ನಾನು ಕೇವಲ ವಿಧಾನಸೌಧದಲ್ಲಿ ಕುಳಿತು ಆಶ್ವಾಸನೆ ನೀಡುವಂತವನಲ್ಲ :ಎಚ್.ಡಿ ಕುಮಾರಸ್ವಾಮಿ

ಮುಖ್ಯಮಂತ್ರಿ ಎಚ್​.ಡಿ ಕುಮಾರಸ್ವಾಮಿ ಅವರು ಬುಧವಾರ ಕೊಡಗು ಜಿಲ್ಲೆಯಲ್ಲಿ ನೆರೆ ಸಂತ್ರಸ್ತರೊಂದಿಗೆ ಸಂವಾದ ನಡೆಸಿ, ಪ್ರವಾಹ ಪೀಡಿತರ, ಕೃಷಿಕರ ಸಮಸ್ಯೆ ಆಲಿಸಿದರು.

ಅತಿವೃಷ್ಟಿ ಸಂತ್ರಸ್ತರು ,ಕೃಷಿಕರು, ಕಾರ್ಮಿಕರು, ಕಾಫಿ ಬೆಳೆಗಾರರ ಸಂಘದ ಪ್ರತಿನಿಧಿಗಳು, ಪರಿಸರ ಪ್ರೇಮಿಗಳು, ಹೋಂ ಸ್ಟೇ, ಹೊಟೆಲ್ ಮಾಲಿಕರ ಸಂಘ, ಚೇಂಬರ್ ಆಫ್ ಕಾಮರ್ಸ್ ಪದಾಧಿಕಾರಿಗಳು ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಮಸ್ಯೆಗಳನ್ನು ಹೇಳಿಕೊಂಡರು.
ಸಂತ್ರಸ್ತರೊಂದಿಗಿನ ಸಂವಾದಕ್ಕೆ ‌ಮುನ್ನ ಮಾತನಾಡಿದ ಮುಖ್ಯಮಂತ್ರಿ ಎಚ್​.ಡಿ ಕುಮಾರಸ್ವಾಮಿ, ” ಕೊಡಗಿನ‌ ಜನರ ಸಂಕಷ್ಟ ನಮ್ಮೆಲ್ಲರ ಸಂಕಷ್ಟ ಎಂದೇ ನಾನು ಭಾವಿಸಿಕೊಂಡಿದ್ದೇನೆ. ಕೇವಲ‌ ವಿಧಾನ‌ಸೌಧದಲ್ಲಿ ಕುಳಿತು ಅಥವಾ ಅಧಿಕಾರಿಗಳ ಅಲೋಚನೆಯಂತೆ ಜಿಲ್ಲೆ ಕಾರ್ಯಕ್ರಮಗಳನ್ನು ನಾನು ಕೈಗೊಳ್ಳುವುದಿಲ್ಲ. ಬದಲಿಗೆ ಸಂತ್ರಸ್ತರು, ಸ್ಥಳೀಯರೊಂದಿಗೆ ಸಾಂವಾದ ನಡೆಸಿ, ಚರ್ಚಿಸಿ ಅಭಿಪ್ರಾಯ ಸಂಗ್ರಹಿಸಿ ಅದಕ್ಕೆ ಪೂರಕವಾಗಿ ಕ್ರಮ ಕೈಗೊಳ್ಳುತ್ತೇನೆ. ಕೊಡಗನ್ನು ಮೊದಲಿಗಿಂತಲೂ ಉತ್ತಮವಾಗಿ ಕಟ್ಟಬೇಕೆಂಬುದು ನನ್ನ ಆಶಯ. ಅದಕ್ಕಾಗಿಯೇ ನಾನು ಇಂದು ಇಲ್ಲಿಗೆ ಬಂದಿದ್ದೇನೆ,” ಎಂದು ಅವರು ಹೇಳಿದರು.

“ಕೊಡಗಿಗೆ ಪ್ರವಾಸಿಗರು ಬರಲು ಹಿಂಜರಿಯುತ್ತಿದ್ದಾರೆ. ಮಕ್ಕಳ ಶಿಕ್ಷಣಕ್ಕೆ ಸರ್ಕಾರದಿಂದ ಏನಾಗಬೇಕು ಎಂಬುದನ್ನು ತಿಳಿಸಿ. ನಿಮ್ಮ ಸಮಸ್ಯೆ ಏನೇ ಇದ್ದರೂ ಇಂದು ನನ್ನ ಬಳಿ ಮಂಡಿಸಿ. ನಿಮ್ಮ ಸಮಸ್ಯೆಗೆ ಸೂಕ್ತ ಪರಿಹಾರವನ್ನು ನಾನು ನೀಡುತ್ತೇನೆ. ಇಂದು ಇಲ್ಲಿ ಯಾರೂ ಕೂಡ ಭಾಷಣ ಮಾಡುವುದಿಲ್ಲ. ಇದು ರಾಜಕೀಯ ಸಮಾರಂಭವೂ ಅಲ್ಲ ” ಎಂದರು.

ಸಂವಾದಲ್ಲಿ ಮತಾನಾಡಿದ ಬಹುತೇಕರ ಸಮಸ್ಯೆ ವಸತಿಯದ್ದೇ ಆಗಿತ್ತು. ಎಲ್ಲರೂ ಮನೆಗಳನ್ನು ನಿರ್ಮಿಸಿ ಕೊಡಿ ಎಂದು ಮನವಿ ಮಾಡಿದ್ದರು. ನೆರೆಯಿಂದಾಗಿ ಮನೆಗಳನ್ನು ಕಳೆದುಕೊಂಡಿದ್ದೇವೆ. ಮನೆಗಳನ್ನು ಕಟ್ಟಿಕೊಟ್ಟು ಆಶ್ರಯ ಒದಗಿಸಬೇಕು ಎಂದು ಕೋರಿದರು. ಇನ್ನು ಹಲವರು ಕೃಷಿಗೆ ಭೂಮಿ ಒದಗಿಸುವಂತೆ ಕೋರಿದರು. ಮತ್ತೂ ಕೆಲವರು ಸಾಲಮನ್ನಾದ ಬಗ್ಗೆ ಮುಖ್ಯಮಂತ್ರಿಗಳ ಗಮನ ಸೆಳೆದರು.

ಅಲ್ಲದೆ, ಭೂಕುಸಿತಕ್ಕೆ ಕಾರಣಗಳೇನು ಎಂಬುದನ್ನು ಪತ್ತೆಹಚ್ಚುವಂತೆ ಮನವಿ ಮಾಡಿದರು. ಕಿರು ಉದ್ಯೋಗದ ಮೂಲಕ ಯುವಕರಿಗೆ ಕೆಲಸ ಕೊಡುವಂತೆ ಹಲವರು ಕೋರಿದರು. ಕೊಡಗಿನ ಪ್ರವಾಸೋದ್ಯಮವನ್ನು ಪುನರುಜ್ಜೀವನಗೊಳಿಸಬೇಕು ಎಂದು ಹಲವು ಮಂದಿ ತಿಳಿಸಿದರು.

Leave a Reply