ಮೈಸೂರು ದಸರಾ ಮಹೋತ್ಸವ : ಕುಮಾರಸ್ವಾಮಿ ಅವರ ಆಡಳಿತವನ್ನು ಕೊಂಡಾಡಿದ ಸುಧಾ ಮೂರ್ತಿ

ಖ್ಯಾತ ಉದ್ಯಮಿ-ಲೇಖಕಿ ಸುಧಾ ಮೂರ್ತಿ ಅವರು ” ಮರಿಕೋಗಿಲೆಯಾಗಿ, ಮೇಣ್ ಕೋಗಿಲೆಯಾಗಿ ಪುಟ್ಟುಪುದು ನಂದನದೊಳ್ ಬನವಾಸಿ ದೇಶದೊಳ್ ” ಎಂದು ಆದಿಕವಿ ಪಂಪನ ಪ್ರಸಿದ್ಧ ಪದ್ಯವನ್ನು ಉಲ್ಲೇಖಿಸುವ ಮೂಲಕ ಮೈಸೂರು ದಸರಾ ಉದ್ಘಾಟನಾ ಸಮಾರಂಭದಲ್ಲಿ ತಮ್ಮ ಭಾಷಣವನ್ನು ಆರಂಭಿಸಿದರು.

ವಿಶ್ವವಿಖ್ಯಾತ ದಸರಾವನ್ನು ತಾವು ಉದ್ಘಾಟಿಸುವ ಅವಕಾಶ ದೊರಕಿದ್ದು ಸಾಮಾನ್ಯರಲ್ಲಿ ಸಾಮಾನ್ಯಳಿಗೆ ಸಿಕ್ಕ ದೊಡ್ಡ ಸನ್ಮಾನ, ಇದಕ್ಕೆ ನಾನು ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಆಭಾರಿ ಆಗಿರುತ್ತೇನೆ ಎಂದು ತಾವು ಅವಿರೋಧವಾಗಿ ಆಯ್ಕೆ ಆದ ಹಿನ್ನಲೆಯಲ್ಲಿ ಕೃತಜ್ಞತೆ ಸಲ್ಲಿಸಿದರು.

ಬುಧವಾರ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ದೇವಿ ಚಾಮುಂಡಿಗೆ ಪುಷ್ಪಾರ್ಚನೆ ಸಲ್ಲಿಸಿ 9 ದಿನಗಳ ನವರಾತ್ರಿ ಹಾಗೂ 10ನೇ ದಿನ ವಿಜಯದಶಮಿಯ ನಾಡಹಬ್ಬಕ್ಕೆ ಅಧಿಕೃತ ಚಾಲನೆ ನೀಡಿ ಮಾತನಾಡಿದರು.

ಕುಮಾರಸ್ವಾಮಿ ಅವರ ನೇತೃತ್ವದ ಸರ್ಕಾರ ರಾಜ್ಯದಲ್ಲಿ ಉತ್ತಮ ಯೋಜನೆಗಳನ್ನು ಕೈಗೊಂಡು ಪ್ರಮಾಣಿತ ಆಡಳಿತ ನೀಡುತ್ತಿದೆ. ಒಂದು ಸರ್ಕಾರ ಯಶಸ್ವಿ ಆಡಳಿತ ನೀಡಬೇಕೆಂದರೆ ರಾಜ್ಯದ ಜನತೆ ಅವರೊಂದಿಗೆ ಕೈಜೋಡಿಸಿಬೇಕು. ಒಬ್ಬ ವ್ಯಕ್ತಿಯಿಂದ ಎಲ್ಲವನ್ನು ನಿರೀಕ್ಷಿಸುವುದು ಮುಟ್ಟಾಳತನ.ಸರ್ಕಾರ ಮಾಡುವ ಯಾವುದೇ ಕೆಲಸದಲ್ಲಿ ನಾವು ಕೈಜೋಡಿಸುವುದು ನಮ್ಮ ಕೆಲಸವಾಗಿದೆ, ನಮಗೆ ಸಮಾಜದಿಂದ ಸಿಕ್ಕಿದ ಹಣ ಮತ್ತೆ ಸಮಾಜಕ್ಕೆ ಹೋಗಬೇಕು. ಹೀಗಾಗಿ ಕೊಡಗು ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳ ಜನರ ಪುನರ್ವಸತಿಗೆ ಇನ್ಫೋಸಿಸ್ ವತಿಯಿಂದ 25 ಕೋಟಿ ರೂಪಾಯಿ ವೆಚ್ಚದಲ್ಲಿ ವಸತಿ ನಿರ್ಮಿಸಿಕೊಡಲಾಗುವುದು ಎಂದು ಘೋಷಿಸಿದರು. ಇದನ್ನು ನಾನು ಕೊಡುಗೆ ಎಂದು ಭಾವಿಸದೆ ಕರ್ತವ್ಯ ಎಂದು ತಿಳಿಯುತ್ತೇನೆ ಎಂದು ಕೂಡ ಸುಧಾಮೂರ್ತಿ ಹೇಳಿದರು.

ದಸರಾ ಕೇವಲ ಇಂದು ನಿನ್ನೆಯದಲ್ಲ, ಸಾವಿರಾರು ವರ್ಷಗಳ ಇತಿಹಾಸ ಮೈಸೂರು ದಸರಾಗೆ ಇದೆ. ಹಿಂದಿನ ಕಾಲದಲ್ಲಿ ಇದನ್ನು ನವಮಿ ಹಬ್ಬ ಎಂದು ಕೂಡ ಆಚರಿಸುತ್ತಿದ್ದರೆ. ಕರ್ನಾಟಕ ರಾಜ್ಯದ ಉದಯ, ಕನ್ನಡ ಭಾಷೆ, ಸಂಸ್ಕೃತಿಯ ಉಳಿವು, ಬೆಳವಣಿಗೆಗೆ ಮೈಸೂರು ಮಹಾರಾಜರ ಕೊಡುಗೆ ಅಪಾರ. ಇದಕ್ಕೆ ನಾವು ಮೈಸೂರು ದೊರೆಗಳಿಗೆ ಎಂದಿಗೂ ಕೃತಜ್ಞರಾಗಿರಬೇಕು ಎಂದರು.

Leave a Reply