ಶಾಸಕರ ರೆಸಾರ್ಟ್ ಫೈಟ್ ಕುರಿತು ಸಿಎಂ ಹೇಳಿದ್ದೇನು…?

ಕಾಂಗ್ರೆಸ್ ಶಾಸಕರು ರೆಸಾರ್ಟ್ ನಲ್ಲಿ ಒಟ್ಟುಗೂಡಿದಾಗ, ಆನಂದ್ ಸಿಂಗ್ ಅವರಿಗೂ ಜೆಎನ್ ಗಣೇಶ್ ಅವರಿಗೂ ಮಾತಿನ ಚಕಮಕಿ ಉಂಟಾಗಿ, ನಂತರ ಆನಂದ್ ಸಿಂಗ್ ಅವರಿಗೆ ಗಣೇಶ್ ಮುಖ ಮೂತಿ ನೋಡದೆ ಥಳಿಸಿದ್ದಾರೆ. ಅಷ್ಟೇ ಅಲ್ಲದೆ ಗಣೇಶ್ ರಿಂದ ಆನಂದ್ ಸಿಂಗ್ ಅವರನ್ನು ಬಿಡಿಸಲು ಬಂದ ಬೇರೆ ಶಾಸಕರಿಗೂ ಗಣೇಶ್ ರಿಂದ ಗೂಸಾ ಬಿದ್ದಿದೆ. ತಕ್ಷಣ ಚಿಕಿತ್ಸೆಗಾಗಿ ಆನಂದ್ ಸಿಂಗ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಬಿಜೆಪಿ ಪಕ್ಷ ನಡೆಸಿದ ಆಪರೇಷನ್ ಕಮಲದಿಂದ, ರಾಜ್ಯದ ಜನತೆಗೆ ರಾಜಕೀಯ ಕ್ಷೇತ್ರದ ಬಗ್ಗೆಯೇ ಅಸಡ್ಡೆ ಉಂಟಾಗಿದೆ. ಆದರ ಬೆನ್ನಲ್ಲೇ ಈ ಘಟನೆ ಕೂಡ ಸಂಭವಿಸಿರುವುದರಿಂದ ,ಉರಿಯುವ ಬೆಂಕಿಗೆ ತುಪ್ಪ ಸುರಿದಂತೆ ಆಗಿದೆ.

ಇದರ ಕುರಿತು ಮಾತನಾಡಿದ ಮಾನ್ಯ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಈ ದುರ್ಘಟನೆ ಸಂಬಂಧಿಸಿದಂತೆ ಕಾನೂನು ವ್ಯಾಪ್ತಿಯಲ್ಲಿ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿರುವುದಾಗಿ ತಿಳಿಸಿದರು.

ಕಾಂಗ್ರೆಸ್ ಶಾಸಕರು ರೆಸಾರ್ಟ್‍ನಲ್ಲಿ ಒಟ್ಟುಗೂಡಿದಾಗ ಸಣ್ಣ ಅಚಾತುರ್ಯ ನಡೆದಿದೆ. ಆ ಘಟನೆಗೆ ಸಂಬಂಧಿಸಿದಂತೆ ಯಾರಿಗೋ ರಕ್ಷಣೆ ನೀಡಿ ಅಧಿಕಾರ ದುರುಪಯೋಗ ಆಗಬಾರದು ಎಂಬ ಉದ್ದೇಶದಿಂದ ಕಾನೂನು ವ್ಯಾಪ್ತಿಯಲ್ಲಿ ಕ್ರಮಕ್ಕೆ ಸೂಚನೆ ನೀಡಲಾಗಿದೆ ಎಂದರು.

ಇಂದು ಶಾಸಕ ಆನಂದ್ ಸಿಂಗ್ ಅವರನ್ನು ಭೇಟಿ ಮಾಡಲಾಗುವುದು. ಈ ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡಿದ್ದೇನೆ. ಸಿದ್ದಗಂಗಾ ಮಠದ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಶಿವೈಕ್ಯರಾದ ಹಿನ್ನೆಲೆಯಲ್ಲಿ ತಮ್ಮ ಗಮನವನ್ನು ಆ ಕಡೆ ಹರಿಸಲಾಗಿತ್ತು.ಆಗಬಾರದ ಘಟನೆ ಆಗಿದೆ. ಅದನ್ನು ಯಾವ ರೀತಿ ಸರಿಪಡಿಸಬೇಕು ಎಂಬ ಪ್ರಯತ್ನ ಮಾಡಲಾಗುತ್ತದೆ. ಒಂದು ಕುಟುಂಬದಲ್ಲೇ ಅಣ್ಣತಮ್ಮಂದಿರಲ್ಲೇ ಜಗಳವಾಗುತ್ತದೆ. ಹೀಗಾಗಿ ಅದನ್ನು ಸರಿಪಡಿಸುವ ಪ್ರಯತ್ನ ಮಾಡಲಾಗುವುದು ಎಂದರು.

Leave a Reply