ಸುತ್ತೂರು ಮಠದ ಶ್ರೀಗಳ ಸೂಚನೆಯಂತೆ ಮಲೆ ಮಹದೇಶ್ವರ ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿ ಆಗಮಿಸುವ ಭಕ್ತರ ಅನುಕೂಲಕ್ಕಾಗಿ ಮೆಟ್ಟಿಲುಗಳನ್ನು 8-10 ದಿನಗಳಲ್ಲಿ ದುರಸ್ತಿಪಡಿಸುವ ಕಾಮಗಾರಿಗೆ ಚಾಲನೆ ನೀಡಲಾಗುತ್ತದೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು. ಶ್ರೀ ಮಲೆ ಮಹದೇಶ್ವರ ಬೆಟ್ಟದಲ್ಲಿ ಸುತ್ತೂರು ಮಠ ಶಾಖೆಯ ಅತಿಥಿ ಗೃಹ ಉದ್ಘಾಟಿಸಿ ಮಾತನಾಡಿದ ಅವರು, ಹಬ್ಬ, ಅಮಾವಾಸ್ಯೆ ಮತ್ತು ಜಾತ್ರೆಯ ವಿಶೇಷ ಪೂಜಾ ದಿನಗಳಲ್ಲಿ ಮಹದೇಶ್ವರಬೆಟ್ಟಕ್ಕೆ ಅಧಿಕ ಸಂಖ್ಯೆಯಲ್ಲಿ ಭಕ್ತರು ಕಾಲ್ನಾಡಿಗೆಯಲ್ಲಿ ಬರುತ್ತಿದ್ದು ತಾಳಬೆಟ್ಟದಿಂದ ಮಹದೇಶ್ವರಬೆಟ್ಟದವರೆಗೆ ಸುಮಾರು 16 ಕಿ.ಮೀ. ನಷ್ಟು ದೂರ ಬೆಟ್ಟದ ತಪ್ಪಲು ಹಾಗೂ ರಸ್ತೆಯ ಅಡ್ಡದಾರಿಯಲ್ಲಿ ಬೆಟ್ಟ ಹತ್ತಲು ಇರುವ ಮೆಟ್ಟಿಲುಗಳು ಕಿತ್ತು ಹೋಗಿದ್ದು ಕಾಲ್ನಡಿಗೆಯಲ್ಲಿ ಬರುವ ಭಕ್ತರಿಗೆ ತೊಂದರೆಯಾಗುತ್ತಿದೆ.
ಇದನ್ನು ತಿರುಪತಿ ಮಾದರಿಯಲ್ಲಿ ಸುಸಜ್ಜಿತ ಮೆಟ್ಟಿಲು, ಶೌಚಾಗೃಹ ಹಾಗೂ ವಿಶ್ರಾಂತಿ ತಾಣಗಳನ್ನು ಅಲ್ಲಲ್ಲಿ ನಿರ್ಮಿಸಿ ಭಕ್ತರಿಗೆ ಉಪಯೋಗ ಕಲ್ಪಿಸುವಂತೆ ಶ್ರೀಗಳು ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಕಾಮಗಾರಿಗೆ ತುರ್ತಾಗಿ ಚಾಲನೆ ನೀಡಲಾಗುತ್ತದೆ. ರಾಜ್ಯದ ಮುಜರಾಯಿ ಇಲಾಖೆಗೆ ಹೆಚ್ಚಿನ ಆದಾಯ ತರುವ ದೇವಾಲಯಗಳಲ್ಲಿ ಮಹದೇಶ್ವರಬೆಟ್ಟ ಎರಡನೇ ಸ್ಥಾನದಲ್ಲಿದ್ದು, ಪ್ರಾಧಿಕಾರ ಕ್ಷೇತ್ರದ ಅಭಿವೃದ್ದಿಗೆ ಎಲ್ಲಾ ರೀತಿಯ ಸೌಲಭ್ಯ ನೀಡಲಾಗುತ್ತದೆ. ಸುತ್ತೂರು ಶ್ರೀಕ್ಷೇತ್ರ ಮತ್ತು ಮಲೆ ಮಹದೇಶ್ವರಬೆಟ್ಟಕ್ಕೂ ಅವಿನಾವಭಾವ ಸಂಬಂಧ ಇರುತ್ತದೆ.
ಏಕೆಂದರೆ ಮಹದೇಶ್ವರರು ಮೊದಲು ಬಂದುದು ಸುತ್ತೂರಿಗೆ ನಂತರ ಬೆಟ್ಟಗುಡ್ಡಗಳ ನಡುವೆ ಬಂದು ನೆಲೆಸುವ ಮೂಲಕ ಮಲೆ ಮಹದೇಶ್ವರರಾದರು. ಕಳೆದ 25-35 ವರ್ಷಗಳ ಕಾಲ ಸುತ್ತೂರು ಶ್ರೀಕ್ಷೇತ್ರಕ್ಕೂ ನಮ್ಮ ಕುಟುಂಬಕ್ಕೂ ಅವಿನಾವಭಾವ ಸಂಬಂಧ ಇದ್ದು, ನಿಷ್ಠೆಯಿಂದ ಪ್ರಾಮಾಣಿಕವಾಗಿ ಎಲ್ಲಾ ಕಾರ್ಯಕ್ರಮಗಳಲ್ಲಿ ಪರಮ ಪೂಜ್ಯರ ಸೂಚನೆಗಳನ್ನು ಪಾಲಿಸುತ್ತ ಈ ಕ್ಷೇತ್ರದ ಭಕ್ತರಾಗಿ ಕೆಲಸ ಮಾಡುತ್ತಿದ್ದೇವೆ.
ಸುತ್ತೂರು ಕ್ಷೇತ್ರದ ಆಶ್ರಯದಲ್ಲಿ ಜೆಎಸ್ಎಸ್ ವಿದ್ಯಾ ಸಂಸ್ಥೆ ಬಹಳ ವಿಶ್ವ ವಿದ್ಯಾಲಯಗಳನ್ನು ಸ್ಥಾಪನೆ ಮಾಡುವ ಮೂಲಕ ನಾಡಿನ ಲಕ್ಷಾಂತರ ಹಳ್ಳಿಯ ಮಕ್ಕಳಿಗೆ ವೈದ್ಯಕೀಯ, ಇಂಜಿನಿಯರ್, ಪಿಹೆಚ್ಡಿ ವಿದ್ಯಾಭ್ಯಾಸ ನೀಡುವ ಮೂಲಕ ಶಿಕ್ಷಣ ಸಂಸ್ಥೆಯಿಂದ ಸರ್ಕಾರಕ್ಕೆ ಒಳ್ಳೆಯ ಹೆಸರು ತರುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಎಂದ ಅವರು, ದೇಶದಲ್ಲಿಯೇ ಕರ್ನಾಟಕ ರಾಜ್ಯ ಶಿಕ್ಷಣ ಕ್ಷೇತ್ರದಲ್ಲಿ 05ನೇ ಸ್ಥಾನದಲ್ಲಿ ಇದೆ ಎಂದರೆ ಅದು ಜೆಎಸ್ಎಸ್ ಸಂಸ್ಥೆಯ ಕೊಡುಗೆ ಎಂದು ಪ್ರಶಮಸಿದರು.