ರಾಹುಲ್ ಬೆನ್ನು ಬಿಡದ ಕಳಪೆ ಫಾರ್ಮ್ …! ಪೂಜಾರ ಭರ್ಜರಿ ಶತಕ…!

ಆಸ್ಟ್ರೇಲಿಯಾ ತಂಡದ ವಿರುದ್ಧ ಇಲ್ಲಿ ನಡೆಯುತ್ತಿರುವ ನಾಲ್ಕನೆ ಕ್ರಿಕೆಟ್ ಟೆಸ್ಟ್‍ನ ಮೊದಲ ದಿನವಾದ ಇಂದು ಭಾರತ ತಂಡವು 4 ವಿಕೆಟ್ ನಷ್ಟಕ್ಕೆ 303 ರನ್‍ಗಳಿಸಿ ಉತ್ತಮ ಸ್ಥಿತಿಯಲ್ಲಿದೆ. ಭಾರತ ತಂಡವು ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಕರ್ನಾಟಕದ ಆಟಗಾರರಾದ ಕೆ.ಎಲ್‍ರಾಹುಲ್ ಮತ್ತು ಮಯಾಂಕ್ ಅಗರ್‍ವಾಲ್ ಅವರು ಭಾರತದ ಇನ್ನಿಂಗ್ಸ್ ಪ್ರಾರಂಭಿಸಿದರು.

ಆಸ್ಟ್ರೇಲಿಯಾದ ವೇಗದ ಬೌಲರ್‍ಗಳನ್ನು ಸಮರ್ಥವಾಗಿ ಎದುರಿಸಲು ಮತ್ತೆ ವಿಫಲರಾದ ರಾಹುಲ್ ಕೇವಲ 9 ರನ್‍ಗೆ ಔಟಾದರು. ಮಯಾಂಕ್ ಜತೆಗೂಡಿದ ಚೇತೇಶ್ವರ ಪೂಜಾರ ಅವರು ಇನ್ನಿಂಗ್ಸ್ ಬಲಪಡಿಸಿದರು. ಆಕ್ರಮಣಕಾರಿ ಆಟವಾಡಿದ ಮಯಾಂಕ್ ಅವರು 2 ಸಿಕ್ಸರ್, 7 ಬೌಂಡರಿಗಳಿಂದ ಕೂಡಿದ 77 ರನ್ ಗಳಿಸಿದ್ದಾಗ ಮತ್ತೊಂದು ಸಿಕ್ಸ್ ಹೊಡೆಯುವ ಯತ್ನದಲ್ಲಿ ಲಯಾನ್‍ಗೆ ವಿಕೆಟ್ ಒಪ್ಪಿಸಿದರು ಇವರಿಬ್ಬರೂ ಎರಡನೇ ವಿಕೆಟ್‍ಗೆ 116 ರನ್ ಪೇರಿಸಿದರು.

ಪೂಜಾರರ ಜತೆಗೂಡಿದ ನಾಯಕ ವಿರಾಟ್ ಕೊಹ್ಲಿ ಕೂಡ ಆಸ್ಟ್ರೇಲಿಯಾ ಬೌಲರ್‍ಗಳನ್ನು ದಂಡಿಸತೊಡಗಿದರು.  ಜತೆಯಾಟ ಮುಂದುವರಿದಿದ್ದಾಗ 23 ರನ್ ಗಳಿಸಿದ್ದ ಕೊಹ್ಲಿಯನ್ನು ಹೇಜಲ್‍ವುಡ್ ಔಟ್ ಮಾಡಿದರು. ಉಪನಾಯಕ ಅಜಿಂಕ್ಯರಹಾನೆಯು ಪರಿಸ್ಥಿತಿಯ ಲಾಭ ಪಡೆಯಲು ವಿಫಲರಾಗಿ ಕೇವಲ 18 ರನ್‍ಗೆ ಔಟ್ ಆದರು.

ಒಂದು ಬದಿಯಲ್ಲಿ ದೃಢವಾಗಿ ಆಡುತ್ತಿದ್ದ ಚೇತೇಶ್ವರ ಪೂಜಾರ ಅವರು ಈ ಸರಣಿಯ ತಮ್ಮ ಮೂರನೇ ಶತಕ ದಾಖಲಿಸಿದರು. ಅತ್ಯುತ್ತಮ ಫಾರಂನಲ್ಲರುವ ಪೂಜಾರ ಅವರು ಮನಮೋಹಕ ಆಟ ಪ್ರದರ್ಶಿಸಿದರು. 88ನೆ ಓವರ್‍ನಲ್ಲಿ ಭಾರತ ತಂಡದ ಸ್ಕೋರ್ 300ರ ಗಡಿ ದಾಟಿತು. ಪೂಜಾರ ಜತೆಗೂಡಿದ ಹನುಮವಿಹಾರಿ ಕೂಡ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು.

ದಿನದಾಟದ ಅಂತ್ಯಕ್ಕೆ ಭಾರತ ತಂಡವು 4 ವಿಕೆಟ್ ನಷ್ಟಕ್ಕೆ 303 ರನ್ ಗಳಿಸಿದ್ದು 130 ರನ್ ಗಳಿಸದ ಪೂಜಾರ, 39 ರನ್ ಗಳಿಸಿರುವ ಹನುಮವಿಹಾರಿ ವಿಕೆಟ್ ಕಾಯ್ದುಕೊಂಡಿದ್ದಾರೆ. ಆಸ್ಟ್ರೇಲಿಯಾ ಪರ ಹೇಜಲ್‍ವುಡ್ 2, ಸ್ಟಾರ್ಕ್ ಮತ್ತು ಲಿಯಾನ್ ತಲಾ 1 ವಿಕೆಟ್ ಪಡೆದರು.

Leave a Reply