ಸಮಾಜಿಕ ನ್ಯಾಯದ ಹರಿಕಾರ ಜೆ.ಪಿ

ಹಿಂಸೆ ,ದಬ್ಬಾಳಿಕೆ, ಸರ್ವಾಧಿಕಾರಗಳ ವಿರುದ್ಧ ಸಿಡಿದೆದ್ದಿದ್ದ ಲೋಕನಾಯಕ ಜಯಪ್ರಕಾಶ್ ನಾರಾಯಣ್ ರವರು ಅಕ್ಟೋಬರ್ 11, 1902ರಂದು ಬಿಹಾರದ ಸಿತಾಬ್ದಿಯಾರ ಎಂಬ ಗ್ರಾಮದಲ್ಲಿ ಜನಿಸಿದರು. ಪ್ರಜಾಪ್ರಭುತ್ವ, ಮಾರ್ಕ್ಸ್ ವಾದ, ಸಮಾಜವಾದ, ಗಾಂಧೀವಾದಗಳು ಅವರಿಗೆ ಕಾಲನುಕ್ರಮದಲ್ಲಿ ಆಕರ್ಷಣೀಯವೆನಿಸಿದ್ದರೂ ಅವೆಂದೂ ಕೇವಲ ಬುದ್ಧಿವಂತಿಕೆಯ ಪ್ರತಿಪಾದನೆಯ ಮಾತ್ರ ಆಗಿರಲಿಲ್ಲ . ಮಾರ್ಕ್ಸಿಸ್ಟ್ ತತ್ವಗಳಿಗೆ ಬದ್ಧರಾಗಿದ್ದರೂ ಜಯಪ್ರಕಾಶರಿಗೆ ಸ್ವಾತಂತ್ರ ಚಳುವಳಿಯಲ್ಲಿ ಕೈಜೋಡಿಸದ ಮಾರ್ಕ್ಸ್ ವಾದಿಗಳ ಮಡಿತನದ ಬುದ್ಧಿವಂತಿಕೆಯ ಸೋಗು ಇಷ್ಟವಾಗಲಿಲ್ಲ. ಹೀಗಾಗಿ ಅವರು 1929ರಲ್ಲಿ ಜವಾಹರಲಾಲ್ ನೆಹರೂ ಅವರ ಆಹ್ವಾನದ ಮೇರೆಗೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸೇರಿದರು. ಮಹಾತ್ಮಾ ಗಾಂಧೀಜಿಯವರು ಅವರಿಗೆ ಆದರ್ಶವಾದರು. ಸ್ವಾತಂತ್ರ್ಯ ಹೋರಾಟದ ಅವಧಿಯಲ್ಲಿ ಬ್ರಿಟಿಷರಿಂದ ಹಲವಾರು ಬಾರಿ ಬಂಧಿಸಲ್ಪಟ್ಟರು. ಹಿಂಸೆಗೊಳಗಾದರು. 1942ರ ‘ಬ್ರಿಟಿಷರೇ ಭಾರತ ಬಿಟ್ಟು ತೊಲಗಿ’ ಹೋರಾಟದಲ್ಲಿ ಪ್ರಮುಖ ನೆತಾರರೆಲ್ಲಾ ಸೆರೆಮನೆ ಸೇರಿದ್ದ ಸಂದರ್ಭದಲ್ಲಿ ಜಯಪ್ರಕಾಶ್ ನಾರಾಯಣ್, ರಾಮ್ ಮನೋಹರ ಲೋಹಿಯಾ, ಬಸಾವನ್ ಸಿನ್ಹಾ ಅವರು ಚಳುವಳಿಯ ಮುಂಚೂಣಿಯಲ್ಲಿದ್ದರು.

ಸ್ವಾತಂತ್ರ್ಯ ನಂತರ ನೆಹರು ಆಡಳಿತದ ಬಗ್ಗೆ ಅಸಮಾಧಾನ ಹೊಂದಿದ್ದ ಜೆಪಿ ಯವರು ಹಲವಾರು ಸಮಾನ ಮನಸ್ಕರೊಂದಿಗೆ ಸೇರಿ ಕಾಂಗ್ರೆಸ್ಸಿಗೆ ಪರ್ಯಾಯವಾಗಿ ಹೊಸ ಪಕ್ಷವನ್ನು ಬೆಂಬಲಿಸಿದ್ದರು ಅದುವೇ ಪ್ರಜಾ ಸೋಷಿಯಲಿಸ್ಟ್ ಪಾರ್ಟಿ. ಆದರೆ ಅಲ್ಲೂ ಜಾತಿ ಆಧಾರಿತವಾಗಿ ಪಕ್ಷದ ಟಿಕೆಟ್ಟುಗಳನ್ನು ಹಂಚಿದಾಗ “ನನಗೆ ಲೋಕ ನೀತಿಯೇ ಮುಖ್ಯ ಹೊರತು ರಾಜನೀತಿಯಲ್ಲ” ಎಂದು ಅದರಿಂದ ಹೊರಬಂದರು .1954ರ ವರ್ಷದಲ್ಲಿ ಜಯಪ್ರಕಾಶ ನಾರಾಯಣರು “ತಮ್ಮ ಜೀವನವನ್ನು ವಿನೋಬಾ ಭಾವೆಯವರ ‘ಸರ್ವೋದಯ’ ಮತ್ತು ‘ಭೂದಾನ’ ಅಂದೋಲನದ ಮಹದುದ್ದೇಶಗಳಿಗೆ ಮುಡಿಪಾಗಿಟ್ಟಿರುವುದಾಗಿ ಘೋಷಿಸಿ, ತಮಗಿದ್ದ ಭೂಮಿಯನ್ನೆಲ್ಲ ಬಡಬಗ್ಗರಿಗಾಗಿ ಧಾರೆ ಎರೆದರು. ತಮಗಾಗಿ ಹಜಾರಿಬಾಗ್ ಎಂಬಲ್ಲಿ ಆಶ್ರಮರೂಪದ ಕುಟೀರವೊಂದನ್ನು ನಿರ್ಮಿಸಿಕೊಂಡು ಹಳ್ಳಿಗರ ಅಭಿವೃದ್ದಿಗಾಗಿ ಕೆಲಸ ಮಾಡತೊಡಗಿದರು.

ಗುಜರಾತಿನಲ್ಲಿ ಆಡಳಿತ ದಿಕ್ಕು ದೆಸೆಯಿಲ್ಲದೆ ಓಲಾಡುತ್ತಿತ್ತು.ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸುವವರೇ ಇರಲಿಲ್ಲ.ಈ ಸಮಯದಲ್ಲಿ ಜೆಪಿ ಯವರು ವಿದ್ಯಾರ್ಥಿಗಳು ಒಂದು ವರ್ಷವಾದರೂ ಶಾಲೆಗಳಿಗೆ ತೆರಳದೆ ರಾಷ್ಟ್ರ ಪುನರ್ನಿರ್ಮಾಣ ಚಳುವಳಿಯಲ್ಲಿ ಭಾಗವಹಿಸುವಂತೆ ಕರೆ ಕೊಟ್ಟರು ಅವರ ಕರೆಗೆ ಓಗೊಟ್ಟ ವಿದ್ಯಾರ್ಥಿ ಸಮೂಹ ಗುಜರಾತಿನಲ್ಲೇ ಹೊಸ ಕ್ರಾಂತಿಯನ್ನೇ ಸೃಷ್ಟಿ ಮಾಡಿತ್ತು.ಆದರೆ ರಾಜ್ಯ ಸರಕಾರ ದಮನಕಾರಿ ಬಲ ಪ್ರಯೋಗಿಸಿ ಹಲವಾರು ವಿದ್ಯಾರ್ಥಿಗಳ ಬಲಿ ಬಡೆದು ಚಳುವಳಿಯನ್ನು ಹಿಮ್ಮೆಟ್ಟಿಸಿತ್ತು.ಇದರ ಪರಿಣಾಮವಾಗಿ ಗುಜರಾತಿನಲ್ಲಿ ಸರಕಾರ ಪತನವಾಗಿ ರಾಷ್ಟ್ರಪತಿ ಆಡಳಿತ ಹೇರಲ್ಪಟ್ಟಿತ್ತು ವಿದ್ಯಾರ್ಥಿ ಚಳುವಳಿ ಗುಜರಾತಿನಿಂದ ಬಿಹಾರಕ್ಕೆ ಹಬ್ಬಿತ್ತು. ಈ ಹೊತ್ತಿನಲ್ಲೇ ಅಲಹಾಬಾದ್ ಉಚ್ಚ ನ್ಯಾಯಾಲಯವು ಇಂದಿರಾ ಗಾಂಧಿ ಅವರನ್ನು ಚುನಾವಣಾ ಕಾನೂನು ಉಲ್ಲಂಘನೆಯ ಪ್ರಕರಣದಲ್ಲಿ ತಪ್ಪಿತಸ್ಥೆ ಎಂದು ಘೋಷಿಸಿತ್ತು .ಆದರೆ ಅಧಿಕಾರ ವ್ಯಾಮೋಹಿಯಾಗಿದ್ದ ಇಂದಿರಾ ಗಾಂಧೀ ಜೂನ್ 25, 1975ರ ಮಧ್ಯರಾತ್ರಿಯಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದರು. ಇದರ ವಿರುದ್ಧ ಖಾರವಾದ ಪ್ರತಿಕ್ರಿಯೆ ನೀಡಿದ ಜಯಪ್ರಕಾಶರು, ಪ್ರಧಾನಿ ಇಂದಿರಾ ಗಾಂಧಿಯವರು ರಾಜೀನಾಮೆ ನೀಡಲೇಬೇಕು, ಸೈನ್ಯ ಮತ್ತು ಪೊಲೀಸ್ ಒಳಗೊಂಡಂತೆ ಎಲ್ಲಾ ಸರ್ಕಾರೀ ನೌಕರರೂ, ಇಂದಿರಾ ಗಾಂಧೀ ಸರ್ಕಾರದ ಎಲ್ಲಾ ನೀತಿಬಾಹಿರ, ಅಸಂವಿಧಾನಾತ್ಮಕ ಆದೇಶಗಳನ್ನು ತಿರಸ್ಕರಿಸುವಂತೆ ಕರೆಕೊಟ್ಟರು.ಜಯಪ್ರಾಕಾಶ್ ನಾರಾಯಣರು ರಾಮಲೀಲಾ ಮೈದಾನದಲ್ಲಿ ನಡೆಸಿದ ಸಭೆಗೆ ಒಂದು ಲಕ್ಷಕ್ಕೂ ಹೆಚ್ಚು ಆಗಮಿಸಿ ಜೆಪಿಯವರ ಹೋರಾಟವನ್ನು ಬೆಂಬಲಿಸಿದರು. ಜಯಪ್ರಕಾಶ್ ನಾರಾಯಣ್ ಸೇರಿದಂತೆ ಎಲ್ಲಾ ವಿರೋಧ ಪಕ್ಷದ ನಾಯಕರುಗಳನ್ನು ಬಂಧಿಸುವಂತೆ ಇಂದಿರಾಗಾಂಧಿ ಆಜ್ಞಾಪಿಸಿದ್ದರು. ಜಯಪ್ರಕಾಶ್ ನಾರಾಯಣ್ ಅವರನ್ನು ಚಂಡೀಗಢದ ಕಾರಾಗ್ರಹದಲ್ಲಿರಿಸಿಲಾಯಿತು.ಕರ್ನಾಟಕದಲ್ಲಿಯೂ ಇಂದಿರಾ ಗಾಂಧಿ ಆಡಳಿತದ ವಿರುದ್ಧ ಹೋರಾಟ ನಡೆಯಿತು. ವಿರೋಧ ಪಕ್ಷದ ನಾಯಕನಾಗಿದ್ದ ಹೆಚ್ ಡಿ ದೇವೇಗೌಡರನ್ನು ಬಂಧನದಲ್ಲಿ ಇರಿಸಲಾಗಿತ್ತು . ಇಂದಿರಾ ಗಾಂಧಿಯವರು ಹೇರಿದ್ದ ತುರ್ತು ಪರಿಸ್ಥಿಯ ವಿರುದ್ಧ ಹೋರಾಡಿದ್ದ ಜಯಪ್ರಕಾಶ್ ನಾರಾಯಣ್ ರನ್ನು ದೇಶದ “ಎರಡನೆಯ ಗಾಂಧಿ” ಎಂದರೂ ತಪ್ಪಾಗಲಾರದು.

ಚಂಬಲ್ ಕಣಿವೆಯ ಮಧೋಸಿಂಘ್ ಸೇರಿದಂತೆ ಹಲವಾರು ಡಕಾಯಿತರ ಮನಃ ಪರಿವರ್ತನೆ ಮಾಡಿ ಸಮಾಜದ ಮುಖ್ಯ ವಾಹಿನಿಗೆ ತಂದ ಜೆಪಿಯವರ ಮಾರ್ಗದರ್ಶನದಲ್ಲಿ “ಜನತಾ ಪಕ್ಷ” 1977 ರಲ್ಲಿ ಅಸ್ಥಿತ್ವಕ್ಕೆ ಬಂತು.ಹಾಗೂ ಮುಂದಿನ ಚುನಾವಣೆಯಲ್ಲಿ ಜನತಾ ಪಕ್ಷವೇ ಕೇಂದ್ರದಲ್ಲಿ ಅಧಿಕಾರದ ಪಟ್ಟವನ್ನೇರಿತ್ತು.ಆದರೆ ವಿಭಿನ್ನ ಸಿದ್ದಾಂತಗಳನ್ನು ಹೊಂದಿದ್ದ ಕಾರಣದಿಂದ ಈ ಪ್ರಯೋಗ ಅಂದು ವಿಫಲವಾಗಿ ಛಿದ್ರವಾದರೂ ಜೆಪಿ ಸಿದ್ಧಾಂತಗಳಿಂದ ಪ್ರೇರಿತರಾಗಿದ್ದ ಹಲವಾರು ನಾಯಕರು ತಮ್ಮ ಪಕ್ಷಗಳಿಗೂ ಅದೇ ಸಿದ್ದಾಂತಗಳನ್ನು ಧಾರೆ ಎರೆದಿದ್ದಾರೆ ಕರ್ನಾಟಕದಲ್ಲಿ ದೇವೇಗೌಡರ ನೇತೃತ್ವದ ಜೆಡಿಎಸ್ ,ಒರಿಸ್ಸಾದಲ್ಲಿ ಬಿಜೆಡಿ ,ಬಿಹಾರದ ಆರ್ ಜೆಡಿ ಇವುಗಳಲ್ಲಿ ಪ್ರಮುಖವಾದುದ್ದು .

Leave a Reply