ಜನರ ಸಮಸ್ಯೆ ಆಲಿಸದಿದ್ದರೆ ಜಿಲ್ಲಾಧಿಕಾರಿಗಳ ವಿರುದ್ಧ ಕ್ರಮ: ಸಿಎಂ ಕುಮಾರಸ್ವಾಮಿ

ಬೆಂಗಳೂರು: ಜಿಲ್ಲಾಧಿಕಾರಿಗಳು ತಮ್ಮ ಜಿಲ್ಲೆಗಳಲ್ಲಿನ ಜನರ ಸಮಸ್ಯೆಗಳನ್ನು ಆಲಿಸಿ ಪರಿಹರಿಸಬೇಕು. ಇಲ್ಲವಾದಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಸಿಎಂ ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ.

ಗೃಹ ಕಚೇರಿ ಕೃಷ್ಣಾದಲ್ಲಿ ಜನತಾ ದರ್ಶನ ನಡೆಸಿ ಬಳಿಕ ಮಾತನಾಡಿದ ಅವರು, ವಾರದಲ್ಲಿ ಒಂದು ದಿನ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಅಲ್ಲಿನ ಜನರ ಸಮಸ್ಯೆ ಆಲಿಸಬೇಕು. ಜನತಾದರ್ಶನಕ್ಕೆ ಸಾಲ ಮಾಡಿ ದೂರದ ಊರುಗಳಿಂದ ಇಲ್ಲಿಗೆ ಬರುತ್ತಿದ್ದಾರೆ.‌ ಈ ಹಿನ್ನೆಲೆಯಲ್ಲಿ, ಜನ ಸಾಮಾನ್ಯರ ಸಮಸ್ಯೆಗಳನ್ನು ಅಲ್ಲೇ ಬಗೆಹರಿಸಬೇಕು ಎಂದು ಸುತ್ತೋಲೆ ಹೊರಡಿಸಿದ್ದೇನೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿಗಳಿಂದ ಬಗೆಹರಿಸಲಾಗದಿದ್ದರೆ, ನಂತರ ನನ್ನ ಬಳಿ ಬರಲಿ. ೩೦ ಜಿಲ್ಲೆ ಜಿಲ್ಲಾಧಿಕಾರಿ ಗಳು ವಾರದಲ್ಲಿ ಒಂದು ದಿನ ಜನರ ಸಮಸ್ಯೆ ಆಲಿಸಬೇಕು. ಯಾವ ರೀತಿ ಜನ ಸಾಮಾನ್ಯರ ಜೊತೆ ಚರ್ಚೆ ನಡೆಸುತ್ತಾರೆ ಅಂತ ವೀಡಿಯೋ ಕಾನ್ಫರೆನ್ಸ್ ‌ಮೂಲಕ ತಿಳಿಸಬೇಕು. ಜಿಲ್ಲೆಯ ಸಮಸ್ಯೆ ‌ಪಟ್ಟಿ ಮಾಡಿ ನನ್ನ ಗಮನಕ್ಕೆ ಕೊಡಬೇಕು. ವಿಡಿಯೋ ಕಾನ್ಫರೆನ್ಸ್ ಮೂಲಕ ಮಾಹಿತಿ ಪಡೆಯುತ್ತೇನೆ ಎಂದು ವಿವರಿಸಿದರು.
ಈ ಸಂಬಂಧ ಪ್ರಧಾನ ಕಾರ್ಯದರ್ಶಿಗಳಿಗೆ ಉಸ್ತುವಾರಿ ಕೊಟ್ಟಿದ್ದೇವೆ. ಅವರು ಜಿಲ್ಲೆಗಳಿಗೆ ಹೋಗಿ ಅಲ್ಲೇ ಒಂದು ದಿನ ಇದ್ದು, ಎಲ್ಲ ಮಾಹಿತಿಯನ್ನು ಕಲೆ ಹಾಕಿ ಮುಖ್ಯ ಕಾರ್ಯದರ್ಶಿಗಳಿಗೆ ನೀಡಬೇಕು ಎಂದು ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.

250 ವಿಕಲಚೇತನರ ನೇಮಕಾತಿ

ಮೊದಲ ಹಂತದಲ್ಲಿ 250 ವಿಕಲಚೇತನರು ಮತ್ತು ಬಡ ಯುವಕರನ್ನು ನೇಮಕಾತಿ ಮಾಡಲಾಗುತ್ತದೆ ಎಂದು ಇದೇ ವೇಳೆ ಸಿಎಂ ತಿಳಿಸಿದರು. ಕಳೆದ ಒಂದೂವರೆ ತಿಂಗಳಿನಿಂದ ಜನತಾ ದರ್ಶನ ಕಾರ್ಯಕ್ರಮ ನಡೆಯುತ್ತಿದೆ. ಇದರಲ್ಲಿ ಉದ್ಯೋಗದ ಸಮಸ್ಯೆ ಹೊತ್ತ ಕುಟುಂಬದ ಜನರೇ ಹೆಚ್ಚಿನ ಸಂಖ್ಯೆಯಲ್ಲಿ ಬರ್ತಿದ್ದಾರೆ. ಹೀಗಾಗಿ ಮೊದಲ ಹಂತದಲ್ಲಿ ೨೫೦ ಅಂಗವೈಕಲ್ಯ ಯುವಕರಿಗೆ ನೇಮಕಾತಿ ಮಾಡಲಾಗುತ್ತದೆ. ಈ ಕುರಿತು ಬೇರೆ ಬೇರೆ ಕಂಪನಿ ಜೊತೆ ಚರ್ಚೆ ನಡೆಸಿದ್ದೇನೆ. ಈ ಬಗ್ಗೆ ಕೆಲ ಮಾರ್ಪಾಡು ಮಾಡಿತ್ತಿದ್ದೇನೆ ಎಂದು ಸ್ಪಷ್ಟಪಡಿಸಿದರು.

Leave a Reply