. ಎರಡು ವರ್ಷ ನಾವು ಕಷ್ಟ ಪಟ್ಟರೆ ರೈತರು ಸರ್ಕಾರಕ್ಕೆ ಎಲ್ಲವನ್ನೂ ಕೊಡುವಷ್ಟು ರೀತಿ ಬೆಳೆದು ನಿಂತಿರುತ್ತಾರೆೆ. ರಾಜಕಾಣಿಗಳು ಲೂಟಿ ಮಾಡಿದ್ದು ಸಾಕು. ಮುಂದೆ ಜನರ ಸೇವೆ ಮಾಡೋಣ.

* ನಮ್ಮ ದೇಶ ಹಾಗೂ ಇಸ್ರೇಲ್ನ ವೈರುಧ್ಯಕ್ಕೆ ಕಾರಣವೇನು?

ಸರ್ಕಾರದ ಬೆಂಬಲಿಕ್ಕಿಂತಲೂ ಹೆಚ್ಚಾಗಿ ಅಲ್ಲಿನ ಜನತೆ ಹೆಚ್ಚು ಆಸಕ್ತರಾಗಿದ್ದಾರೆ. ಅವರು ಹೊಸದನ್ನು ಕಲಿಯುವುದರಲ್ಲಿ ನಿಸ್ಸಿಮರು. ಸಂಶೋಧನೆ ಮಾಡುವ ಹಲವು ಖಾಸಗಿ ಕಂಪನಿಗಳಿವೆ. ಜೀವಶಾಸ್ತ್ರ ಪದವೀಧರ ಪಾಚಿ ತಯಾರಿಸಿ ಪೋ›ಟೀನ್ ಆಗಿ ಪರಿವರ್ತನೆ ಮಾಡುತ್ತಾನೆ. ಜನೆಟಿಕ್ ಟೆಕ್ನಾಲಜಿಗೆ ಬಳಸಿಕೊಳ್ಳುತ್ತಿದ್ದಾನೆ.

* ಕೃಷಿ ಆಧುನೀಕರಣ ಆಗುವುದಕ್ಕೆ ಅಲ್ಲಿನ ಸರ್ಕಾರ ಸವಲತ್ತು ನೀಡಲಿದೆಯೇ?

ನೀರಿನ ಕೊರತೆ ನೀಗಿಸಲು ಅಲ್ಲಿನ ಸರ್ಕಾರ ಯೋಜನೆ ರೂಪಿಸಿದೆ. ಅಲ್ಲಿ ನೀರಿಗೆ ಸರ್ಕಾರವೇ ಮಾಲಿಕ. ಸಮುದ್ರದ ನೀರನ್ನು ಕೃಷಿಗೆ ಶೇ.63 ನೀಡುತ್ತಿದ್ದಾರೆ. ಜೀವನಕ್ಕೆ ಬಳಸಿದ ನೀರನ್ನೂ ಮತ್ತೆ ಕೃಷಿಗೆ ಬಳಸುತ್ತಾರೆ. ಆದರೆ, ಅದನ್ನು ಮೂರು ಹಂತದಲ್ಲಿ ಶುದ್ಧೀಕರಣ ಮಾಡುತ್ತಾರೆ. ಬೆಂಗಳೂರಿಗೆ ಬರುವ ತರಕಾರಿ ನೋಡಿದರೆ ನಾವು ತಿನ್ನುವುದೂ ಸಹ ಕಷ್ಟವಾಗುತ್ತೆ. ಫ್ಲೋಯಿಂಗ್ ವಾಟರ್ನಲ್ಲಿ ಬೆಳೆಗೆ ಎಷ್ಟು ಬೇಕೋ ಅಷ್ಟು ಬಳಕೆಯಾಗುತ್ತೆ. ಹನಿ ನೀರಾವರಿ ಮಾಡುವುದರಿಂದ ಬುಡಕ್ಕೆ ನೀರು ಹೋಗುತ್ತೆ. ರಾಸಾಯನಿಕ ಹೆಚ್ಚು ಬಳಸುವಂತಿಲ್ಲ.

* ನಮ್ಮ ದೇಶದ ರೈತ ಮತ್ತು ಸರ್ಕಾರಕ್ಕೆ ಕೃಷಿ ಯೋಜನೆ ಇಲ್ಲವೇ?

ನಮ್ಮ ಪಕ್ಷಕ್ಕೆ ಒಂದು ಅವಕಾಶ ಕೊಟ್ಟರೆ ರೈತರ ಜೀವನ ಬಂಗಾರ ಮಾಡುತ್ತೇನೆ. ರಾಜ್ಯದಲ್ಲಿ ಮೂವತ್ತು ಜಿಲ್ಲೆಗಳ ಮಣ್ಣು ಪರೀಕ್ಷೆ ಮಾಡಿಸಿ ರೈತರು ಯಾವ ರೀತಿ ಬೆಳೆ ಬೆಳೆಯಬೇಕು ಎಂದು ತಿಳಿಸಿಕೊಡುತ್ತೇನೆ. ನಾನು ಐಎಎಸ್ ಅಧಿಕಾರಿಗಳ ಸಲಹೆ ಕೇಳಿಕೊಂಡು ಸರ್ಕಾರ ನಡೆಸಲ್ಲ. ಪ್ರತಿ ಹದಿನೈದು ದಿನಕ್ಕೊಮ್ಮೆ ರೈತರನ್ನು ವಿಧಾನಸೌಧಕ್ಕೆ ಕರೆಸಿ ಸಲಹೆ ಪಡೆಯುತ್ತೇನೆ. ಬರೀ ಸಾಲಮನ್ನಾಕ್ಕೆ ಸೀಮಿತವಲ್ಲ.

* ರೈತರಿಗೆ ಏನೆಂದು ಕಿವಿ ಮಾತು ಹೇಳುತ್ತೀರಿ?

ಹಳೆಯ ಪದ್ಧತಿ ಬಿಡಿ ಹೊಸ ಪದ್ಧತಿಗೆ ಬರಬೇಕು. ಮಂಡ್ಯದಲ್ಲಿ ಭತ್ತ ಬಿಟ್ಟರೆ ಬೇರೇನು ಬೆಳೆಯುತ್ತಿಲ್ಲ. ನೀವು ಕಬ್ಬಿಗೆ ಹನಿ ನೀರಾವರಿ ಮಾಡಿದರೆ ಒಳ್ಳೆಯ ಫಸಲು ಪಡೆಯಬಹುದು. ಎಲ್ಲವೂ ಸರ್ಕಾರ ಮಾಡಲಿಕ್ಕೆ ಆಗಲ್ಲ. ಹಾಗಂತ ಸರ್ಕಾರ ನಡೆಸುವವರು ಸುಮ್ಮನೆ ಕೂರಬಾರದು. ನಮ್ಮಲ್ಲಿ ಸರ್ಕಾರ ನಡೆಸುವ ನಾಯಕರಿಗೆ ಬದ್ಧತೆ ಇಲ್ಲ.
* ಭೂ ತಾಯಿಯ ಆರೋಗ್ಯ ಯೋಜನೆ ಏನಾಯಿತು?

ಯೋಜನೆ ಜಾರಿಗೆ ಅತುರ. ಆದರೆ, ಜಾರಿ ಮಾಡಲಿಕ್ಕೆ ನಾವು ವಿಫಲರಾಗಿದ್ದೇವೆ. ಸರ್ಕಾರದ ಅಧಿಕಾರಿಗಳು ಇದಕ್ಕೆ ಸ್ಪಂದಿಸುತ್ತಿಲ್ಲ. ಐಎಎಸ್ ಅಧಿಕಾರಿಗಳ ಸಲಹೆ ಮೇರೆಗೆ ಅಧಿಕಾರ ನಡೆಯಬಾರದು. ಜನರ ಮಧ್ಯೆ ಇದ್ದು ಸಮಸ್ಯೆ ತಿಳಿಯುವ ಕೆಲಸ ಮಾಡಬೇಕು. ಮಂತ್ರಿ ಮತ್ತು ಮುಖ್ಯಮಂತ್ರಿಗಳು ಆ ರೀತಿ ಕೆಲಸ ಮಾಡಿದರೆ ಮಾತ್ರ ನಾವು ಯಶ ಕಾಣುತ್ತೇವೆ.
* ನಿಮ್ಮಿಂದ ಬದಲಾವಣೆ ಆಗುತ್ತೆ ಎಂದು ಭರವಸೆ ಇಡಬಹುದೇ?

ಮುಂದಿನ ಐದು ವರ್ಷ ಯಾರ ಹಂಗಿಲ್ಲದೆ ಕೆಲಸ ಮಾಡುವ ಅವಕಾಶ ಕೊಡಲಿ. ನಾನು ಹೇಳಿದ ಕಾರ್ಯಕ್ರಮ ಜಾರಿ ಮಾಡಲು ಆಗದಿದ್ದರೆ ಮತ್ತೆ ರಾಜ್ಯದ ಜನತೆಗೆ ಮುಖ ತೋರಿಸಲ್ಲ. ನಾನು 20 ವರ್ಷ, 10 ವರ್ಷ ಅಧಿಕಾರ ಕೇಳುತ್ತಿಲ್ಲ. ಕೇಳುತ್ತಿರುವುದು ಬರೀ ಐದು ವರ್ಷ. ಆ ಸಮಯದಲ್ಲಿ ನಾನು ಹೇಳಿದ್ದು ಮಾಡುವೆ.
* ಈಗಿನಿಂದಲೇ ನಿಮ್ಮ ಯೋಜನೆಗಳನ್ನು ಕಾರ್ಯರೂಪಕ್ಕೆ ತರಬಹುದಲ್ಲವೇ?

ನಮ್ಮ ಕಾರ್ಯಕರ್ತರನ್ನ ಬಳಸಿಕೊಂಡು ಒಂದು ಪೈಲಟ್ ಪ್ರಾಜೆಕ್ಟ್ ಮಾಡಬೇಕು ಅಂತ ನಿರ್ಧಾರ ಮಾಡಿದ್ದೇನೆ. ಉತ್ತರ ಕರ್ನಾಟಕದ 50 ಕ್ಷೇತ್ರಗಳಲ್ಲಿ ಇದರ ಬಗ್ಗೆ ಅಲ್ಲಿಯ ಜನರ ಜತೆ ಚರ್ಚೆ ಮಾಡುತ್ತೇನೆ. ಒಂದು ತಂಡ ರೂಪಿಸಲು ನಿರ್ಧಾರ ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ತುಮಕೂರಿನ ಶಿರಾ ಬಳಿ ಪ್ರಾಜೆಕ್ಟ್ ಮಾಡಬೇಕು ಅಂದುಕೊಂಡಿದ್ದೇನೆ.
* ಇಸ್ರೇಲ್ಗೆ ಹೋಗುವ ಮೊದಲು ನಿಮ್ಮ ಮನಸಿನಲ್ಲಿ ಏನಿತ್ತು? ಈಗ ಏನನಿಸುತ್ತಿದೆ?

ನಮ್ಮಲ್ಲಿ ಕೋರ್ಟ್ ಆದೇಶಗಳ ಮೇಲೆಯೇ ಜೀವನ ಮಾಡಬೇಕು. ಕಾವೇರಿಯಲ್ಲಿ 50 ಟಿಎಂಸಿ ನೀರು ನಮಗೆ ಬರಬೇಕಿತ್ತು, ಅದು ಆಗಲಿಲ್ಲ. ಈಗ ಇರುವ ನೀರಿನಿಂದ ಯಾವ ರೀತಿ ಕೃಷಿ ಮಾಡಬೇಕು. ಸರ್ಕಾರ ರೈತರಿಗೆ ಸಬ್ಸಿಡಿ ಕೊಡುವುದು ಎಲ್ಲಿ ಹೋಗುತ್ತೆ. ಹನಿ ನೀರಾವರಿ ಯಾವ ರೀತಿ ಮಾಡಬೇಕು ಎನ್ನುವುದರ ಬಗ್ಗೆ ತಿಳಿದುಕೊಳ್ಳಲು ಹೋಗಿದ್ದೆ. ಶೇ.90-95 ಉತ್ಪಾದನೆಯನ್ನು ಅಲ್ಲಿಯೇ ಬಳಸುತ್ತಾರೆ. ಕೆಲವನ್ನು ಮಾತ್ರ ರಪ್ತು ಮಾಡುತ್ತಿದ್ದಾರೆ. ಜಿಡಿಪಿಗೆ ಕೃಷಿಯಿಂದಲೇ ಹೆಚ್ಚು ಪಾಲು ಬರುತ್ತಿದೆ. ಅಂಥ ವಾತಾವರಣ ಇಲ್ಲಿ ನಿರ್ಮಾಣ ಮಾಡಬೇಕು.
ರಾಜ್ಯದಲ್ಲಿ ದಲಿತರಾಜಕಾರಣ, ಧರ್ಮರಾಜಕಾರಣ ನಡೀತಾ ಇದೆ. ಬಿಜೆಪಿ ಮತ್ತು ಕಾಂಗ್ರೆಸ್ ಇದೇ ರಾಜಕೀಯದಲ್ಲಿ ಬ್ಯುಸಿಯಾಗಿವೆ. ಆದರೆ ಮಾಜಿ ಸಿಎಂ ಕುಮಾರಸ್ವಾಮಿ ಮಾತ್ರ ಇದೆಲ್ಲ ಬಿಟ್ಟು ಅಭಿವೃದ್ದಿ ರಾಜಕಾರಣದತ್ತ ಮುಖ ಮಾಡಿದ್ದಾರೆ. ಅದಕ್ಕಾಗಿಯೇ ಇಸ್ರೇಲ್ ಪ್ರವಾಸ ಮಾಡಿದ್ದಾರೆ. ಈಗಾಗಲೇ ಮೂರು ದಿನ ಕೃಷಿ ಅಧ್ಯಯನ ಪ್ರವಾಸ ನಡೆಸಿರುವ ಕುಮಾರಸ್ವಾಮಿ ಟೀಂ, ಹೈನೋದ್ಯಮ, ಮತ್ತು ಹನಿ ನೀರಾವರಿ ಬಗ್ಗೆ ಮಾಹಿತಿ ಕಲೆ ಹಾಕಿದೆ. ರೆವಿಲಸ್ ಇರಿಗೇಷನ್ ಕಂಪೆನಿಗೆ ಭೇಟಿ ನೀಡಿ , ಹೆಕ್ಟೇರ್ಗೆ 1 ಲಕ್ಷ ರೂಪಾಯಿ ವ್ಯಯಿಸಿ ಹನಿ ನೀರಾವರಿ ಪದ್ದತಿ ಅಳವಡಿಸುವ ಬಗ್ಗೆ ಮಾಹಿತಿ ಪಡೆದಿದ್ದಾರೆ ಹೆಚ್ ಡಿ ಕುಮಾರಸ್ವಾಮಿ.. ಪಶುಸಂಗೋಪನೆಯಲ್ಲಿ ಊಹೆಗೂ ನಿಲುಕದ ತಂತ್ರಜ್ಞಾನ ಇಸ್ರೇಲ್ನಲ್ಲಿದೆ. ದಿನಕ್ಕೆ ಮೂರುಬಾರಿ ಹಾಲು ಕೊಡುವ ಹಸುಗಳು 40 ರಿಂದ 60 ಲೀಟರ್ ಹಾಲು ಹಿಂಡುತ್ತವೆ. 1500 ಹಸುಗಳನ್ನ ನಿರ್ವಹಿಸೋದು ಕೇವಲ 8 ರಿಂದ 10 ಜನ. ಇದೆಲ್ಲವೂ ಸಾಧ್ಯವಾಗೋದು ನೂತನ ತಂತ್ರಜ್ಞಾನದಿಂದ. ಅಲ್ಲಿ ಡ್ರಿಪ್ ಇರಿಗೇಶನ್ ಮತ್ತು ಹೈನೋದ್ಯಮ ಎಲ್ಲವೂ ನಡೆಯುವುದು ಕಂಪ್ಯೂಟರ್ ಸಿಸ್ಟಮ್ ಮೂಲಕವೇ.

ಕುಮಾರಸ್ವಾಮಿ ಈ ಎಲ್ಲ ಅಧ್ಯಯನಕ್ಕಾಗಿ ಗುವಾಂಗ್ ಡಾಂಗ್ ಯುನಿವರ್ಸಿಟಿಗೆ ಭೇಟಿ ನೀಡಿದ್ದಾರೆ. ಕೃಷಿ ತಜ್ಞ ಡಾ. ಅವಿರ್ ಬಾರ್ ಜೂರ್ ಅವರೊಂದಿಗೆ ಚರ್ಚೆ ನಡೆಸಿದ್ದಾರೆ. ಅಲ್ಲದೆ ಜೆರುಸಲೆಂನಲ್ಲಿ ನೀರಿನ ಪುರ್ನಬಳಕೆ ಘಟಕ, ಬೀಜೋತ್ಪಾಧನಾ ಸೆಂಟರ್ಗಳಿಗೂ ಕುಮಾರಸ್ವಾಮಿ ಮತ್ತವರ ತಂಡ ಭೇಟಿ ನೀಡಲಿದೆ.

ಇಸ್ರೇಲ್ ಕೃಷಿ ಕ್ರಾಂತಿ ಹಿಂದಿರುವ ಇತಿಹಾಸ.

ಕಿಬೂತ್ – ಇಸ್ರೇಲ್ ಕೃಷಿ ಯಶಸ್ಸಿನ ಮೂಲ

ಎತ್ತ ನೋಡಿದರೂ ಬಯಲು ಪ್ರದೇಶ, ಒಣ ಹವೆ, ಅತೀ ಕಡಿಮೆ ಮಳೆ ಬೀಳುವ ನೈಸರ್ಗಿಕ ಸಂಪನ್ಮೂಲಗಳ ಕೊರತೆಯಿರುವ ಪ್ರದೇಶ, ಒಂದೆಡೆ ಮರುಭೂಮಿ ಮತ್ತೊಂದೆಡೆ ಸುಂದರ ತೋಟಗಳ ಕೃಷಿ, ಇಡೀ ಜಗತ್ತಿಗೇ ಕೃಷಿ ಪಾಠವನ್ನು ಕಲಿಸುತ್ತಿರುವ ಇವರ ಜೀವನವೇ ವಿಚಿತ್ರ. ಅರೇ ಯಾವ ಜಿಲ್ಲೆಯ ಬಗ್ಗೆ ಅಂತ ಯೋಚಿಸುತ್ತಿದ್ದೀರಾ ಖಂಡಿತಾ ನಿಮ್ಮ ಊಹೆ ಸುಳ್ಳು. ಇದು ನಮ್ಮಲ್ಲಿಯ ಮೂರು ಜಿಲ್ಲೆಗಳನ್ನು ಸೇರಿಸಿದರೆ ಸಿಗುವ ವಿಸ್ತೀರ್ಣದಷ್ಟಿರುವ ಚಿಕ್ಕ ದೇಶ ಇಸ್ರೇಲ್. ತನ್ನಲ್ಲಿನ ತಂತ್ರಜ್ಞಾನ, ಕರ್ತವ್ಯ ನಿಷ್ಠೆ, ಕೃಷಿ ಉದ್ಯಮ, ಪ್ರವಾಸೋದ್ಯಮ ಹೀಗೆ ಹಲವಾರು ಕ್ಷೇತ್ರಗಳಲ್ಲಿ ತನ್ನದೇ ಛಾಪು ಮೂಡಿಸಿರುವ ದೇಶ ಇಸ್ರೇಲ್, ನಮಗಿಂತ ಒಂದು ವರ್ಷ ತಡವಾಗಿ ಸ್ವಾತಂತ್ರ್ಯ ಪಡೆದ ದೇಶವದು (೧೯೪೮). ಊಹಿಸಲಾಗದಷ್ಟು ಪ್ರಮಾಣದ ಮಳೆ ಕಡಿಮೆಯಾಗುವ ಈ ದೇಶದಲ್ಲಿ ಎತ್ತ ನೋಡಿದರೂ ಸಮೃದ್ಧ ಹಸಿರು. ಉತ್ತಮ ತಂತ್ರಜ್ಞಾನದಿಂದ ಕೃಷಿಯಲ್ಲಿ ಸ್ವಾವಲಂಬನೆ ಹೊಂದಿ ಬೇರೆ ದೇಶಗಳಿಗೂ ತನ್ನ ಉತ್ಪನ್ನಗಳನ್ನು ರಫ್ತು ಮಾಡುತ್ತಿರುವ ರೀತಿ ನೋಡಿದರೆ ಯಾರಿಗಾದರೂ ಆಶ್ಚರ್ಯವೆನಿಸುತ್ತದೆ. ವಿವಿದ ಹಣ್ಣಿನ ಬೆಳೆಗಳು, ತರಕಾರಿ ಬೆಳೆಗಳು, ಹೈನುಗಾರಿಕೆ, ಪುಷ್ಪ ಕೃಷಿ, ಮೀನುಗಾರಿಕ, ಪ್ಲಾಸ್ಟಿಕ್ ಉದ್ಯಮ, ಸಾಮೂಹಿಕ ಕೃಷಿ ಕುಟುಂಬ ಇನ್ನೂ ಹಲವಾರು ರೀತಿಯ ಉದ್ಯಮಗಳನ್ನು ಮೈಗೂಡಿಸಿಕೊಂಡಿರುವ ಈ ದೇಶ ಮನಸ್ಸು ಮಾಡಿದರೆ ಏನನ್ನಾದರೂ ಸಾಧಿಸಬಹುದು ಎನ್ನುವುದಕ್ಕೆ ಒಂದು ಉದಾಹರಣೆ.
ಈ ದೇಶದ ಭೌಗೋಳಿಕ ಲಕ್ಷಣಗಳನ್ನು ಗಮನಿಸಿದರೆ, ಸುಮಾರು ೪೭೦ ಕಿ.ಮೀ. ಉದ್ದ ೧೩೫ ಕಿ.ಮೀ. ಅಗಲ. ಜನಸಂಖ್ಯೆ ನಮ್ಮ ಬೆಂಗಳೂರಿಗಿಂತ ಕಡಿಮೆ ಬರೀ ೮೦ ಲಕ್ಷ ಸರಾಸರಿ ವಾರ್ಷಿಕ ೨೫೦-೩೦೦ ಮಿ.ಮೀ. ಮಳೆ ಒಂದೆಡೆಯಾದರೆ, ಕೆಲವಡೆ ಸುಮಾರು ೧೦ ಮಿ.ಮೀ. ಗಿಂತಲೂ ಕಡಿಮೆ. ಎತ್ತ ನೋಡಿದರೂ ಸುಣ್ಣದ ಕಲ್ಲಿನ ಮಣ್ಣು, ಮರಳು ಮಿಶ್ರಿತ ಕಲ್ಲು ಭೂಮಿ. ಅವಿಭಕ್ತ ಕುಟುಂಬಗಳಲ್ಲಿ ಸಾಮೂಹಿಕ ಕೃಷಿ ಈ ದೇಶದ ವಿಶೇಷ. ಇಂತಹ ದೇಶಕ್ಕೆ ಭೇಟಿ ನೀಡಿ ಅಲ್ಲಿಯ ಕೃಷಿ ಪದ್ಧತಿಗಳನ್ನು ಅಧ್ಯಯನ ಮಾಡಬೇಕೆಂಬ ನನ್ನ ಆಸೆ ಕಳೆದ ತಿಂಗಳಲ್ಲಿ (ಅಕ್ಟೋಬರ್ ೨೦೧೭) ನೆರವೇರಿತು. ರಾಜ್ಯದಾದ್ಯಂತ ೨೦ ಪ್ರಗತಿಪರ ರೈತರ ತಂಡದ ಜೊತೆಗೆ ಮೂವರು ವಿಜ್ಞಾನಿಗಳು ಸರ್ಕಾರದ ಯಾವುದೇ ಸವಲತ್ತುಗಳನ್ನು ಬಳಸಿಕೊಳ್ಳದೇ ಸ್ವಂತ ಖರ್ಚಿನಲ್ಲಿ ಆ ದೇಶಕ್ಕೆ ಭೇಟಿ ನೀಡಿ ಅಲ್ಲಿ ಕಲಿತ ಕೆಲವು ಅಂಶಗಳನ್ನು ಸರಣಿ ಲೇಖನಗಳ ಮೂಲಕ ತಮ್ಮೊಂದಿಗೆ ಹಂಚಿಕೊಳ್ಳಲು ಇಚ್ಛಿಸುತ್ತೇನೆ. ಪ್ರಾರಂಭದಲ್ಲಿ ಅಲ್ಲಿನ ಸಾಮೂಹಿಕ ಕೃಷಿ ಕುಟುಂಬದ ಬಗ್ಗೆ ತಿಳಿದುಕೊಳ್ಳೋಣ. ಕಿಬೂತ್ ಎಂಬ ಪದ ಇಸ್ರೇಲ್ನಲ್ಲಿ ಬಹಳ ಹೆಸರುವಾಸಿ ಆ ದೇಶ ಗಳಿಸಿದ ಕೃಷಿ ಯಶಸ್ಸಿನ ಹಿಂದೆ ಈ ಕಿಬೂತ್ಗಳ ಕೊಡುಗೆ ಅಪಾರ. ನೂರಾರು ಕುಟುಂಬಗಳು ಒಟ್ಟಿಗೇ ದುಡಿಯುವ, ವಾಸಿಸುವ ಹಾಗೂ ಆದಾಯವನ್ನು ಸಮನಾಗಿ ಹಂಚಿಕೊಳ್ಳುವುದನ್ನು ಈ ಕಿಬೂತ್ಗಳಲ್ಲಿ ಕಾಣಬಹುದು. ಭಾರತ ದೇಶದಲ್ಲಿ ಪ್ರತೀ ಪ್ರಜೆಗೆ ಬರುವ ಸರಾಸರಿ ಕೃಷಿ ವಿಸ್ತೀರ್ಣ ಸುಮಾರು ೦.೨೭ ಹೆಕ್ಟೇರ್ಗಳು. ಇಲ್ಲಿ ವಿಭಕ್ತ ಕುಟುಂಬಗಳೇ ಜಾಸ್ತಿ. ಸ್ವಂತ ಅಣ್ಣ ತಮ್ಮಂದಿರೆ ಒಟ್ಟಾಗಿ ವಾಸಿಸದ ಕೃಷಿ ಮಾಡದ ಪರಿಸ್ಥಿತಿ ನಮ್ಮದು. ಆದರೆ ಆ ದೇಶದಲ್ಲಿ ಜಾತಿ ಧರ್ಮಗಳನ್ನೂ ಮೀರಿ ನೂರಾರು ಕುಟುಂಬಗಳು ಒಟ್ಟಾಗಿ ಜೀವನ ನಡೆಸುತ್ತವೆಂದರೆ ತುಂಬಾ ಆಶ್ಚರ್ಯವೆನಿಸುತ್ತದೆ. ಒಟ್ಟಾಗಿ ದುಡಿದು, ಪಡೆದುದನ್ನು ಸಮನಾಗಿ ಹಂಚಿಕೊಳ್ಳುವ ಉದ್ದೇಶ ಕಿಬೂತ್ಗಳದು. ಅವುಗಳಿಗೆ ಈಗ ಸುಮಾರು ನೂರು ವರ್ಷಗಳ ಇತಿಹಾಸವಿದೆ. ಇಸ್ರೇಲ್ನಲ್ಲಿ ಸುಮಾರು ೩೦೦ಕ್ಕೂ ಹೆಚ್ಚು ಕಿಬೂತ್ಗಳಿವೆ. ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬ ಮಾತು ಕಿಬೂತ್ಗಳಿಗೆ ಅನ್ವಯವಾಗುತ್ತದೆ.
ಕಿಬೂತ್ ಎಂದರೆ ಹಿಬ್ರೂ ಭಾಷೆಯಲ್ಲಿ ಒಂದಾಗಿ ಬಾಳು ಎಂದು ಪ್ರಾರಂಭದಲ್ಲಿ ಕೃಷಿಯನ್ನೇ ಮೂಲ ಉದ್ದೇಶವಾಗಿ ಆರಂಭಗೊಂಡ ಇವು ನಂತರದ ದಿನಗಳಲ್ಲಿ ಉದ್ಯಮಶೀಲತೆಯನ್ನು ಬೆಳಸಿಕೊಂಡರು. ಕೃಷಿ, ತೋಟಗಾರಿಕೆ, ಹೈನುಗಾರಿಕೆ, ಮೀನುಗಾರಿಕೆ, ಪ್ಲಾಸ್ಟಿಕ್ ತಯಾರಿಕೆ, ಕೃಷಿ ಯಂತ್ರೋಪಕರಣಗಳು, ಪ್ರವಾಸೋದ್ಯಮ, ಸಗಟು ವ್ಯಾಪಾರ, ಹೀಗೆ ಕಿಬೂತ್ಗಳಲ್ಲಿ ಏನಿಲ್ಲ? ಒಟ್ಟಾರೆ ಕಿಬೂತ್ಗಳಲ್ಲದ ಇಸ್ರೇಲ್ ಅನ್ನು ಊಹಿಸಿಕೊಳ್ಳಲು ಅಸಾಧ್ಯ. ನಮ್ಮ ರಾಜ್ಯದಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಅವಿಭಕ್ತಿ ಕುಟುಂಬಗಳನ್ನು ಕಾಣುತ್ತೇವೆ. ಪ್ರತಿ ಮನೆಯಲ್ಲಿ ಕನಿಷ್ಟ ೨೫-೩೦ ಜನ ವಾಸ ಮಾಡುತ್ತಾರೆ. ಒಂದು ರೀತಿಯಲ್ಲಿ ಇವೂ ಸಹ ಸಣ್ಣ ಕಿಬೂತ್ಗಳಿದ್ದಂತೆ ಊಹಿಸಿ ಕೊಳ್ಳಬಹುದು. ಅವರ ಜೀವನ ಶೈಲಿಯನ್ನು ನೋಡಿದರೆ ಒಂದಾಗಿ ಹೀಗೂ ಸಂಸಾರ ಮಾಡಬಹುದೇ ಅನ್ನಿಸುತ್ತದೆ. ಕಿಬೂತ್ಗಳಲ್ಲಿನ ಜೀವನ, ಕೆಲಸ, ವಸತಿ, ಊಟೋಪಚಾರ ಮಕ್ಕಳ ವಿದ್ಯಾಭ್ಯಾಸ, ವಯಸ್ಕರ ಜೀವನ, ಮನರಂಜನೆ, ಆದಾಯ ಒಂದೊಂದು ವಿಶಿಷ್ಟ. ಅವರ ಅಹಾರ ಶೈಲಿ ವಿಚಿತ್ರ. ನಮ್ಮಂತೆ ರೊಟ್ಟಿ ಚಪಾತಿ, ಮುದ್ದೆ ಇವೆಲ್ಲಾ ಕನಸಿನ ಮಾತು. ಅಲ್ಲೇನಿದ್ದರೂ ಹಸಿ ಮತ್ತು ಬೆಂದ ತರಕಾರಿಗಳು, ಸೂಪ್, ಬ್ರೆಡ್, ಜಾಮ್, ಕೇಕ್, ಸಲಾಡ್, ಹಣ್ಣಿನ ರಸ ಜೊತೆಗೆ ಒಂದಿಷ್ಟು ಮಾಂಸಹಾರ. ಇದೆಲ್ಲದನ್ನು ನಿರ್ವಹಿಸಲು ಒಂದು ಸಮಿತಿ ಅಸ್ತಿತ್ವದಲ್ಲಿರುತ್ತದೆ. ಅಡಿಗೆ ಸಾಮಾನು ಖರೀದಿ, ಅಡಿಗೆ ಮಾಡುವುದು, ಪಾತ್ರೆ ತೊಳೆಯುವುದು ಎಲ್ಲವೂ ಈ ಸಮಿತಿಯೇ ನಿರ್ಧರಿಸುತ್ತದೆ. ಅಂದ ಹಾಗೆ ಅಲ್ಲಿ ಪಾತ್ರೆ, ತಟ್ಟೆ ತೊಳೆಯುವುದೂ ಯಂತ್ರಗಳೇ. ಇಸ್ರೇಲ್ನಲ್ಲಿದ್ದ ಅಷ್ಟು ದಿನ ಯಾವೊಬ್ಬ ನಮ್ಮ ಸದಸ್ಯರಿಗೂ ಹೊಟ್ಟೆ ಕೆಡಲಿಲ್ಲ. ಊಟದಲ್ಲಿ ಮಸಾಲೆ ಪದಾರ್ಥವನ್ನು ಜಾಸ್ತಿ ಬಳಸುವುದಿಲ್ಲ. ಜೊತೆಗೆ ಪ್ರತಿ ಊಟದಲ್ಲಿ ಕಾಳುಮೆಣಸಿನ ಪುಡಿಯನ್ನು ಬಳಸುವುದನ್ನು ಕಾಣುತ್ತೇವೆ. ಬೆಳಗ್ಗೆ ೬ ಗಂಟೆಗೆ ತಿಂಡಿ, ಮಧ್ಯಾಹ್ನ ೧ ಗಂಟೆಗೆ ಊಟ ಮತ್ತು ರಾತ್ರಿ ೭ ಗಂಟೆಗೆ ಊಟ. ಅಲ್ಲಿ ಬಹಳ ಬೇಗ ಕತ್ತಲಾಗಿ ಬಿಡುತ್ತದೆ. ಆದುದರಿಂದ ಅವರ ರಾತ್ರಿ ಊಟವೂ ಬೇಗ ಆಗಿಬಿಡುತ್ತದೆ.
ಕಿಬೂತ್ಗಳಲ್ಲಿ ವಾಸಿಸುವ ಮನೆಗಳೆಲ್ಲಾ ಒಂದೇ ರೀತಿ ಇರುತ್ತವೆ. ಮನೆಯ ಮೂಲ ಸೌಕರ್ಯ ನಿರ್ವಹಣೆ ಹೊಣೆಯೆಲ್ಲಾ ಸಮಿತಿಯೇ ಮಾಡುತ್ತದೆ. ಬಡವರು ಶ್ರೀಮಂತರು ಎಂಬ ಭೇದ ಭಾವವಿಲ್ಲದೆ ಪ್ರತಿ ಕುಟುಂಬಕ್ಕೆ ಸಮನಾದ ವಿಸ್ತೀರ್ಣದ ಮನೆಯಿರುತ್ತದೆ. ೧೨೦೦ ಘನ ಮೀಟರ್ ಅಳತೆಯ ಮನೆ ಪ್ರತೀ ಕುಟುಂಬಕ್ಕೆ ಸೀಮಿತ. ಕುಟುಂಬದಲ್ಲಿ ಇಬ್ಬರಿರಲಿ ಹತ್ತು ಮಂದಿಯಿರಲಿ ವಾಸ ಮಾತ್ರ ಅದರಲ್ಲೇ ಮಾಡಬೇಕು. ಇನ್ನು ಕಿಬೂತ್ಗಳಲ್ಲಿ ಸಾಮೂಹಿಕ ಪಾಠ ಶಾಲೆಯಿದೆ. ಎಲ್ಲಾ ಕುಟುಂಬದ ಮಕ್ಕಳೂ ಇಲ್ಲೇ ವಿದ್ಯಾಭ್ಯಾಸವನ್ನು ಮಾಡುತ್ತಾರೆ. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಕಿಬೂತ್ಗಳಲ್ಲೇ ನಡೆಯುತ್ತದೆ. ತದನಂತರದ ಉನ್ನತ ವ್ಯಾಸಾಂಗ ಹೊರಗಡೆ ನಡೆಯುತ್ತದೆ. ಅಂದಹಾಗೆ ಇಸ್ರೇಲ್ ದೇಶದ ಕಾನೂನಿನಲ್ಲಿ ಪ್ರತಿಯೊಬ್ಬ ಪ್ರಜೆಯೂ ಮಿಲಿಟರಿ ಸೇವೆಯನ್ನು ಮಾಡುವುದು ಕಡ್ಡಾಯ. ಹೆಣ್ಣಿರಲಿ ಗಂಡಿರಲಿ ಪ್ರತಿಯೊಬ್ಬರೂ ೧೮-೨೧ ವರ್ಷದಲ್ಲಿ ಕನಿಷ್ಟ ೩ ವರ್ಷ ಮಿಲಿಟರಿ ಸೇವೆ ಮಾಡುವುದು ಕಡ್ಡಾಯ. ಇದನ್ನು ಮಾಡಲೊಪ್ಪದವರಿಗೆ ಅಂಗವಿಕಲ ಪ್ರಮಾಣ ಪತ್ರವನ್ನು ಸರ್ಕಾರ ನೀಡುತ್ತದೆ. ಅಂತವರು ಸರ್ಕಾರದ ಯಾವುದೇ ಸೌಲಭ್ಯಗಳನ್ನು ಬಳಸಲು ಅನರ್ಹರು. ನಮ್ಮ ದೇಶದಲ್ಲಿ ಅಂಗವಿಕಲ ಪ್ರಮಾಣ ಪತ್ರ ಪಡೆಯಲು ಎಷ್ಟು ಹೋರಾಡುತ್ತಾರೆ, ನೆನಪಿಸಿಕೊಳ್ಳಿ. ಕೃಷಿ ಕಿಬೂತ್ಗಳ ಮೂಲ ಉದ್ಯೋಗ. ತಮಗಿರುವ ಭೂಹಿಡುವಳಿಗೆ ಅನುಸಾರವಾಗಿ ಅವರು ಬೆಳೆಗಳನ್ನು ನಿರ್ಧರಿಸುತ್ತಾರೆ. ಕಿಬೂತ್ಗಳಲ್ಲಿ ಬೆಳೆಯುವ ಪ್ರಮುಖ ಬೆಳೆಗಳೆಂದರೆ ಬಾದಾಮಿ, ಅವಕ್ಯಾಡೋ, ದ್ರಾಕ್ಷಿ, ಬಾಳೆ, ಮಾವು, ಖರ್ಜೂರ, ಗೋಧಿ ಇವು ಪ್ರಮುಖ ಬೆಳೆಗಳು. ಆಯಾ ಬೆಳೆಯಲ್ಲಿ ಪರಿಣಿತಿ ಹೊಂದಿರುವ ಕುಟುಂಬ ಎಲ್ಲಾ ಬೇಸಾಯ ಕ್ರಮಗಳನ್ನು ನಿರ್ವಹಿಸುತ್ತದೆ. ಎಲ್ಲಾ ಕೆಲಸವೂ ಆಧುನಿಕ ತಂತ್ರಜ್ಞಾನದಂತೆ ನಡೆಯುತ್ತದೆ. ತಂತ್ರಜ್ಞಾನಗಳ ಕುರಿತು ಮುಂದಿನ ಲೇಖನಗಳಲ್ಲಿ ಬರೆಯಲಾಗುವುದು.
ಹೈನುಗಾರಿಕೆಗೆ ಕೆಲವು ಕಿಬೂತ್ಗಳ ಪ್ರಮುಖ ಉಪಕಸುಬು. ನಮ್ಮಂತೆ ೩-೪ ಹಸುಗಳ ಪಾಲನೆ ಅಲ್ಲಿಲ್ಲ. ಕನಿಷ್ಟವೆಂದರೂ ೧೦೦೦ ಹಸುಗಳ ಕೊಟ್ಟಿಗೆಯಲ್ಲಿ ಹೆಚ್.ಎಫ್. ತಳಿಯ ಪಾಲನೆ ಪ್ರಮುಖವಾಗಿದೆ. ಪ್ರತಿಯೊಂದು ಹಸುವಿಗೂ ಒಂದು ಸಂಖ್ಯೆಯಿರುತ್ತದೆ. ಜೊತೆಗೆ ಅದರ ಮುಂಗಾಲಿಗೆ ಸೆನ್ಸಾರ್ ಹೊಂದಿರುವ ಉಪಕರಣವನ್ನು ತೊಡಿಸಿರುತ್ತಾರೆ. ಆ ಹಸುವಿನ ಸಂಪೂರ್ಣ ಆರೋಗ್ಯದ ಮಾಹಿತಿಯನ್ನು ಆ ಸೆನ್ಸಾರ್ ಪಡೆದುಕೊಂಡು ಮಾಹಿತಿಯನ್ನು ಕಂಟ್ರೋಲ್ ರೂಂಗೆ ತಲುಪಿಸುತ್ತದೆ. ಉದಾಹರಣೆಗೆ ಹಸುವಿನ ಹಾಲಿನ ಸಾಮರ್ಥ್ಯ, ರೋಗ ರುಜಿನಗಳ ತೀವ್ರತೆ, ಇತ್ಯಾದಿ. ಅಂದ ಹಾಗೆ ಹಸುಗಳು ಕರು ಹಾಕಿದ ನಂತರ ಕರುಗಳ ಪಾಲನೆ ಪ್ರತ್ಯೇಕವಾಗಿ ನಡೆಯುತ್ತದೆ. ತಾಯಿಗೂ ಕರುವಿಗೂ ಯಾವುದೇ ನಂಟು ಇರುವುದಿಲ್ಲ. ಇನ್ನು ಪಶು ಆಹಾರದ ಸಿದ್ಧತೆಯೂ ಕಿಬೂತ್ಗಳಲ್ಲೆ ನಡೆಯುತ್ತದೆ. ಗೋಧಿ, ಶೇಂಗಾ ಹೊಟ್ಟುಗಳನ್ನು ಸಂಸ್ಕರಿಸಿ ಪೆಂಡಿಗಳನ್ನು ಮಾಡಿ ಶೇಖರಿಸಿರುತ್ತಾರೆ. ಆಹಾರ ಕೊಡುವ ಸಮಯದಲ್ಲಿ ಎಲ್ಲವನ್ನೂ ಪುಡಿ ಮಾಡಿ ನೀಡುತ್ತಾರೆ. ಹಸುಗಳನ್ನು ಸ್ವಚ್ಛಗೊಳಿಸುವುದು, ಹಾಲಿಂಡುವುದು ಎಲ್ಲಾ ಯಂತ್ರಗಳಿಗೆ ಹಸುವಿನ ಕೆಚ್ಚಲಿನಿಂದ ಹಾಲು ಹಿಂಡಿದ ನಂತರ ಪೈಪುಗಳಲ್ಲಿ ನೇರವಾಗಿ ಶೀತಲೀಕರಣ ಘಟಕಕ್ಕೆ ಹೋಗುತ್ತದೆ. ಅಲ್ಲಿಂದ ಟ್ಯಾಂಕರ್ಗಳಿಗೆ ಸರಬರಾಜಾಗುತ್ತದೆ. ಎಲ್ಲಿಯೂ ಮಾನವರ ಕೈ ಸೋಂಕು ತಗಲುವುದಿಲ್ಲ. ಆದುದರಿಂದಲೇ ಅದು ಉತ್ತಮ ಗುಣಮಟ್ಟದ್ದಾಗಿರುತ್ತದೆ.
ಕೆಲವು ಕಿಬೂತ್ಗಳು ಕೃಷಿಯ ಜೊತೆಗೆ ಉದ್ಯಮಗಳನ್ನು ಸಹ ಮಾಡುತ್ತಿದ್ದಾರೆ. ಪ್ಲಾಸ್ಟಿಕ್ ತಯಾರಿಕಾ ಉದ್ಯಮ, ಫರ್ನೀಚರ್ ಉದ್ಯಮ, ಕರಕುಶಲ ಆಟಿಕೆಗಳ ಉದ್ಯಮ, ದ್ರಾಕ್ಷಾರಸ ಕಾರ್ಖಾನೆ, ಹಣ್ಣು ಮತ್ತು ತರಕಾರಿಗಳ ಸಂಸ್ಕರಣೆ ಹೀಗೆ ಉದ್ಯಮಶೀಲತೆಯಿಂದ ಕಿಬೂತ್ಗಳ ಆದಾಯ ಸ್ಥಿರವಾಗಿರುತ್ತದೆ. ಹೀಗೆ ಕಿಬೂತ್ಗಳ ಬಗ್ಗೆ ತಿಳಿಯಬೇಕಾದುದು ಬಹಳಷ್ಟಿದೆ. ಆದರೆ ಅವರನ್ನು ಅನುಸರಿಸುವುದು ನಮ್ಮ ದೇಶವಾಸಿಗಳಿಗೆ ಸವಾಲಿನ ಕೆಲಸ. ಜಾತೀಯತೆ, ರಾಜಕಾರಣ, ಮೀಸಲಾತಿ ಮುಂತಾದ ಸಾಮಾಜಿಕ ವ್ಯವಸ್ಥೆಯಲ್ಲಿ ಸಹಬಾಳ್ವೆ, ಸಹಜೀವನ ನಡೆಸುವುದು ನಮ್ಮ ದೇಶದಲ್ಲಿ ಅಸಾಧ್ಯವೆನಿಸುತ್ತದೆ. ಆದರೂ ಸಹ ಕೆಲವೊಂದು ಅಂಶಗಳನ್ನು ಮಾರ್ಪಾಡು ಮಾಡಿ ಜೀವನದಲ್ಲಿ ಅಳವಡಿಸಿಕೊಂಡರೆ ಉತ್ತಮವೆಂದು ಅನಿಸಿಕೆ.

ಕೃಷಿ ಅಧ್ಯಯನಕ್ಕೆ ರಾಜ್ಯದ ರೈತರಿಗೆ ಇಸ್ರೇಲ್ ಪ್ರವಾಸ ಭಾಗ್ಯ: ತೋಟಗಾರಿಕೆ ಸಚಿವ ಎಂ. ಸಿ. ಮನಗೂಳಿ

ರಾಜ್ಯದ ರೈತರಿಗೆ ಇಸ್ರೇಲ್ ಕೃಷಿ ಅಧ್ಯಯನಕ್ಕಾಗಿ ಪ್ರವಾಸ ಭಾಗ್ಯ ಕಲ್ಪಿಸಲಾಗುವುದು ಎಂದು ತೋಟಗಾರಿಕೆ ಇಲಾಖೆ ನೂತನ ಸಚಿವ ಎಂ. ಸಿ. ಮನಗೂಳಿ ತಿಳಿಸಿದ್ದಾರೆ.
ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದ್ರಾಕ್ಷಿ ಬೆಳೆಗಾರರ ಸಾಲಮನ್ನಾ ಮಾಡುವ ಕುರಿತು ಸಿಎಂ ಎಚ್. ಡಿ. ಕುಮಾರಸ್ವಾಮಿ ಅವರ ಜೊತೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.ಇಸ್ರೇಲ್ ಕೃಷಿ ತಂತ್ರಜ್ಞಾನ ಅಧ್ಯಯನಕ್ಕೆ ರಾಜ್ಯದ ರೈತರನ್ನು ಕಳುಹಿಸಲಾಗುವುದು. ಈ ಮೂಲಕ ರಾಜ್ಯದಲ್ಲಿ ಕಡಿಮೆ ನೀರಿನಲ್ಲಿ ಹೆಚ್ಚು ಬೆಳೆ ಬೆಳೆಯಲು ಪ್ರೋತ್ಸಾಹ ನೀಡಲಾಗುವುದು. ತೋಟಗಾರಿಕೆ ಇಲಾಖೆಯಲ್ಲಿ ಹಲವಾರು ಯೋಜನೆಗಳಿವೆ. ಜನರು ತೋಟಗಾರಿಕೆಯಲ್ಲಿ ಹೆಚ್ಚು ಜ್ಞಾನ ಪಡೆದಿದ್ದಾರೆ. ವಿಜಯಪುರ ಜಿಲ್ಲೆಯಲ್ಲಿ ನಿಂಬೆ, ದ್ರಾಕ್ಷಿ, ದಾಳಿಂಬೆ ಪ್ರಮುಖ ತೋಟಗಾರಿಕೆ ಬೆಳೆಗಳಾಗಿವೆ. ಈ ಬೆಳೆಗಳಿಗೆ ಸೂಕ್ತ ಬೆಲೆ, ಸಬ್ಸಿಡಿ ನೀಡಲು ಕ್ರಮ ತೆಗೆದುಕೊಳ್ಳಲಾಗುತ್ತದೆ. ಎಸ್ಸಿ ಎಸ್ಟಿ ಹಾಗೂ ಇನ್ನಿತರ ಸಮುದಾಯದ ರೈತರಿಗೂ ಸಬ್ಸಿಡಿ ಸೌಲಭ್ಯ ನೀಡಲಾಗುತ್ತದೆ. ಇಸ್ರೇಲ್ ಮಾದರಿಯ ಲೆಸ್ ಇನ್ವಸ್ಟ್ಮೆಂಟ್, ಮೋರ್ ಇನ್ಕಮ್ ಯೋಜನೆ ಜಾರಿ ಮಾಡಲು ಸಿಎಂ ಭದ್ದರಾಗಿದ್ದಾರೆ. ತೋಟಗಾರಿಕೆ ರೈತರ ಸಾಲ ಸಾಧ್ಯವಾದಷ್ಟು ಮನ್ನಾ ಮಾಡಲು ಸಿಎಂ ಕುಮಾರಸ್ವಾಮಿ ಅವರೊಂದಿಗೆ‌ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು. ಹಣ್ಣುಗಳ ಉತ್ಪನ್ನಿನಿಂದ ರೈತರು ಆರ್ಥಿಕವಾಗಿ ಸಬಲರಾಗಬೇಕಿದೆ ಎಂದು ಹೇಳಿದರು.ತೋಟಗಾರಿಕಾ ವಿವಿಯ ಕಾಲೇಜನ್ನು ವಿಜಯಪುರ ಜಿಲ್ಲೆಯ ಜಿಲ್ಲೆಯ ತಿಡಗುಂದಿ ಬಳಿ ಪ್ರಾರಂಭಿಸಲು ಚಿಂತನೆ ನಡೆಸಲಾಗುತ್ತಿದೆ. ಲಿಂಬೆ ಅಭಿವೃದ್ಧಿ ಕೆಲಸ ಕಾರ್ಯ ಮಾಡುವಂತೆ ಕ್ರಮ ಕೈಗೊಳ್ಳಲಾಗುವುದು. ನಾಮಕಾವಸ್ಥೆ ಯೋಜನೆ ಜಾರಿ ಮಾಡಲು ನನಗೆ ಇಷ್ಟವಿಲ್ಲ. ಜಿಲ್ಲೆಯ ರೈತರ ಅನುಕೂಲಕ್ಕಾಗಿ ಕೋಲ್ಟ್ ಸ್ಟೋರೇಜ್ ನಿರ್ಮಿಸಲು ಯೋಜಿಸಲಾಗಿದೆ. ರಾಜ್ಯದಲ್ಲಿ 20.81ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕಾ ಬೆಳೆ ಬೇಳೆಯಲಾಗುತ್ತಿದೆ. 30 ಲಕ್ಷ ಜನ ತೋಟಗಾರಿಕೆ ಬೆಳೆ ಬೆಳೆಯುತ್ತಿರುವ ರೈತರಿದ್ದಾರೆ. ಕಡಿಮೆ ನೀರು ವ್ಯಯಮಾಡಿ ಹೆಚ್ಚು ಬೆಳೆ ಬೆಳೆಯುವ ಯೋಜನೆ ಜಾರಿಗೆ ತರುವ ವಿಚಾರವಿದೆ ಎಂದು ಅವರು ತಿಳಿಸಿದರು.ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವನಾಗಲು ಬೇಡಿಕೆಯಿಟ್ಟಿಲ್ಲ. ಆದರೆ, ವರಿಷ್ಠರು ಜಿಲ್ಲಾ ಉಸ್ತುವಾರಿ ಜವಾಬ್ದಾರಿ ನೀಡಿದರೆ‌ ನಿಭಾಯಿಸುವೆ ಎಂದು ಎಂ. ಸಿ. ಮನಗೂಳಿ ತಿಳಿಸಿದರು.

ಇಸ್ರೇಲ್ ಮಾದರಿ ಕೃಷಿಗೆ ಮಂಡ್ಯದ ವಿ.ಸಿ.ಫಾರಂ ಸಜ್ಜು.

ಮಂಡ್ಯ,: ಇಸ್ರೇಲ್ ಮಾದರಿಯ ಕೃಷಿ ಪದ್ಧತಿಯನ್ನು ಮಂಡ್ಯದಲ್ಲಿರುವ ಕೃಷಿ ಸಂಶೋಧನಾ ಕೇಂದ್ರ ವಿ.ಸಿ.ಫಾರಂನಲ್ಲಿ ಪ್ರಾಯೋಗಿಕ ಯೋಜನೆ ಜಾರಿಗೆ ತರೋದಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಅಷ್ಟಕ್ಕೂ ವಿ.ಸಿ.ಫಾರಂ ಆಯ್ಕೆ ಮಾಡಿಕೊಳ್ಳಲು ಕಾರಣವೇನು? ಅದರ ವಿಶೇಷತೆ ಬಗೆಗಿನ ಒಂದು ಸ್ಟೋರಿ ಇಲ್ಲಿದೆ ನೋಡಿ.
ಇಸ್ರೇಲ್ ಮಾದರಿಯ ಕೃಷಿ ಪದ್ದತಿ ಇದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಬಹುದಿನಗಳ ಕನಸು. ಚುನಾವಣೆ ಮುಂಚೆಯೇ ಹೆಚ್ಡಿಕೆ ತಾನು ಸಿಎಂ ಆದರೆ ಈ ಮಾದರಿ ಕೃಷಿ ಪದ್ಧತಿಯನ್ನ ರಾಜ್ಯದಲ್ಲಿ ಜಾರಿಗೆ ತರುತ್ತೇನೆ ಎಂದು ಹೇಳಿದರು. ಅತಿ ಕಡಿಮೆ ನೀರಿನಲ್ಲಿ ತುಂತುರು ಹನಿ ನೀರಾವರಿ ಪದ್ಧತಿ ಮೂಲಕ ಕಡಿಮೆ ನೀರು ಬಳಸಿ ತಾಂತ್ರಿಕವಾಗಿ ಅತಿ ಹೆಚ್ಚು ಬೆಳೆ ಬೆಳೆಯೋದೆ ಇಸ್ರೇಲ್ ಕೃಷಿ ಮಾದರಿ ಪದ್ಧತಿ. ಇಸ್ರೇಲ್ ಪೆಟ್ರೋಲ್ ಉತ್ಪಾದನೆಗೆ ಹೆಸರುವಾಸಿಯಾದ ರಾಷ್ಟ್ರ. ಇಲ್ಲಿ ಸಮರ್ಪಕ ನೀರಿಲ್ಲದಿದ್ದರೂ ಕೃಷಿ ಯಶಸ್ಸುಗಳಿಸಲು ತಾಂತ್ರಿಕ ಬೇಸಾಯವೇ ಮುಖ್ಯವಾಗಿದೆ. ಇದೀಗ ಈ ಪದ್ಧತಿಯ ಬೆಳೆಯನ್ನು ರಾಜ್ಯದಲ್ಲಿ ಜಾರಿಗೆ ತರಬೇಕೆಂಬುದು ಎಚ್ಡಿಕೆ ಆಸೆ. ಅದಕ್ಕಾಗಿ ಮಂಡ್ಯದ ವಿ.ಸಿ.ಫಾರಂ ಕೃಷಿ ಸಂಶೋಧನಾ ಕೇಂದ್ರವನ್ನು ಆಯ್ಕೆ ಮಾಡಿಕೊಂಡಿದ್ದು, ಇಲ್ಲಿನ ಸುಮಾರು 650 ಎಕರೆ ಜಮೀನಿನಲ್ಲಿ ಇಸ್ರೇಲ್ ಕೃಷಿ ಮಾದರಿಯ ಪ್ರಾಯೋಗಿಕ ಬೇಸಾಯ ಯೋಜನೆ ಮುಂಗಾರು ಆರಂಭವಾಗುವಷ್ಟರಲ್ಲಿ ಶುರುವಾಗಲಿದೆ. ಇದಕ್ಕಾಗಿ ವಿ.ಸಿ.ಫಾರಂನ ಖ್ಯಾತ ಕೃಷಿ ವಿಜ್ಞಾನಿ ಷಡಾಕ್ಷರಿ ನೇತೃತ್ವದಲ್ಲಿ ಸುಮಾರು ಹತ್ತು ವಿಜ್ನಾನಿಗಳು ರಾಜ್ಯ ಸರ್ಕಾರದ ಸೂಚನೆಯಂತೆ ಇಸ್ರೇಲ್ ಗೆ ತೆರಳಿದ್ದಾರೆ. ಈ ಬಗ್ಗೆ ಕೃಷಿ ಸಂಶೋಧನಾ ಕೇಂದ್ರದ ಅಧಿಕಾರಿ ವಾಸುದೇವನ್ ಮಾಹಿತಿ ನೀಡಿದ್ದಾರೆ.ಇನ್ನು ರಾಜ್ಯದಲ್ಲಿ ಅನೇಕ ಕೃಷಿ ಸಂಶೋಧನಾ ಕೇಂದ್ರಗಳು ಹಾಗೂ ಮಹಾ ವಿದ್ಯಾಲಯಗಳಿವೆ. ಆದರೂ ಕೂಡ ಸಿಎಂ ಕುಮಾರಸ್ವಾಮಿ ಮಂಡ್ಯದ ವಿ.ಸಿ.ಫಾರಂ ಅನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ಇದಕ್ಕೆ ಪ್ರಮುಖ ಕಾರಣ, ನೀರಿನ ಅವಶ್ಯಕತೆ ಬಿದ್ದಲ್ಲಿ ಕೆ.ಆರ್.ಎಸ್. ಅಣೆಕಟ್ಟೆ ಇದೆ ಎಂಬುದು ಒಂದಾದರೆ, ವಿ.ಸಿ.ಫಾರಂ ದೇಶದಲ್ಲೇ ಗಮನ ಸೆಳೆದಿರುವ ಪ್ರತಿಷ್ಟಿತ ಕೃಷಿ ಸಂಶೋಧನಾ ಕೇಂದ್ರ ಮತ್ತು ಕೃಷಿ ಮಹಾ ವಿದ್ಯಾಲಯ ಇದರ ಜೊತೆಗೆ ಕಳೆದ ಮೂರು ವರ್ಷಗಳಲ್ಲಿ ಇಡೀ ಮಂಡ್ಯ ಜಿಲ್ಲೆಯಲ್ಲಿ ಸುಮಾರು 300ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಪ್ರಮುಖ ಕಾರಣ ಬೆಳೆ ನಷ್ಟ, ಸಮರ್ಪಕ ನೀರಿಲ್ಲದಿರುವುದು. ಸದ್ಯದ ಪರಿಸ್ಥಿತಿಯಲ್ಲಿ ಮಂಡ್ಯ ಜಿಲ್ಲೆಯ ರೈತರಿಗೆ ಇಸ್ರೇಲ್ ಪದ್ಧತಿ ಅವಶ್ಯಕತೆ ಇದ್ದು, ಆ ಕಾರಣಕ್ಕೋ ಏನೋ ಸಿಎಂ ಮಂಡ್ಯ ಜಿಲ್ಲೆಯನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ಈ ಹಿಂದೆ ಮಂಡ್ಯ ಜಿಲ್ಲೆಯಲ್ಲಿ ರೈತರ ಸರಣಿ ಆತ್ಮಹತ್ಯೆಯಾದಾಗ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕೂಡ ಮಂಡ್ಯಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಇದೇ ವಿ.ಸಿ.ಫಾರಂನಲ್ಲೇ ರೈತರೊಂದಿಗೆ ಸಂವಾದ ನಡೆಸಿ ಹೋಗಿದ್ದರು.ಇನ್ನು ಇಸ್ರೇಲ್ ಕೃಷಿ ಮಾದರಿಯ ಪ್ರಾಯೋಗಿಕ ಬೆಳೆ ಯೋಜನೆ ಮಂಡ್ಯ ಜಿಲ್ಲೆಯಲ್ಲೇ ಆರಂಭವಾಗುತ್ತಿರುವುದು ಸಕ್ಕರೆ ನಾಡಿನ ರೈತರಲ್ಲಿ ಮಂದಹಾಸ ತರಿಸಿದೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ಸಮರ್ಪಕ ನೀರಿಲ್ಲದೇ ಕಂಗೆಟ್ಟಿದ್ದ ರೈತರು, ಕುಮಾರಸ್ವಾಮಿಯವರ ಈ ಹೊಸ ಯೋಜನೆಯಿಂದ ಏನಾದರೂ ಲಾಭವಾಗಬಹುದೆಂಬ ನಿರೀಕ್ಷೆಯಲ್ಲಿದ್ದಾರೆ. ಒಟ್ಟಾರೆ ಸಿ.ಎಂ ಎಚ್ಡಿಕೆ ಅವರ ಬಹುದಿನಗಳ ಕನಸಾದ ಇಸ್ರೇಲ್ ಮಾದರಿ ಕೃಷಿ ಪದ್ಧತಿ ಶೀಘ್ರವೇ ಮಂಡ್ಯದಲ್ಲಿ ಆರಂಭವಾಗಲಿದ್ದು, ಇದ್ರಿಂದ ಜಿಲ್ಲೆ ಹಾಗೂ ರಾಜ್ಯಕ್ಕೆ ಒಳಿತಾದರೆ ಸಾಕೆಬಂದುದು ರೈತರ ಮಹದಾಸೆಯಾಗಿದೆ.

One thought on “ಕುಮಾರಸ್ವಾಮಿ ತರಲಿದ್ದಾರೆ ಇಸ್ರೇಲ್ ಕೃಷಿ.ಇಲ್ಲಿದೆ ಸಂಪೂರ್ಣ ಮಾಹಿತಿ.

  1. suddisamachaara says:

    Very use full msg.

Leave a Reply