ಕನ್ನಡಕ್ಕೆ ಡಬ್ಬಿಂಗ್ ಯಾಕೆ ಬೇಕು ಗೊತ್ತೇ?ಇಲ್ಲಿದೆ ಸಂಪೂರ್ಣ ಮಾಹಿತಿ.

ತಾಯಿನುಡಿಯ ಪಾತ್ರ ದೊಡ್ಡದು.

ಯಾವುದೇ ಒಂದು ಜನಾಂಗದ ಏಳಿಗೆಯಲ್ಲಿ ಆ ಜನಾಂಗದ ಜನರಾಡುವ ನುಡಿಯ ಪಾತ್ರ ಬಹಳ ಮಹತ್ವದ್ದಾಗಿದೆ. ಇಷ್ಟಕ್ಕೂ ಒಂದು ಸಮಾಜದ ಒಗ್ಗಟ್ಟಿಗೆ ಅತ್ಯಂತ ಮಹತ್ವದ ಸಾಧನವಾಗಿರುವುದು ಆ ಜನರಾಡುವ ನುಡಿಯೇ ಆಗಿದೆ. ಕನ್ನಡನುಡಿ, ಕನ್ನಡಿಗರ ಬದುಕಿನಲ್ಲಿ ಇಂಥದ್ದೇ ಒಂದು ಮಹತ್ವದ ಅಂಶವಾಗಿದೆ. ನುಡಿಯೊಂದು ಬರಿಯ ಸಂಪರ್ಕಮಾಧ್ಯಮವಾಗಿರದೆ ಸಹಕಾರದ ಮಾಧ್ಯಮವಾಗಿದೆ ಎನ್ನುವುದನ್ನು ಇತ್ತೀಚಿಗೆ ಕಂಡುಕೊಳ್ಳಲಾಗಿದೆ. ಹೀಗಾಗಿ, ಒಂದು ಜನಾಂಗದ ಜನರ ಬದುಕಿನಲ್ಲಿ ಆ ಜನರಾಡುವ ನುಡಿಯ ಬಳಕೆಯ ವ್ಯಾಪ್ತಿ, ಆ ಜನರ ಬದುಕಿನ ಎಲ್ಲಾ ಕ್ಷೇತ್ರಗಳಲ್ಲೂ ಇರುವುದು ಮತ್ತು ಇರಬೇಕಾದ್ದು ಸಹಜವಾದುದಾಗಿದೆ.

ಏಳಿಗೆ ಹೊಂದವಲ್ಲಿ ತಾಯ್ನುಡಿ ಮಹತ್ವ.

ಇದನ್ನು ಮತ್ತಷ್ಟು ಬಿಡಿಸಿ ಹೇಳಬೇಕೆಂದರೆ ಕನ್ನಡನಾಡಿನಲ್ಲಿ ಹುಟ್ಟಿದ ಮಗುವೊಂದು ಮೊದಲು ಕೇಳುವ ಲಾಲಿಯಿಂದ ಹಿಡಿದು, ಅದು ಬೆಳೆಯುವ ಪರಿಸರ, ನೆರೆಹೊರೆಯವರು, ಆಡುವ ಗೆಳೆಯರು, ಆಡುವ ಆಟಗಳು, ನೋಡುವ ಕಾರ್ಟೂನು, ಜ್ಞಾನ ವಿಜ್ಞಾನದ ವಾಹಿನಿಗಳು, ಮೊದಲ ಶಾಲಾಕಲಿಕೆ, ಕಾಲೇಜು, ಉನ್ನತ ಶಿಕ್ಷಣ, ಉದ್ಯೋಗ, ಅಂಗಡಿ ಮುಂಗಟ್ಟುಗಳ ವಹಿವಾಟು, ಕೊಳ್ಳುವ ಉತ್ಪನ್ನಗಳ ಮೇಲಿರುವ ಮಾಹಿತಿ, ಕೇಳುವ ರೇಡಿಯೋ, ನೋಡುವ ಟಿವಿ, ಸಿನಿಮಾ, ನಾಟಕ, ಓದುವ ಕತೆ-ಕವನದ ಪುಸ್ತಕಗಳು, ಸಾರ್ವಜನಿಕ ಒಡನಾಟಗಳು, ವ್ಯಾಪಾರ ವಹಿವಾಟು, ಉದ್ಯೋಗ, ಸರ್ಕಾರಿ ಕಛೇರಿಗಳ ಕೆಲಸಗಳು, ಪಾಸ್‌ಪೋರ್ಟ್, ವಿಮಾನ ನಿಲ್ದಾಣ, ಮಾಲ್ ಮೊದಲಾದ ಕಡೆಗಳಲ್ಲಿ ನಡೆಸುವ ವಹಿವಾಟುಗಳು ಸೇರಿದಂತೆ ಎಲ್ಲವೂ ಅದರ ನುಡಿಯಲ್ಲಿರುತ್ತದೆ. ಇದು ಅತ್ಯಂತ ಸಹಜವಾದುದೂ, ಸರಿಯಾದುದೂ ಆಗಿದೆ. ಇಂತಹ ಒಂದು ಸಹಜವಾದ ಪರಿಸರ ಯಾವುದೇ ಒಂದು ನಾಡಿನ ಜನರಿಗೆ ಏಳಿಗೆ ಹೊಂದಲು ಅತ್ಯಂತ ಪೂರಕವಾದುದ್ದಾಗಿದೆ.

ವಲಸೆ ತಂದ ಬದಲಾವಣೆ.

ಹಿಂದೆಲ್ಲಾ ಇಂತಹ ವಾತಾವರಣವು ಸಹಜವಾಗಿಯೇ ಒಂದು ನಾಡಿನಲ್ಲಿ ಇರುತ್ತಿತ್ತು. ಹೊರಗಿನವರು ಸಮಾಜದ ಒಳಬರುವುದೇ ದುಸ್ತರವಾಗಿದ್ದಂತಹ ದಿನಗಳಲ್ಲಿ ಹಾಗೆ ಬಂದವರೂ ಕೂಡಾ ಬಲುಬೇಗ ಬೆರೆತುಹೋಗಬೇಕಾದ ಅನಿವಾರ್ಯತೆಯ ವಾತಾವರಣವಿತ್ತು. ಹೀಗಾಗಿ ಎರಡು ಬೇರೆ ಬೇರೆ ನುಡಿಯಾಡುವ ಜನಾಂಗಗಳ ನಡುವಿನ ಒಡನಾಟದಿಂದಾಗುವ ಪರಿಣಾಮಗಳು ಬಹಳ ಕಡಿಮೆಯಿರುತ್ತಿತ್ತು. ಆದರೆ ನಾಗರೀಕತೆಯಲ್ಲಿ ಹೊಸಹೊಸ ಕಂಡುಕೊಳ್ಳುವಿಕೆಗಳಾದ್ದರಿಂದಾಗಿ ದೂರಗಳು ಹತ್ತಿರವಾದಂತೆಯೇ, ಬೇರೆ ಬೇರೆ ನುಡಿಗಳ ಜನರ ನಡುವಿನ ಒಡನಾಟ ಹೆಚ್ಚತೊಡಗಿತು. ಇದು ವಲಸೆಯ ಹೆಚ್ಚಳಕ್ಕೆ ನೀರೆರೆಯಿತು. ಇಂದು ಇಂತಹ ವಲಸೆ, ದೇಶದ ಒಗ್ಗಟ್ಟಿಗೆ ಪೂರಕವೆನ್ನುವ ತಪ್ಪುಕಲ್ಪನೆಯ ಕಾರಣದಿಂದಾಗಿ ವಲಸೆಯೂ ಅಸಹಜವಾದ ಪ್ರಮಾಣದಲ್ಲಿ ನಡೆಯುತ್ತಾ ಸಮಾಜದ ಮೇಲಿನ ಪರಿಣಾಮಗಳೂ ಮಿತಿಮೀರಿವೆ. ಇಂತಹ ಪರಿಸ್ಥಿತಿ ಭಾರತ ಸ್ವತಂತ್ರವಾದ ನಂತರ ಇದರೊಳಗಿನ ಕರ್ನಾಟಕದಂತಹ ಭಾಷಾವಾರು ಪ್ರದೇಶಗಳ ಮೇಲೆ ತೀವ್ರವಾಗಿಯೇ ಆಗುತ್ತಿರುವುದನ್ನು ನೋಡುತ್ತಿದ್ದೇವೆ. ಹೀಗೆ ಅಸಹಜವಾದ ಬೆಳವಣಿಗೆಗಳು ಉಂಟುಮಾಡುವ ಬದಲಾವಣೆಗಳು ದೊಡ್ಡಮಟ್ಟದಲ್ಲಿ ಆಗುತ್ತಿರುವಾಗ ಕನ್ನಡಿಗರಂತಹ ನುಡಿಜನಾಂಗವೊಂದುನುಡಿಹಮ್ಮುಗೆಯ (ಲಾಂಗ್ವೇಜ್ ಪ್ಲಾನಿಂಗ್) ಮೊರೆ ಹೋಗಬೇಕಾದ ಅಗತ್ಯವು ಎದ್ದುಕಾಣುತ್ತದೆ.

ನುಡಿಹಮ್ಮುಗೆ – language planning

ವಿಶ್ವಸಂಸ್ಥೆಯ ಅಂಗವಾದ ಯುನೆಸ್ಕೋ ಪ್ರಪಂಚದ ಬೇರೆ ಬೇರೆ ಭಾಗಗಳಲ್ಲಿರುವ ಭಾಷೆಗಳ ಸ್ಥಿತಿಗತಿ ಅಧ್ಯಯನ ಮಾಡಿ, ಕಾರ್ಯಯೋಜನೆಗಳನ್ನು ರೂಪಿಸುವ ಸಲುವಾಗಿ ೨೦೧೧ರಲ್ಲಿ ಒಂದು ಪರಿಣಿತರ ವರದಿಯನ್ನು ಹೊರತಂದಿತ್ತು. ಅಲ್ಲಿ ಜಗತ್ತಿನ ಐದು ವಿಭಿನ್ನ ವಲಯಗಳ ಪ್ರಾತಿನಿಧಿಕ ದೇಶಗಳಲ್ಲಿ ನಡೆಸಲಾದ ಅಧ್ಯಯನವನ್ನು ಕೂಡಾ ಪ್ರಸ್ತುತಪಡಿಸಲಾಯ್ತು. ಇಲ್ಲಿ ಮೇಲ್ನೋಟಕ್ಕೆ ನೋಡಿದಾಗ ‘ಭಾಷೆಗಾಗಿ ಒಂದು ಯೋಜನೆ ಮಾಡುವುದು’ ಎನ್ನುವುದೇ ಒಂದು ರೀತಿಯಲ್ಲಿ ಅಚ್ಚರಿಯಾದ, ಅಸಹಜವಾದ ಕ್ರಿಯೆಯೆನ್ನಿಸುವಂತೆ ತೋರಿದರೂ ಕೂಡಾ ಒಂದು ನುಡಿಯ ಮೇಲೆ, ನುಡಿಯನ್ನಾಡುವ ಜನರ ಮೇಲೆ ಅಸಹಜವಾಗೇ ಬೇರೆ ಬೇರೆ ಪ್ರಭಾವಗಳಾಗುತ್ತಾ ಆ ನುಡಿ ಅಳಿದುಹೋಗುವಂತಾಗುತ್ತಿರುವ ವಾಸ್ತವ ಸನ್ನಿವೇಶದಲ್ಲಿ “ಲಾಂಗ್ವೇಜ್ ಪ್ಲಾನಿಂಗ್” ಅಂದರೆ “ನುಡಿ ಹಮ್ಮುಗೆ” ಅತ್ಯಗತ್ಯವೆನ್ನಿಸುತ್ತದೆ.

ನುಡಿಹಮ್ಮುಗೆಯ ಅಗತ್ಯವೇನು?

ನುಡಿಹಮ್ಮುಗೆಯ ಅಗತ್ಯವನ್ನು ತಿಳಿಯುವ ಮೊದಲು ನಾವು ಲಿಂಗ್ವಿಸ್ಟಿಕ್ ರಿಜಿಸ್ಟರ್ (ನುಡಿ ಬಳಕೆ ಹರವು) ಎನ್ನುವುದರತ್ತ ನೋಡೋಣ. ಒಂದು ನುಡಿಯ ನುಡಿ ಹರವಿನ ಪಟ್ಟಿ ಎನ್ನುವುದನ್ನು ಹೀಗೆ ಅರಿಯಬಹುದು. ಆ ನುಡಿಯಲ್ಲಿ ಲಾಲಿ ಹಾಡುಗಳಿವೆಯೇ? ಇದೆ ಎಂದರೆ ಪಟ್ಟಿಗೆ ಒಂದು ಅಂಶ ಸೇರಿದಂತಾಯ್ತು. ಆ ನುಡಿಯಲ್ಲಿ ಲಿಪಿ ಇದೆಯೇ? ನುಡಿಯಲ್ಲಿ ಮೊದಲ ಹಂತದ ಕಲಿಕೆ ಇದೆಯೇ?… ಹೀಗೆ ಸಾಗುವ ಪಟ್ಟಿ ನುಡಿಯಲ್ಲಿ ದಿನಬಳಕೆಯ ವಸ್ತುಗಳನ್ನು ಬಳಸುವ ಬಗೆ/ ಎಚ್ಚರಿಕೆಯ ಮಾಹಿತಿ ಟಿಪ್ಪಣಿಯಿವೆಯೇ ಎಂಬ ಸಣ್ಣ ವಿಷಯದಿಂದ ಆ ನುಡಿಯಲ್ಲಿ ಉನ್ನತ ತಂತ್ರಜ್ಞಾನವಿದೆಯೇ ಎನ್ನುವವರೆಗೂ ಹರವು ಪಡೆದುಕೊಳ್ಳುತ್ತದೆ. ಹೆಚ್ಚು ಹೆಚ್ಚು ಹರವು ಪಡೆದುಕೊಂಡಷ್ಟೂ ಆ ನುಡಿ ಹೆಚ್ಚು ಹೆಚ್ಚು ಜೀವಂತ ಮತ್ತು ಪ್ರಭಾವಶಾಲಿಯಾಗುತ್ತದೆ. ಇದರಿಂದಾಗಿ ಆ ನುಡಿಯಾಡುವ ಜನರ ಏಳಿಗೆಯ ಹೆಬ್ಬಾಗಿಲು ತೆರೆದುಕೊಳ್ಳುತ್ತದೆ. ಅಸಹಜ ಕಾರಣಗಳಿಂದಾಗಿ ತೊಂದರೆಗೆ ಒಳಪಡುತ್ತಿರುವ ಕನ್ನಡದಂತಹ ಸಮೃದ್ಧವಾದ ನುಡಿಗೆ ನುಡಿಹಮ್ಮುಗೆಯ ಬೆಂಬಲ ದೊರೆತರೆ ನಾಡಿಗೆ ಒಳಿತು.

‘ನುಡಿಹಮ್ಮುಗೆ’ಯು ದಿನದಿಂದ ದಿನಕ್ಕೆ “ನುಡಿ ಬಳಕೆಯ ಹರವ”ನ್ನು ಕುಗ್ಗಿಸಿಕೊಳ್ಳುತ್ತಿರುವ ಕನ್ನಡಕ್ಕೆ ಜೀವಜಲವಾಗುವುದರಲ್ಲಿ ಸಂಶಯವಿಲ್ಲ. ಕನ್ನಡನಾಡಿನಲ್ಲಿ ಕನ್ನಡವು ಬದುಕಿನ ಎಲ್ಲಾ ಅಗತ್ಯಗಳನ್ನು ಪೂರೈಸುವ ಸಾಧನವಾಗಬೇಕಾಗಿದೆ. ಇಂದು ಕನ್ನಡಿಗರ ಕಲಿಕೆಯು ಇರುವ ಹಂತವನ್ನು ನೋಡಿ. ಕೆಲವರ್ಷಗಳ ಹಿಂದೆ ಹತ್ತನೇ ತರಗತಿಯ ಆಚೆಗೆ ಪಿಯುಸಿಯವರೆಗೂ ಇದ್ದ ಕನ್ನಡ ಮಾಧ್ಯಮದಲ್ಲಿನ ಕಲಿಕೆ ದಿನೇ ದಿನೇ ಕುಗ್ಗುತ್ತಾ ಬರುತ್ತಿದೆ. ಉನ್ನತಕಲಿಕೆಯೆನ್ನುವುದು ಕನ್ನಡದಲ್ಲಿ ಕಷ್ಟ ಎನ್ನುವ ವಾತಾವರಣವಿದೆ. ತಾಂತ್ರಿಕ ವಿಷಯಗಳಲ್ಲಂತೂ ಇದು ಅಸಾಧ್ಯವೆನ್ನಿಸುವ ಪರಿಸ್ಥಿತಿಯಿದೆ. ಕನ್ನಡದ ಜನರಿಗೆ ಈ ನಾಡಿನ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಕನ್ನಡ ಒಂದನ್ನೇ ಬಳಕೆ ಮಾಡಿ ಸುಲಭವಾಗಿ ಕೆಲಸ ಮುಗಿಸಿಕೊಂಡು ಬರುವ ಸಾಧ್ಯತೆ ಕುಗ್ಗುತ್ತಾ ಬರುತ್ತಿದೆ. ಬೆಂಗಳೂರು ಬಸ್ ನಿಲ್ದಾಣದಲ್ಲಿ ಇದ್ದ ಸುಲಲಿತತೆ ಮೆಟ್ರೋ ರೈಲು ನಿಲ್ದಾಣದಲ್ಲಿಲ್ಲ. ಬೆಂಗಳೂರು ವಿಮಾನ ನಿಲ್ದಾಣದಲ್ಲಂತೂ ಇಲ್ಲವೇ ಇಲ್ಲಾ! ಇನ್ನು ನಮ್ಮ ಮನರಂಜನೆ ಮತ್ತು ದೂರದರ್ಶನಗಳಲ್ಲಿ ಕನ್ನಡದಲ್ಲಿ ಕಾರ್ಯಕ್ರಮಗಳನ್ನು, ಮನರಂಜನೆಯನ್ನು ಪದೆದುಕೊಳ್ಳಲಾಗದ ಪರಿಸ್ಥಿತಿಯಿರುವುದನ್ನೂ ಗಮನಿಸಬೇಕಾಗಿದೆ. ಇಂಥಾ ದುಸ್ಥಿತಿಯನ್ನು ಸರಿಯಾದ ನುಡಿಹಮ್ಮುಗೆಯೊಂದು ಬದಲಿಸಬಲ್ಲದು.

ನುಡಿಹಮ್ಮುಗೆಯ ಒಂದು ಪ್ರಮುಖ ಅಂಶವಾದದ್ದು ನಾಡಿನ ಜನರ ಮನರಂಜನೆ. ಇಂಥಾ ಹಮ್ಮುಗೆಯ ಉಳಿದ ವಿಸ್ತಾರವಾದ ಕೆಲಸಕಾರ್ಯಗಳ, ಅಗಾಧವಾದ ಕ್ಷೇತ್ರಗಳ ವಿವರಗಳನ್ನು ಬಿಟ್ಟು ನಾವೀಗ ನೇರವಾಗಿ ಮನರಂಜನೆಯೆನ್ನುವ ನುಡಿಬಳಕೆಯ ಕ್ಷೇತ್ರದಲ್ಲಿ ಕನ್ನಡದ ಇಂದಿನ ಸ್ಥಿತಿಗತಿಯತ್ತ ಕಣ್ಣು ಹಾಯಿಸೋಣ.

ಕನ್ನಡಿಗರ ಮನರಂಜನೆ!

ಇಂದು ಜಗತ್ತಿನ ಎಲ್ಲಾ ಜನರಂತೆಯೇ ನಮ್ಮ ಮನರಂಜನೆಗಳೂ ಕೂಡಾ ಅನೇಕ ಆಯಾಮಗಳನ್ನು ಪಡೆದುಕೊಂಡಿವೆ. ನಮ್ಮದೇ ಪಾರಂಪರಿಕವಾದ ಹಲವಾರು ಕಲಾಪ್ರಕಾರಗಳಿಂದ, ಜಾನಪದ, ರಂಗಭೂಮಿಯಂತಹ ಅನೇಕ ಕ್ಷೇತ್ರಗಳವರೆಗೂ ಇದು ಹರಡಿಕೊಂಡಿದೆ. ಮಕ್ಕಳ ಮನರಂಜನೆಯಲ್ಲಿ ಕಾರ್ಟೂನುಗಳು, ಕಲಿಕೆಗೆ ಸಹಾಯಕವಾದ ಅನಿಮಲ್ ಪ್ಲಾನೆಟ್, ಹಿಸ್ಟರಿ ಚಾನೆಲ್, ಡಿಸ್ಕವರಿ ಮೊದಲಾದ ಬೋಧಕ ಜ್ಞಾನವಾಹಿನಿಗಳಿವೆ. ಸರ್ಕಾರಿ ರೇಡಿಯೋ ಕೇಂದ್ರಗಳ ಜೊತೆಯಲ್ಲಿ ಖಾಸಗಿ ಎಫ್‌ಎಂ ವಾಹಿನಿಗಳು ಕೆಲಸಮಾಡುತ್ತಿವೆ. ದೃಶ್ಯಮಾಧ್ಯಮದಲ್ಲಿ ಸುದ್ದಿವಾಹಿನಿಗಳು, ಮನೋರಂಜನಾ ವಾಹಿನಿಗಳು ಕೆಲಸ ಮಾಡುತ್ತಿದ್ದು ಇವೆಲ್ಲಾ ಬೆರಳ ತುದಿಯಲ್ಲೇ, ಮನೆಯ ಒಳಗೇ ಸಿಗುವಂತಹವಾಗಿವೆ. ಹಾಗೇ ಚಲನಚಿತ್ರ ರಂಗವೂ ಕೂಡಾ ಮನರಂಜನೆಯ ಪ್ರಮುಖ ಮಾಧ್ಯಮವಾಗಿ ಬೆಳೆದಿದೆ. ಇವುಗಳಲ್ಲೆಲ್ಲಾ ಕನ್ನಡ ಎಷ್ಟರ ಮಟ್ಟಿಗೆ ಇದೆ ಎನ್ನುವುದು ಪ್ರಮುಖವಾದ ಅಂಶವಾಗಿದೆ. ಈ ಕ್ಷೇತ್ರಗಳಲ್ಲಿ ಕನ್ನಡ ಕಳೆದುಹೋಗದೇ ಇರಬೇಕಾದ್ದು ಅತ್ಯಂತ ಮಹತ್ವದ್ದಾಗಿದೆ. ಇವುಗಳಲ್ಲಿ ಅನೇಕವು ಸಾರ್ವಜನಿಕ ಜಾಗಗಳಲ್ಲಿಯೂ ಬಿತ್ತರವಾಗುವಂತಹವು. ಹಾಗಾಗಿ ಇಲ್ಲೆಲ್ಲಾ ಕನ್ನಡವಿರುವುದು ಅತ್ಯಗತ್ಯವಾಗಿದೆ.

ನುಡಿಯ ಬೇರೆತನ, ವಲಸೆಗೆ ಕಡಿವಾಣ

ಭಾರತದೇಶದಲ್ಲಿ ಜನದಟ್ಟಣೆ ಕಡಿಮೆಯಿರುವ (ಒಂದು ಚದರ ಕಿಲೋಮೀಟರ್ ವ್ಯಾಪ್ತಿಯಲ್ಲಿ ೩೧೯ ಜನ – ಭಾರತದ ಸರಾಸರಿ ೩೬೮), ಮಕ್ಕಳ ಜನನ ಪ್ರಮಾಣ ಹಿಡಿತದಲ್ಲಿರುವ (ಕರ್ನಾಟಕದ ಸರಾಸರಿ ಹೆರುವೆಣಿಕೆ ಅಂದರೆ ಟಿಎಫ಼್‌ಆರ್ ೨.೩ – ಭಾರತದ್ದು ೨.೯) ಕರ್ನಾಟಕದಂತಹ ನಾಡುಗಳು ಒಂದೆಡೆಯಿದ್ದರೆ, ಅತಿ ಜನದಟ್ಟಣೆಯ, ಜನಸಂಖ್ಯಾ ಸ್ಫೋಟದಿಂದ ನರಳುತ್ತಿರುವ ಉತ್ತರಪ್ರದೇಶ (೮೨೮)(೪.೪), ಬಿಹಾರ(೧೧೦೨)(೪.೩)ದಂತಹ ನಾಡುಗಳು ಇನ್ನೊಂದೆಡೆಯಿವೆ. ಭಾರತ ಸಂವಿಧಾನವು ಎಲ್ಲಾ ನಾಗರೀಕರಿಗೂ ವಲಸೆ ಹೋಗುವ ಮುಕ್ತ ಅವಕಾಶ ನೀಡಿದೆ. ಹೀಗಾಗಿ ಆಡಳಿತಾತ್ಮಕವಾಗಿ ಯಾವುದೇ ಕಡಿವಾಣವಿಲ್ಲದ ಕಾರಣದಿಂದಾಗಿ ಜನದಟ್ಟಣೆಯ ಹಿಂದೀ ಮಾತಾಡುವ ರಾಜ್ಯಗಳಿಂದ ಕರ್ನಾಟಕಕ್ಕೆ ಎಗ್ಗುಸಿಗ್ಗಿಲ್ಲದ ವಲಸೆ ಆಗುತ್ತಿದೆ ಮತ್ತು ಮುಂದಿನ ದಿನಗಳಲ್ಲಿ ಇದು ಮತ್ತಷ್ಟು ತೀವ್ರವಾಗಲಿದೆ. ಇದು ಈಗಾಗಲೇ ಜನಸಂಖ್ಯಾ ಕುಸಿತದಿಂದ ತನ್ನರಿವಿಗೇ ಬಾರದಂತೆ ನರಳುತ್ತಿರುವ, ನಶಿಸುತ್ತಿರುವ ಕನ್ನಡಿಗರಂಥಾ ಜನಾಂಗಗಳಿಗೆ ಮಾರಕವಾಗಲಿದೆ. ಇಂತಹ ವಲಸೆಗೆ ಕಡಿವಾಣ ಹಾಕುವಲ್ಲಿ ಪ್ರಮುಖವಾದದ್ದು ನುಡಿ.

ದೆಹಲಿಯಲ್ಲಿ ಇಳಿದಾಗ ನಮಗೆ ಅಲ್ಲಿನ ರೈಲಿನಲ್ಲಿ, ಮೆಟ್ರೋದಲ್ಲಿ, ರೈಲು ನಿಲ್ದಾಣದಲ್ಲಿ, ಬಸ್ಸುಗಳಲ್ಲಿ, ಮಾಲ್ ಅಂಗಡಿ ಮುಂಗಟ್ಟುಗಳಲ್ಲಿ ಕನ್ನಡ ಕೇಳಿಬರುತ್ತಿದ್ದರೆ ಏನನ್ನಿಸುತ್ತದೆ? ದೆಹಲಿಯ ರೇಡಿಯೋಗಳಲ್ಲಿ ಕನ್ನಡದ ಜಾಹೀರಾತುಗಳು, ಕನ್ನಡದ ಹಾಡುಗಳು, ದೂರದರ್ಶನದಲ್ಲಿ ಕನ್ನಡದ ಕಾರ್ಯಕ್ರಮಗಳು, ಅಲ್ಲಿನ ವಾಹಿನಿಗಳಲ್ಲಿ ಕನ್ನಡ ಚಿತ್ರರಂಗದ್ದೇ ಸುದ್ದಿಗಳು ಇದ್ದರೆ ಏನಾಗುತ್ತದೆ? ನಮಗೆ ದೆಹಲಿಯೂ ಕರ್ನಾಟಕವೇ ಅನ್ನಿಸುವುದಿಲ್ಲವೇ? ಇದರಿಂದಾಗಿ ದೆಹಲಿಗೆ ವಲಸೆ ಹೋಗಲು ಕನ್ನಡಿಗರಿಗೆ ಉತ್ತೇಜನ ಸಿಗುವುದಿಲ್ಲವೇ? ಭಾರತದಂತಹ ಬಹುಭಾಷಿಕ ನಾಡಲ್ಲಿ, ಎಲ್ಲರೂ ಸಮಾನರು ಎಂದೆನ್ನುತ್ತಲೇ ಪ್ರಜಾಪ್ರಭುತ್ವದ ಹೆಸರಲ್ಲಿ, ಹಿಂದೀ ಭಾಷಿಕರಿಗೆ ಮಾತ್ರವೇ ಇಂತಹ ಸೌಕರ್ಯ ಒದಗಿಸಿಕೊಡುತ್ತಿರುವ ಭಾರತ ಸರ್ಕಾರದ ರೀತಿನೀತಿಗಳು ನಿಜಕ್ಕೂ ಹಿಂದೀಯೇತರ ಜನಾಂಗಗಳಿಗೆ ಕೊಡಲಿ ಕಾವು! ಕನ್ನಡನಾಡಿನ ಮನರಂಜನಾ ಕ್ಷೇತ್ರದಲ್ಲಿ ಕನ್ನಡದ ಸಾರ್ವಭೌಮತ್ವವೆನ್ನುವುದು ಈ ನಿಟ್ಟಿನಲ್ಲಿ ನೋಡಿದಾಗ ಅತ್ಯಗತ್ಯವಾದುದು ಎನ್ನಿಸುತ್ತದೆ.

ಕನ್ನಡಿಗರೇ ಎಲ್ಲವನ್ನೂ ಮಾಡಲು ಸಾಧ್ಯವಿಲ್ಲ!

ಹೌದು! ಒಂದು ಆದರ್ಶವಾದ ಸನ್ನಿವೇಶದಲ್ಲಿ ನಮ್ಮ ಬದುಕಿಗೆ ಬೇಕಿರುವ ಎಲ್ಲವನ್ನೂ ನಾವೇ ಮಾಡಿಕೊಳ್ಳುವಂತಾಗಬೇಕು. ನಮ್ಮಲ್ಲೇ ಅವತಾರ್, ಬೈಸಿಕಲ್ ಥೀವ್ಸ್ ಚಿತ್ರಗಳು ಬರಬೇಕು. ನಮ್ಮಲ್ಲೇ ಕಾರ್ಟೂನ್ ಮಾಯಾಲೋಕ ಹುಟ್ಟಬೇಕು. ನಮ್ಮಲ್ಲೇ ಅನಿಮಲ್ ಪ್ಲಾನೆಟ್, ನ್ಯಾಶನಲ್ ಜಿಯಾಗ್ರಫಿಗಳು ತಲೆಯೆತ್ತಬೇಕು. ಆದರೆ ದಿಟದ ಜಗದಲ್ಲಿ ಇದು ಯಾವ ಒಂದು ನಾಡಿಗೂ ಸಾಧ್ಯವಿಲ್ಲದ್ದು! ಇಷ್ಟಕ್ಕೂ ನಾವೇ ಎಲ್ಲಾ ಮಾಡಿಕೊಂಡರೂ ಇನ್ನೆಲ್ಲೋ ಇನ್ನಾರೋ ಮಾಡುವ ಅದ್ಭುತ ಸೃಷ್ಟಿಗಳನ್ನೂ ನಾವು ಅನುಭವಿಸುವ ಹಕ್ಕಂತೂ ಇರುತ್ತದೆಯಲ್ಲವೇ? ಹಾಗಾಗಿ ಎಲ್ಲವನ್ನೂ ನಾವೇ ಮಾಡಿಕೊಳ್ಳುವುದು ಅಸಾಧ್ಯ ಮತ್ತು ಅನಗತ್ಯ ಎನ್ನಬಹುದಾಗಿದೆ. ಆದರೆ ಎಲ್ಲವನ್ನೂ ನಮ್ಮ ನುಡಿಯಲ್ಲೇ ಪಡೆದುಕೊಳ್ಳುವುದು ತಂತ್ರಜ್ಞಾನವೆನ್ನುವ ಮಾಯಾದಂಡದಿಂದಾಗಿ ಇಂದು ಸಾಧ್ಯವಾಗಿದೆ.

ಇದನ್ನು ಸಾಧ್ಯವಾಗಿಸುತ್ತಿರುವುದು ಈಗಾಗಲೇ ಇರುವ ಚಿತ್ರಗಳಿಗೆ ದನಿಮೆತ್ತುವ ಡಬ್ಬಿಂಗ್ ಎನ್ನುವ ತಂತ್ರಜ್ಞಾನ. ತಾಂತ್ರಿಕವಾಗಿ ಇಂದು ಕನ್ನಡಿಗರು ಜಗತ್ತಿನ ಯಾವುದೇ ಭಾಷೆಯ, ಯಾವುದೇ ಕಾರ್ಯಕ್ರಮವನ್ನು ತಮ್ಮದೇ ನುಡಿಯಲ್ಲಿ ಪಡೆದುಕೊಳ್ಳಬಹುದಾಗಿದೆ. ಆದರೆ ಕನ್ನಡನಾಡಿನಲ್ಲಿ ಇದು ಇದುವರೆಗೂ ಸಾಧ್ಯವಾಗಿಲ್ಲ. ಕೆಲದಶಕಗಳ ಹಿಂದೆ ಡಬ್ಬಿಂಗ್ ಚಿತ್ರಗಳನ್ನು ಕರ್ನಾಟಕದಲ್ಲಿ ತಡೆಹಿಡಿಯಲಾಯ್ತು. ಇದು ಮುಂದೆ ದೂರದರ್ಶನದಂತಹ ಖಾಸಗಿ ಆಯ್ಕೆಯ ಮನರಂಜನಾ ಕ್ಷೇತ್ರಕ್ಕೂ ಹಬ್ಬಿಕೊಂಡಿತು. ಹಾಗಾಗಿ ಇಂದು ಕನ್ನಡಿಗರಿಗೆ ಕನ್ನಡದಲ್ಲೇ ತಮ್ಮೆಲ್ಲಾ ಮನರಂಜನೆಯನ್ನು ಪಡೆದುಕೊಳ್ಳುವುದು ಸಾಧ್ಯವಾಗುತ್ತಿಲ್ಲ. ವಿಶೇಷವೆಂದರೆ ವಿಶ್ವಸಂಸ್ಥೆಯ ಬಾರ್ಸಿಲೋನಾ ಭಾಷಾಹಕ್ಕುಗಳ ಘೋಷಣೆಯಲ್ಲಿ ಡಬ್ಬಿಂಗ್ ಎನ್ನುವುದನ್ನು ಒಂದು ನುಡಿ ಜನಾಂಗ ತನ್ನ ನುಡಿಯನ್ನು ಉಳಿಸಿಕೊಳ್ಳಲು ಇರುವ ಸಾಧನವೆಂದು ಹೀಗೆ ಬರೆಯಲಾಗಿದೆ.

Article 44

All language communities are entitled to access to intercultural programme, through the dissemination of adequate information, and to support for activities such as teaching the language to foreigners, translation, dubbing, post-synchronization and subtitling.

ಬಹುಶಃ ಪ್ರಪಂಚದಲ್ಲಿ ಡಬ್ಬಿಂಗ್ ಎನ್ನುವುದನ್ನು ನುಡಿಯ ಶತ್ರುವೆಂದು ಬಿಂಬಿಸಿ ನಲವತ್ತೈದಕ್ಕೂ ಹೆಚ್ಚು ವರ್ಷಗಳ ಕಾಲ ನಿಶೇಧಿಸಿರುವ ಉದಾಹರಣೆಯನ್ನು ನಾವು ಕರ್ನಾಟಕದಲ್ಲಿ ಮಾತ್ರಾ ಕಾಣಬಹುದೇನೋ?! ಇದು ಕನ್ನಡ ಚಿತ್ರರಂಗವೆನ್ನುವುದು ಕನ್ನಡನುಡಿಗಿಂತಲೂ ಹಿರಿದೆನ್ನುವ ಅನಿಸಿಕೆಯಿಂದ ಆಗಿರುವಂತಿದೆ. ವಾಸ್ತವವಾಗಿ ದೀರ್ಘಕಾಲದಲ್ಲಿ ಡಬ್ಬಿಂಗ್ ಕನ್ನಡ ಚಿತ್ರರಂಗಕ್ಕೂ ಒಳಿತನ್ನು ಮಾಡಬಲ್ಲುದಾಗಿದೆ!

Leave a Reply