ತಾವು ಕೆಲಸ ಮಾಡಲ್ಲ ಮಾಡುವವರಿಗೂ ಬಿಡಲ್ಲ…!

ಬಿಜೆಪಿ ಪಕ್ಷದ ನಾಯಕರು ಆಪರೇಷನ್ ಕಮಲಾ ಕುತಂತ್ರ ನಡೆಸಿ ಕಾಂಗ್ರೆಸ್ ಶಾಸಕರಿಗೆ ಹಣ ಹಾಗು ಅಧಿಕಾರದ ಆಮಿಷ ಒಡ್ಡಿ, ತಮ್ಮ ಪಕ್ಷಕ್ಕೆ ಸೇರುವಂತೆ ಮನವೊಲಿಸಲು ಸಮ್ಮಿಶ್ರ ಸರ್ಕಾರ ರಚನೆಯಾದಾಗಲಿನಿಂದಲೂ ಪ್ರಯತ್ನಿಸುತ್ತಿರುವುದು ಹೊಸ ವಿಷಯವೇನಲ್ಲ. ಆದರೆ ಇದರಿಂದ ರಾಜ್ಯದ ಜನತೆ ಮೇಲೆ, ರಾಜ್ಯದ ಅಭಿವೃದ್ಧಿ ಕಾರ್ಯಗಳ ಮೇಲೆ ಎಷ್ಟರ ಮಟ್ಟಿಗೆ ದುಷ್ಪರಿಣಾಮ ಬೀರುತ್ತಿದೆ ಎಂಬುದು ನಾವು ಯೋಚಿಸಬೇಕಾದ ಸಂಗತಿ.

ಹತ್ತು ವರುಷಗಳ ಹಿಂದೆ ರಾಜ್ಯದ ಜನತೆ ಬಹುಮತ ನೀಡಿ, ಬಿ.ಎಸ್ ಯಡಿಯೂರಪ್ಪನವರಿಗೆ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಲು ಅವಕಾಶ ನೀಡಿದ್ದರು. ಆದರೆ ಜನರು ನೀಡಿದ ಅಧಿಕಾರವನ್ನು ದುರುಪಯೋಗ ಪಡೆದುಕೊಂಡು ಅಕ್ರಮ ಚಟುವಟಿಕೆಗಳನ್ನು ನಡೆಸಿ, ಜೈಲು ಸೇರಿ ರಾಜ್ಯದ ಮರ್ಯಾದಿಯನ್ನು ರಾಷ್ಟ್ರ ಮಟ್ಟದಲ್ಲಿ ಹರಾಜು ಹಾಕಿದರು.

ಈಗ ಹೆಚ್.ಡಿ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ರಚನೆಯಾಗಿರುವ ಕಾಂಗ್ರೆಸ್ – ಜೆಡಿಎಸ್ ಸಮ್ಮಿಶ್ರ ಸರ್ಕಾರ, ರಾಜ್ಯದ ಸಮಗ್ರ ಅಭಿವೃದ್ಧಿಗೆ ಉತ್ತಮ ಯೋಜನೆಗಳನ್ನು ಹೂಡಿಕೊಂಡಿದ್ದು, ಅದನ್ನು ಜಾರಿಗೊಳಿಸಿ ಕಾರ್ಯರೂಪಕ್ಕೆ ತಂದು ಎಲ್ಲರಿಗೂ ತಲುಪುವಂತೆ ಮಾಡಲು ಶ್ರಮಿಸುತ್ತಿದೆ.

ಆದರೆ ಬಿಜೆಪಿ ನಾಯಕರು ವಿರೋಧ ಪಕ್ಷದ ಕರ್ತವ್ಯವನ್ನೇ ಮರೆತು, ‘ಆಪರೇಷನ್ ಕಮಲಾ’ದಲ್ಲಿ ತಲ್ಲೀನರಾಗಿ ‘ಸರ್ಕಾರ ದೀಪಾವಳಿಗೆ ಬೀಳುತ್ತದೆ’ ‘ಸಂಕ್ರಾಂತಿಗೆ ಬೀಳುತ್ತದೆ’, ‘ಯಡಿಯೂರಪ್ಪ ಮತ್ತೆ ಸಿಎಂ ಆಗುತ್ತಾರೆ’ ಎಂಬ ಅಪಕ್ವ ಹೇಳಿಕೆಗಳನ್ನು ಮಾಧ್ಯಮಗಳ ಮುಂದೆ ನೀಡುತ್ತಾ ರಾಜ್ಯದ ಜನರ ಪಾಲಿಗೆ ನಗೆ ಪಾಟಲಾಗಿದ್ದಾರೆ. ಅಲ್ಲದೆ ಇದರಿಂದ ತಮ್ಮ ಕೆಲಸವನ್ನು ಮಾಡಲು ಈಗಿರುವ ಸರ್ಕಾರಕ್ಕೆ ಅಡ್ಡಿಯಾಗುತ್ತಿದ್ದು, ತೊಂದರೆಯುಂಟಾಗುತ್ತಿದೆ.

ಬಿಜೆಪಿ ‘ಆಪರೇಷನ್ ಕಮಲಾ’ ನಡೆಸಲು ಮುಖ್ಯ ಕಾರಣವೆಂದರೆ, ಮೋದಿಯ ಸುಳ್ಳು ಬರವಸೆಗಳಿಂದ ದೇಶದ ಜನತೆ ಬೇಸತ್ತಿದ್ದು, ದೇಶದಲ್ಲಿ ಮೋದಿ ಅಲೆ ಸಂಪೂರ್ಣವಾಗಿ ಕೊಚ್ಚಿ ಹೋಗಿದೆ. ಇದಕ್ಕೆ ಪ್ರತ್ಯಕ್ಷ ಸಾಕ್ಷಿ ಪಂಚ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿಯ ಹೀನಾಯ ಸೋಲು. ಅದರಲ್ಲೂ ಬಿಜೆಪಿ ಪಕ್ಷ ದಕ್ಷಿಣ ಭಾರತದಲ್ಲಿ ಬಹಳ ದುರ್ಬಲವಾಗಿದ್ದು, ಕೇವಲ ಕರ್ನಾಟಕದಲ್ಲಿ ಮಾತ್ರ ಬಿಜೆಪಿ ಇನ್ನು ಜೀವಂತವಾಗಿತ್ತು. ಆದರೆ ಈಗ ಬಿಜೆಪಿಯಾ ಚೇಷ್ಟೆಗಳನ್ನು ನೋಡಿ ಜನರು ಛೀಮಾರಿ ಹಾಕುತ್ತಿದ್ದಾರೆ. ಅಡಿಕೆಗೆ ಹೋದ ಮಾನ ಆನೆ ಕೊಟ್ಟರು ಬರುವುದಿಲ್ಲ ಎಂಬಂತೆ, ಹೇಗೋ ಈಗಾಗಲೇ ಮರ್ಯಾದಿ ಕಳೆದು ಕೊಂಡಿದ್ದೇವೆ, ತಲೆ ಒಡೆದಾದರೂ ಸರಿ, ತಲೆ ಹಿಡಿದಾದರು ಸರಿ, ಅಧಿಕಾರಕ್ಕೆ ಬರಬೇಕು ಎಂದು ಪ್ರಯತ್ನಿಸುತ್ತಿದೆ. ಅಲ್ಲದೆ ಯಡಿಯೂರಪ್ಪನವರಿಗೆ ಜನ ಸೇವೆ ಮಾಡುವ ಹಂಬಲವಿಲ್ಲಾ. ಅವರಿಗೆ ಇರುವುದು ಅಧಿಕಾರದ ವ್ಯಾಮೋಹ. ಇದು ಹತ್ತು ವರುಷಗಳ ಹಿಂದೆಯೇ ಸಾಬೀತಾಗಿತ್ತು. ಆದರೆ ಅವರಿಗೀಗ ‘ಊರು ಹೋಗು, ಕಾಡು ಬಾ’ ಎಂಬ ಕಾಲ ಸಮೀಪಿಸುತ್ತಿದೆ. ಆದ್ದರಿಂದ ಹೇಗಾದರೂ ಮಾಡಿ ಮುಖ್ಯಮಂತ್ರಿ ಕುರ್ಚಿ ಮೇಲೆ ಕೂರಲೇ ಬೇಕು ಎಂದು ಈ ಕುತಂತ್ರಗಳನ್ನು ತಮ್ಮ ಕುರು ಸೈನ್ಯದಂತ ಪಾಳಯದ ಬೆಂಬಲದಿಂದ ಮಾಡುತ್ತಿದ್ದಾರೆ.

ಈಗ ನಾವು, ಅಂದರೆ ರಾಜ್ಯದ ಜನತೆ ದೃಢ ನಿರ್ಧಾರ ಕೈಗೊಳ್ಳುವ ಸಮಯ. ತಾವು ಕೆಲಸ ಮಾಡದೆ, ಮಾಡುವವರಿಗೂ ಬಿಡದೆ ಬೆನ್ನಿಗೆ ಹತ್ತಿದ ಬೇತಾಳದಂತೆ ಕಾಡುತ್ತಿರುವ ಬಿಜೆಪಿ ಪಕ್ಷಕ್ಕೆ ಮುಂದಿನ ಲೋಕ ಸಭೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲೇ ಬೇಕು.

Leave a Reply