ಅನಿತಾ ಕುಮಾರಸ್ವಾಮಿ ಅವರ ಜೀವನದ ಒಂದು ನಸುನೋಟ…!

ಮಾನ್ಯ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರ ಧರ್ಮಪತ್ನಿ ಶ್ರೀಮತಿ ಅನಿತಾ ಕುಮಾರಸ್ವಾಮಿ ಅವರು ರಾಮನಗರ ಕ್ಷೇತ್ರದ ಶಾಸಕಿ ಆಗಿ ಈಗ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರ ಕುಟುಂಬದ ಸೊಸೆ, ಮಾಜಿ ಮುಖ್ಯಮಂತ್ರಿ(ಅಂದಿನ) ಹೆಚ್ ಡಿ ಕುಮಾರಸ್ವಾಮಿ ಅವರ ಪತ್ನಿಯಾಗಿದ್ದರೂ, ಇವರ ರಾಜಕೀಯ ದಾರಿ ಸುಗಮವಾಗಿ ಇರಲಿಲ್ಲ. ಇವರ ರಾಜಕೀಯ ಪಯಣ ಒಂದು ರೋಚಕ ಕತೆ ಎಂದೇ ಹೇಳಬಹುದು.

ಅನಿತಾ ಕುಮಾರಸ್ವಾಮಿ ಅವರು ಫೆಬ್ರವರಿ 24,1964 ರಂದು ಡಾ. ಟಿ.ಸಿ ಸೀತಾರಾಮ್ ಮತ್ತು ಶ್ರೀಮತಿ ವಿಮಲ ದಂಪತಿಗಳಿಗೆ ಜೇಷ್ಠ ಪುತ್ರಿಯಾಗಿ ಕೋಲಾರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ತಳಗವಾರ ಎಂಬ ಗ್ರಾಮದಲ್ಲಿ ಜನಿಸಿದರು. ಇವರ ವಿದ್ಯಾಭ್ಯಾಸ ಬೆಂಗಳೂರಿನಲ್ಲಿ ನಡೆಯಿತು. ಇವರು ಬಿ.ಇ. (ಕಂಪ್ಯೂಟರ್ ಸೈನ್ಸ್) ಪದವೀಧರೆ. ಇವರ ತಂದೆ ಡಾ. ಟಿ.ಎಸ್ ಸೀತಾರಾಮ್ ಅವರು ಖ್ಯಾತ ವೈದ್ಯರು ಮಾತ್ರವಲ್ಲದೆ ಮಹಾನ್ ಕನ್ನಡದ ಭಕ್ತರಾಗಿದ್ದರು. ನಮ್ಮ ನಾಡು, ನುಡಿಯ ಬಗ್ಗೆ ಅವರ ಚಿಂತನೆಗಳು ಎಂತವರಿಗೂ ಪ್ರೇರೇಪಿಸುತ್ತಿದ್ದವು. ಬಡವರಿಗೆ ಉಚಿತ ಚಿಕಿತ್ಸೆ ನೀಡಿತ್ತಿದ್ದರು. ಆದ್ದರಿಂದ, ಶ್ರೀಮತಿ ಅನಿತಾ ಕುಮಾರಸ್ವಾಮಿ ಅವರ ಕನ್ನಡ ಪ್ರೇಮ, ಹಾಗೂ ಜನಸೇವೆಯ ಮನೋಭಾವಕ್ಕೆ ಅವರ ತಂದೆಯೇ ಮೊದಲನೇ ಸ್ಫೂರ್ತಿ.

ಅನಂತರ 1986ರಲ್ಲಿ ಮಾರ್ಚ್ 13ರಂದು ಅನಿತಾ ಕುಮಾರಸ್ವಾಮಿ ಅವರು ಹೆಚ್ ಡಿ ಕುಮಾರಸ್ವಾಮಿ ಅವರನ್ನು ವಿವಾಹವಾಗುವ ಮೂಲಕ ಹಾಸನದ ಸೊಸೆಯಾದರು. ಅನಿತಾ ಕುಮಾರಸ್ವಾಮಿ ಅವರು ಸಾಮಾನ್ಯ ಮಹಿಳೆಯರಂತೆಯೇ, ಜನಸೇವೆಯಲ್ಲಿ ಮಗ್ನರಾಗಿದ್ದ ತಮ್ಮ ಕುಟುಂಬದವರಿಗೆ, ಎಲ್ಲ ಮಹಿಳೆಯರು ತಮ್ಮ ಪತಿ ಹಾಗೂ ಕುಟುಂಬದವರ ವೃತ್ತಿಗೆ ಬೆಂಬಲಿಸುವ ರೀತಿಯಲ್ಲಿ ತಮ್ಮ ಜವಾಬ್ದಾರಿಯನ್ನು ಒಬ್ಬ ಸಗೃಹಿಣಿಯಾಗಿ ನಿರ್ವಹಿಸುತ್ತಿದ್ದರು.

ಆದರೆ ಅನಿತಾ ಕುಮಾರಸ್ವಾಮಿ ಅವರು ತಮ್ಮ ನಾಡು-ನುಡಿ ಹಾಗೂ ಜನರ ಮೇಲಿನ ಪ್ರೇಮ ಹಾಗೂ ಅಭಿಮಾನದಿಂದ ಜನಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಇವರ ಈ ಮನೋಭಾವಕ್ಕೆ, ಅವರ ತಂದೆ ನಂತರ, ಅವರ ಮಾವ ಹೆಚ್ ಡಿ ದೇವೇಗೌಡ ಅವರು ಪ್ರೇರಣೆಯಾಗಿದ್ದರು. ಇದರಿಂದ ಅಭಿಮಾನಿಗಳು ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಒತ್ತಾಯಿಸುತ್ತಿದ್ದರೂ, ರಾಜಕೀಯ ಪ್ರವೇಶ ಮಾಡುವ, ಅಥವಾ ರಾಜಕೀಯವನ್ನು ವೃತ್ತಿಯಾಗಿ ಮಾಡಿಕೊಳ್ಳುವ ಆಸೆಯಾಗಲಿ, ಆಸಕ್ತಿಯಾಗಲಿ ಇರಲಿಲ್ಲ.

2008ರ ಸಾರ್ವತ್ರಿಕ ಚುನಾವಣೆಯಲ್ಲಿ , ಜೆಡಿಎಸ್ ಪಕ್ಷದ ಪರ ಮಧುಗಿರಿ ಕ್ಷೇತ್ರದಲ್ಲಿ ವೀರಭದ್ರಯ್ಯ ಎಂಬ ಕೆಎಎಸ್ ಅಧಿಕಾರಿಯನ್ನು ಕಣಕ್ಕೆ ಇಳಿಸಬೇಕೆಂದು ತೀರ್ಮಾನವಾಗಿತ್ತು. ಆದರೆ ಕಾರಣಾಂತರಗಳಿಂದ ಅವರು ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಾಗಲಿಲ್ಲ. ಆಗ ಜೆಡಿಎಸ್ ಪಕ್ಷದ ನಾಯಕರ ತಲೆಗೆ ಬಂದಿದ್ದು ಅನಿತಾ ಕುಮಾರಸ್ವಾಮಿ ಅವರ ಹೆಸರು.

ಅನಿತಾ ಕುಮಾರಸ್ವಾಮಿ ಅವರು ಮಧುಗಿರಿಯಲ್ಲಿ ಸ್ಪರ್ಧಿಸಲು ಪಕ್ಷದ ಎಲ್ಲ ಸಧಸ್ಯರು ಸಂತೋಷದಿಂದ ಒಪ್ಪಿದರು. ರಾಜ್ಯದ ಜನತೆ ಕೂಡ ಆಗಾಗಲೇ ಅವರ ಕಿವಿ ಮುಟ್ಟಿದ್ದ ‘ಅನಿತಾ ಕುಮಾರಸ್ವಾಮಿ ಅವರು ಮಧುಗಿರಿಯಲ್ಲಿ ಸ್ಪರ್ಧಿಸಬಹುದು’ ಎಂಬ ವದಂತಿಗಳಿಗೆ ಸಂತಸ ವ್ಯಕ್ತಪಡಿಸಿದ್ದರು. ಅದರೆ ಅನಿತಾ ಕುಮಾರಸ್ವಾಮಿ ಅವರಿಗೆ ರಾಜಕೀಯದಲ್ಲಿ ಆಸಕ್ತಿ ಇರದ ಕಾರಣ ಅವರನ್ನು ಮನವೊಲಿಸಲು ಅಭಿಮಾನಿಗಳು ಸಾಕಷ್ಟು ಕಷ್ಟ ಪಡಬೇಕಾಯಿತು. ನಂತರ ಮಧುಗಿರಿಯಲ್ಲಿ ಜನರು ತುಂಬು ಹೃದಯದಿಂದ ಅನಿತಾ ಕುಮಾರಸ್ವಾಮಿ ಅವರನ್ನು ತಮ್ಮ ಕ್ಷೇತ್ರದ ಶಾಸಕಿಯಾಗಿ ಆಯ್ಕೆ ಮಾಡಿಕೊಂಡರು. ಜನರ ತಮ್ಮ ಮೇಲಿಟ್ಟಿದ್ದ ಪ್ರೀತಿಗೆ ತಕ್ಕಂತೆ ತಮ್ಮ ಆಡಳಿತ ಅವಿಧಿಯಲ್ಲಿ ಮಧುಗಿರಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಹರಿಕಾರರಾದರು. ಇವರು ಮೊದಲ ಬಾರಿಗೆ ಶಾಸಕಿಯಾಗಿ ಆಯ್ಕೆಯಾದಾಗ ಕೇವಲ ಶೇ.11 ರಷ್ಟು ಮಹಿಳೆಯರು ಮಾತ್ರ ವಿಧಾನ ಸಭೆಯ ಸದಸ್ಯರಾಗಿದ್ದರು. ಅದರಲ್ಲಿ ಅನಿತಾ ಕುಮಾರಸ್ವಾಮಿ ಕೂಡ ಒಬ್ಬರು ಎಂಬುದು ಇವರ ಒಂದು ಹೆಗ್ಗಳಿಕೆ.

ನಂತರ 2013ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಚನ್ನಪಟ್ಟಣ ಕ್ಷೇತ್ರದಿಂದ ಸ್ಪರ್ಧಿಸಿದಾಗ ಹಾಗು ಅದೇ ವರುಷ ಸಂಸದ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಕೆಲವೇ ಕೆಲವು ಮತಗಳ ಅಂತರದಲ್ಲಿ ಸೋತು ತಮ್ಮ ರಾಜಕೀಯ ಪಯಣದಲ್ಲಿ ಕಹಿಯನ್ನೂ ರುಚಿಸಿದರು.

ಅವರು ಯಾವುದೇ ಅಧಿಕಾರದಲ್ಲಿ ಇರದೇ ಇದ್ದಾಗಲೂ, ತಮ್ಮ ಜನಸೇವೆಯನ್ನು ನಿಲ್ಲಿಸಿರಲಿಲ್ಲ, ಅಥವಾ ಅವರ ಕನ್ನಡ ಪ್ರೇಮ ಇನ್ನು ಹೆಚ್ಚಾಗಿತ್ತೇ ಹೊರೆತು ನಿರಾಶೆಯಿಂದ ಕಡಿಮೆಯಾಗಲಿಲ್ಲ.

ಇತ್ತೀಚಿಗೆ 2018ರಲ್ಲಿ ನಡೆದ ಉಪಚುನಾವಣೆಯಲ್ಲಿ ಸತತ ಎರಡು ಸೋಲಿನ ಬಳಿಕ ಫೀನಿಕ್ಸ್ ಪಕ್ಷಿಯಂತೆ ಪುಟಿದೆದ್ದು, ಮತ್ತೆ ಜನರ ಪ್ರೀತಿಯ ಶಾಸಕಿಯಾಗಿ ಆಯ್ಕೆಯಾಗಿದ್ದಾರೆ. ತಮ್ಮ ಕ್ಷೇತ್ರದ ಜನರ ಒಳಿತಿಗಾಗಿ ಶ್ರಮಿಸುತ್ತಿದ್ದಾರೆ.

Leave a Reply