ಮತ್ತೆ ಕಾಲು ಕೆರೆದು ಜಗಳಕ್ಕೆ ನಿಂತಿರುವ ತಮಿಳ್ ನಾಡು!!

ಕನ್ನಡಿಗರು ಎಷ್ಟೇ ಸಹಿಷ್ಣರಾಗಿದ್ದರು ಕಾವೇರಿಯ ವಿಷಯಕ್ಕೆ ಬಂದಾಗ ದಕ್ಷರೇ. ಪದೇ ಪದೇ ನಮ್ಮ ತಪ್ಪಿಲದಿದ್ದರು ನಾವು ಅವರ ನೀರನ್ನು ಕಿತ್ತುಕೊಂಡಿದ್ದೇವೆ ಅನ್ನೊ ರೀತಿ  ನಮನ್ನು ಕೆಣುಕುವುದು ಅವರ ಚಾಳಿ. ಈಗ ಮೇಕೆ ದಾಟು ವಿಷಯದಲ್ಲೂ ಇದೆ ಆಗಿದೆ. ಕರ್ನಾಟಕ ಸರ್ಕಾರ ಕುಡಿಯುವ ನೀರಿಗಾಗಿ ರಾಮನಗರದ ಮೇಕೆದಾಟು ಎಂಬಲ್ಲಿ ಕಿರು ಅಣೆಕಟ್ಟು ನಿರ್ಮಾಣಕ್ಕೆ ಮುಂದಾಗುತ್ತಿರುವುದು ತಮಿಳುನಾಡು ಸರ್ಕಾರದ ಪಿತ್ತ ನೆತ್ತಿಗೇರಿದೆ. ಸದಾ ಕಾವೇರಿ ವಿವಾದವನ್ನೇ ಬಂಡವಾಳ ಮಾಡಿಕೊಂಡು ತನ್ನ ಬೇಳೆ ಬೇಯಿಸಿಕೊಳ್ಳುವ ತಮಿಳುನಾಡು ಮೇಕೆದಾಟು ಯೋಜನೆ ವಿರೋಧಿಸಿ ಪ್ರಧಾನಿಗೆ ಪತ್ರ ಬರೆದು ಮಧ್ಯಪ್ರವೇಶಿಸುವಂತೆ ಮನವಿ ಮಾಡಿದೆ.
ನಮ್ಮ ಕಡೆಯಿಂದ ಯಾವುದೇ ತಪ್ಪಿಲ್ಲದಿದ್ದರೂ ನಮ್ಮ ನೀರಿಗೆ ಕಲ್ಲು ಹಾಕುತ್ತಿರುವ ತಮಿಳುನಾಡು ವಿರುದ್ಧ ರಾಜ್ಯದ ಕನ್ನಡ ಪರ ಸಂಘಟನೆಗಳು, ರಾಜಕೀಯ ಪಕ್ಷಗಳು ರಾಜ್ಯದಲ್ಲೂ ಪ್ರತಿಭಟನೆ ನಡೆದಿದೆ. ಹೀಗಾಗಿ ಮೇಕೆದಾಟು ಯೋಜನೆ ಅಂದರೆ ಏನು? ಎರಡು ರಾಜ್ಯಗಳಲ್ಲಿ ಪ್ರತಿಭಟನೆ ಯಾಕೆ ನಡೆಯುತ್ತದೆ? ಇತ್ಯಾದಿ ವಿವರಗಳನ್ನು ಇಲ್ಲಿ ನೀಡಲಾಗಿದೆ.

ಮೇಕೆದಾಟು ಎಂದರೇನು ಎಂದು ಕೇಳಿದರೆ ಸಿಗುವ ಉತ್ತರ ಪಿಕ್ನಿಕ್ ಸ್ಪಾಟ್. ಬೆಂಗಳೂರಿನಿಂದ 90 ಕಿ.ಮೀ ದೂರದ ರಾಮನಗರ ಜಿಲ್ಲೆಯಲ್ಲಿರುವ ಸ್ಥಳವೇ ಮೇಕೆದಾಟು. ಕಾವೇರಿ ಮತ್ತು ಅರ್ಕಾವತಿ ನದಿಗಳ ಸಂಗಮ ಸ್ಥಳದಿಂದ 4 ಕಿಲೋಮೀಟರ್ ದೂರದಲ್ಲಿದೆ ಮೇಕೆದಾಟು. ಇಲ್ಲಿ ಕಾವೇರಿ ನದಿ ಮೇಕೆ ಹಾರಿ ದಾಟುವಷ್ಟು ಕಿರು ಜಾಗದಲ್ಲಿ ಹರಿದು ಆಳವಾದ ಕಂದಕಕ್ಕೆ ಧುಮುಕುತ್ತದೆ. ಇಲ್ಲಿಗೆ ಮೇಕೆದಾಟು ಎಂಬ ಹೆಸರು ಬರಲು ಒಂದು ಕಥೆಯೇ ಇದೆ. ನೂರಾರು ವರ್ಷಗಳ ಹಿಂದೆ ಇಲ್ಲಿ ಕುರಿಗಾಹಿಯೊಬ್ಬ ತನ್ನ ಮೇಕೆಗಳನ್ನು ಮೇಯಿಸುತ್ತ ಇದ್ದನಂತೆ. ನೂರಾರು ಮೇಕೆಗಳು ಒಂದೆಡೆ ಮೇಯುತ್ತಾ ಇದ್ದರೆ ಒಂದು ಮೇಕೆ ಮಾತ್ರ ಒಬ್ಬಂಟಿಯಾಗಿ ಓಡಾಡುತ್ತ ಸೊಪ್ಪು ತಿನ್ನುತ್ತಾ ಇತ್ತು. ಈ ಸಮಯದಲ್ಲಿ ಬೇಟೆಯಾಡಲು ಬಂದಿದ್ದ ಒಂದು ಹುಲಿ ಒಬ್ಬಂಟಿಯಾಗಿ ಸೊಪ್ಪು ತಿನ್ನುತ್ತಿದ್ದ ಮೇಕೆಯನ್ನು ನೋಡಿ ಅದರ ಮೇಲೆ ದಾಳಿ ನಡೆಸಿತು. ಆದರೆ ಹುಲಿಯಿಂದ ತಪ್ಪಿಸಿಕೊಂಡ ಮೇಕೆ ನದಿಯ ತೀರದಲ್ಲೇ ಪ್ರಾಣ ಉಳಿಸಲು ಓಡತೊಡಗಿತು. ಮುಂದೆ ಸಾಗಿದಂತೆ ದಾರಿ ಕಾಣದ ಮೇಕೆ ಒಂದೇ ನೆಗೆತಕ್ಕೆ ಒಂದು ಬಂಡೆಯಿಂದ ಮತ್ತೊಂದು ಬಂಡೆಗೆ ನೆಗೆದು ಪ್ರಾಣ ಉಳಿಸಿಕೊಂಡಿತು. ಆದರೆ ಹುಲಿ ಮಾತ್ರ ನದಿಯನ್ನು ಹಾರುವಂತಹ ಸಾಹಸಕ್ಕೆ ಕೈ ಹಾಕಲಿಲ್ಲ. ಮೇಕೆಯನ್ನು ಹಿಂಬಾಲಿಸುವ ಕಾರ್ಯವನ್ನು ನಿಲ್ಲಿಸಿದ ಹುಲಿ ಅಲ್ಲಿಂದ ಹಸಿದ ಹೊಟ್ಟೆಯಲ್ಲೇ ಹೊರಟಿತು ಎಂಬುದು ಪೂರ್ವಜರು ಹೇಳುವ ಕಥೆ. ಹೀಗಾಗಿ ಈ ಸ್ಥಳ ಮೇಕೆದಾಟು ಎಂಬ ಹೆಸರು ಬಂದು ಪ್ರಸಿದ್ಧಿ ಪಡೆದುಕೊಂಡಿತು.
ಕಾವೇರಿ ನ್ಯಾಯಾಧೀಕರಣ ಐತೀರ್ಪು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಪ್ರತಿವರ್ಷ ಕರ್ನಾಟಕ 177 ಟಿಎಂಸಿ ನೀರನ್ನು ತಮಿಳುನಾಡಿಗೆ ಬಿಡಬೇಕೆಂದು ಆದೇಶ ನೀಡಿದೆ. ಈ ನೀರಿನ ಜೊತೆಗೆ ಹೆಚ್ಚುವರಿಯಾಗಿ ಒಂದು ಅಂದಾಜಿನ ಪ್ರಕಾರ 80, 90 ಟಿಎಂಸಿ ನೀರು ತಮಿಳುನಾಡಿಗೆ ಸೇರುತ್ತದೆ. ಹೀಗೆ ರಾಜ್ಯದಿಂದ ಹರಿದು ಹೋಗುತ್ತಿರುವ ಈ ನೀರನ್ನು ಸಂಗ್ರಹಿಸಿ ಬೆಂಗಳೂರು ನಗರಕ್ಕೆ ಪೂರೈಕೆ ಮಾಡಲು ಕರ್ನಾಟಕ ಸರ್ಕಾರ ಅಣೆಕಟ್ಟು ನಿರ್ಮಿಸಲು ಹೊರಟಿದೆ.
ಮೇಕೆದಾಟುವಿನಲ್ಲಿ ಅಣೆಕಟ್ಟು ಕಟ್ಟಬೇಕೆಂಬ ಪ್ರಸ್ತಾಪ 1952ರಲ್ಲೇ ಚಿಗುರೊಡೆದಿತ್ತು. ಆದರೆ ಕೆಲ ಕಾರಣಗಳಿಂದ ಈ ಯೋಜನೆಯನ್ನು ಸರ್ಕಾರ ಕೈಬಿಟ್ಟಿತ್ತು. 1996ರಲ್ಲಿ ಮೇಕೆದಾಟುವಿನಲ್ಲಿ ವಿದ್ಯುತ್ ಉತ್ಪಾದನೆ ಮಾಡುವ ಯೋಜನೆಯನ್ನು ರಾಜ್ಯ ಸರ್ಕಾರ ರೂಪಿಸಿ ಕೇಂದ್ರ ವಿದ್ಯುತ್ ಪ್ರಾಧಿಕಾರಕ್ಕೆ ಅನುಮೋದನೆಗೆ ಕಳುಹಿಸಿಕೊಟ್ಟಿತ್ತು. ಆದರೆ ಇದೇ ಸಮಯದಲ್ಲಿ ಕಾವೇರಿ ವಿವಾದ ನ್ಯಾಯಾಧಿಕರಣ ಮುಂದೆ ಇದ್ದ ಕಾರಣ ಮೊದಲು ಈ ವಿವಾದವನ್ನು ಬಗೆಹರಿಸಿಕೊಳ್ಳಿ, ನಂತರ ಈ ವಿಚಾರವನ್ನು ಪ್ರಸ್ತಾಪ ಮಾಡಿ ಎಂದು ಹೇಳುವ ಮೂಲಕ ವಿದ್ಯುತ್ ಪ್ರಾಧಿಕಾರ ಉಪಾಯದಿಂದ ಜಾರಿಕೊಂಡಿತ್ತು. 2007ರಲ್ಲಿ ನ್ಯಾಯಾಧಿಕರಣ ಅಂತಿಮ ತೀರ್ಪು ಪ್ರಕಟಿಸಿದ ಬಳಿಕ ಮತ್ತೆ ಮೇಕೆದಾಟು ಯೋಜನೆ ಗರಿಗೆದರತೊಡಗಿತು. ಅಂತಿಮವಾಗಿ 2013ರಲ್ಲಿ ರಾಜ್ಯ ಸರ್ಕಾರ ಮೇಕೆದಾಟು ಯೋಜನೆ ನಿರ್ಮಿಸಲು ಮಹತ್ವದ ಹೆಜ್ಜೆ ಇಟ್ಟಿತು. ರಾಜ್ಯ ಸರ್ಕಾರ ಅಣೆಕಟ್ಟು ನಿರ್ಮಿಸಲು ಮುಂದಾಗುತ್ತಿದ್ದಂತೆ ಆಗಿನ ತಮಿಳುನಾಡು ಸಿಎಂ ಜಯಲಲಿತಾ ಕೇಂದ್ರದ ಮೊರೆ ಹೋಗಿ, ಸುಪ್ರೀಂನಲ್ಲಿ ಮಧ್ಯಂತರ ಅರ್ಜಿ ಸಲ್ಲಿಸಿದರು. ಈಗ ಸಮಗ್ರ ಯೋಜನಾ ವರದಿ (ಡಿಪಿಆರ್) ಸಿದ್ಧವಾಗುತ್ತಿದ್ದು ತಮಿಳುನಾಡು ಸಿಎಂ ಪಳನಿಸ್ವಾಮಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಯೋಜನೆಗೆ ಅನುಮತಿ ನೀಡಬಾರದು ಎಂದು ಮನವಿ ಮಾಡಿಕೊಂಡಿದ್ದಾರೆ.
ಕಾವೇರಿ ನ್ಯಾಯಾಧಿಕರಣದಲ್ಲಿ ನೀರು ಹಂಚಿಕೆ ವಿಚಾರಣೆ ನಡೆಯುವ ವೇಳೆ ಮೇಕೆದಾಟು ವಿಚಾರ ಪ್ರಸ್ತಾಪವಾಗಿಲ್ಲ. ಆದರೆ ಸರ್ಕಾರ ಈಗ ಯೋಜನೆ ಮುಂದಾಗಿದ್ದು ನ್ಯಾಯಮಂಡಳಿಯ ತೀರ್ಪನ್ನು ಉಲ್ಲಂಘಿಸಿದೆ. ತಮಿಳುನಾಡಿಗೆ ನೈಸರ್ಗಿಕವಾಗಿಯೇ ಮಳೆ ಮೂಲಕ ಹೆಚ್ಚುವರಿ ನೀರು ಬರುತ್ತದೆ. ಅದರೆ ಈ ಅಣೆಕಟ್ಟು ನಿರ್ಮಿಸುವ ಮೂಲಕ ಕರ್ನಾಟಕ ತಮಿಳುನಾಡಿನ ರೈತರ ಕೃಷಿಗೆ ಅಡ್ಡಗಾಲು ಹಾಕುತ್ತಿದೆ.
ಪ್ರತಿವರ್ಷ 177.25 ಟಿಎಂಸಿ ನೀರನ್ನು ತಮಿಳುನಾಡಿಗೆ ಬಿಡುವುದು ನಮ್ಮ ಹೊಣೆ. ಒಂದು ವೇಳೆ ನಾವು ಅಷ್ಟು ಪ್ರಮಾಣದ ನೀರನ್ನು ಬಿಡದಿದ್ದರೆ ತಮಿಳುನಾಡು ಪ್ರಶ್ನಿಸುವುದು ಸರಿ. 2018 ರಲ್ಲಿ ಭಾರೀ ಮಳೆಯಾದ ಪರಿಣಾಮ ಈಗಾಗಲೇ ಕರ್ನಾಟಕದಿಂದ 310 ಟಿಎಂಸಿಗಿಂತಲೂ ಹೆಚ್ಚಿನ ಪ್ರಮಾಣದ ನೀರು ತಮಿಳುನಾಡು ಹರಿದುಹೋಗಿದೆ. ಮೆಟ್ಟೂರಿನಲ್ಲಿ ಅಧಿಕ ನೀರಿನ ಸಂಗ್ರಹ ಸಾಮರ್ಥ್ಯ ಇಲ್ಲದೇ ಇರುವ ಕಾರಣ 100 ಟಿಎಂಸಿಗೂ ಹೆಚ್ಚು ನೀರು ಸಮುದ್ರಕ್ಕೆ ಹರಿದು ಹೋಗಿದೆ. ಮೇಕೆದಾಟಿನಲ್ಲಿ ಅಣೆಕಟ್ಟೆ ಇದ್ದಿದ್ದರೆ ಕನಿಷ್ಠ 60 ಟಿಎಂಸಿ ಹಿಡಿದಿಟ್ಟುಕೊಳ್ಳಬಹುದಾಗಿತ್ತು. ಒಂದು ಡ್ಯಾಂ ಇದ್ದಿದ್ದರೆ ತಮಿಳುನಾಡಿಗೆ ತಿಂಗಳವಾರು ಕೋಟಾದಂತೆ ನೀರು ಬಿಡುಗಡೆ ಮಾಡಲು ಕರ್ನಾಟಕಕ್ಕೂ ಅನುಕೂಲವಾಗುತ್ತಿತ್ತು. ನಾವು ಕುಡಿಯುವ ನೀರಿಗಾಗಿ ಡ್ಯಾಂ ಕಟ್ಟುತ್ತೇವೆಯೇ ಹೊರತು ವಿದ್ಯುತ್ ಉತ್ಪಾದನೆಯೇ ನಮ್ಮ ಮೂಲ ಉದ್ದೇಶ ಅಲ್ಲ. ನದಿ ನೀರಿನ ಹಂಚಿಕೆ ವಿಚಾರದಲ್ಲಿ ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಬೇಕೆಂದು ಎಂದು ಅಂತಾರಾಷ್ಟ್ರೀಯ ಜಲ ನೀತಿಯೇ ಹೇಳಿದೆ. ಹೀಗಾಗಿ ನಾವು ಎತ್ತಿಕೊಂಡ ಮೇಕೆದಾಟು ಯೋಜನೆ ನ್ಯಾಯ ಸಮ್ಮತವಾಗಿದೆ
ನ್ಯಾ. ಎನ್.ಪಿ.ಸಿಂಗ್, ನ್ಯಾ. ಸುಧೀರ್ ನಾರಿಯನ್, ನ್ಯಾ. ಎನ್.ಎಸ್. ರಾವ್ ಅವರನ್ನು ಒಳಗೊಂಡ ಕಾವೇರಿ ನ್ಯಾಯಾಧಿಕರಣ 2007ರ ಫೆಬ್ರವರಿ 2ರಂದು ಅಂತಿಮ ಐತೀರ್ಪು ನೀಡಿತು. ಈ ಐತೀರ್ಪಿನ ಅನ್ವಯ ಕಾವೇರಿ ಕಣಿವೆಯಲ್ಲಿ 740 ಟಿಎಂಸಿ ನೀರಿದೆ ಎಂದು ಲೆಕ್ಕಹಾಕಲಾಯಿತು. ಕರ್ನಾಟಕಕ್ಕೆ 270 ಟಿಎಂಸಿ, ತಮಿಳುನಾಡಿಗೆ 419 ಟಿಎಂಸಿ, ಕೇರಳಕ್ಕೆ 30 ಟಿಎಂಸಿ, ಪುದುಚೇರಿಗೆ 10, ಪರಿಸರ ಸಂರಕ್ಷಣೆಗೆ 10 ಟಿಎಂಸಿ, ಸಮುದ್ರ ಸೇರುವ ನೀರು 4 ಟಿಎಂಸಿ ನೀರನ್ನು ಹಂಚಲಾಯಿತು. ಇದರ ಜೊತೆ ಕಾವೇರಿ ನಿರ್ವಹಣಾ ಮಂಡಳಿಯನ್ನು ರಚಿಸುವಂತೆ ಆದೇಶಿಸಿತು.

Leave a Reply