ಜೀವನ ಮೌಲ್ಯಗಳನ್ನು ತಿಳಿಸಿಕೊಡುವ ಅದ್ಭುತ ಮಾಸ್ ಚಿತ್ರ…! : ಸೀತಾರಾಮ ಕಲ್ಯಾಣ ಚಿತ್ರ ವಿಮರ್ಶೆ

ವೇಗವಾದ ಚಿತ್ರಕತೆಗೆ ಹೊಂದುವಂತಹ ಮೊನಚಾದ ಸಂಭಾಷಣೆಗೆ ಮಾಸ್ ಪ್ರೇಕ್ಷಕರು ಫಿದಾ ಆಗಿ ಶಿಳ್ಳೆ,
ಚಪ್ಪಾಳೆ ಹೊಡಿಯುವಂತಹ ಚಿತ್ರಗಳು ಒಂದು ವರ್ಗ. ಎಂತಹ ಕಲ್ಲು ಹೃದಯದವರನ್ನು ಕರಗಿಸುವಂತಹ ಭಾವನಾತ್ಮಕ ಹಾಗೂ ಜೀವನ ಮೌಲ್ಯಗಳನ್ನು ಸಾರಿ ಪ್ರೇಕ್ಷಕರನ್ನು ಮೂಕವಿಸ್ಮಿತರನ್ನಾಗಿ ಮಾಡುವ ಚಿತ್ರಗಳು ಮತ್ತೊಂದು ವರ್ಗ. ಆದರೆ ಇಂದು ತೆರೆಕಂಡ ಕನ್ನಡದ ಅತ್ಯಂತ ನಿರೀಕ್ಷಿತ ಚಿತ್ರ, ನಿಖಿಲ್ ಕುಮಾರಸ್ವಾಮಿ ಅವರು ಅಭಿನಯಿಸಿರುವ ‘ಸೀತಾರಾಮ ಕಲ್ಯಾಣ’, ಇವೆರಡನ್ನೂ ಹೊಂದಿರುವ ಒಂದು ವಿಭಿನ್ನ ಹಾಗೂ ವಿಶೇಷ ಸಿನಿಮಾವಾಗಿದ್ದು, ವರ್ಷದಲ್ಲೇ ನೂರಾರು ಚಿತ್ರಗಳು ತೆರೆಕಾಣುವಂತಹ ಈ ಕಾಲದಲ್ಲಿ, ಎಂದೆಂದಿಗೂ ಸಿನಿ ರಸಿಕರ ಹೃದಯದಲ್ಲಿ ಶಾಶ್ವತವಾಗಿ ಉಳಿಯುವಂತಹ ಚಿತ್ರವಾಗಲಿದೆ.

ತುಂಬಿದ ಕುಟುಂಬದ ಪ್ರೀತಿಯ ಮಗಳು ಗೀತಾ ( ರಚಿತಾ ರಾಮ್‌). ಇತ್ತ ನಾಯಕ ಆರ್ಯ (ನಿಖಿಲ್‌ಕುಮಾರ್‌) ನಗರದಲ್ಲಿ ದೊಡ್ಡ ಬಿಝಿನೆಸ್‌ಮ್ಯಾನ್‌ ಶಂಕರ್‌ (ಶರತ್‌ಕುಮಾರ್‌ ಪುತ್ರ) ಅವರ ಮುದ್ದಿನ ಪುತ್ರ. ಗೀತಾ ಮತ್ತು ಆರ್ಯ ಇಬ್ಬರೂ ಒಂದು ಮದುವೆಯಲ್ಲಿ ಭೇಟಿಯಾಗುತ್ತಾರೆ. ಗೀತಾಳನ್ನು ಆರ್ಯ ನೋಡಿದ ಮೊದಲ ನೋಟದಲ್ಲಿಯೇ ಆಕೆಯ ಅಂದಕ್ಕೆ ಮರುಳಾಗುತ್ತಾನೆ. ಈ ಲವ್‌ಸ್ಟೋರಿ ಗೀತಾ ನಗರಕ್ಕೆ ಓದಲು ಬಂದಾಗ ಅಲ್ಲಿಗೆ ಶಿಫ್ಟ್‌ ಆಗುತ್ತದೆ. ಹೀಗೆ ಶಿಫ್ಟ್‌ ಆದ ಲವ್‌ಸ್ಟೋರಿಯಲ್ಲಿ ಒಂದಷ್ಟು ಟ್ವಿಸ್ಟ್‌ಗಳು, ಟರ್ನ್‌ಗಳು ಇವೆ. ಆರ್ಯನಿಗೂ, ಗೀತಾ ಕುಟುಂಬಕ್ಕೆ ಒಂದು ನಂಟಿರುತ್ತದೆ. ಆ ನಂಟೇನು, ಮತ್ತು ರೈತರ ಸಂಕಷ್ಟಕ್ಕೆ ಆರ್ಯ ತನ್ನ ತಂದೆಯ ಮೂಲಕ ನೆರವಾಗುತ್ತಾನೆ. ಅದು ಹೇಗೆ ಎಂಬುದನ್ನು ಸಿನಿಮಾದಲ್ಲಿಯೇ ನೋಡಬೇಕು. 

ನಿರ್ದೇಶಕ ಹರ್ಷ ಎಲ್ಲವನ್ನು ಕಲರ್‌ಫುಲ್‌ ಆಗಿ ಅದ್ಧೂರಿಯಾಗಿ ಚಿತ್ರೀಕರಣ ಮಾಡಿದ್ದಾರೆ. ಪ್ರತಿಯೊಂದು ದೃಶ್ಯವೂ ಕಲರ್‌ಫುಲ್‌ ಆಗಿ ಮೂಡಿ ಬರಬೇಕು ಎಂಬ ಕಾರಣಕ್ಕೆ ಅದಕ್ಕೆ ತಕ್ಕಂತೆ ಲೊಕೇಶನ್ ಮತ್ತು ಚಿತ್ರಕಥೆಯನ್ನು ಮಾಡಿ, ತಮ್ಮ ಕೆಲಸವನ್ನು ಬಹಳ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ನಿರ್ದೇಶಕರ ಕೆಲಸಕ್ಕೆ ಸಿನಿಮಾಟೋಗ್ರಫರ್‌ ಸ್ವಾಮಿ ಮತ್ತು ಸಂಗೀತ ನಿರ್ದೇಶಕ ಅನುಪ್‌ ರೂಬೆನ್ಸ್‌ ಸೇರಿದಂತೆ ಇನ್ನುಳಿದ ತಂತ್ರಜ್ಞರು ಸಾಥ್‌ ನೀಡಿದ್ದಾರೆ. 

ಜಾಗ್ವಾರ್‌ ಚಿತ್ರದಲ್ಲಿ ಸ್ಟೈಲಿಶ್‌ ಆಗಿ ಕಾಣಿಸಿಕೊಂಡಿದ್ದ ನಿಖಿಲ್, ಈ ಚಿತ್ರದಲ್ಲಿ ಇನ್ನಷ್ಟು ಸ್ಟೈಲಿಶ್ ಆಗಿ ಕಾಣಿಸಿಕೊಳ್ಳುವುದಷ್ಟೇ ಅಲ್ಲದೆ ಸ್ಟೈಲಿಶ್ ಆಗಿ ಅಭಿನಯ ಕೂಡ ಮಾಡಿ ಪಡ್ಡೆ ಹುಡುಗರ ಮನಗೆದಿದ್ದಾರೆ. ಕಾರ್ಪೋರೇಟ್‌ ಲುಕ್‌ನಲ್ಲಿಯೇ ನಿಖಿಲ್‌ ಫೈಟ್‌ ಮಾಡಿ ಮಾಸ್‌ ಪ್ರೇಕ್ಷಕರನ್ನು ರಂಜಿಸಿದ್ದಾರೆ. ತಮ್ಮ ಮೊದಲ ಚಿತ್ರಕ್ಕಿಂತ ಈ ಸಿನಿಮಾದಲ್ಲಿ ಎಲ್ಲಾ ವಿಚಾರದಲ್ಲಿಯೂ ನಿಖಿಲ್‌ ಮಾಗಿದ್ದಾರೆ. ಅದರಲ್ಲೂ ಅವರ ಡೈಲಾಗ್‌ ಡೆಲಿವರಿಗೆ ಐಟಿ ಕಂಪನಿ ಗೀಕ್ ಗಳಿಗೂ ಶಿಳ್ಳೆ ಹೊಡಿಯುವಂತೆ ರೋಮಾಂಚನವಾಗುತ್ತದೆ.

ಇಡೀ ಸಿನಿಮಾದಲ್ಲಿ ಲಂಗ ದಾವಣಿ ಹಾಕಿಕೊಂಡು ನಟಿಸಿರುವ ರಚಿತಾ ರಾಮ್‌ ಮುದ್ದು ಮುದ್ದಾಗಿ ಪೆದ್ದು ಪೆದ್ದಾಗಿ ಇಷ್ಟವಾಗುತ್ತಾರೆ.

ಅಲ್ಲದೆ ಶರತ್‌ಕುಮಾರ್‌, ರವಿಶಂಕರ್‌, ಮಧುಬಾಲಾ, ಆದಿತ್ಯ ಮೆನನ್‌, ಗಿರಿಜಾಲೋಕೇಶ್‌ ರಂತಹ ದೊಡ್ಡ ತಾರಗಣವನ್ನೇ ಚಿತ್ರ ಹೊಂದಿದ್ದು, ಇವರ ನಿಷ್ಕ್ರಿಷ್ಟವಾದ ಅಭಿನಯ ಚಿತ್ರಕ್ಕೆ ಮತ್ತೊಂದು ಪಾಸಿಟಿವ್ ಅಂಶವಾಗಿದೆ. ಕಾಮಿಡಿ ಕಿಲಾಡಿಗಳು ತಂಡದ ನಯನ, ಶಿವರಾಜ್‌ ಕೆ ಆರ್‌ ಪೇಟೆ, ಸಂಜು ಬಸಯ್ಯ ಪ್ರೇಕ್ಷಕರನ್ನು ನಕ್ಕು ನಗಿಸಿದ್ದಾರೆ. ಇವರ ಜತೆ ಚಿಕ್ಕಣ್ಣ ಎಂದಿನಂತೆ ತಮ್ಮ ಅಭಿನಯದ ಮೂಲಕ ಪ್ರೇಕ್ಷಕರಿಗೆ ಕಚುಗುಳಿ ಇಡುತ್ತಾರೆ.

ಚಿತ್ರದ ಟ್ರೇಲರ್, ಹಾಗೂ ಹಾಡುಗಳ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದ ಸೀತಾರಾಮ ಕಲ್ಯಾಣ, ಉತ್ತಮ ಚಿತ್ರಕತೆ, ನಿರ್ದುಷ್ಟ ಅಭಿನಯ, ಹಿತವಾದ ಸಂಗೀತ, ಪವರ್ಫುಲ್ ಆಕ್ಷನ್, ಮನಮೋಹಕ ಛಾಯಾಗ್ರಹಣ, ಡಾ ರಾಜಕುಮಾರ್ ಅವರ ಸಿನಿಮಾಗಳನ್ನು ನೆನಪಿಸುವ ಜೀವನ ಮೌಲ್ಯಗಳು, ಹೇಗೆ ಎಲ್ಲಾ ಅಂಶಗಳನ್ನು ಹೊಂದಿರುವ ಒಂದು ಅದ್ಬುತ ಕುಟುಂಬ ಸಮೇತರಾಗಿ ನೋಡಲೇಬೇಕಾದ ಒಂದು ಚಿತ್ರ.

Leave a Reply