ನಿಖಿಲ್ ನಡೆಯನ್ನು ಶ್ಲಾಘಿಸಿದ ಬಿಜೆಪಿ ಹಿರಿಯ ನಾಯಕ ಎಸ್.ಎಂ ಕೃಷ್ಣ…!

ಒಂದು ವಾರದ ಹಿಂದೆ ಇಡೀ ರಾಜ್ಯದಲ್ಲಿ ಸಂಚಲನ ಮೂಡಿಸಿದ್ದ ಮಂಡ್ಯ ಲೋಕ ಸಭಾ ಚುನಾವಣೆಯ ಫಲಿತಾಂಶ ಹೊರಬಿದಿದ್ದು, ಅನಿರೀಕ್ಷಿತ ಹಾಗು ಅಸಹಜವೆನಿಸುವಂತೆ ಜನತಾ ದಳ(ಜಾತ್ಯತೀತ) ಪಕ್ಷದ ಪರ ಅಖಾಡಕ್ಕೆ ಇಳಿದಿದ್ದ ನಿಖಿಲ್ ಕುಮಾರಸ್ವಾಮಿ ಅವರು ಸೋಲನ್ನು ಅನುಭವಿಸಬೇಕಾಯಿತ. ಪಕ್ಷೇತರ ಅಭ್ಯರ್ಥಿ ಸುಮಲತಾ ಅವರು ಬಿಜೆಪಿ ಪಕ್ಷದ ಪರೋಕ್ಷ ಬೆಂಬಲದಿಂದ ಗೆಲುವು ಸಾಧಿಸಿದರು.

ಮಂಡ್ಯದ ಲೋಕ ಸಭಾ ಚುನಾವಣೆಯಲ್ಲಿನ ಸೋಲಿನಿಂದ ನಿಖಿಲ್ ಬೇಸತ್ತು ತಮ್ಮ ಪಕ್ಷದ ಕಾರ್ಯಕರ್ತರ ಮೇಲೆ, ಮಂಡ್ಯದ ಶಾಸಕರ ಮೇಲೆ, ಪಕ್ಷದ ವರಿಷ್ಠ ದೇವೇಗೌಡರ ಮೇಲೆ ಮುನಿಸಿಕೊಂಡು ರಾದ್ದಂತ ಮಾಡಿದ್ದಾರೆ ಎಂಬ ವದಂತಿಗಳು ಹರಡಿದ್ದವು. ಪತ್ರಿಕೋದ್ಯಮದ ನೈತಿಕತೆಯನ್ನು ಮರೆತು ಕೆಲವು ಪತ್ರಿಕೆಗಳಲ್ಲಿ ಈ ವದಂತಿಗೆ ಉಪ್ಪು ಕಾರ ಬೆರೆಸಿ ಪ್ರಕಟಿಸಿದರು. ಇದಕೆಲ್ಲ ತಕ್ಕ ಉತ್ತರ ಈಗ ಸ್ವತಃ ನಿಖಿಲ್ ಕುಮಾರಸ್ವಾಮಿ ಅವರೇ ನೀಡಿದ್ದಾರೆ. ಹಾಗು ಅವರ ಈ ನಡೆಗೆ ವಿಪಕ್ಷದ ಹಿರಿಯ ನಾಯಕರಾದ ಎಸ್ ಕೃಷ್ಣ ಅವರು ಮೆಚ್ಚಿ ಬೆನ್ನು ತಟ್ಟಿದ್ದಾರೆ.

ಹೌದು. ನೆನ್ನೆ ಅಭಿಷೇಕ್ ಅಂಬರೀಷ್ ನಟನೆಯ ಚೊಚ್ಚಲ ಚಿತ್ರ ‘ಅಮರ್’ ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಮಂಡ್ಯ ಚುನಾವಣೆಯಿಂದ ಅಭಿಷೇಕ್ ಹಾಗು ನಿಖಿಲ್ ಸ್ನೇಹ ಮುರಿದೆ ಹೋಯಿತು ಎಂದುಕೊಳ್ಳುತ್ತಿದ್ದ ಹಾಗೆ ಚಿತ್ರರಂಗಕ್ಕೆ ಅಭಿಷೇಕ್ ಅವರ ಪದಾರ್ಪಣೆಗೆ ಹೃದಯಪೂರ್ವಕವಾಗಿ ನಿಖಿಲ್ ಶುಭಕೋರಿದರು.

” ನಾಳೆ ನನ್ನ ಸಹೋದರ ಅಭಿಷೇಕ್ ನಟನೆಯ ಅಮರ್ ಚಿತ್ರ ಯಶಸ್ವಿಯಾಗಲಿ. ದಯವಿಟ್ಟು ಎಲ್ಲರು ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ವೀಕ್ಷಿಸಿ ಹಾರೈಸಿ. ಅಲ್ಲದೆ, ನಾನು ಸುಮಕ್ಕ ಅವರಿಗೆ ಅಭಿನಂದಿಸಲು ಇಚ್ಛಿಸುತ್ತೇನೆ. ಇದು ಕೇವಲ ತೋರಿಕೆಗೆ ಅಂದುಕೊಳ್ಳಬೇಡಿ, ನಾನು ಚುನಾವಣೆ ಪ್ರಚಾರದ ವೇಳೆಯಲ್ಲಿ ಹೇಳುತ್ತಿದ್ದಂತೆ ಸಂಬಂಧಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತೇನೆ. ಮಂಡ್ಯದ ಅಭಿವೃದ್ಧಿಗೆ ಸಂಬಂಧಿಸಿದಂತೆ ನಾನು ಯಾರ ಒಟ್ಟಿಗಾದರು ಕೈ ಜೋಡಿಸಲು ಸಿದ್ದನಿದ್ದೇನೆ. ಈ ಸೋಲಿಗೆ ಸಂಪೂರ್ಣವಾಗಿ ನಾನೆ ಹೊಣೆ ಹೊರೆತು ನಮ್ಮ ಪಕ್ಷದ ಶಾಸಕರಾಗಲಿ, ಕಾರ್ಯಕರ್ತರಾಗಲಿ, ಎಂಎಲ್ ಸಿ ಗಳಾಗಲಿ, ಅಥವಾ ಜೆಡಿಎಸ್ ವರಿಷ್ಠ ದೇವೇಗೌಡರಾಗಲಿ ಕಾರಣರಲ್ಲ. ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಮಾನ್ಯ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮಂಡ್ಯ ಅಭಿವೃದ್ಧಿಗೆ 8,671 ಕೋಟಿ ನೀಡಿದ್ದಾರೆ. ಇದರಲ್ಲಿ ಒಂದು ಪೈಸೆಯೂ ದುರುಪಯೋಗವಾಗದಂತೆ ನಾನು ನೋಡಿಕೊಳ್ಳುತ್ತೇನೆ.

ಕೊನೆಯದಾಗಿ ನನ್ನ ಮೇಲೆ ವಿಶ್ವಾಸವಿಟ್ಟು ನನಗೆ ಮತ ಚಲಾಯಿಸಿರುವ ಸುಮಾರು ಐದು ಮುಕ್ಕಾಲು ಲಕ್ಷ ಜನರಿಗೆ ಧನ್ಯವಾದ ಹೇಳಲು ಇಚ್ಛಿಸುತ್ತೇನೆ. ಹಾಗು ಮುಂದಿನ ದಿನಗಳಲ್ಲಿ ಮಿಕ್ಕ ಜನರ ನಂಬಿಕೆ, ವಿಶ್ವಾಸ ಹಾಗು ಗೌರವ ಸಂಪಾದಿಸಲು ಮನಃಪೂರ್ವಕವಾಗಿ ಪ್ರಯತ್ನಿಸುತ್ತೇನೆ. ನಾನು ಈ ಚುನಾವಣೆಯಲ್ಲಿ ಸೋತಿರಬಹುದು ಆದರೆ, ಇದರಿಂದ ಸಾಕ್ಷ್ಟು ಕಲಿತ್ತಿದ್ದೇನೆ. ಮುಂದಿನ ದಿನಗಳಲ್ಲಿ ಎಲ್ಲ ರಾಜ್ಯದ ಎಲ್ಲ ಜಿಲ್ಲೆಗಳಿಗೂ ಭೇಟಿ ನೀಡಿ, ಜನರ ಕಷ್ಟಗಳನ್ನೂ ಆಲಿಸಲು ಹಾಗು ನಮ್ಮ ಕಾರ್ಯಕರ್ತರಿಗೂ ಇದನ್ನು ಮಾಡಲು ಪ್ರೋತ್ಸಾಹಿಸುತ್ತೇನೆ. ಎಲ್ಲರಿಗು ಒಳ್ಳೆಯದಾಗಲಿ” ಎಂದು ಅಭಿಷೇಕ್ ಜೊತೆಗಿನ ಚಿತ್ರವೊಂದನ್ನು ಹಾಕಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು.

ಇದಕ್ಕೆ ಅಭಿಷೇಕ್ ಅವರು ಪ್ರತಿಕ್ರಿಯಿಸಿ, ನಿಖಿಲ್ ಕುಮಾರಸ್ವಾಮಿ ಅವರ ಬೆಂಬಲಕ್ಕೆ ಧನ್ಯವಾದ ವ್ಯಕ್ತಪಡಿಸಿದರು. ವಿಶೇಷವೆಂದರೆ, ಇದಕ್ಕೆ ವಿಪಕ್ಷದ ಹಿರಿಯ ನಾಯಕ ಎಸ್.ಎಂ ಕೃಷ್ಣ ಅವರು ಪ್ರತಿಕ್ರಯಿಸಿರುವುದು. ನಿಖಿಲ್ ಅವರ ಈ ಪ್ರಬುದ್ಧ ನಡೆಯನ್ನು ಮೆಚ್ಚಿ, ಮಾಜಿ ಮುಕ್ಯುಮಂತ್ರಿ ಎಸ್.ಎಂ ಕೃಷ್ಣ ಅವರು ನಿಖಿಲ್ ರನ್ನು ಟ್ವೀಟ್ ಮೂಲಕ ಹಾಡಿ ಹೊಗಳಿದರು.

ಡಿಯರ್ ನಿಖಿಲ್, ಅಭಿಷೇಕ್ ಅವರಿಗೆ ನೀವು ಶುಭ ಕೋರಿದ್ದನ್ನು ನಾನು ಗಮನಿಸಿದೆ. ನಿಮ್ಮ ಸ್ಪರ್ಧಾತ್ಮಕ ಮನೋಭಾವ ನನಗೆ ತುಂಬಾ ಇಷ್ಟವಾಯಿತು. ರಾಜಕೀಯ ಜೀವನದ ಒಂದು ಭಾಗವೇ ಹೊರೆತು, ರಾಜಕೀಯವೇ ಜೀವನವಲ್ಲ. ನೀವು ಒಂದು ದಿನ ವಿಜೇತರಾಗುತ್ತೀರ ಎಂದು ಟ್ವೀಟ್ ಮಾಡಿ ಶುಭ ಕೋರಿದ್ದಾರೆ.


Leave a Reply